ಕ್ಷಯ ಮುಕ್ತ ಜಿಲ್ಲೆ ನಿರ್ಮಾಣ; ಆರೋಗ್ಯ ಇಲಾಖೆ ಪಣ
ಮೈಸೂರು

ಕ್ಷಯ ಮುಕ್ತ ಜಿಲ್ಲೆ ನಿರ್ಮಾಣ; ಆರೋಗ್ಯ ಇಲಾಖೆ ಪಣ

July 26, 2019

ಮೈಸೂರು,ಜು.25- ಪರಿಷ್ಕೃತ ರಾಷ್ಟ್ರೀಯ ಕ್ಷಯ ನಿಯಂತ್ರಣ (ಆರ್‍ಎನ್‍ಟಿಸಿಪಿ) ಕಾರ್ಯಕ್ರಮದಡಿ 2035ರ ವೇಳೆಗೆ ಮೈಸೂರು ಜಿಲ್ಲೆಯನ್ನು `ಕ್ಷಯ ಮುಕ್ತ’ ಮಾಡಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುಂದಾ ಗಿದ್ದು, 628 ತಂಡಗಳು ಮನೆ ಮನೆಗೆ ತೆರಳಿ ಮಾಹಿತಿ ಕಲೆ ಹಾಕುತ್ತಿವೆ.

ಇತ್ತೀಚಿನ ದಿನಗಳಲ್ಲಿ ಮಾಹಿತಿ ಕೊರತೆ ಯಿಂದಾಗಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಲು ಜನರು ನಿರ್ಲಕ್ಷಿಸುತ್ತಿದ್ದಾರೆ. ಪರಿಣಾಮ ವರ್ಷದಿಂದ ವರ್ಷಕ್ಕೆ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿ ರುವ ಆರೋಗ್ಯ ಇಲಾಖೆ ಆರಂಭಿಕ ಹಂತ ದಲ್ಲಿಯೇ ರೋಗದ ಗುಣ ಲಕ್ಷಣವುಳ್ಳ ವರನ್ನು ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಕ್ಷಯ ರೋಗ ನಿಯಂತ್ರಿಸುವ ಕೆಲಸಕ್ಕೆ ಕೈ ಹಾಕಿದೆ. ಈ ನಡುವೆ ಪರಿಷ್ಕೃತ ರಾಷ್ಟ್ರೀಯ ಕ್ಷಯ ನಿಯಂತ್ರಣ (ಆರ್ ಎನ್‍ಟಿಸಿಪಿ) ಕಾರ್ಯಕ್ರಮದಡಿ ಮೈಸೂರು ಸೇರಿದಂತೆ ದೇಶದ 10 ಜಿಲ್ಲೆಗಳನ್ನು 2035 ರೊಳಗೆ ಕ್ಷಯ ಮುಕ್ತವಾಗಿಸಲು ಆಯ್ಕೆ ಮಾಡಲಾಗಿದೆ. ಆರೋಗ್ಯ ಇಲಾಖೆ ಮೈಸೂರು ನಗರ ಒಳಗೊಂಡಂತೆ ಜಿಲ್ಲೆಯ ಎಲ್ಲಾ ಗ್ರಾಮ ಹಾಗೂ ಪಟ್ಟಣಗಳಲ್ಲೂ ಸರ್ವೆ ಕಾರ್ಯ ಕೈಗೊಂಡು ರೋಗಿಗಳ ಸಂಪೂರ್ಣ ಮಾಹಿತಿ ಕಲೆ ಹಾಕಿ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗಿದೆ.

