ಸಹಕಾರ ಕ್ಷೇತ್ರ ಗ್ರಾಮೀಣ ಯುವಜನತೆಯ ಜೀವನಾಡಿ
ಮೈಸೂರು

ಸಹಕಾರ ಕ್ಷೇತ್ರ ಗ್ರಾಮೀಣ ಯುವಜನತೆಯ ಜೀವನಾಡಿ

December 18, 2019
  • ಹಿರಿಯ ಸಹಕಾರಿ ಹೆಚ್.ವಿ.ರಾಜೀವ್ ಅಭಿಮತ
  • ಈ ಕ್ಷೇತ್ರದಲ್ಲಿ ಯುವಕರಿಗೆ ಅಂದುಕೊಂಡಿದ್ದನ್ನು ಸಾಧಿಸಲು ಸಾಕಷ್ಟು ಅವಕಾಶ

ಮೈಸೂರು, ಡಿ.17(ಎಸ್‍ಪಿಎನ್)- ಸಹಕಾರ ಕ್ಷೇತ್ರ ಗ್ರಾಮೀಣ ಯುವಜನತೆಯ ಜೀವನಾಡಿ ಹಾಗೂ ಆಪ್ತಮಿತ್ರ. ಈ ಕ್ಷೇತ್ರದಲ್ಲಿ ತಾವು ಅಂದುಕೊಂಡಿದ್ದನ್ನು ಸಾಧಿಸಲು ಯುವ ಜನತೆಗೆ ಸಾಕಷ್ಟು ಅವಕಾಶವಿದೆ ಎಂದು ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ವಿ.ರಾಜೀವ್ ಅಭಿಪ್ರಾಯಪಟ್ಟರು.

ಮೈಸೂರು ಚಾಮರಾಜ ಜೋಡಿ ರಸ್ತೆಯಲ್ಲಿರುವ ಜಿಲ್ಲಾ ಸಹಕಾರ ಒಕ್ಕೂಟದ ಸಭಾಂಗಣದಲ್ಲಿ ರಾಜ್ಯ ಸಹಕಾರ ಮಹಾ ಮಂಡಳ, ಜಿಲ್ಲಾ ಸಹಕಾರ ಒಕ್ಕೂಟ, ಪ್ರಮತಿ ಹಿಲ್‍ವ್ಯೂ ವಿದ್ಯಾ ಸಂಸ್ಥೆ ಹಾಗೂ ಸಹಕಾರ ಇಲಾಖೆಯ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಚರ್ಚಾ ಸ್ಪರ್ಧೆ ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಕೃಷಿ ಕ್ಷೇತ್ರದಲ್ಲಿ ನಮ್ಮ ದೇಶ, ಜಗತ್ತಿನ ಇತರೆ ದೇಶಗಳ ಸಾಲಿನಲ್ಲಿ ಕೆಲವೊಮ್ಮೆ ಭಿನ್ನವಾಗಿ ನಿಲ್ಲುತ್ತದೆ. ಏಕೆಂದರೆ ಯುರೋಪ್ ದೇಶದಲ್ಲಿ ಹೈನುಗಾರಿಕೆಯನ್ನು ಉದ್ಯಮ ಎಂದು ಗುರುತಿಸಲಾಗುತ್ತಿದೆ. ಆದರೆ, ನಮ್ಮ ದೇಶದಲ್ಲಿ ಹೈನುಗಾರಿಕೆಯನ್ನು ಕೃಷಿ ಕ್ಷೇತ್ರದ ಉಪಕಸುಬು ಎಂದು ಗುರುತಿಸುತ್ತೇವೆ. ಆದ್ದರಿಂದ ಸಹಕಾರ ಕ್ಷೇತ್ರ ನಮ್ಮ ದೇಶದಲ್ಲಿ ವಿಶಾಲ ವ್ಯಾಪ್ತಿಯನ್ನು ಹೊಂದಿದ್ದು, ಇಲ್ಲಿ ಸಹಕಾರ ಸಂಘಗಳನ್ನು ಸ್ಥಾಪಿಸಿ ಉದ್ಯೋಗದಲ್ಲಿ ತೊಡ ಗಿಸಿಕೊಳ್ಳಲು ಅವಕಾಶವಿದೆ ಎಂದು ತಿಳಿಸಿದರು.

ರೈತರು ಕೃಷಿ ಚಟುವಟಿಕೆಗಳಿಗೆ ಖಾಸಗಿ ಲೇವಾದೇವಿದಾರ ರಿಂದ ಸಾಲ ಪಡೆದು ಶೋಷಣೆಗೆ ಒಳಗಾಗಬಾರದು. ಬದಲಾಗಿ ರೈತರು ಸಹಕಾರ ಸಂಘಗಳಿಂದ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆದು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿ ಬೇಕಿದ್ದರೆ ಹತ್ತಿರದ ಕೃಷಿ ಕೇಂದ್ರಗಳಿಗೆ ಭೇಟಿ ನೀಡಿ, ಕೃಷಿ ಸಂಬಂಧ ಮಾಹಿತಿ ಪಡೆದು ವೈಜ್ಞಾನಿಕ ಕೃಷಿಯಲ್ಲಿ ತೊಡಗಿಸಿ ಕೊಳ್ಳುವ ಬಗ್ಗೆ ರೈತರು ಚಿಂತಿಸಬೇಕು ಎಂದು ಸಲಹೆ ನೀಡಿದರು.

