ಪೌರಕಾರ್ಮಿಕರ ಉಪಾಹಾರ ಭತ್ಯೆ ಪಾವತಿಗೆ ಕೌನ್ಸಿಲ್ ಅನುಮೋದನೆ
ಮೈಸೂರು

ಪೌರಕಾರ್ಮಿಕರ ಉಪಾಹಾರ ಭತ್ಯೆ ಪಾವತಿಗೆ ಕೌನ್ಸಿಲ್ ಅನುಮೋದನೆ

February 28, 2020

2015-18ರವರೆಗಿನ ಬಾಕಿ ಉಳಿಸಿಕೊಂಡ ಉಪಾಹಾರ ಭತ್ಯೆಯ ಒಟ್ಟು 5.40 ಕೋಟಿ ರೂ. ಸಂದಾಯಕ್ಕೆ ನಿರ್ಣಯ

518 ಮಂದಿ ಖಾಯಂ ಹಾಗೂ 1,648 ಗುತ್ತಿಗೆ ಪೌರಕಾರ್ಮಿಕರಿಗೆ ಯೋಜನೆ ಫಲ

ಮೈಸೂರು, ಫೆ.27(ಪಿಎಂ)- ಮೈಸೂರು ಮಹಾ ನಗರ ಪಾಲಿಕೆ ಖಾಯಂ ಹಾಗೂ ಗುತ್ತಿಗೆ ಪೌರಕಾರ್ಮಿಕರ 2015-18ರವರೆಗಿನ ಬಾಕಿ ಉಳಿಸಿಕೊಂಡಿರುವ ಉಪಾ ಹಾರ ಭತ್ಯೆಯ ಒಟ್ಟು 5.40 ಕೋಟಿ ರೂ. ಪಾವತಿ ಮಾಡಲು ಗುರುವಾರ ನಡೆದ ಮಹಾ ನಗರಪಾಲಿಕೆ ಸಾಮಾನ್ಯ ಕೌನ್ಸಿಲ್ ಸಭೆಯಲ್ಲಿ ಅನುಮೋದನೆ ನೀಡಲಾಯಿತು.

ಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂ ಗಣದಲ್ಲಿ ಮೇಯರ್ ತಸ್ನೀಂ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪೌರಕಾರ್ಮಿಕರ ಶೇ.24.10ರ ಅನುದಾನದ 2018-19 ಮತ್ತು 19-20ರ ವೈಯಕ್ತಿಕ ಸೌಲಭ್ಯಗಳಡಿ ವೆಚ್ಚವಾಗದೇ ಉಳಿದಿರುವ ಅನುದಾನದಲ್ಲಿ ಭತ್ಯೆ ನೀಡಲು ಅನುಮೋದಿಸಲಾಯಿತು.

ಅನುದಾನ ಉಳಿದಿರುವ ಹಿನ್ನೆಲೆಯಲ್ಲಿ ಅದರಲ್ಲಿ ಭತ್ಯೆ ನೀಡಲು ಅವಕಾಶ ಮಾಡಿಕೊಡಲಾಗಿದೆ. 518 ಮಂದಿ ಖಾಯಂ ಪೌರಕಾರ್ಮಿಕರಿಗೆ ಅವರ ಖಾತೆ ಮೂಲಕ ಹಾಗೂ 1,648 ಗುತ್ತಿಗೆ ಪೌರಕಾರ್ಮಿಕರಿಗೆ ಗುತ್ತಿಗೆ ದಾರರ ಮೂಲಕ ನೀಡಲು ಅವಕಾಶವಿದೆ. ನೇರವಾಗಿ ನಗದು ರೂಪದಲ್ಲಿ ನೀಡಲು ಸರ್ಕಾರ ಅವಕಾಶ ಕಲ್ಪಿಸಿಲ್ಲ ಎಂದು ಹೆಚ್ಚುವರಿ ಆಯುಕ್ತ ಶಶಿಕುಮಾರ್ ಸಭೆಗೆ ತಿಳಿಸಿ ದರು. ಅಂತಿಮವಾಗಿ ಸಭೆ ಇದಕ್ಕೆ ಅನುಮೋದನೆ ನೀಡಿತು.

