ಮುಂದುವರೆದ ಕೋವಿಡ್-19 ಆತಂಕ: ಮೈಸೂರಿನ ಯೋಗ ಪ್ರವಾಸೋದ್ಯಮವೂ ಕುಸಿತ
ಮೈಸೂರು

ಮುಂದುವರೆದ ಕೋವಿಡ್-19 ಆತಂಕ: ಮೈಸೂರಿನ ಯೋಗ ಪ್ರವಾಸೋದ್ಯಮವೂ ಕುಸಿತ

March 12, 2020

ಮೈಸೂರಿಗೆ ಬರುತ್ತಿಲ್ಲ ವಿದೇಶಿ ವಿದ್ಯಾರ್ಥಿಗಳು, ವಾಸ್ತವ್ಯ ವಿಸ್ತರಿಸಿದ ತರಬೇತಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳು
ಮೈಸೂರು, ಮಾ.11(ಆರ್‍ಕೆ)- ಕೊರೊನಾ (ಕೋವಿಡ್-19) ಮಾರಣಾಂತಿಕ ವೈರಸ್ ಪ್ರಬಲವಾಗಿ ವ್ಯಾಪಿಸುತ್ತಿರುವುದರಿಂದ ಮೈಸೂರಿನ ಯೋಗ ಪ್ರವಾಸೋದ್ಯಮದ ಮೇಲೂ ಗಂಭೀರ ಪರಿಣಾಮ ಬೀರಿದೆ.

ವಿದೇಶಗಳಲ್ಲಿ ಕೋವಿಡ್-19 ವ್ಯಾಪಕ ವಾಗಿ ಹರಡುತ್ತಿರುವುದು ಖಚಿತವಾಗಿರು ವುದರಿಂದ ವಿದೇಶಿ ಪ್ರವಾಸಿಗರು ಹಾಗೂ ಯೋಗ ವಿದ್ಯಾರ್ಥಿಗಳು ಮೈಸೂರಿಗೆ ಕೈ ಗೊಂಡಿದ್ದ ಪ್ರವಾಸವನ್ನು ರದ್ದುಪಡಿಸಿದ್ದು, ಯೋಗ ಕಲಿಯಲು ಮೈಸೂರಿಗೆ ಈಗಾ ಗಲೇ ಬಂದಿದ್ದ ಹಲವು ವಿದೇಶಿ ವಿದ್ಯಾರ್ಥಿ ಗಳು ಕೊರೊನಾ ವೈರಸ್ ಭೀತಿಯಿಂದಾಗಿ ತಮ್ಮ ದೇಶಗಳಿಗೆ ಹಿಂದಿರುಗದೆ ಇಲ್ಲಿಯೇ ವಾಸ್ತವ್ಯ ಮುಂದುವರೆಸಿದ್ದಾರೆ.

ಪರಿಣಾಮ ಹಲವು ಯೋಗ ತರಬೇತಿ ಕೇಂದ್ರಗಳು ಈ ವರ್ಷದ ಮೇ ವರೆಗೆ ತರಗತಿಗಳನ್ನು ರದ್ದು ಮಾಡಿದ್ದು, ಕೆಲವು ಸಂಸ್ಥೆಗಳು ಯೋಗ ಪ್ರವಾಸ ಕಾರ್ಯಕ್ರಮ ರದ್ದುಪಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಂದೇಶ ನೀಡಿವೆ.

ಈ ಕುರಿತು ‘ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯೆ ನೀಡಿರುವ ಜಿಎಸ್‍ಎಸ್ ಯೋಗಿಕ್ ರೀಸರ್ಚ್ ಫೌಂಡೇಷನ್ ಮ್ಯಾನೇಜಿಂಗ್ ಟ್ರಸ್ಟಿ ಮತ್ತು ಯೋಗ ಫೆಡರೇಷನ್ ಆಫ್ ಮೈಸೂರು ಟ್ರಸ್ಟ್‍ನ ಉಪಾಧ್ಯಕ್ಷ ಡಿ.ಶ್ರೀಹರಿ, ಕೊರೊನಾ ವೈರಸ್ ಭೀತಿಯಿಂದಾಗಿ ಮೈಸೂರಿನಲ್ಲಿ ಯೋಗ ತರಬೇತಿ ಪಡೆಯು ತ್ತಿರುವ ವಿದೇಶಿ ವಿದ್ಯಾರ್ಥಿಗಳು ತಮ್ಮ ಕೋರ್ಸ್ ಮುಗಿದಿದ್ದರೂ ತಮ್ಮ ದೇಶಗಳಿಗೆ ವಾಪಸ್ ಹೋಗುತ್ತಿಲ್ಲ ಎಂದರು.

