ಮೈಸೂರು, ನ. 24- ಗುರು ಮೆಚ್ಚುಗೆ ಯನ್ನು ಗಳಿಸಿ ಅರಿವನ್ನು ಪಡೆದು ಗುರುವನ್ನು ಗೆದ್ದವರು ಗುರಿಯನ್ನೂ ಗೆಲ್ಲುತ್ತಾರೆಂದು ಸಾಹಿತಿ ಬನ್ನೂರು ಕೆ. ರಾಜು ಅಭಿಪ್ರಾಯಪಟ್ಟರು.ನಗರದ ಎನ್‍ಆರ್ ಮೊಹಲ್ಲಾದ ಬಾಲಕಿ ಯರ ಸರ್ಕಾರಿ ಪ್ರೌಢಶಾಲೆ ಮತ್ತು ಕಾವೇರಿ ಬಳಗ ಹಾಗೂ ಹಿರಣ್ಮಯಿ ಪ್ರತಿ ಷ್ಠಾನ ಒಟ್ಟಾಗಿ ರಾಜ್ಯೋತ್ಸವದ ಅಂಗ ವಾಗಿ ಶಾಲೆಯಲ್ಲಿ ಆಯೋಜಿಸಿದ್ದ ಸಾಧಕ ಶಿಕ್ಷಕರಿಗೆ ಸನ್ಮಾನ ಮತ್ತು ನುಡಿ ಸಂಭ್ರಮ ಸಮಾರಂಭವನ್ನು ಗಿಡಕ್ಕೆ ನೀರೆರೆಯುವು ದರ ಮೂಲಕ ಉದ್ಘಾಟಿಸಿ, ಮಾತನಾಡಿದರು.
ಇದೊಂದು ವಿಶಿಷ್ಟ ಕಾರ್ಯಕ್ರಮ ವಾಗಿದ್ದು, ನುಡಿ ಸಂಭ್ರಮದ ಮೂಲಕ ಕನ್ನಡ ತಾಯಿ ಪೂಜೆಯನ್ನೂ ಹಾಗೂ ಅದೇ ನುಡಿಯಿಂದ ವಿದ್ಯೆ ಕಲಿಸುವ ಸಾಧಕ ಶಿಕ್ಷಕರನ್ನು ಸನ್ಮಾನಿಸುವುದರ ಮುಖೇನ ಗುರುದೇವರನ್ನು ಆರಾಧಿಸುವ ಸಾರ್ಥಕ ಕಾರ್ಯ ಇದಾಗಿದೆ. ಜಗತ್ತಿನಲ್ಲಿ ಗುರುವಿನ ಸ್ಥಾನ ಬಹುದೊಡ್ಡದು. ಗುರುವಿಗೆ ಸಮ ಮತ್ತೊಂದಿಲ್ಲ. ಗುರು ಎಂಬ ಎರಡಕ್ಷರ ಗಳ ಶಬ್ದಾರ್ಥ ಕೂಡ ಬಹಳ ವಿಶಾಲ ವಾದುದು. ಗು ಅಂದ್ರೆ ಕತ್ತಲೆ, ರು ಅಂದ್ರೆ ಬೆಳಕು. ಶಿಷ್ಯನಲ್ಲಿರುವ ಅಜ್ಞಾನವೆಂಬ ಕತ್ತಲೆಯನ್ನು ದೂರ ಮಾಡಿ ಜ್ಞಾನದ ಬೆಳ ಕನ್ನು ನೀಡುವವ ನಿಜವಾದ ಗುರು. ಆದ್ದ ರಿಂದಲೇ ಗುರು ಬ್ರಹ್ಮನಾಗಬಲ್ಲ. ಗುರು ವಿಷ್ಣುವಾಗಬಲ್ಲ, ಗುರು ಮಹೇಶ್ವರನಾಗ ಬಲ್ಲ. ಕಣ್ಣಿಗೆ ಕಾಣುವ ನಡೆದಾಡುವ ಜ್ಞಾನ ದೇವರು ಗುರು ಎಂದರು.
