ಕೊಡಗಲ್ಲಿ ಮುಂದುವರೆದ ಮಳೆ ಆರ್ಭಟ
ಕೊಡಗು

ಕೊಡಗಲ್ಲಿ ಮುಂದುವರೆದ ಮಳೆ ಆರ್ಭಟ

July 11, 2018
  • ಐದನೇ ಬಾರಿಗೆ ತ್ರಿವೇಣಿ ಸಂಗಮ ಜಲಾವೃತ್ತ
  • ಅಲ್ಲಲ್ಲಿ ಭೂ ಕುಸಿತ
  • ಇಂದು ಶಾಲಾ-ಕಾಲೇಜಿಗೆ ರಜೆ

ಮಡಿಕೇರಿ: ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ನದಿಗಳಲ್ಲಿ ನೀರಿನ ಮಟ್ಟ ಅಪಾಯದ ಸ್ಥಿತಿಗೆ ತಲುಪಿದೆ. ಕಾವೇರಿ, ಲಕ್ಷ್ಮಣ ತೀರ್ಥ ರಾಮ ನದಿಗಳಲ್ಲಿ ಭಾರಿ ಪ್ರಮಾಣದಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ.

ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಸುಂಟಿಕೊಪ್ಪ ಸರಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಭೂ ಕುಸಿತ ಉಂಟಾಗಿದೆ. ಕಾಲೇಜು ಕಟ್ಟಡಕ್ಕೆ ಹೊಂದಿ ಕೊಂಡಂತೆ ಬರೆ ಕುಸಿದ ಪರಿಣಾಮ, ಕಾಲೇಜು ಕಟ್ಟಡ ಅಪಾಯಕ್ಕೆ ಸಿಲುಕಿದೆ. ಮಳೆಯ ಆರ್ಭಟ ಮುಂದುವರಿದಲ್ಲಿ ಮತ್ತೆ ಭೂ ಕುಸಿಯುವ ಸಾಧ್ಯತೆ ಇದ್ದು, ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕ ವರ್ಗ ಸೇರಿದಂತೆ ಮಕ್ಕಳ ಪೋಷಕರಲ್ಲೂ ಆತಂಕ ಮನೆ ಮಾಡಿದೆ.

ಗಾಳಿಬೀಡು ವ್ಯಾಪ್ತಿಯಲ್ಲಿ ನದಿ ನೀರು ರಸ್ತೆ ಮೇಲೆ ಹರಿಯುತ್ತಿದ್ದು, ಭತ್ತದ ಗದ್ದೆಗಳು ಮುಳುಗಡೆಯಾಗಿದೆ. ಕೃಷಿ ಕಾರ್ಯಕ್ಕೆ ಗದ್ದೆಯನ್ನು ಸಿದ್ದಪಡಿಸ ಲಾಗಿದ್ದು, ನದಿಯ ನೀರು ಗದ್ದೆಗೆ ಹರಿದ ಪರಿಣಾಮ ಈ ವ್ಯಾಪ್ತಿಯಲ್ಲಿ ಕೃಷಿ ಕಾರ್ಯ ವಿಳಂಬವಾಗಿದೆ.

ಮಳೆಯೊಂದಿಗೆ ದಟ್ಟ ಮಂಜು ಕವಿದ ವಾತಾವರಣ ಜಿಲ್ಲೆಯಲ್ಲಿದ್ದು, ಹೆದ್ದಾರಿ ಮತ್ತು ಗ್ರಾಮೀಣ ಭಾಗಗಳಲ್ಲಿ ವಾಹನ ಸಂಚಾರ ದುಸ್ತರವಾಗಿದೆ. ಮಳೆಯೊಂದಿಗೆ ಗಾಳಿಯು ರಭಸವಾಗಿ ಬೀಸುತ್ತಿದ್ದು, ಬೆಟ್ಟ ಗುಡ್ಡಗಳ ನಿವಾಸಿಗಳಲ್ಲಿ ಆತಂಕ ಮನೆ ಮಾಡಿದೆ.

