ಮೈಸೂರು, ಮಾ.31(ಪಿಎಂ)- ಕೊರೊನಾ ತಡೆಯಲು ಲಾಕ್ಡೌನ್ ಜಾರಿಯಲ್ಲಿರು ವುದರಿಂದ ಮೈಸೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿ ನಾಗರಿಕರ ಮನೆ ಬಾಗಿಲಿಗೆ ಹಣ್ಣು ಹಾಗೂ ತರಕಾರಿ ಪೂರೈಸುವ ಕಾರ್ಯ ಮಂಗಳವಾರ ಚಾಲನೆ ಪಡೆಯಿತು.
ಮೈಸೂರು ಮಹಾನಗರ ಪಾಲಿಕೆ, ತೋಟಗಾರಿಕೆ ಇಲಾಖೆ ಹಾಗೂ ಹಾಪ್ಕಾಮ್ಸ್ ಸಂಯುಕ್ತಾಶ್ರಯದಲ್ಲಿ ಈ ಕಾರ್ಯಕ್ರಮ ರೂಪಿಸಲಾಗಿದ್ದು, 5 (ಹಾಪ್ಕಾಮ್ಸ್ನ 1, ಪಾಲಿಕೆಯ 4) ವಾಹನಗಳು ಜನರ ಮನೆ ಬಾಗಿಲಿಗೇ ಹಣ್ಣು-ತರಕಾರಿ ಪೂರೈಸಲಿವೆ. ಪ್ರತಿ ವಾಹನದಲ್ಲಿ 1.5 ಟನ್ ಹಣ್ಣು-ತರಕಾರಿ ಮಾರಾಟ ಮಾಡಲು ಉದ್ದೇಶಿಸಲಾಗಿದೆ. ಮಾರುಕಟ್ಟೆಯಲ್ಲಿ ಜನದಟ್ಟಣೆ ಕಡಿಮೆಗೊಳಿಸುವಲ್ಲಿಯೂ ಈ ವ್ಯವಸ್ಥೆ ಸಹಕಾರಿ. ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದರೆ ಇನ್ನಷ್ಟು ವಾಹನಗಳನ್ನು ಬಳಸಿಕೊಳ್ಳಲಾಗುವುದು ಎಂದು ಮೈಸೂರು ಹಾಪ್ಕಾಮ್ಸ್ ವ್ಯವಸ್ಥಾಪಕ ನಿರ್ದೇಶಕ ಹೆಚ್.ಸಿ.ಸುದರ್ಶನ್ ತಿಳಿಸಿದರು. ಮೈಸೂರು ನಗರದಲ್ಲಿ 45 ಹಾಪ್ಕಾಮ್ಸ್ನ ಔಟ್ಲೆಟ್ಗಳಿವೆ. ಔಟ್ಲೆಟ್ ಇಲ್ಲದ ಪ್ರದೇಶಗಳಲ್ಲಿ ಈ ವಾಹನಗಳು ಸಂಚರಿಸಲಿವೆ ಎಂದರು. ಮೈಸೂರಿನ ಕರ್ಜನ್ ಪಾರ್ಕ್ನಲ್ಲಿರುವ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ ಆವರಣದಲ್ಲಿ ಇಂದು ಮನೆ ಮನೆ ಬಾಗಿಲಿಗೆ ಹಣ್ಣು ಮತ್ತು ತರಕಾರಿ ಪೂರೈಸುವ ಕಾರ್ಯ ಕ್ರಮಕ್ಕೆ ಮೇಯರ್ ತಸ್ನೀಂ ಚಾಲನೆ ನೀಡಿದರು. ಉಪ ಮೇಯರ್ ಶ್ರೀಧರ್, ತೋಟ ಗಾರಿಕೆ ಇಲಾಖೆ ಉಪ ನಿರ್ದೇಶಕ ರುದ್ರೇಶ್ ಮತ್ತಿತರರು ಹಾಜರಿದ್ದರು.