5 ಲಕ್ಷ ರೂ. ಪರಿಹಾರ: ಪಾಲಿಕೆ 63ನೇ ವಾರ್ಡಿನಲ್ಲಿ ಕರ್ತವ್ಯ ವೇಳೆ ಸಾವನ್ನಪ್ಪಿದ ಹೊರಗುತ್ತಿಗೆ ಪೌರ ಕಾರ್ಮಿಕ ಬಿ.ಸುರೇಶ್ ಕುಟುಂಬಕ್ಕೆ ಪಾಲಿಕೆಯಿಂದ 5 ಲಕ್ಷ ರೂ. ಪರಿಹಾರ ಧನ ನೀಡಲು ಕೌನ್ಸಿಲ್ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಜ.10ರಂದು ಸಾವನ್ನಪ್ಪಿದ ಬಿ.ಸುರೇಶ್ ಪತ್ನಿ ಸೌಮ್ಯ ಪಾಲಿಕೆಯಿಂದ ಪರಿಹಾರಧನ ಕೋರಿ ದ್ದರು. ಅಲ್ಲದೆ, ಇಂತಹ ಸಂದರ್ಭಕ್ಕಾಗಿ ಪಾಲಿಕೆ ಬಜೆಟ್ ನಲ್ಲಿ ಹಣ ಮೀಸಲಿಡುವ ಬಗ್ಗೆಯೂ ಪ್ರಸ್ತಾಪವಾಯಿತು.

ಅಲ್ಲದೆ, ಗುತ್ತಿಗೆಪೌರ ಕಾರ್ಮಿಕರ ಇಎಸ್‍ಐ ಹಾಗೂ ಪಿಎಫ್ ಹಣವನ್ನು ಕಾಲಕ್ಕನುಗುಣವಾಗಿ ಗುತ್ತಿಗೆದಾರರು ಕೊಟ್ಟುತ್ತಿದ್ದಾರೆಯೇ ಎಂದು ಆಗಾಗ್ಗೆ ಪರಿಶೀಲನೆ ನಡೆಸ ಬೇಕು ಎಂದು ಎಸ್‍ಬಿಎಂ ಮಂಜು ಆಗ್ರಹಿಸಿದರು. ಇದೇ ವೇಳೆ ಬಿಜೆಪಿ ಸದಸ್ಯರಾದ ಬಿ.ವಿ.ಮಂಜುನಾಥ್ ಹಾಗೂ ಶಿವಕುಮಾರ್, ಮೃತ ಸುರೇಶ್ ಕುಟುಂಬಕ್ಕೆ ಗುತ್ತಿಗೆದಾರರು ಕಾನೂನಾತ್ಮಕವಾಗಿ ಏನೇನು ಪರಿಹಾರ ಕೊಡಬೇಕಾಗುತ್ತದೆ ಎಂಬ ಬಗ್ಗೆಯೂ ಪರಿಶೀಲನೆ ಮಾಡಬೇಕೆಂದು ಸಲಹೆ ನೀಡಿದರು.

ಫೆ.28ರಂದು ನಗುವಿನಹಳ್ಳಿ ರಸ್ತೆ ತಿರುವು ಪರಿಶೀಲನೆ: ಮೈಸೂರು ತಾಲೂಕಿನ ನಗುವಿನಹಳ್ಳಿ ರಸ್ತೆಯಲ್ಲಿರುವ ತೀಕ್ಷ್ಣ ತಿರುವು ನೇರಗೊಳಿಸುವ ಸಂಬಂಧ ಪಾಲಿಕೆ ಜಾಗ ವನ್ನು ಲೋಕೋಪಯೋಗಿ ಇಲಾಖೆಗೆ ನೀಡುವ ಸಂಬಂಧ ಪರ-ವಿರೋಧ ಚರ್ಚೆ ನಡೆದು, ಅಂತಿಮವಾಗಿ ಸಲಹಾ ಸಮಿತಿ ಸ್ಥಳ ಪರಿಶೀಲನೆ ಬಳಿಕ ನಿರ್ಣಯ ಕೈಗೊಳ್ಳಲು ತೀರ್ಮಾನಿಸಲಾಯಿತು.

