ಮೈದನಹಳ್ಳಿ ಪವರ್ ಗ್ರಿಡ್ ವಿದ್ಯುತ್ ಮಾರ್ಗದ ಸ್ಥಳ ಪರಿಶೀಲನೆ ಬಳಿಕ ನಿರ್ಧಾರ ಸಂಸದ ಪ್ರತಾಪ್ ಸಿಂಹ ಭರವಸೆ
ಮೈಸೂರು

ಮೈದನಹಳ್ಳಿ ಪವರ್ ಗ್ರಿಡ್ ವಿದ್ಯುತ್ ಮಾರ್ಗದ ಸ್ಥಳ ಪರಿಶೀಲನೆ ಬಳಿಕ ನಿರ್ಧಾರ ಸಂಸದ ಪ್ರತಾಪ್ ಸಿಂಹ ಭರವಸೆ

December 18, 2019

ಮೈಸೂರು, ಡಿ.17(ಎಸ್‍ಪಿಎನ್)- ತುಮಕೂರು ಜಿಲ್ಲೆ ಪಾವಗಡ ತಾಲೂಕಿನಿಂದ, ಶಿರಾ ಮಾರ್ಗವಾಗಿ ಮೈಸೂರಿನ ಮೈದನಹಳ್ಳಿ ಪವರ್ ಗ್ರಿಡ್‍ಗೆ ಅಳವಡಿಸುತ್ತಿರುವ ಹೈಟೆನ್ಷನ್ ಲೈನ್ ಕಾಮಗಾರಿಯನ್ನು ಪರಿ ಶೀಲಿಸಿದ ನಂತರ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸಂಸದ ಪ್ರತಾಪಸಿಂಹ ರೈತ ಮುಖಂಡರಿಗೆ ಭರವಸೆ ನೀಡಿದ್ದಾರೆ.

ಮೈಸೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಡಿಸಿ ಅಭಿರಾಂ ಜಿ.ಶಂಕರ್ ಅವರ ನೇತೃತ್ವದಲ್ಲಿ ರೈತ ಮುಖಂಡರು ಮತ್ತು ಪವರ್ ಗ್ರೀಡ್ ಸ್ಟೇಷನ್ ಅಧಿಕಾರಿಗಳೊಂದಿಗೆ ಮಂಗಳವಾರ ನಡೆದ ಸಭೆಯಲ್ಲಿ ಸಂಸದ ಪ್ರತಾಪ ಸಿಂಹ ಭರವಸೆ ನೀಡಿದ್ದಾರೆ. ಇದಕ್ಕೂ ಮುನ್ನ ಮಾತನಾಡಿದ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಪಾವಗಡ ತಾಲೂಕಿನಿಂದ ಶಿರಾ ಮಾರ್ಗವಾಗಿ ಮೈಸೂರು ಜಿಲ್ಲೆ ಪ್ರವೇಶಿಸುವ ಹೈಟೆನ್ಷನ್ ಲೈನ್ ಕಾಮಗಾರಿಯು ಮೊದಲು ನಿಗದಿಪಡಿಸಿದಂತೆ ಯಾಚೇಗೌಡನಹಳ್ಳಿಯಿಂದ ಗುಂಗ್ರಾಲ್ ಛತ್ರ, ಮೈದನಹಳ್ಳಿ ಪವರ್ ಗ್ರಿಡ್ ಸ್ಟೇಷನ್‍ಗೆ ಲೈನ್ ಅಳವಡಿಸಲು ಮೊದಲು 4/1 ನೋಟಿಫಿಕೇಶನ್ ಮಾಡಿ, 26 ಪೋಲ್‍ಗಳನ್ನು ಅಳವಡಿಸಲು ನೀಲನಕ್ಷೆ ರೂಪಿಸಲಾಗಿದೆ.

ಆದರೆ ಈ ಮಾರ್ಗವನ್ನು ಬಿಟ್ಟು ಯಾಚೇಗೌಡನಹಳ್ಳಿಯಿಂದ ಹೊಸ ಕೋಟೆ, ಮಲ್ಲೇಗೌಡನಹಳ್ಳಿ, ದೊಡ್ಡ ಗೌಡನಕೊಪ್ಪಲು, ಕಲ್ಲೂರು, ನಾಗನ ಹಳ್ಳಿ, ಮೇಗಳಾಪುರ ಮಾರ್ಗ ವಾಗಿ ಮೈದನಹಳ್ಳಿ ಪವರ್ ಗ್ರಿಡ್ ಸ್ಟೇಷನ್‍ಗೆ ಲೈನ್ ಅಳವಡಿಸಲಾಗುತ್ತಿದೆ. ಹೊಸ ಮಾರ್ಗದಲ್ಲಿ 36 ಪೋಲ್ ಅಳವಡಿಸಬೇಕಾಗಿದೆ. 2ಸಾವಿರ ತೆಂಗಿನ ಮರ ಹಾಗೂ ತೋಟಗಾರಿಕೆ ಬೆಳೆಗಳಿರುವ ಫಲವ ತ್ತಾದ ಜಮೀನಿನ ಮೇಲೆ ಈ ಹೈಟೆನ್ಷನ್ ಲೈನ್ ಹಾದು ಹೋಗುವುದರಿಂದ ಕೃಷಿ ಚಟುವಟಿಕೆಗೆ ತೊಡಕಾಗುತ್ತದೆ ಎಂದು ಜಿಲ್ಲಾಧಿಕಾರಿ ಮತ್ತು ಸಂಸದರಿಗೆ ಮನವರಿಕೆ ಮಾಡಲೆತ್ನಿಸಿದರು.

ರೈತ ಮುಖಂಡರ ಸಮಸ್ಯೆಯನ್ನು ಆಲಿಸಿದ ಸಂಸದರು, ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ರೈತ ಮುಖಂಡರ ಸಮ್ಮುಖದಲ್ಲಿ ಹೈ ಟೆನ್ಷನ್ ಲೈನ್ ಕಾಮಗಾರಿ ನಡೆಯುತ್ತಿರುವ ಸ್ಥಳ ಪರಿಶೀಲನೆ ನಡೆಸಿದ ನಂತರ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ರೈತರಿಗೆ ಭರವಸೆ ನೀಡಿದರು.

Translate »