`ಕ್ಷಯ ಮುಕ್ತ ಜಿಲ್ಲೆ’ ಮಾಡಲು ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಕÀಫ ಪರೀಕ್ಷೆ, ಎಕ್ಸ್-ರೇ ಮಾಡಲಾಗುತ್ತಿದೆ. ಕೆಲವು ಖಾಸಗಿ ಆಸ್ಪತ್ರೆ ಗಳ ಜತೆಗೂ ಒಪ್ಪಂದ ಮಾಡಿಕೊಂಡು ಉಚಿತ ಪರೀಕ್ಷೆ ನಡೆಸುವಂತೆ ಸೂಚನೆ ನೀಡ ಲಾಗಿದೆ. ಆ ಮೂಲಕ ಸ್ಯಾಂಪಲ್‍ಗಳನ್ನು ಸಂಗ್ರಹಿಸಿ ರೋಗಿಗಳನ್ನು ತ್ವರಿತ ಗತಿಯಲ್ಲಿ ಪತ್ತೆ ಹಚ್ಚಲಾಗುತ್ತಿದೆ. ಕ್ಷಯ ರೋಗಿಗಳು ಕಂಡು ಬಂದರೆ ಈ ಯೋಜನೆಯಡಿ ಮಾಸಿಕ 500 ರೂ. ಧನ ಸಹಾಯ ನೀಡುವುದಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ.

ಕೈಗೊಳ್ಳಬೇಕಾದ ಕ್ರಮ: ಮೈಸೂರಿನಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ, ಸಾರ್ವಜನಿಕ ರಲ್ಲಿ ಕ್ಷಯ ರೋಗದ ಬಗ್ಗೆ ಅರಿವು ಮೂಡಿ ಸುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲದೆ, ಖಾಸಗಿ ಆಸ್ಪತ್ರೆಯಲ್ಲೂ ಉಚಿತ ಕಫ ಪರೀಕ್ಷೆ ಸೇವೆ ಲಭ್ಯವಿದೆ. ಪ್ರತಿಯೊಬ್ಬರೂ ವರ್ಷಕ್ಕೊಂದು ಬಾರಿ ಟಿಬಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಕೆಮ್ಮುವಾಗ, ಸೀನುವಾಗ ಬಾಯಿಗೆ ಅಡ್ಡ ಲಾಗಿ ಕೈ ಅಥವಾ ಕರ್ಚೀಫ್ ಇಟ್ಟುಕೊಳ್ಳ ಬೇಕು. ಎಲ್ಲೆಂದರಲ್ಲಿ ಉಗುಳಬಾರದು. ಸೋಂಕು ಗಾಳಿಯಲ್ಲಿ ಹರಡಿ ಬೇರೆಯವ ರಿಗೂ ತಗುಲುತ್ತದೆ ಎಂದು ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಭಿತ್ತಿಪತ್ರ ಪ್ರಕಟಿಸಿ ಸರ್ವೆ ಮಾಡುವ ವೇಳೆ ಹಂಚಲಾಗುತ್ತಿದೆ.

