ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದಿಂದ ಮೈಸೂರು ಜಿಲ್ಲೆಗೆ ನಯಾಪೈಸೆ ಬಿಡುಗಡೆ ಆಗಿಲ್ಲ
ಮೈಸೂರು

ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದಿಂದ ಮೈಸೂರು ಜಿಲ್ಲೆಗೆ ನಯಾಪೈಸೆ ಬಿಡುಗಡೆ ಆಗಿಲ್ಲ

December 19, 2019

ಡಿಸಿಎಂ ಗೋವಿಂದ ಕಾರಜೋಳ ಮುಂದೆ ಮೈಸೂರು ನಿಯೋಗದ ಅಳಲು
ಮೈಸೂರು, ಡಿ.18(ವೈಡಿಎಸ್)- ರಾಜ್ಯ ಸಫಾಯಿ ಕರ್ಮಚಾರಿ ಆಭಿವೃದ್ಧಿ ನಿಗಮ ಆರಂಭಗೊಂಡು 3 ವರ್ಷಗಳೇ ಕಳೆದರೂ ಮೈಸೂರು ಜಿಲ್ಲೆಯಲ್ಲಿ ಜನಾಂಗದ ಅಭಿವೃದ್ಧಿಗೆ ನಯಾಪೈಸೆಯೂ ಬಿಡುಗಡೆ ಆಗಿಲ್ಲ.

2014ರಿಂದ 17ನೇ ಸಾಲಿನವರೆಗೆ 400 ಮಂದಿ ಹಾಗೂ 2017-18ನೇ ಸಾಲಿನಲ್ಲಿ 840 ಮಂದಿ ಸಾಲಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಹಾಗೆಯೇ ಸಫಾಯಿ ಕರ್ಮಚಾರಿಗಳ ಪುನರ್ವಸತಿ ಯೋಜನೆಯಡಿ ಹೊಸದಾಗಿ 2600 ಮಂದಿ ವಿವಿಧ ರೀತಿಯ ಸಾಲ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿದ್ದು, ನಿಗಮದಿಂದ ಇದು ವರೆಗೂ ಸಾಲ ಮಂಜೂರಾಗಿಲ್ಲ.

ಈ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾ ಸಫಾಯಿ ಕರ್ಮ ಚಾರಿ ಮೇಲ್ವಿಚಾರಣಾ ಸಮಿತಿಯ 17 ಮಂದಿಯನ್ನೊಳ ಗೊಂಡ ನಿಯೋಗ ಮಂಗಳವಾರ ಬೆಂಗಳೂರಿಗೆ ತೆರಳಿ ಡಿಸಿಎಂ ಗೋವಿಂದ ಕಾರಜೋಳ ಅವರನ್ನು ಭೇಟಿ ಮಾಡಿ, ರಾಜ್ಯ ಸಫಾಯಿ ಕರ್ಮಚಾರಿ ಆಭಿವೃದ್ಧಿ ನಿಗಮವು 3 ವರ್ಷದಿಂದ ಮೈಸೂರು ಜಿಲ್ಲೆಗೆ ವಿವಿಧ ಯೋಜನೆಗಳಡಿ ಆರ್ಥಿಕ ನೆರವು ನೀಡಿಲ್ಲ. ಹಾಗಾಗಿ ಅರ್ಜಿ ಸಲ್ಲಿಸಿರುವ ಎಲ್ಲರಿಗೂ ಸಾಲಸೌಲಭ್ಯ ನೀಡಬೇಕು ಹಾಗೂ ಮೈಸೂರು ಜಿಲ್ಲೆ ಸಮಾಜ ಸೇವಕರಾದ ಸಫಾಯಿ ಕರ್ಮಚಾರಿಗಳ ಜನಾಂಗದ ಹಿರಿಯ ಮುಖಂಡ ಎಂ.ವಿ.ವೆಂಕಟೇಶ್ ಅವರನ್ನು ರಾಜ್ಯ ಸಫಾಯಿ ಕರ್ಮಚಾರಿ ಆಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರಾಗಿ ನೇಮಿಸಬೇಕೆಂದು ಒತ್ತಾಯಿಸಿದೆ.

ಈ ಕುರಿತು ಮೈಸೂರು ಜಿಲ್ಲಾ ಸಫಾಯಿ ಕರ್ಮ ಚಾರಿಗಳ ಮೇಲ್ವಿಚಾರಣಾ ಸಮಿತಿ ಸದಸ್ಯ ಸಿ.ಆರ್.ರಾಚಯ್ಯ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ಇತರೆ ನಿಗಮಗಳು ಸಾಲಸೌಲಭ್ಯ ನೀಡುವ ಮೂಲಕ ತಮ್ಮ ಸಮು ದಾಯಗಳನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಿದ್ದರೆ, ರಾಜ್ಯದಲ್ಲಿ ಸಫಾಯಿ ಕರ್ಮಚಾರಿಗಳ ಅಭಿವೃದ್ಧಿಗಾಗಿ ಪ್ರತ್ಯೇಕವಾಗಿ ಸ್ಥಾಪಿತವಾದ ನಿಗಮವು ಹೆಸರಿಗೆ ಮಾತ್ರ ನಿಗಮವಾಗಿದ್ದು, ಫಲಾನುಭವಿಗಳಿಗೆ ಸಾಲ ಮಂಜೂರು ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

100 ಕೋಟಿ ಅನುದಾನ ಸದ್ಬಳಕೆಯಾಗಿಲ್ಲ: ರಾಜ್ಯ ಸರ್ಕಾರ ರಾಜ್ಯ ಸಫಾಯಿ ಕರ್ಮಚಾರಿ ಆಭಿವೃದ್ಧಿ ನಿಗಮಕ್ಕೆ 100 ಕೋಟಿ ರೂ. ಅನುದಾನ ನೀಡಿ, ಸಮುದಾಯವನ್ನು ಅಭಿವೃದ್ಧಿಪಡಿಸಿ, ಸಮಾಜವನ್ನು ಮುಖ್ಯವಾಹಿನಿಗೆ ತರುವಂತೆ ಸಚಿವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರೂ ಅನುದಾನವನ್ನು ಬಳಸಿಕೊಳ್ಳುವಲ್ಲಿ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ. ಈ ಹಿನ್ನೆಲೆ ಯಲ್ಲಿ ಮೈಸೂರು ಜಿಲ್ಲಾ ಸಫಾಯಿ ಕರ್ಮಚಾರಿ ಮೇಲ್ವಿ ಚಾರಣಾ ಸಮಿತಿಯ 17 ಮಂದಿಯನ್ನೊಳಗೊಂಡ ನಿಯೋಗ, ಸಚಿವರನ್ನು ಭೇಟಿ ಮಾಡಿ ಸಾಲಸೌಲಭ್ಯ ನೀಡುವಂತೆ ಮನವಿ ಮಾಡಿದ್ದೇವೆ ಎಂದರು.

ಇದಕ್ಕೆ ಡಿಸಿಎಂ ಗೋವಿಂದ ಕಾರಜೋಳ ಪ್ರತಿಕ್ರಿಯಿಸಿ, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳ ಸಭೆ ಕರೆದು ಮೈಸೂರು ಜಿಲ್ಲೆಯಿಂದ ಎಷ್ಟು ಅರ್ಜಿಗಳು ಬಂದಿವೆ ಎಲ್ಲರಿಗೂ ಸಾಲ-ಸೌಲಭ್ಯ ನೀಡಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದರು.

Translate »