ಸಭೆಯ ಕಾರ್ಯಸೂಚಿಯಲ್ಲಿ ಉಲ್ಲೇಖಿಸಿದ ಸದರಿ ವಿಷಯವನ್ನು ಪ್ರಸ್ತಾಪಿಸಿದ ಅಯೂಬ್ ಖಾನ್ ಹಾಗೂ ಆರೀಫ್ ಹುಸೇನ್, ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆ ಮೇರೆಗೆ ಸ್ಥಳ ಪರಿಶೀಲಿಸಿ, ಪಟ್ಟಣ ಯೋಜನೆ ಮತ್ತು ಸುಧಾರಣೆ ಸ್ಥಾಯಿ ಸಮಿತಿ ಒಪ್ಪಿಗೆ ಸೂಚಿಸಿದ್ದು, ಕೌನ್ಸಿಲ್ ಮಂಜೂರಾತಿ ನೀಡಬೇಕಿದೆ ಎಂದರು.

ಬಿಜೆಪಿ ಸದಸ್ಯರಾದ ಬಿ.ವಿ.ಮಂಜುನಾಥ್, ಶಿವಕುಮಾರ್ ಸೇರಿದಂತೆ ಮತ್ತಿತರ ಬಿಜೆಪಿ ಸದಸ್ಯರು ಸದರಿ ಜಾಗ ಪರಿಶೀಲಿಸಬೇಕು. ಇದರಿಂದ ನಗರಪಾಲಿಕೆಗೆ ನಷ್ಟ ಉಂಟಾಗಲಿದೆಯೇ ಎಂಬುದು ಸೇರಿದಂತೆ ಎಲ್ಲವನ್ನೂ ಪರಾಮರ್ಶಿಸಬೇಕು ಎಂದು ಒತ್ತಾಯಿಸಿದರು. ಅಂತಿಮ ವಾಗಿ ಫೆ.28ರಂದು ಸಲಹಾ ಸಮಿತಿಯು ಸ್ಥಳ ಪರಿಶೀಲನೆ ನಡೆಸಲು ನಿರ್ಣಯಿಸಲಾಯಿತು.

ಲ್ಯಾಪ್‍ಟ್ಯಾಪ್ ಹಣ ಕೊಟ್ಟಿಲ್ಲ: ಇಂದು ಬೆಳಿಗ್ಗೆ 11ಕ್ಕೆ ನಿಗದಿಯಾಗಿದ್ದ ಸಭೆಯನ್ನು ಕೋರಂ ಅಭಾವದಿಂದ ಅರ್ಧ ಗಂಟೆ(11.30ಕ್ಕೆ) ಮೇಯರ್ ತಸ್ನೀಂ ಮುಂದೂಡಿದ್ದರು. 11.30ಕ್ಕೆ ಸಭೆ ಆರಂಭವಾಗುತ್ತಿದ್ದಂತೆ ಲ್ಯಾಪ್ ಟಾಪ್ ಹಿಡಿದು ಮ.ವಿ.ರಾಮ್‍ಪ್ರಸಾದ್ 113 ಮಂದಿಗೆ ಲ್ಯಾಪ್ ಟ್ಯಾಪ್ ಹಣ ಪಾವತಿ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಕಾರ್ಯಸೂಚಿ ಮುಗಿದ ಬಳಿಕ ಸಾಮಾನ್ಯ ವಿಷಯ ಚರ್ಚೆ ವೇಳೆ ಮಾತನಾಡು ವಂತೆ ಮೇಯರ್ ಮನವೊಲಿಸಿದರೂ ಪಟ್ಟುಹಿಡಿದ ರಾಮ್‍ಪ್ರಸಾದ್, ಪಾಲಿಕೆ ಅನುದಾನದಲ್ಲಿ ಆರ್ಥಿಕವಾಗಿ ಹಿಂದುಳಿದ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ಬಿಇ ಮತ್ತು ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಲ್ಯಾಪ್‍ಟ್ಯಾಪ್ ಖರೀದಿಸಿ ಬಿಲ್ ಸಲ್ಲಿಸಿದರೆ ಹಣ ನೀಡುವಂತೆ ಯೋಜನೆ ರೂಪಿಸ ಲಾಗಿತ್ತು. ಅದರಂತೆ 113 ಮಂದಿ ಲ್ಯಾಪ್‍ಟಾಪ್ ಖರೀದಿಸಿ ಬಿಲ್ ಸಲ್ಲಿಸಿದ್ದಾರೆ. ಆದರೆ ಅವರಿಗೆ ಹಣ ಸಂದಾಯ ಮಾಡಿಲ್ಲ. ಇದರಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ವಿದೆ ಎಂದು ಆರೋಪಿಸಿದರು. ಕೊನೆಗೆ ಸಾಮಾನ್ಯ ವಿಷಯ ಚರ್ಚೆ ವೇಳೆ ಮಾತನಾಡುವಂತೆ ಮೇಯರ್ ಮನವೊಲಿಸಿ ಸುಮ್ಮನಿರಿಸಿದರು. ಉಪಮೇಯರ್ ಶ್ರೀಧರ್, ಪಾಲಿಕೆ ವಿರೋಧ ಪಕ್ಷ(ಬಿಜೆಪಿ)ದ ನಾಯಕ ಎಂ.ಯು. ಸುಬ್ಬಯ್ಯ, ಪಾಲಿಕೆ ಹೆಚ್ಚುವರಿ ಆಯುಕ್ತ ಶಶಿಕುಮಾರ್ ಸೇರಿದಂತೆ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಆಡಳಿತ-ವಿಪಕ್ಷ ಸದಸ್ಯರ ಜಟಾಪಟಿ, ಭಾರೀ ಗದ್ದಲ: ಸಭೆ ಮುಂದೂಡಿಕೆ

ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಸಂಬಂಧ ಶಾಸಕ ಯತ್ನಾಳ್ ಟೀಕೆ ಪಾಲಿಕೆ ಸಭೆಯಲ್ಲಿ ಪ್ರಸ್ತಾಪ
ಮೈಸೂರು, ಫೆ.27(ಎಸ್‍ಬಿಡಿ)- ಸ್ವಾತಂತ್ರ್ಯ ಹೋರಾಟಗಾರ ರಾದ ದೊರೆಸ್ವಾಮಿ ಅವರನ್ನು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಟೀಕಿಸಿರುವ ವಿಚಾರ ಮೈಸೂರು ನಗರ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಪ್ರಸ್ತಾಪವಾಗಿದ್ದರಿಂದ ಗದ್ದಲ ಸೃಷ್ಟಿಯಾಗಿದ್ದಲ್ಲದೆ ಸಭೆ ಮುಂದೂಡಿದ ಪ್ರಸಂಗ ನಡೆಯಿತು.

ಕಾರ್ಯಸೂಚಿ ಮೇಲಿನ ಚರ್ಚೆಗೆ ಮುನ್ನವೇ ಮಾಜಿ ಮೇಯರ್ ಅಯೂಬ್ ಖಾನ್, ಈ ವಿಚಾರ ಪ್ರಸ್ತಾಪಿಸಿದರು. ದೊರೆ ಸ್ವಾಮಿ ಅವರನ್ನು ನಕಲಿ ಸ್ವಾತಂತ್ರ್ಯ ಹೋರಾಟಗಾರ ಎಂದು ಅವಮಾನಿಸಿರುವ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ವಿರುದ್ಧ ನಿರ್ಣಯ ಮಂಡಿಸಲು ಅವಕಾಶ ನೀಡುವಂತೆ ಕೇಳಿದರು. ತಕ್ಷಣ ಎದ್ದುನಿಂತ ಬಿಜೆಪಿ ಸದಸ್ಯ ಶಿವಕುಮಾರ್, ಬಿ.ವಿ.ಮಂಜುನಾಥ್, ಎಂ.ಯು.ಸುಬ್ಬಯ್ಯ ಪಾಲಿಕೆಗೆ ಹೊರತಾದ ವಿಚಾರಗಳ ಬಗ್ಗೆ ಚರ್ಚೆ ನಡೆಸಲು ಅವಕಾಶವಿಲ್ಲ. ಸ್ಥಳೀಯ ಸಮಸ್ಯೆಗಳೇ ಸಾಕಷ್ಟಿವೆ ಎಂದು ಆಕ್ಷೇಪಿಸಿದರು.

