ಸರ್ವಜ್ಞನ ತ್ರಿಪದಿಗಳು ಸಾರ್ವಕಾಲಿಕ: ತಹಶೀಲ್ದಾರ್ ಮಂಜುನಾಥ್
ಮೈಸೂರು ಗ್ರಾಮಾಂತರ

ಸರ್ವಜ್ಞನ ತ್ರಿಪದಿಗಳು ಸಾರ್ವಕಾಲಿಕ: ತಹಶೀಲ್ದಾರ್ ಮಂಜುನಾಥ್

February 28, 2020

ಹೆಚ್.ಡಿ.ಕೋಟೆ, ಫೆ.29(ಮಂಜು)- ಸರ್ವಜ್ಞರು ನಾಡಿನ ವಿಶಿಷ್ಟ ಕವಿಯಾಗಿದ್ದು, ಬದುಕಿಗೆ ಅಗತ್ಯವಾಗಿರುವ ಎಲ್ಲಾ ವಿಷಯಗಳ ಬಗ್ಗೆ ತಮ್ಮ ತ್ರಿಪದಿಗಳಲ್ಲಿ ಬೆಳಕು ಚೆಲ್ಲಿದ್ದಾರೆ ಎಂದು ತಹಶೀಲ್ದಾರ್ ಆರ್.ಮಂಜುನಾಥ್ ತಿಳಿಸಿದರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ತಾಲೂಕು ಆಡಳಿತದಿಂದ ಏರ್ಪಡಿಸಿದ್ದ ಸಂತ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತ್ರಿಪದಿಗಳಲ್ಲಿ ಜಾತ್ಯತೀತ, ಮಾನವೀಯ ಮೌಲ್ಯ ಕಾಣಬಹುದಾಗಿದ್ದು, ಇವು ಸಾರ್ವಕಾಲಿಕ ಸತ್ಯವನ್ನು ತಿಳಿಸುತ್ತದೆ. ತ್ರಿಪದಿಯ ಮೂಲಕ ಸರ್ವಜ್ಞ ಸಮಾನತೆ ಸಂದೇಶ ಸಾರಿದರು. ಇವರ ಆದರ್ಶ ಮತ್ತು ತತ್ವಗಳನ್ನು ಇಂದಿನ ಯುವ ಜನರು ಅಳವಡಿಕೊಳ್ಳುವುದು ಅಗತ್ಯವಾಗಿದೆ ಎಂದರು.

ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ, ಪ್ರತಿಯೊಂದು ಸಮಾಜದಲ್ಲೂ ಮಹಾನೀಯರು ಜನಿಸಿದ್ದು, ಅವರು ಎಲ್ಲಾ ಸಮಾಜದವರಿಗೂ ಉತ್ತಮ ಸಂದೇಶ ನೀಡಿದ್ದಾರೆ. ಅದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕುಂಬಾರಿಕೆ ಕಲೆಯು ಕುಂಬಾರರಿಗೆ ವರವಾಗಿ ಬಂದಿದ್ದು, ಈ ಕಲೆ ಉಳಿಸಿಕೊಳ್ಳಲು ಅದಕ್ಕೆ ಆಧುನಿಕ ಸ್ಪರ್ಶ ನೀಡಬೇಕು. ಅದಕ್ಕಾಗಿ ಕೌಶಲ್ಯಾಧಾರಿತ ತರಬೇತಿ ಪಡೆಯಬೇಕು. ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರು ಧ್ವ್ವನಿ ಇಲ್ಲದವರಿಗೆ ಧ್ವನಿ ನೀಡಿದ್ದು, ಹಿಂದುಳಿದ ಸಮಾಜಗಳು ಸರ್ಕಾರ ನೀಡುವ ಸೌಲಭ್ಯಗಳನ್ನು ಪಡೆದು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದ ಅವರು, ಸಮುದಾಯ ಭವನ ನಿರ್ಮಿಸಲು ನಿವೇಶನ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