ಕೃಷಿ ಕ್ಷೇತ್ರದಲ್ಲಿ ಪರಸ್ಪರ ಸಹಕಾರ ತತ್ವ ಅಳವಡಿಸಿಕೊಂಡರೆ ಕೃಷಿಕ್ಷೇತ್ರದ ಬೆಳವಣಿಗೆ ಪೂರಕವಾಗಲಿದೆ. ಇಲ್ಲಿ ವ್ಯವಹಾರಿಕ ಆಶಯ ಕಡಿಮೆ ಇರಬೇಕು. ಈ ಚಿಂತನೆ ಹೆಚ್ಚಾದರೆ, ಸಹಕಾರ ಕ್ಷೇತ್ರದ ಮೂಲ ಆಶಯವೇ ಹಾಳಾಗುತ್ತವೆ. ಹಾಗಾಗಿ ಸಹಕಾರ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವವರು ಸಹಕಾರಿ ಗುಣಕ್ಕೆ ಹೆಚ್ಚು ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು. ಸಹಕಾರ ಸಂಘಗಳ ಜಂಟಿ ನಿಬಂಧಕ ಪ್ರಕಾಶ್‍ರಾವ್ ಮಾತನಾಡಿ, ಸಹಕಾರ ಸಂಘಗಳು ರೈತರು, ಬಡವರು, ಮಧ್ಯಮ ವರ್ಗದವರ ಆರ್ಥಿಕ ಹಿತಾಸಕ್ತಿಯನ್ನು ಕಾಪಾಡುವ ಉದ್ದೇಶದಿಂದಲೇ ಕಾರ್ಯ ನಿರ್ವಹಿ ಸುತ್ತಿವೆ. ಈ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರು ತಮ್ಮ ಕೆಲಸವನ್ನು ಶ್ರದ್ಧೆಯಿಂದ ನಿರ್ವಹಿಸಿದರೆ, ಅದು ಸಾಧ್ಯವಾಗಲಿದೆ ಎಂದರು.

ಬಹುಮಾನ ವಿತರಣೆ: ಇದೇ ವೇಳೆ `ಸಹಕಾರ ಸಂಸ್ಥೆಗಳಲ್ಲಿ ಸ್ವಾತಂತ್ರ್ಯ ಮತ್ತು ಸ್ವಾಯತ್ತತೆ’ ಕುರಿತು ಪ್ರಬಂಧ ಸ್ಪರ್ಧೆಯಲ್ಲಿ ಹುಣಸೂರು ತಾಲೂಕಿನ ರತ್ನಪುರಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಪ್ರನುಷ(ಪ್ರ), ಮೈಸೂರು ತಾಲೂಕು ಕೆ.ಸಾಲುಂಡಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಎಸ್.ಭಾಗ್ಯಶ್ರೀ(ದ್ವಿ), ಮೈಸೂರು ಮಹಾರಾಜ ಪ್ರೌಢಶಾಲೆಯ ವಿದ್ಯಾರ್ಥಿ ಶಮೀರ್ ಪಾಷ(ತೃ) ಸ್ಥಾನ ಪಡೆದಿದ್ದಾರೆ. ನಂತರ `ಶಾಲಾ-ಕಾಲೇಜುಗಳಲ್ಲಿ `ಸಹಕಾರ’ ಪಠ್ಯ ವಿಷಯವಾದಲ್ಲಿ ಮಾತ್ರವೇ ಯುವಜನರಲ್ಲಿ ಸಹಕಾರ ಪ್ರಜ್ಞೆಯನ್ನು ಮೂಡಿಸಬಹುದು’ ಚರ್ಚಾಸ್ಪರ್ಧೆ ವಿಷಯದಲ್ಲಿ ಭಾಗವಹಿಸಿದ್ದ ಮೈಸೂರು ಜ್ಞಾನೋದಯ ಪಿಯು ಕಾಲೇಜಿನ ವಿದ್ಯಾರ್ಥಿ ದಿಕ್ಷಿತಾ (ಪ್ರ), ನಂಜನಗೂಡು ಸರ್ಕಾರಿ ಪಿಯು ಕಾಲೇಜಿನ ವಿದ್ಯಾರ್ಥಿನಿ ಆರ್.ಲತಾ(ದ್ವಿ) ಸ್ಥಾನ ಪಡೆದು ಬಹುಮಾನ ಪಡೆದಿದ್ದಾರೆ. ವೇದಿಕೆಯಲ್ಲಿ ಮೈಸೂರು ಜಿಲ್ಲಾ ಸಹಕಾರ ಒಕ್ಕೂಟದ ಉಪಾಧ್ಯಕ್ಷ ಬಿ.ಎನ್.ಸದಾನಂದ, ನಿರ್ದೇಶಕ ಸತೀಶ್, ಮುಖ್ಯಕಾರ್ಯನಿರ್ವಹಣಾಧಿಕಾರಿ ಬಿ.ಎಂ. ಚನ್ನಬಸಪ್ಪ, ವ್ಯವಸ್ಥಾಪಕ ಪಿ.ಎಸ್.ಹರೀಶ್ ಇದ್ದರು.

Translate »