ಈ ವೇಳೆ ಮೇಯರ್ ತಸ್ನೀಂ ಮಾತನಾಡಿ, ಕಾರ್ಯಸೂಚಿ ಮೇಲಿನ ಚರ್ಚೆ ಮುಗಿದ ನಂತರ ನಿಮ್ಮ ನಿರ್ಣಯ ಮಂಡನೆಗೆ ಅವಕಾಶ ನೀಡುವುದಾಗಿ ಅಯೂಬ್‍ಖಾನ್‍ಗೆ ತಿಳಿಸಿದರು. ಆದರೆ ಅಯೂಬ್‍ಖಾನ್, ಆರಿಫ್ ಹುಸೇನ್, ಎಸ್‍ಬಿಎಂ ಮಂಜು, ಪ್ರೇಮಾ ಶಂಕರೇಗೌಡ ಸೇರಿದಂತೆ ಕಾಂಗ್ರೆಸ್ ಹಾಗೂ ಜೆಡಿಎಸ್‍ನ ಹಲವು ಸದಸ್ಯರು ಮೊದಲು ನಿರ್ಣಯ ಮಂಡನೆಗೆ ಅವಕಾಶ ನೀಡುವಂತೆ ಪಟ್ಟು ಹಿಡಿದರು. ಈ ಗದ್ದಲದ ನಡುವೆ ಅಯೂಬ್ ಖಾನ್ ಬಿಜೆಪಿ ಸದಸ್ಯರತ್ತ ಕೈ ತೋರಿಸಿ `ಸ್ವಾತಂತ್ರ್ಯ ಹೋರಾಟ ಗಾರರ ವಿರೋಧಿಗಳು’ ಎಂದರು. ಇದರಿಂದ ಸಿಟ್ಟಿಗೆದ್ದ ಬಿಜೆಪಿ ಸದಸ್ಯರು ಮೇಯರ್ ಪೀಠದೆದುರು ಜಮಾಯಿಸಿ, ಆಕ್ರೋಶ ವ್ಯಕ್ತಪಡಿಸಿದರು. ಇತ್ತ ಕಾಂಗ್ರೆಸ್- ಜೆಡಿಎಸ್ ಸದಸ್ಯರೂ ನಮ್ಮ ಪಟ್ಟು ಸಡಿಲಿಸದೆ ಚರ್ಚೆಗೆ ಅವಕಾಶ ನೀಡುವಂತೆ ಒತ್ತಾಯಿಸು ತ್ತಿದ್ದರು. ಸುಮಾರು ಅರ್ಧ ಗಂಟೆ ವಾಗ್ವಾದ, ಗದ್ದಲ ಏರ್ಪಟ್ಟಿತ್ತು. ಕಡೆಗೆ ಕಾರ್ಯಸೂಚಿ ನಂತರ ಅವಕಾಶ ನೀಡುವುದಾಗಿ ಮೇಯರ್ ಎಲ್ಲರ ಸಮಾಧಾನ ಪಡಿಸಿ, ಸಭೆ ಮುಂದುವರೆಸಿದರು.

ಸಭೆ ಮುಂದೂಡಿಕೆ: ಕಾರ್ಯಸೂಚಿ ಮೇಲಿನ ಚರ್ಚೆ ಮುಗಿದ ನಂತರ ಮೇಯರ್ ತಸ್ನಿಂ ಸಾಮಾನ್ಯ ಚರ್ಚೆಗೆ ಸೂಚನೆ ನೀಡಿ, ಮೊದಲಿಗೆ ವಿಪಕ್ಷ(ಬಿಜೆಪಿ) ನಾಯಕ ಎಂ.ಯು.ಸುಬ್ಬಯ್ಯ ಅವರಿಗೆ ಮಾತನಾಡುವಂತೆ ತಿಳಿಸಿದರು. ತಕ್ಷಣ ಎದ್ದುನಿಂತ ಅಯೂಬ್ ಖಾನ್, `ಕಾರ್ಯಸೂಚಿ ಮುಗಿದ ನಂತರ ನಮ್ಮ ನಿರ್ಣಯ ಮಂಡನೆಗೆ ಅವಕಾಶ ನೀಡುವುದಾಗಿ ಹೇಳಿದ್ದೀರಿ. ಹಾಗಾಗಿ ಮೊದಲು ನಾವು ನಿರ್ಣಯ ಮಂಡಿಸುತ್ತೇವೆ’ ಎಂದರು. ಆರಿಫ್ ಹುಸೇನ್ ಮತ್ತಿತರ ಸದಸ್ಯರು ಪಟ್ಟು ಮುಂದುವರೆಸಿದರು.