ಮಡಿಕೇರಿ ತಾಲೂಕು ಮತ್ತು ಹಾರಂಗಿ ಜಲಾನಯನ ಪ್ರದೇಶಗಳಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಹಾರಂಗಿ ಜಲಾಶಯ ದಿಂದ ನದಿ ಪಾತ್ರಕ್ಕೆ ಹರಿಸುತ್ತಿರುವ ನೀರಿನ ಪ್ರಮಾಣದಲ್ಲಿ ಏರಿಕೆ ಮಾಡಲಾಗಿದೆ. ಜಲಾಶಯಕ್ಕೆ 12,168 ಕ್ಯೂಸೆಕ್ ನೀರಿನ ಒಳ ಹರಿವಿದ್ದು, ನದಿಗೆ 13,406 ಕ್ಯುಸೆಕ್ ಹಾಗು ನಾಲೆಗೆ 450 ಕ್ಯುಸೆಕ್ ಪ್ರಮಾಣದಲ್ಲಿ ನೀರು ಹರಿಸಲಾಗುತ್ತಿದೆ. ಹಾರಂಗಿ ನದಿ, ಜಲಾಶಯದಿಂದ ಹಾಲ್ನೊರೆ ಸೂಸುತ್ತಾ ನದಿ ಪಾತ್ರಕ್ಕೆ ಧುಮ್ಮಿಕ್ಕುವ ದೃಶ್ಯವನ್ನು ಕಣ್ತುಂಬಿಕೊಳ್ಳಲು ಅತೀ ಹೆಚ್ಚಿನ ಪ್ರವಾಸಿಗರು ಹಾರಂಗಿಗೆ ಭೇಟಿ ನೀಡುತ್ತಿದ್ದಾರೆ.

ಭಾಗಮಂಡಲ ವ್ಯಾಪ್ತಿಯಲ್ಲಿ ಪುನರ್ವಸು ಮಳೆ ಅಬ್ಬರಿಸಿದ್ದು, 5ನೇ ಬಾರಿಗೆ ಭಾಗ ಮಂಡಲ ತ್ರಿವೇಣಿ ಸಂಗಮ ಜಲಾವೃತ್ತ ವಾಗಿದೆ. ಜೂನ್ 2ನೇ ವಾರದಿಂದ ಜುಲೈ 10ರ ವರೆಗೆ ಒಟ್ಟು 5 ಬಾರಿ ತ್ರಿವೇಣಿ ಸಂಗಮ ಸಂಪೂರ್ಣ ದ್ವೀಪದಂತಾಗುವ ಮೂಲಕ ಹೊಸ ದಾಖಲೆ ಸೃಷ್ಟಿಸಿದೆ.

ಭಾಗಮಂಡಲ -ಅಯ್ಯಂಗೇರಿ ರಸ್ತೆಯ ಮೇಲೆ 6 ಅಡಿ ನೀರು ಹರಿಯುತ್ತಿದ್ದು, ವಾಹನ ಮತ್ತು ಜನ ಸಂಚಾರ ಸಂಪೂರ್ಣ ಸ್ಥಬ್ಧಗೊಂಡಿದೆ. ಮಡಿಕೇರಿ-ಭಾಗಮಂಡಲ ಸೇತುವೆ ಮುಳುಗುವ ಹಂತ ತಲುಪಿದ್ದು, ಸ್ಥಳದಲ್ಲಿ ಅಗ್ನಿಶಾಮಕ ಇಲಾಖೆ ಮತ್ತು ಗೃಹ ರಕ್ಷಕ ದಳದ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ನೀರಿನ ಮಟ್ಟ ಮತ್ತಷ್ಟು ಏರಿಕೆಯಾದರೆ ಸ್ಥಳೀಯರ ಅನುಕೂಲಕ್ಕೆ ತಕ್ಕಂತೆ ಬೋಟ್ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಕೊಡಗು ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಬಿ.ಎ ಹರೀಶ್ ಮತ್ತು ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಅವರುಗಳು ಭಾಗಮಂಡಲಕ್ಕೆ ತೆರಳಿ ನೆರೆ ಪರಿಸ್ಥಿತಿಯ ಪರಿಶೀಲನೆ ನಡೆಸಿದರು.
ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಬುಧವಾರ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ.

Translate »