ಸರ್ವೆ ವಿಧಾನ: ನಗರ ಪ್ರದೇಶ ಸೇರಿ ದಂತೆ ಜಿಲ್ಲೆಯ ಏಳು ತಾಲೂಕುಗಳಲ್ಲಿ ಸರ್ವೆ ನಡೆಸಲಾಗುತ್ತಿದೆ. ಜು.15ರಿಂದ 27 ರವರೆಗೆ ಸರ್ವೆ ನಡೆಯಲಿದ್ದು, 628 ತಂಡಗಳಲ್ಲಿ ಆಶಾ ಕಾರ್ಯಕರ್ತೆಯರು, ಎಎನ್‍ಎಂಎಸ್, ನರ್ಸ್ ಹಾಗೂ ವೈದ್ಯರು ಮನೆ ಮನೆಗೆ ತೆರಳಿ ಮಾಹಿತಿ ಕಲೆ ಹಾಕು ತ್ತಿದ್ದಾರೆ. ಮನೆಯಲ್ಲಿ ಯಾರಾದರೂ ಸಕ್ಕರೆ ಖಾಯಿಲೆಯವರು ಇದ್ದಾರಾ? ಯಾರಿ ಗಾದರೂ 7 ದಿನಗಳಿಂದ ಕೆಮ್ಮು ಇದೆಯಾ? ಊಟ ಸೇರುತ್ತಿಲ್ವಾ? ಸಣ್ಣ ಆಗುತ್ತಿದ್ದಾರಾ? ಧೂಮಪಾನ ಮಾಡುತ್ತಿದ್ದಾರಾ? ಎಂದು ಪ್ರಶ್ನೆಗಳನ್ನು ಕೇಳಿ ಚೆಕ್ ಲಿಸ್ಟ್‍ನಲ್ಲಿ ನಮೂ ದಿಸಲಾಗುತ್ತದೆ. ಕ್ಷಯ ಗುಣಲಕ್ಷಣ ಕಂಡು ಬಂದರೆ ಅವರ ಕಫ ಸಂಗ್ರಹಿಸಿ ಪರೀಕ್ಷೆಗೆ ಸಮೀಪದ ಸರ್ಕಾರಿ ಆಸ್ಪತ್ರೆಗೆ ಕಳುಹಿಸ ಲಾಗುತ್ತದೆ. ಪರೀಕ್ಷೆಯಲ್ಲಿ ಸೋಂಕು ದೃಢ ಪಟ್ಟರೆ ಆ ಮನೆಯಲ್ಲಿರುವ ಎಲ್ಲರ ಕಫ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಸೋಂಕು ದೃಢಪಟ್ಟರೆ ಆ ಕ್ಷಣದಿಂದಲೇ ಉಚಿತ ಚಿಕಿತ್ಸೆ ಆರಂಭಿಸಲಾಗುತ್ತದೆ. ಕಳೆದ ವರ್ಷಕ್ಕೆ ಹೋಲಿ ಸಿದರೆ 2019ರಲ್ಲಿ ಕ್ಷಯ ರೋಗಿಗಳ ಪ್ರಮಾಣದಲ್ಲಿ ಶೇ.70ರಷ್ಟು ಕಡಿಮೆಯಾ ಗಿದೆ. ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ಕ್ಷಯ ರೋಗಕ್ಕೆ ಔಷಧಿ ದೊರೆಯುತ್ತಿದೆ. ಹುಣಸೂರು ಸರ್ಕಾರಿ ಆಸ್ಪತ್ರೆ, ಪಿಕೆಟಿಬಿ(ಸ್ಯಾನಿಟೋ ರಿಯಂ) ಮತ್ತು ಕೆ.ಆರ್.ಆಸ್ಪತ್ರೆಯಲ್ಲಿ ಸಿಬಿನೆಟ್ ಪರೀಕ್ಷೆ ಮಾಡಲಾಗುತ್ತಿದೆ. ಈ ಯಂತ್ರದಲ್ಲಿ ಕ್ಷಯ ರೋಗದ ಕೇವಲ 3 ಅಥವಾ 4 ಕ್ರಿಮಿ ಗಳಿದ್ದರೂ ಅದನ್ನು ಕಂಡು ಹಿಡಿಯು ತ್ತದೆ. ಇದು ಜೀನ್ಸ್ ಬೇಸ್ಡ್ ಅಂಶವನ್ನು ಕಂಡು ಹಿಡಿಯುತ್ತದೆ. ಈ ಹಿನ್ನೆಲೆಯಲ್ಲಿ ಸಾಧ್ಯವಾದಷ್ಟು ಈ ಮೂರು ಆಸ್ಪತ್ರೆಗಳಲ್ಲಿ ಕಫ ಪರೀಕ್ಷೆ ಮಾಡಿಸಿಕೊಳ್ಳುವಂತೆ ಆರೋಗ್ಯ ಇಲಾಖೆ ಸಿಬ್ಬಂದಿ ಮನವಿ ಮಾಡುತ್ತಿದ್ದಾರೆ. ಉಳಿದ ಆಸ್ಪತ್ರೆಗಳಲ್ಲಿರುವ ಪರೀಕ್ಷಾ ಯಂತ್ರ ಗಳಲ್ಲಿ 1 ಅಥವಾ 2 ಸಾವಿರ ವೈರಾಣು ಇದ್ದರೆ ಮಾತ್ರ ಗುರುತಿಸುತ್ತದೆ. ಆದರೂ ಎಲ್ಲರೂ ಸ್ವಯಂಪ್ರೇರಣೆಯಿಂದ ವರ್ಷ ಕ್ಕೊಂದು ಬಾರಿ ಕಫ ಪರೀಕ್ಷೆ ಮತ್ತು ಎಕ್ಸರೇ ಮಾಡಿಸುವಂತೆ ಮನವಿ ಮಾಡುತ್ತಿದ್ದಾರೆ.

_ ಎಂ.ಟಿ.ಯೋಗೇಶ್ ಕುಮಾರ್

Translate »