ಆ ವೇಳೆ ಬಿ.ವಿ.ಮಂಜುನಾಥ್, ಶಿವಕುಮಾರ್, ಎಂ.ಯು. ಸುಬ್ಬಯ್ಯ, ರಮೇಶ್ ಕುಮಾರ್ ಸೇರಿದಂತೆ ಹಲವು ಬಿಜೆಪಿ ಸದಸ್ಯರು ಅಯೂಬ್‍ಖಾನ್ ಮನವಿಗೆ ಆಕ್ಷೇಪ ವ್ಯಕ್ತಪಡಿಸಿದರು. ಹೊರಗಿನ ವಿಚಾರವನ್ನು ಚರ್ಚಿಸಲು ಕೌನ್ಸಿಲ್ ವೇದಿಕೆಯಲ್ಲ. ಹೊರಗಡೆ ಪ್ರತಿಭಟನೆ ಮಾಡಿ. ಸಭೆಯ ಹಾದಿ ತಪ್ಪಿಸಬೇಡಿ ಎಂದರು. ಮೇಯರ್ ತಸ್ನೀಂ, `ಅನಗತ್ಯ ಚರ್ಚೆಯಿಂದ ಸಮಯ ವ್ಯರ್ಥ ವಾಗುತ್ತದೆ’ ಎಂದು ಅಸಮಾದಾನ ವ್ಯಕ್ತಪಡಿಸಿದರು. ಆದರೂ ಗದ್ದಲ ನಿಲ್ಲದ ಕಾರಣ ಸಭೆಯನ್ನು ಅರ್ಧ ಗಂಟೆ ಮುಂದೂಡಿದರು.

ನಂತರ ಮತ್ತೆ ಸಭೆ ಆರಂಭವಾದಾಗಲೂ ಅಯೂಬ್ ಖಾನ್ ನಿರ್ಣಯ ಮಂಡನೆಗೆ ಅವಕಾಶ ನೀಡುವಂತೆ ಒತ್ತಾಯಿಸಿದರು. ಯಾವ ಕಾರಣಕ್ಕೂ ಅವಕಾಶ ನೀಡಬೇಡಿ ಎಂದು ಬಿಜೆಪಿ ಸದಸ್ಯರು ಪಟ್ಟು ಹಿಡಿದರು. ಕಡೆಗೆ ಮೇಯರ್ ತಸ್ನೀಂ ಮಾತನಾಡಿ, `ಇದು ಸೂಕ್ಷ್ಮ ವಿಚಾರವಾದ್ದರಿಂದ ಕೌನ್ಸಿಲ್‍ನಲ್ಲಿ ಚರ್ಚೆ ಮುಂದು ವರೆಸುವುದು ಬೇಡ. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಪತ್ರ ಬರೆಯೋಣ’ ಎಂದು ಹೇಳಿ, ಸಭೆಯನ್ನು ತಹಬದಿಗೆ ತಂದರು. ಒಟ್ಟಾರೆ ಗಂಟೆಗೂ ಹೆಚ್ಚು ಕಾಲ ಕೌನ್ಸಿಲ್ ಸಮಯ ಗದ್ದಲದಲ್ಲೇ ಕಳೆದು ಹೋಯಿತು. ಕುಡಿಯುವ ನೀರು, ರಸ್ತೆ, ಚರಂಡಿ, ಉದ್ಯಾನ, ಬೀದಿ ದೀಪ ಇನ್ನಿತರ ಸಾಮಾನ್ಯ ಸಮಸ್ಯೆಗಳನ್ನು ಹೇಳಿಕೊಳ್ಳಲೂ ಸಾಧ್ಯವಾಗದೆ ಬಹುತೇಕ ಸದಸ್ಯರು ಮೂಕ ಪ್ರೇಕ್ಷಕರಾಗಿ ಕುಳಿತಿದ್ದರು.

Translate »