ಮಂಗಳೂರಿನ ಪಿಲಿಕುಳ ಮೃಗಾಲಯದಿಂದ ತಂದಿದ್ದ ಗಂಡು ಹುಲಿ, ಕಾಳಿಂಗ ಸರ್ಪ ಸಾವು
ಮೈಸೂರು

ಮಂಗಳೂರಿನ ಪಿಲಿಕುಳ ಮೃಗಾಲಯದಿಂದ ತಂದಿದ್ದ ಗಂಡು ಹುಲಿ, ಕಾಳಿಂಗ ಸರ್ಪ ಸಾವು

March 3, 2020

ಮೈಸೂರು, ಮಾ.2(ಎಂಟಿವೈ)-ಪ್ರಾಣಿ ವಿನಿಮಯ ಯೋಜನೆ ಯಡಿ ಮಂಗಳೂರಿನ ಪಿಲಿಕುಳ ಬಯಾಲಾಜಿಕಲ್ ಪಾರ್ಕ್ ನಿಂದ ಮೈಸೂರಿಗೆ ತಂದ ಎರಡೇ ದಿನದಲ್ಲಿ ಗಂಡು ಹುಲಿ ಹಾಗೂ ಕಾಳಿಂಗ ಸರ್ಪ ಮೃತಪಟ್ಟಿರುವ ಘಟನೆ ಮೈಸೂರಿನ ಮೃಗಾಲಯದಲ್ಲಿ ಜರುಗಿದೆ.

ಮೈಸೂರು ಮೃಗಾಲಯದಲ್ಲಿ ಹೊಸ ಪ್ರಾಣಿಗಳ ಪಾಲನೆಗಾಗಿ ಮಂಗಳೂರಿನ ಪಿಲಿಕುಳ ಬಯಾಲಾಜಿಕಲ್ ಪಾರ್ಕ್‍ನಿಂದ ಫೆ.28ರಂದು ತರಲಾಗಿದ್ದ ಹುಲಿ ಮತ್ತು ಕಾಳಿಂಗ ಸರ್ಪ ಮೃತ ಪಟ್ಟಿದ್ದು, ಪ್ರಾಣಿ ಪ್ರಿಯರು ಹಾಗೂ ಮೃಗಾಲಯದ ಸಿಬ್ಬಂದಿಗಳಲ್ಲಿ ಬೇಸರ ಮೂಡಿಸಿದೆ. ಫೆ.27ರಂದು ರಾತ್ರಿ ಜೋಡಿ ಹುಲಿ, ಕಾಳಿಂಗ ಸರ್ಪಗಳಲ್ಲದೆ, ಬಾತುಕೋಳಿ ಹಾಗೂ ಉಡವನ್ನು ಟ್ರಕ್‍ನಲ್ಲಿ ಪಿಲಿಕುಳ ಮೃಗಾಲಯದಿಂದ ಮೈಸೂರಿಗೆ ಫೆ.28ರಂದು ಬೆಳಿಗ್ಗೆ ಸುರಕ್ಷಿತವಾಗಿ ತರಲಾಗಿತ್ತು. ಬೇರೆ ಮೃಗಾಲಯದಿಂದ ತರುವ ಪ್ರಾಣಿ-ಪಕ್ಷಿಗಳನ್ನು 1 ವಾರ ನಿಗಾ ಘಟಕದಲ್ಲಿಟ್ಟು ಉಪಚರಿಸಿ, ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವಂತೆ ಎಚ್ಚರ ವಹಿಸು ವುದು ವಾಡಿಕೆ. ಈ ಹಿನ್ನೆಲೆಯಲ್ಲಿ 280 ಕಿಮಿ ದೂರದಿಂದ ತಂದ ಎಲ್ಲಾ ಪ್ರಾಣಿಗಳನ್ನು ಮೃಗಾಲಯದ ಆವರಣದಲ್ಲಿರುವ ಆಸ್ಪತ್ರೆಯಲ್ಲಿಟ್ಟು ಆರೈಕೆ ಮಾಡಲಾಗುತ್ತಿತ್ತು.

ಆದರೆ ಫೆ.29ರಂದು ಕಾಳಿಂಗ ಸರ್ಪ ಮೃತಪಟ್ಟಿತ್ತು. ಮರಣೋ ತ್ತರ ಪರೀಕ್ಷೆಯಲ್ಲಿ ಸೋಂಕಿನಿಂದಾಗಿ ಯಕೃತ್‍ಗೆ ಹಾನಿಯಾಗಿದ್ದ ಕಾರಣ ಕಾಳಿಂಗ ಸರ್ಪ ಮೃತಪಟ್ಟಿರುವುದು ದೃಢಪಟ್ಟಿತ್ತು. ಮರುದಿನ ಮಾ.1ರಂದು ಬೋನ್‍ನಲ್ಲೇ ಗಂಡು ಹುಲಿ ವೈದ್ಯರು ಹಾಗೂ ಸಿಬ್ಬಂದಿ ನೋಡ ನೋಡುತ್ತಿದ್ದಂತೇ ಹಠಾತ್ತನೇ ಕುಸಿದುಬಿದ್ದಿದೆ. ಕೂಡಲೇ ಅದನ್ನು ಪರಿಶೀಲಿಸಿದ ವೈದ್ಯರು, ಚಿಕಿತ್ಸೆ ಆರಂಭಿಸುವ ಮುನ್ನವೇ ಸಾವಿಗೀಡಾಗಿದೆ. ಮರಣೋತ್ತರ ಪರೀಕ್ಷೆ ನಡೆಸಿದಾಗ ತೀವ್ರ ಹೃದಯಾ ಘಾತದಿಂದ ಸಾವಿಗೀಡಾಗಿರುವುದು ದೃಢಪಟ್ಟಿದೆ. ಆದರೂ ಹುಲಿಯ ಅಂಗಾಂಗವನ್ನು ಹೆಚ್ಚಿನ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳು ಹಿಸಲಾಗಿದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇ ಶಕ ಅಜಿತ್ ಕುಲಕರ್ಣಿ `ಮೈಸೂರು ಮಿತ್ರ’ನಲ್ಲಿ ಸ್ಪಷ್ಟಪಡಿಸಿದ್ದಾರೆ.

ಮೈಸೂರು ಮೃಗಾಲಯದಿಂದ ಪಿಲಿಕುಳ ಮೃಗಾಲಯಕ್ಕೆ ಒಂದು ಜೊತೆ ಕಾಡೆಮ್ಮ, ತೋಳವನ್ನು ನೀಡಲಾಗಿತ್ತು. ಮೈಸೂರು ಮೃಗಾ ಲಯದಲ್ಲಿ ಈಗಾಗಲೇ ತಲಾ 4 ಗಂಡು ಹಾಗೂ ಹೆಣ್ಣು ಹುಲಿ ಗಳಿವೆ. 4 ಕಾಳಿಂಗ ಸರ್ಪವಿದೆ. ಮೈಸೂರು ಮೃಗಾಲಯದಿಂದ ಶಿವಮೊಗ್ಗ, ಹಂಪಿ ಹಾಗೂ ಬೆಳಗಾವಿಯ ಮೃಗಾಲಯಕ್ಕೂ ಪ್ರಾಣಿಗಳನ್ನು ನೀಡಬೇಕಾಗಿರುವ ಹಿನ್ನೆಲೆಯಲ್ಲಿ ಪಿಲಿಕುಳ ಮೃಗಾ ಲಯದಿಂದ ಹುಲಿ ಹಾಗೂ ಕಾಳಿಂಗ ಸರ್ಪವನ್ನು ತರಲಾಗಿತ್ತು. ನಾಗರಹೊಳೆ, ಬಂಡೀಪುರ ಸೇರಿದಂತೆ ವಿವಿಧೆಡೆ ಕಾಡಂಚಿನ ಗ್ರಾಮದಲ್ಲಿ ಉಪಟಳ ನೀಡಿ ಸೆರೆ ಸಿಕ್ಕ ಪ್ರಾಣಿಗಳನ್ನು ಮೃಗಾಲಯ ದಲ್ಲಿ ಪ್ರವಾಸಿಗರ ಪ್ರದರ್ಶನಕ್ಕಿಡಲು ಕಾನೂನಿನಲ್ಲಿ ಅವಕಾಶವಿಲ್ಲದ ಕಾರಣ, ಅವುಗಳನ್ನು ಕೂರ್ಗಳ್ಳಿಯಲ್ಲಿರುವ ಚಾಮುಂಡಿ ಪುನ ರ್ವಸತಿ ಕೇಂದ್ರದಲ್ಲಿಟ್ಟು ಉಪಚರಿಸಲಾಗುತ್ತದೆ.

 

Translate »