ಪಡುವಲ ವಿರಕ್ತ ಮಠದ ಮಹದೇವ ಸ್ವಾಮೀಜಿ ಮಾತನಾಡಿ, ಸಂತಕವಿ ಸರ್ವಜ್ಞರು ತ್ರಿಪದಿಗಳ ಬ್ರಹ್ಮ ಮತ್ತು ಸಂಸ್ಕೃತದಲ್ಲಿ ಹೇಳುವಂತೆ ಎಲ್ಲಾವನ್ನು ತಿಳಿದವರಾಗಿದ್ದರು. ಜನರು ಹೇಗೆ ರೀತಿ ನೀತಿಗಳನ್ನು ರೂಢಿಸಿಕೊಂಡು ಎಲ್ಲಾ ಸಮಾಜದವರು ಹೇಗೆ ಬದುಕು ಕಟ್ಟಿಕೊಳ್ಳಬೇಕು ಎಂಬುದನ್ನು ತ್ರಿಪದಿಗಳಲ್ಲಿ ತಿಳಿಸಿದ್ದಾರೆ ಎಂದರು.

ಕಾರ್ಯಕ್ರಮಕ್ಕೂ ಮೊದಲು ಪದವಿ ಪೂರ್ವ ಕಾಲೇಜು ಮೈದಾನದಿಂದ ಡಾ.ಬಿ.ಆರ್.ಅಂಬೇಡ್ಕರ್ ಭವನದವರೆಗೆ ಸರ್ವಜ್ಞರ ಭಾವಚಿತ್ರ ಮೆರವಣಿಗೆ ನಡೆಯಿತು. ಮಂಗಳವಾದÀ್ಯ, ವೀರಗಾಸೆ, ಕೋಲಾಟ ಸೇರಿದಂತೆ ವಿವಿಧ ಜನಪದ ಕಲಾತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.

ಕಾರ್ಯಕ್ರಮದಲ್ಲಿ ಜಿಪಂ ಸದಸ್ಯರಾದ ವೆಂಕಟಸ್ವಾಮಿ, ಎಂ.ಪಿ.ನಾಗರಾಜು, ಜಿಲ್ಲಾ ಕುಂಬಾರ ಸಮಾಜದ ಅಧ್ಯಕ್ಷ ಪ್ರಕಾಶ್, ಹೆಚ್.ಡಿ.ಕೋಟೆ ತಾಲೂಕು ಅಧ್ಯಕ್ಷ ಗೋವಿಂದರಾಜು, ಕಾರ್ಯದರ್ಶಿ ನಾಗೇಶ್, ಸರಗೂರು ತಾಲೂಕು ಅಧ್ಯಕ್ಷ ಮುಳ್ಳೂರು ಕಿಟ್ಟಿ, ಕಾರ್ಯದರ್ಶಿ ಕೆ.ಆರ್.ರಾಮಶೆಟ್ಟಿ, ತಾಲೂಕು ಕಸಾಪ ಅಧ್ಯಕ್ಷ ಕನ್ನಡ ಪ್ರಮೋದ, ಗ್ರೇಡ್-2 ತಹಶೀಲ್ದಾರ್ ಆನಂದ್, ಗಿರಿಜನ ಅಭಿವೃದ್ಧಿ ಅಧಿಕಾರಿ ಚಂದ್ರಪ್ಪ, ಸಮಾಜ ಕಲ್ಯಾಣಾಧಿಕಾರಿ ಗೋಪಾಲ ಕೃಷ್ಣಮೂರ್ತಿ, ಲೋಕೋಪಯೋಗಿ ಎಇಇ ಶಿವಣ್ಣ, ಕೃಷಿ ಸಹಾಯಕ ನಿರ್ದೇಶಕ ವೆಂಕಟೇಶ್, ಆರ್‍ಐ ಮಹೇಶ್, ಮುಖಂಡರಾದ ಬಿ.ಸಿ.ಬಸಪ್ಪ, ಮುದ್ದುಮಲ್ಲಯ್ಯ, ಮೈಲಾರಿ, ಆನಂದ ಕುಲಾಲ್, ವೆಂಕಟೇಶ್, ಸ್ವಾಮಿ ಇದ್ದರು.

Translate »