ಕುಕ್ಕರಹಳ್ಳಿ ಕೆರೆಗೆ ಮತ್ತೆ ಕಲುಷಿತ ನೀರು ಸೇರ್ಪಡೆ
ಮೈಸೂರು

ಕುಕ್ಕರಹಳ್ಳಿ ಕೆರೆಗೆ ಮತ್ತೆ ಕಲುಷಿತ ನೀರು ಸೇರ್ಪಡೆ

March 3, 2020

ಮೈಸೂರು,ಮಾ.2(ಎಂಟಿವೈ)-ಮೈಸೂರಿನ ಪ್ರಮುಖ ಕೆರೆ ಗಳಲ್ಲಿ ಒಂದಾಗಿರುವ ಕುಕ್ಕರಹಳ್ಳಿಕೆರೆಗೆ ಮತ್ತೆ ಪಡುವಾರಹಳ್ಳಿ ಕಡೆಯಿಂದ ಮ್ಯಾಜಿಕ್ ಬಾಕ್ಸ್ ಮೂಲಕ ಕೊಳಚೆ ನೀರು ಭಾರೀ ಪ್ರಮಾಣದಲ್ಲಿ ಹರಿದು ಬರುತ್ತಿದ್ದು, ಪಕ್ಷಿ ಸಂಕುಲ ಹಾಗೂ ಜಲ ಚರಗಳಿಗೆ ಸಂಚಕಾರ ಒದಗಿ ಬರುವ ಅಪಾಯ ಎದುರಾಗಿದೆ.

ಇಂದು ಬೆಳಿಗ್ಗೆ ಸುರಿದ ಅಕಾಲಿಕ ಮಳೆ ನೀರಿನೊಂದಿಗೆ ಕೊಳಚೆ ನೀರು ಕುಕ್ಕರಹಳ್ಳಿ ಕೆರೆಗೆ ಹೆಚ್ಚಿನ ಪ್ರಮಾಣದಲ್ಲಿ ಸೇರು ತ್ತಿದ್ದುದ್ದನ್ನು ಕಂಡ ವಾಯುವಿಹಾರಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕೆರೆ ದಡದಲ್ಲೇ ವಾಯುವಿಹಾರ ಮಾಡುತ್ತಿದ್ದ ಶಾಸಕರಾದÀ ಸಾ.ರಾ.ಮಹೇಶ್, ಎಲ್.ನಾಗೇಂದ್ರ ಹಾಗೂ ಇನ್ನಿತರರು ಕೆರೆ ಕಲುಷಿತಗೊಳ್ಳುತ್ತಿರುವುದನ್ನು ಪರಿಶೀಲಿಸಿದರು. ಮಾಹಿತಿ ಮೇರೆಗೆ ಸ್ಥಳಕ್ಕೆ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಆಗಮಿಸಿದರು. ಈ ವೇಳೆ ಶಾಸಕದ್ವಯರು ನಗರ ಹೃದಯಭಾಗದಲ್ಲಿರುವ ಕುಕ್ಕರಹಳ್ಳಿ ಕೆರೆ ಸಂರಕ್ಷಿಸುವುದು ಎಲ್ಲರ ಕರ್ತವ್ಯ. ಕೆರೆಗೆ ಕಲುಷಿತ ನೀರು ಸೇರ ದಂತೆ ಕ್ರಮ ಕೈಗೊಳ್ಳಬೇಕು. ನಗರಪಾಲಿಕೆ, ಮೈಸೂರು ವಿವಿ ಹಾಗೂ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಪರಸ್ಪರ ಸಹಕಾರ ದಿಂದ ಕೆರೆ ಪರಿಸರ ಸಂರಕ್ಷಣೆಗೆ ಕ್ರಮ ಕೈಗೊಳ್ಳಲು ಸೂಚಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಕಲುಷಿತ ನೀರು ಕೆರೆ ಸೇರದಂತೆ ಕ್ರಮ ಕೈಗೊಳ್ಳಲಾಗಿದೆ. ಆದರೂ ಪಡುವಾರಹಳ್ಳಿಯಲ್ಲಿ ಹಸು ತೊಳೆದ, ಬಟ್ಟೆ ಒಗೆದ ನೀರು ಮ್ಯಾಜಿಕ್ ಬಾಕ್ಸ್ ಮೂಲಕ ಅಲ್ಪ ಪ್ರಮಾಣದಲ್ಲಿ ಕೆರೆ ಸೇರುತ್ತಿದೆ. ಶೀಘ್ರದಲ್ಲೇ ಮಲೀನಗೊಂಡ ನೀರು ಕೆರೆ ಸೇರದಂತೆ ಹಾಗೂ ಕಲುಷಿತ ನೀರು ಡೈವರ್ಟ್ ಮಾಡಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

Translate »