ಇಂಥಾ ಗುರುದೇವರಿಂದ ವಿದ್ಯೆ ಕಲಿತ ಶಿಷ್ಯರು ತಮ್ಮ ಜ್ಞಾನ ಮತ್ತು ಅರಿವಿನ ಉನ್ನತಿಯಿಂದ ಗುರುವಿಗೇ ಗುರುಗಳಾಗ ಬಹುದು. ವಿದ್ಯೆ ಕಲಿಸಿದ ಗುರುವಿನ ಜ್ಞಾನದ ಬಲದಿಂದ ಗುರುವನ್ನೇ ಗೆದ್ದು ಗುರು ಮೆಚ್ಚಿದ ಶಿಷ್ಯರಾಗಿ ತಮ್ಮೆಲ್ಲಾ ಗುರಿಗಳನ್ನು ಸಾಧಿಸ ಬಹುದು. ಗುರುವನ್ನು ಶಿಷ್ಯ ಮೀರಿಸಿದಾಗ ಗುರು ಅತ್ಯಂತ ಸಂತಸಪಡುತ್ತಾನೆ. ಶಿಷ್ಯ ರಿಂದ ಇಂತಹ ದೊಡ್ಡ ದೊಡ್ಡ ಸಾಧ ನೆಯ ನಿರೀಕ್ಷೆಯಲ್ಲಿ ತನ್ನ ವಿದ್ಯಾರ್ಥಿಗಳಿಗೆ ಗುರುಗಳು ವಿದ್ಯಾದಾನ ಮಾಡುತ್ತಲೇ ಇರುತ್ತಾರೆ. ಇಂಥಾ ಗುರುಗಳನ್ನು ಸದಾ ಗೌರವಿಸಬೇಕು, ಆರಾಧಿಸಬೇಕು, ಅಂತಹ ಆದರ್ಶ ಮೌಲ್ಯಗಳನ್ನು ಅಳವಡಿಸಿಕೊಳ್ಳ ಬೇಕು. ಆಗಲೇ ವಿದ್ಯಾರ್ಥಿಗಳ ಬದುಕು ಹಸನಾಗುವುದು ಎಂದು ಹೇಳಿದರು.
ಶಿಕ್ಷಣ ಇಲಾಖೆಯ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಹಾಗೂ ಚಿಂತಕ ವಚನ ಕುಮಾರ ಸ್ವಾಮಿ ಅವರು ಮುಖ್ಯ ಭಾಷಣ ಮಾಡಿ ಇವತ್ತು ಕನ್ನಡ ಭಾಷೆ ಉಳಿದಿರುವುದು ಮತ್ತು ಬೆಳೆಯುತ್ತಿರುವುದು ಸರ್ಕಾರಿ ಶಾಲೆಯ ಮಕ್ಕಳಿಂದಲೇ ಎಂದು ಕನ್ನಡ ಭಾಷೆ ಮತ್ತು ಸರ್ಕಾರಿ ಶಾಲೆಗಳ ಮಹತ್ವ ವನ್ನು ತಿಳಿಸಿ ವಿಶೇಷವಾಗಿ ಕನ್ನಡ ಸಾಹಿ ತ್ಯದ ವಿಶಿಷ್ಟ ಪ್ರಕಾರವಾದ ವಚನಗಳನ್ನು ಕುರಿತು ಮಕ್ಕಳಿಗೆ ಪ್ರಿಯವೆನಿಸುವ ಬಸ ವಣ್ಣ, ಅಲ್ಲಮರ ಮೌಲಿಕ ವಚನಗಳನ್ನು ಉಲ್ಲೇಖಿಸಿ ಸವಿವರವಾಗಿ ಮಾತನಾಡಿದರು. ಕಲಾವಿದೆ ಡಾ.ಜಮುನಾ ರಾಣಿ ಮಿರ್ಲೆ ಮತ್ತು ಚಿಂತಕಿ ಎನ್.ಕೆ.ಕಾವೇರಿಯಮ್ಮ ಅವರು ಸಾಧಕ ಶಿಕ್ಷಕರಾದ ಪಿ.ಮಹೇಶ್, ಜಯಮೇರಿ, ಶಿವಮ್ಮ ಅವರನ್ನು ಶಾಲಾ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಿದರು. ಇದೇ ಸಂದರ್ಭದಲ್ಲಿ ನಾಡು, ನುಡಿಯ ಬಗ್ಗೆ ಶಿಕ್ಷಣ ತಜ್ಞ ಎ.ಸಂಗಪ್ಪ ನೇತೃತ್ವದಲ್ಲಿ ರಸ ಪ್ರಶ್ನೆ ಸ್ಪರ್ಧೆ ನಡೆಸಿ ವಿಜೇತರಿಗೆ ಬಹುಮಾನ ನೀಡಲಾಯಿತು. ಮುಖ್ಯ ಶಿಕ್ಷಕಿ ಕೆ.ಎಲ್. ಕಾಂಚನಮಾಲಾ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ಎಂ.ಎನ್.ಸುರೇಶ್, ಎಂ. ಶಂಕರ್, ಜೆ.ನಿರಂಜನ್, ಪ್ರವಿತ್ರ, ರಾಜಮ್ಮ, ಉಮಾ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ರಾಮ ಕೃಷ್ಣಯ್ಯ, ಶಿಕ್ಷಣ ಇಲಾಖೆ ಅಧಿಕಾರಿಗಳಾದ ನಾಗೇಶ್, ಮಂಜುನಾಥ್, ಉಪಸ್ಥಿತರಿದ್ದರು.