ಸಂವಿಧಾನ ರಕ್ಷಣೆ ನಮ್ಮೆಲ್ಲರ ಕರ್ತವ್ಯ: ಬಿ.ಪಿ.ದೇವಮಾನೆ
ಮೈಸೂರು

ಸಂವಿಧಾನ ರಕ್ಷಣೆ ನಮ್ಮೆಲ್ಲರ ಕರ್ತವ್ಯ: ಬಿ.ಪಿ.ದೇವಮಾನೆ

February 7, 2020

ಮೈಸೂರು, ಫೆ.6- ಪ್ರತಿಯೊಬ್ಬ ಭಾರತೀಯ ಪ್ರಜೆಯು ಸಂವಿಧಾನದ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳನ್ನು ಗೌರವಿಸುವ ಮೂಲಕ ಸಂವಿ ಧಾನದ ರಕ್ಷಣೆ ಮಾಡಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯ ದರ್ಶಿ ಬಿ.ಪಿ.ದೇವಮಾನೆ ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಗುರು ವಾರ ನಿರ್ಮಲ ಕಾನ್ವೆಂಟ್‍ನಲ್ಲಿ ನಡೆದ ಸಂವಿಧಾನ ದಿನಾಚರಣೆ ಅಭಿಯಾನ ಹಾಗೂ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ದೇಶದ ಪ್ರಜೆಗಳು ಮೂಢನಂಬಿಕೆಗಳನ್ನು ಬಿಟ್ಟು ಸಂವಿಧಾನದ ವೈಜ್ಞಾನಿಕ ವಿಚಾರಧಾರೆಗಳನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ದೇಶದ ಜನರಿಗೆ ಡಾ.ಬಿ.ಆರ್.ಅಂಬೇಡ್ಕರ್ ಅವರು ಕೊಟ್ಟಂತಹ ಬಹು ದೊಡ್ಡ ಕೊಡುಗೆ ಮತದಾನದ ಹಕ್ಕು. ಭಾರತವನ್ನು ಪ್ರಜಾಪ್ರಭುತ್ವ ರಾಷ್ಟ್ರವನ್ನಾಗಿ ಮಾಡಿ ಪ್ರಜೆಗಳಿಗೆ ಪ್ರತಿನಿಧಿಯನ್ನು ಆಯ್ಕೆ ಮಾಡುವ ಹಕ್ಕನ್ನು ನೀಡಿದ್ದಾರೆ. ಪುರುಷರಷ್ಟೇ ಮಹಿಳೆಯರಿಗೂ ಎಲ್ಲಾ ಕ್ಷೇತ್ರದಲ್ಲೂ ಸಮಾನ ಅವಕಾಶಗಳನ್ನು ಕಲ್ಪಿಸು ವಂತಹ ಸಂವಿಧಾನವನ್ನು ರಚಿಸಿದ್ದಾರೆ ಎಂದರು.

ಧರ್ಮ, ಜಾತಿ, ವರ್ಣ, ಲಿಂಗ ತಾರತಮ್ಯ ಮಾಡದೆ ಎಲ್ಲರಿಗೂ ಧಾರ್ಮಿಕ, ಶೈಕ್ಷಣಿಕ, ರಾಜಕೀಯವಾಗಿ ಎಲ್ಲಾ ಕ್ಷೇತ್ರದಲ್ಲಿ ಸಮಾನ ಅವಕಾಶಗಳು ಸಿಗುವಂತೆ ಸಂವಿಧಾನ ತನ್ನ ಕರ್ತವ್ಯವನ್ನು ನಿರ್ವಹಿಸುತ್ತಿದೆ. ಬಾಬಾ ಸಾಹೇಬರು ಶೋಷಿತ ವರ್ಗಗಳ ಅಭಿವೃದ್ಧಿ ಗಾಗಿ ಶ್ರಮಿಸಿದ ನಾಯಕ ಎಂದು ಹೇಳಿದರು.

ವಕೀಲರ ಸಂಘದ ಅಧ್ಯಕ್ಷ ಎಸ್.ಆನಂದ ಕುಮಾರ್ ಮಾತನಾಡಿ, ಭಾರತದ ಸಂವಿಧಾನ ಶ್ರೇಷ್ಠವಾದ ಸಂವಿಧಾನವಾಗಿದ್ದು, ಅಲ್ಲಿನ ಅಂಶ ಗಳನ್ನು ಮನನ ಮಾಡಿಕೊಂಡು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನ್ಯಾಯಾಂಗ ಸ್ವಾತಂತ್ರ್ಯ, ನ್ಯಾಯಾಂಗ ಮರುಪರಿಶೀಲನೆ, ಕಾನೂನಿನ ಪಾತ್ರ ಇವು ಸಂವಿಧಾನದಲ್ಲಿ ಅತೀ ಪ್ರಾಮುಖ್ಯತೆಯನ್ನು ಪಡೆದುಕೊಂಡಿದ್ದು, ಅವುಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಪಾಂಡುರಂಗ, ಗ್ರಾಮಾಂತರ ವಿಭಾ ಗದ ಕ್ಷೇತ್ರ ಶಿಕ್ಷಣ ಅಧಿಕಾರಿ ಕೃಷ್ಣ, ವಿದ್ಯಾ ವಿಕಾಸ ಕಾನೂನು ಕಾಲೇಜು ಉಪನ್ಯಾಸಕರು ಡಾ.ಸೌಮ್ಯ, ನಿರ್ಮಲ ಕಾನ್ವೆಂಟ್ ಮುಖ್ಯಶಿಕ್ಷಕಿ ಸೆಲ್ವಿನ್ ಜೋಸೆಫ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Translate »