ಮೈಸೂರು, ಮಾ.18(ಪಿಎಂ)- ದಂತ ಚಿಕಿತ್ಸೆಗೂ `ಕೊರೊನಾ’ ಭೀತಿ ಎದುರಾಗಿದೆ. ಡೆಂಟಲ್ ಕ್ಲಿನಿಕ್ ಮತ್ತು ಆಸ್ಪತ್ರೆಗಳು ತುರ್ತು ಅಗತ್ಯವಲ್ಲದ ದಂತ ವೈದ್ಯಕೀಯ ಸೇವೆಗಳನ್ನು ಮಾ.31ರವರೆಗೆ ಸ್ಥಗಿತ ಗೊಳಿಸಬೇಕು ಎಂದು `ಇಂಡಿಯನ್ ಡೆಂಟಲ್ ಅಸೋಸಿಯೇಷನ್’(ಐಡಿಎ) ನಿರ್ದೇಶನ ನೀಡಿದೆ.
ಇಡೀ ದೇಶದಲ್ಲಿ ಗಂಭೀರ ದಂತ ಸಮಸ್ಯೆಗಳನ್ನು ಹೊರತುಪಡಿಸಿ ಉಳಿದ ಚಿಕಿತ್ಸಾ ಸೇವೆಗಳು ವ್ಯತ್ಯಯ ವಾಗಲಿವೆ. ಸಾರ್ವಜನಿಕರು ತುರ್ತು ಅಗತ್ಯವಿಲ್ಲ ದಿದ್ದಲ್ಲಿ ದಂತ ಚಿಕಿತ್ಸೆಗಾಗಿ ಆಸ್ಪತ್ರೆ ಅಥವಾ ಕ್ಲಿನಿಕ್ ಗಳಿಗೆ ತೆರಳದಿರುವುದೇ ಸೂಕ್ತ ಎನ್ನಲಾಗಿದೆ.
ದಂತ ಚಿಕಿತ್ಸೆ, ಶಸ್ತ್ರಚಿಕಿತ್ಸೆ ವೇಳೆ ವೈದ್ಯರು ರೋಗಿಯ ಪಕ್ಕದಲ್ಲೇ ನಿಲ್ಲಬೇಕಿದೆ. ಆಗ ರೋಗಿ ಅಥವಾ ವೈದ್ಯ ರಲ್ಲಿ ಕೊರೊನಾ ಸೋಂಕು ಇದ್ದಲ್ಲಿ ಬಹುಬೇಗ ಹರಡಿ ಬಿಡುತ್ತದೆ. ಹಾಗಾಗಿ ತುರ್ತು ಅಗತ್ಯವಲ್ಲದ ದಂತ ವೈದ್ಯ ಚಿಕಿತ್ಸೆಯನ್ನು ಮಾ.31ರವರೆಗೆ ಮುಂದೂಡಿ ಎಂದು ರಾಜ್ಯ ಸರ್ಕಾರ ಸಲಹೆ ನೀಡಿದೆ. ಅಧಿಕೃತ ಆದೇಶ ಹೊರ ಡಿಸಲೂ ಚಿಂತನೆ ನಡೆಸಿದೆ. ಇತರ ವೈದ್ಯಕೀಯ ಸೇವೆ ಗಳಲ್ಲಿ ತುರ್ತು ಚಿಕಿತ್ಸೆ ಅಗತ್ಯವಿದ್ದರೆ ಮಾತ್ರವೇ ಆಸ್ಪತ್ರೆಗೆ ಭೇಟಿ ನೀಡಿ. ಇಲ್ಲವಾದರೆ ಆಸ್ಪತ್ರೆ ಭೇಟಿಯನ್ನು ಸದ್ಯಕ್ಕೆ ಮುಂದೂಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದೆ.
ಮೈಸೂರಿನ ಜೆಎಸ್‍ಎಸ್ ಹಾಗೂ ಫಾರೂಕಿಯ ದಂತ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳಲ್ಲಿ ತುರ್ತು ಅಗತ್ಯ ವಲ್ಲದ ವೈದ್ಯಕೀಯ ಸೇವೆಗಳನ್ನು ಸದ್ಯಕ್ಕೆ ಸ್ಥಗಿತಗೊಳಿಸ ಲಾಗಿದೆ. ನಗರದ ಬಹುತೇಕ ದಂತ ವೈದ್ಯ ಕ್ಲಿನಿಕ್ ಗಳಲ್ಲೂ ಹಲವು ಸೇವೆಗಳನ್ನು ಮುಂದೂಡಲಾಗಿದೆ. ಕರ್ನಾಟಕ ರಾಜ್ಯ ಡೆಂಟಲ್ ಕೌನ್ಸಿಲ್ ಮತ್ತು `ಐಡಿಎ’ಯ ರಾಜ್ಯ ಘಟಕದ ಸೂಚನೆ ಮೇರೆಗೆ ಈ ಕ್ರಮ ಕೈಗೊಳ್ಳ ಲಾಗಿದೆ. `ಐಡಿಎ’ ರಾಜ್ಯ ಉಪಾಧ್ಯಕ್ಷ ಡಾ.ವಿ.ರಘು ನಾಥ್ ಮಾತನಾಡಿ, ಸಾರ್ವಜನಿಕರು, ದಂತ ವೈದ್ಯರು, ದಂತ ವೈದ್ಯಕೀಯ ವಿದ್ಯಾರ್ಥಿಗಳು, ಆಸ್ಪತ್ರೆ ಸಿಬ್ಬಂದಿ ಹಾಗೂ ಅವರ ಕುಟುಂಬ ವರ್ಗದವರ ಹಿತದೃಷ್ಟಿ ಯಿಂದ ತುರ್ತು ಅಗತ್ಯವಲ್ಲದ ದಂತ ಚಿಕಿತ್ಸೆ ಸ್ಥಗಿತಕ್ಕೆ ನಿರ್ದೇಶನ ನೀಡಲಾಗಿದೆ ಎಂದರು.
`ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ತುರ್ತು ಚಿಕಿತ್ಸೆಯ ನ್ನಷ್ಟೇ ನೀಡುವಂತೆ ಅಸೋಸಿಯೇಷನ್ ತಿಳಿಸಿದೆ. ಅದರಂತೆ ನಾವು ಹಲ್ಲು ಕೀಳುವುದು, ಶಸ್ತ್ರಚಿಕಿತ್ಸೆ ಯನ್ನು ಸದ್ಯಕ್ಕೆ ಸ್ಥಗಿತಗೊಳಿಸಿದ್ದೇವೆ. ಔಷಧ ನೀಡುವು ದನ್ನು ಮಾತ್ರ ಮುಂದುವರೆಸಿದ್ದೇವೆ’ ಎಂದು ಸರಸ್ವತಿ ಪುರಂನ ಖಾಸಗಿ ಕ್ಲಿನಿಕ್ ಡಾ.ಶ್ರೀನಿವಾಸ್ ತಿಳಿಸಿದರು.