ಹಾಗೆಯೇ ಯೋಗಾಭ್ಯಾಸಕ್ಕಾಗಿ ಬರಬೇಕಾಗಿದ್ದ ವಿದೇಶಿಗರೂ ತಮ್ಮ ಪ್ರವಾ ಸದ ಬುಕಿಂಗ್ ಅನ್ನು ರದ್ದುಮಾಡಿ ಕೊಂಡಿದ್ದಾರೆ ಹಾಗೂ ಕೋವಿಡ್-19 ರೋಗದ ಭೀತಿಯಿಂದ ಮೈಸೂರಿಗೆ ಬರಲು ಯಾರೂ ಮನಸ್ಸು ಮಾಡುತ್ತಿಲ್ಲ. ಇದರಿಂದಾಗಿ ಮೈಸೂರಿನ ಬಹುತೇಕ ವಿದೇಶಿಗರ ಯೋಗ ತರಗತಿಗಳು ರದ್ದಾಗಿವೆ ಎಂದರು.

Continued Corona Anxiety Yoga tourism in Mysore declines-1

ವೈರಸ್ ಮುಕ್ತ ಹಾಗೂ ಸುರಕ್ಷತಾ ಸ್ಥಳ ಎಂಬುದು ಖಚಿತವಾಗಿರುವುದರಿಂದ ಯೋಗಾಭ್ಯಾಸ ಪೂರ್ಣಗೊಂಡಿದ್ದರೂ ವಿದೇಶಿ ವಿದ್ಯಾರ್ಥಿಗಳು ವೀಸಾ ರದ್ದು ಪಡಿಸಿಕೊಂಡು ಮೈಸೂರಿನಲ್ಲೇ ವಾಸ್ತವ್ಯ ವನ್ನು ವಿಸ್ತರಿಸಿಕೊಂಡಿದ್ದಾರೆ ಎಂದೂ ಶ್ರೀಹರಿ ತಿಳಿಸಿದರು.

ಪ್ರತೀ ವರ್ಷ ಬೇಸಿಗೆ ಸಮಯದಲ್ಲಿ ಸುಮಾರು 600ರಿಂದ ಸಾವಿರ ಮಂದಿ ವಿದೇಶಿಗರು ಯೋಗಾಭ್ಯಾಸಕ್ಕಾಗಿ ಮೈಸೂ ರಿಗೆ ಬರುತ್ತಾರೆ. ಆದರೆ ಪ್ರಸ್ತುತ ಕೋವಿಡ್-19 ರೋಗದ ಆತಂಕವಿರುವ ಕಾರಣ, ಅಮೆರಿಕಾ, ಯೂರೋಪ್, ಆಸ್ಟ್ರೇಲಿಯಾ, ಸೌದಿ ಅರೇಬಿಯಾ, ಇಟಲಿ, ಕೆನಡಾ, ರಷ್ಯಾ ಮತ್ತು ಚೈನಾ ದೇಶಗಳಿಂದ ಬರುತ್ತಿದ್ದವರು ಈ ಬಾರಿ ಬಂದಿಲ್ಲ ಎಂದು ಶ್ರೀಹರಿ ತಿಳಿಸಿದರು.

ಮೈಸೂರು ನಗರದಲ್ಲಿ ಸುಮಾರು 400 ಯೋಗ ತರಬೇತಿ ಸಂಸ್ಥೆಗಳಿದ್ದು, ಆ ಪೈಕಿ 35 ಕೇಂದ್ರಗಳಲ್ಲಿ ಮಾತ್ರ ವಿದೇಶಿ ವಿದ್ಯಾರ್ಥಿಗಳಿಗೆ ಯೋಗ ಹೇಳಿಕೊಡ ಲಾಗುತ್ತಿದೆ. ಆದರೆ ಈ ಬಾರಿ ವಿದೇಶಿಗರು ಬರುತ್ತಲೂ ಇಲ್ಲ, ಹಾಗೆಯೇ ಬಂದಿರುವ ವರು ಮರಳುತ್ತಿಲ್ಲ ಎಂದು ನುಡಿದರು.

