ಮೈಸೂರಲ್ಲಿ ವಕೀಲರಿಂದ ಕೋರ್ಟ್ ಕಲಾಪ ಬಹಿಷ್ಕಾರ
ಮೈಸೂರು

ಮೈಸೂರಲ್ಲಿ ವಕೀಲರಿಂದ ಕೋರ್ಟ್ ಕಲಾಪ ಬಹಿಷ್ಕಾರ

June 12, 2019

ಮೈಸೂರು: ಕುವೆಂಪುನಗರ ಠಾಣೆ ಇನ್‍ಸ್ಪೆಕ್ಟರ್ ರಾಜು ಅವರು ತಮ್ಮ ಮೇಲೆ ಮಾನಸಿಕ ದೌರ್ಜನ್ಯ ನಡೆಸಿ, ದರ್ಪ ಮೆರೆದಿದ್ದಾರೆ ಎಂದು ಮೈಸೂರಿನ ವಕೀಲೆ ಹೆಚ್.ಕೆ.ಭಾಗ್ಯ ಅವರು ಆರೋಪಿಸಿದ್ದಾರೆ.

ಈ ಕುರಿತು ಮೈಸೂರು ವಕೀಲರ ಸಂಘದ ಅಧ್ಯಕ್ಷರಿಗೆ ಲಿಖಿತ ದೂರು ಸಲ್ಲಿಸಿರುವ ಭಾಗ್ಯ ಅವರು, ಸೋಮ ವಾರ ಮಧ್ಯಾಹ್ನ 12.10 ಗಂಟೆ ವೇಳೆಗೆ ಲತಾ ಕುಮಾರಿ ಎಂಬುವರ ದೂರು ಕುರಿತು ಚರ್ಚಿಸಲು ಕುವೆಂಪುನಗರ ಠಾಣೆಗೆ ಹೋಗಿದ್ದಾಗ ಇನ್‍ಸ್ಪೆಕ್ಟರ್ ರಾಜು ಅವಾಚ್ಯ ಶಬ್ದಗಳಿಂದ ಬೈದು ‘ನಿನ್ನಂತಹ ವಕೀಲರನ್ನು ನಾನು ಎಷ್ಟು ನೋಡಿಲ್ಲ, ನೀನ್ ಯಾವ ಸೀಮೆ ವಕೀಲೆ, ನೀನು ಮತ್ತು ನಿನ್ನಂತಹ ವಕೀಲರು ನನ್ನನ್ನು ಏನೂ ಮಾಡಲು ಸಾಧ್ಯವಿಲ್ಲ’ ಎಂದು ನಿಂದಿಸಿ ದರ್ಪ ಪ್ರದರ್ಶಿಸಿದರು ಎಂದು ಆರೋಪಿಸಿದ್ದಾರೆ. ನಾನು ಮಾತನಾಡಲು ಮುಂದಾದಾಗ ಮಹಿಳಾ ಪೊಲೀಸರಿಂದ ಠಾಣೆಯಿಂದ ಆಚೆಗೆ ತಳ್ಳಿಸಿದ್ದಾರೆ. ವಕೀಲೆಯಾದ ನನಗೆ ಸ್ಪಲ್ಪವೂ ಗೌರವ ಕೊಡದೆ ಅವಮಾನ ಮಾಡಿದ್ದಾರೆ ಎಂದೂ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಘದ ತುರ್ತು ಸಭೆ ಕರೆದು ಚರ್ಚಿಸಿದ ಪದಾಧಿಕಾರಿ ಗಳು, ಇಂದು ನ್ಯಾಯಾಲಯದ ಕಲಾಪಗಳಿಂದ ದೂರ ಉಳಿದು ತಮ್ಮ ಪ್ರತಿರೋಧ ವ್ಯಕ್ತಪಡಿಸಿದರು. ವಿಷಯ ತಿಳಿಯು ತ್ತಿದ್ದಂತೆಯೇ ಕೆ.ಆರ್ ಉಪವಿಭಾಗದ ಎಸಿಪಿಯವರು ನಾಳೆ(ಜೂ.12) ಬೆಳಿಗ್ಗೆ ಲಕ್ಷ್ಮೀಪುರಂ ಠಾಣೆ ಬಳಿ ಇರುವ ತಮ್ಮ ಕಚೇರಿಯಲ್ಲಿ ಸಭೆ ಕರೆದಿದ್ದು, ದೂರುದಾರೆ ಭಾಗ್ಯ, ವಕೀಲರ ಸಂಘದ ಪದಾಧಿಕಾರಿಗಳು ಹಾಗೂ ಆರೋಪಿತ ಇನ್‍ಸ್ಪೆಕ್ಟರ್ ರಾಜು ಅವರನ್ನು ಸಭೆಗೆ ಆಹ್ವಾನಿಸಲಾಗಿದೆ ಎಂದು ವಕೀಲರು ತಿಳಿಸಿದ್ದಾರೆ.

ಈ ಸಂಬಂಧ ‘ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯಿಸಿರುವ ಕೆ.ಆರ್ ಉಪವಿಭಾಗದ ಎಸಿಪಿ ಗೋಪಾಲಕೃಷ್ಣ ಟಿ.ನಾಯಕ್ ಅವರು ‘ಯಾವುದೋ ಸಿವಿಲ್ ವಿವಾದ ಸಂಬಂಧ ಮಾತನಾಡಲು ಹೋದಾಗ ಎಲ್ಲರೂ ಒಮ್ಮೆಲೆ ಏಕೆ ಮಾತನಾಡುತ್ತೀರಿ, ