ಗೊಮ್ಮಟಗಿರಿ ಗೊಮ್ಮಟೇಶ್ವರನಿಗೆ ವರ್ಣರಂಜಿತ ಮಸ್ತಕಾಭಿಷೇಕ
ಮೈಸೂರು

ಗೊಮ್ಮಟಗಿರಿ ಗೊಮ್ಮಟೇಶ್ವರನಿಗೆ ವರ್ಣರಂಜಿತ ಮಸ್ತಕಾಭಿಷೇಕ

November 25, 2019

ಗೊಮ್ಮಟಗಿರಿ,ನ.24(ಎಂಟಿವೈ)- ಹುಣ ಸೂರು ತಾಲೂಕಿನ ಬೆಟ್ಟದೂರು ಗ್ರಾಮದ ಗೊಮ್ಮಟಗಿರಿಯಲ್ಲಿಯಲ್ಲಿರುವ ಬಾಹು ಬಲಿ ಶ್ರೀ ಗೊಮ್ಮಟೇಶ್ವರ ಮೂರ್ತಿಗೆ ಭಾನುವಾರ 70ನೇ ಮಸ್ತಕಾಭಿಷೇಕ ಅಪಾರ ಸಂಖ್ಯೆ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ಶ್ರೀ ಗೊಮ್ಮಟಗಿರಿ ಕ್ಷೇತ್ರ ಸೇವಾ ಸಮಿತಿ ವತಿಯಿಂದ ಆಯೋಜಿಸಿದ್ದ ಮಸ್ತಕಾಭಿಷೇಕ ದಲ್ಲಿ ವಿವಿಧೆಡೆಗಳಿಂದ ಆಗಮಿಸಿದ್ದ ಜೈನ ಸಮುದಾಯ ಸೇರಿದಂತೆ ಇನ್ನಿತರ ಧರ್ಮಿ ಯರು ಪಾಲ್ಗೊಂಡು ಶಾಂತ ಹಾಗೂ ವೈರಾಗ್ಯ ಮೂರ್ತಿಗೆ ಜೈಕಾರ ಹಾಕಿ ಭಕ್ತಿ ಭಾವದಿಂದ ನಮಿಸಿದರು. ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿಯ ದಿಗಂ ಬರ ಜೈನ ಅತಿಶಯ ಕ್ಷೇತ್ರವಾಗಿರುವ ಗೊಮ್ಮಟಗಿರಿಯಲ್ಲಿ 850 ವರ್ಷಗಳ ಹಿಂದೆÀ ಏಕಶಿಲೆಯಲ್ಲಿ ಕೆತ್ತಲಾಗಿರುವ 18 ಅಡಿ ಎತ್ತರದ ಗೊಮ್ಮಟೇಶ್ವರ ಮೂರ್ತಿಗೆ ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ಮಸ್ತಕಾಭಿ ಷೇಕ ನಡೆಸುವ ಪದ್ಧತಿಯಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರಿಂದ ವಿಜೃಂಭಣೆಯಿಂದ ನೆರವೇರಿತು.

ಮಸ್ತಕಾಭಿಷೇಕದ ಹಿನ್ನೆಲೆಯಲ್ಲಿ ಬೆಳಿಗ್ಗೆ 10ರಿಂದ ದಿಗಂಬರ ಜೈನ ಅತಿಶಯ ಕ್ಷೇತ್ರದ ಆವರಣದಲ್ಲಿ ಸುವರ್ಣ ಕಳಸದ ಹರಾಜು ಪ್ರಕ್ರಿಯೆ ನಡೆಯಿತು. ವಿವಿಧ ಕಳಸವನ್ನು ಹರಾಜು ನಡೆಸಲಾಯಿತು. ಮೊದಲ ಕಳಸ 11 ಸಾವಿರ ರೂ.ಗೆ ಹರಾಜಾದರೆ, ಉಳಿದ 107 ಕಳಸಗಳನ್ನು ವಿವಿಧ ಮೊತ್ತಕ್ಕೆ ಭಕ್ತರು ಖರೀದಿಸಿದರು. ಬಳಿಕ ಹರಾಜಾದ 108 ಕಳಸದ ನೀರಿನಿಂದ ಮಧ್ಯಾಹ್ನ 12 ಗಂಟೆ ಯಿಂದ ಅಭಿಷೇಕ ಆರಂಭಿಸಲಾಯಿತು. ಶಿವಮೊಗ್ಗ ಜಿಲ್ಲೆಯ ಶ್ರೀಕ್ಷೇತ್ರ ಹೊಂಬುಜ ಜೈನಮಠದ ಡಾ.ದೇವೇಂದ್ರಕೀರ್ತಿ ಭಟ್ಟಾ ರಕ ಸ್ವಾಮೀಜಿ, ಮಂಡ್ಯ ಜಿಲ್ಲೆ ಆರತಿಪುರ ಜೈನ ಮಠದ ಭಟ್ಟಾರಕ ಸಿದ್ಧಾಂತ ಕೀರ್ತಿ ಸ್ವಾಮೀಜಿ ಸಾನಿಧ್ಯದಲ್ಲಿ ನಡೆದ ಮಸ್ತಕಾಭಿ ಷೇಕದಲ್ಲಿ ವಿವಿಧೆಡೆಗಳಿಂದ ಗೊಮ್ಮಟಗಿರಿ ಕ್ಷೇತ್ರಕ್ಕೆ ಆಗಮಿಸಿದ್ದ ಅಪಾರ ಸಂಖ್ಯೆಯ ಭಕ್ತರು ಕಣ್ತುಂಬಿಕೊಂಡರು.

ಗೊಮ್ಮಟಗಿರಿ ಕ್ಷೇತ್ರದ ಪ್ರಧಾನ ಅರ್ಚಕ ಎ.ಎನ್.ಧರಣೇಂದ್ರ, ಪುಷ್ಪದಂತ ಇಂದ್ರಾಣಿ ನೇತೃತ್ವದಲ್ಲಿ ಸುಮಾರು 10ಕ್ಕೂ ಹೆಚ್ಚು ಮಂದಿ ಜೈನ ಸಂಪ್ರದಾಯ ಹಾಗೂ ವಿವಿಧ ಮಂತ್ರಗಳ ಪಠಣ ಮತ್ತು ಜಯಘೋಷ ಗಳೊಂದಿಗೆ ಮಸ್ತಕಾಭಿಷೇಕ ನೆರವೇರಿಸಿ ದರು. ಮಧ್ಯಾಹ್ನ 12.30ರಿಂದ ಮಸ್ತಕಾಭಿ ಷೇಕ ಪ್ರಕ್ರಿಯೆ ಆರಂಭವಾಯಿತು. ಎಳ ನೀರು ಅಭಿಷೇಕದೊಂದಿಗೆ ಮಸ್ತಕಾಭಿ ಷೇಕ ಆರಂಭಿಸಲಾಯಿತು. ನಂತರ ಕಬ್ಬಿನ ಹಾಲಿನ ಅಭಿಷೇಕ, ಕ್ಷೀರಾಭಿಷೇಕ, ಕಲ್ಕ ಚೂರ್ಣ, ಅರಿಶಿನ, ಕುಂಕುಮ, ಕಷಾಯ, ಚಂದನ, ನಾಲ್ಕು ಬಗೆಯ ಚಷ್ಕೋನ, ಅಷ್ಟ ಗಂಧ, ಶ್ರೀಗಂಧ, ಕೇಸರಿ, ಭಸ್ಮ ಸೇರಿದಂತೆ ವಿವಿಧ ದ್ರವ್ಯಗಳಿಂದ ಅಭಿಷೇಕ ಮಾಡ ಲಾಯಿತು. ಅಂತಿಮವಾಗಿ ಪುಷ್ಪಾರ್ಚನೆ, ಪುಷ್ಪವೃಷ್ಟಿ, ಪೂರ್ಣಕುಂಭ ಜಲಾಭಿಷೇಕ ನೆರವೇರಿಸಿದ ನಂತರ ದೃಷ್ಟಿ ತೆಗೆದು ಮಹಾಮಂಗಳಾರತಿ ಬೆಳಗಲಾಯಿತು.

ಸಾವಿರಾರು ಜನರು ದಿನವಿಡೀ ಗೊಮ್ಮಟ ಗಿರಿಗೆ ಬರುವ ಹಿನ್ನೆಲೆಯಲ್ಲಿ ಆಟಿಕೆ ಮಾರಾಟ, ಸಿಹಿ ತಿಂಡಿ ಮಾರಾಟ, ವಿವಿಧ ವಸ್ತುಗಳ ಮಾರಾಟ ಮಳಿಗೆಗಳು, ಐಸ್ ಕ್ರೀಮ್ ಪಾರ್ಲರ್‍ಗಳು, ಕಬ್ಬಿನ ಹಾಲಿನ ಮಾರಾಟ ಕೇಂದ್ರ, ನಂದಿನಿ ಐಸ್‍ಕ್ರೀಮ್, ಕಡಲೆಪುರಿ, ಸಿಹಿ ತಿನಿಸು ಸೇರಿದಂತೆ ವಿವಿಧ ಮಳಿಗೆಗಳು, ಮಕ್ಕಳ ಆಟಿಕೆಗಳ ಕೇಂದ್ರ ಗಳು ತಲೆ ಎತ್ತಿದ್ದವು. ಇದರಿಂದ ಗೊಮ್ಮಟ ಗಿರಿಯಲ್ಲಿ ಜಾತ್ರಾ ವಾತಾವರಣ ನಿರ್ಮಾಣ ವಾಗಿತ್ತು. ಮೈಸೂರು, ಕೆ.ಆರ್.ಎಸ್ ಸೇರಿ ದಂತೆ ವಿವಿಧೆಡೆಯಿಂದ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿತ್ತು. ಬಿಳಿಕೆರೆ ಪೊಲೀಸರು ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರು.

Translate »