ಕೃಷ್ಣ ಪಟ್ಟಾಭಿ ಜೋಯಿಸ್ ಅಷ್ಟಾಂಗ ಇನ್‍ಸ್ಟಿಟ್ಯೂಟ್(ಕೆಪಿಜೆಎವೈಐ) ಅಷ್ಟಾಂಗ ಯೋಗ ಸಂಸ್ಥೆ ನಡೆಸುತ್ತಿರುವ ಲೆಜೆಂಡರಿ ಯೋಗ ಗುರು ಕೆ.ಪಟ್ಟಾಭಿ ಜೋಯಿಸ್ ಅವರ ಮೊಮ್ಮಗ, ಯೋಗ ತಜ್ಞ ಆರ್. ಶರತ್ ಜೋಯಿಸ್ ಮಾತನಾಡಿ, ನಾವು ಹಲವು ಯೋಗ ತರಗತಿಗಳನ್ನು ರದ್ದು ಪಡಿಸಿರುವುದಲ್ಲದೆ, ಬ್ಯಾಂಕಾಕ್, ಕೊರಿಯಾ ಮತ್ತು ಆಸ್ಟ್ರೇಲಿಯಾಗಳಲ್ಲಿ ಯೋಗ ಕಾರ್ಯಾಗಾರಗಳನ್ನು ರದ್ದು ಮಾಡು ವಂತೆಯೂ ಒತ್ತಾಯಿಸಿದ್ದೇನೆ ಎಂದರು.ಭಾರತ ಅತ್ಯಂತ ಸುರಕ್ಷಿತ. ಆದರೆ ಪ್ರಯಾಣಿಸುವಾಗ ವೈರಸ್ ತಗುಲ ಬಹುದೆಂಬ ಆತಂಕ ವಿದೇಶಿಯರದು ಎಂದು ತಿಳಿಸಿದರು.

ಮುಂಜಾಗ್ರತಾ ಕ್ರಮ: ಯೋಗ ಮತ್ತು ಯೋಗ ಭಾರತಿ ಸಂಸ್ಥೆಗಳನ್ನು ನಡೆಸು ತ್ತಿರುವ ಭರತ ಶಾಸ್ತ್ರಿ ಸಹ ಪ್ರತಿಕ್ರಿಯಿಸಿ, ಹೊಸ ಬುಕಿಂಗ್‍ಗಳಾಗುತ್ತಿಲ್ಲ. ಮೇ ತಿಂಗಳವರೆಗೆ ನಾವು ಯೋಗ ತರಗತಿ ಗಳನ್ನು ರದ್ದುಪಡಿಸಿದ್ದೇವೆ. ಹಾಲಿ ಇರುವ ವಿದೇಶಿಗರ ಸುರಕ್ಷತೆ ಬಗ್ಗೆ ಆಸ್ಥೆ ವಹಿಸಿ ದ್ದೇವೆ ಎಂದರು. ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ಎಸ್‍ಪಿವೈಎಸ್‍ಎಸ್) ಅಧ್ಯಕ್ಷ ಡಾ.ಬಿ.ಎನ್.ಮಾರುತಿ ಮಾತ ನಾಡಿ, ನಮ್ಮಲ್ಲಿ ಸ್ಥಳೀಯರು ಮಾತ್ರ ಯೋಗಾಭ್ಯಾಸ ಮಾಡುತ್ತಿರುವುದರಿಂದ ತರಗತಿಗಳು ಎಂದಿನಂತೆ ನಡೆಯುತ್ತಿವೆ. ಕೊರೊನಾ ವೈರಸ್ ವದಂತಿಯಿಂದ ನಮ್ಮ ಸಂಸ್ಥೆಗೆ ಅಷ್ಟೇನೂ ಈವರೆಗೆ ತೊಂದರೆಯಾಗಿಲ್ಲ ಎಂದು ನುಡಿದರು.

Translate »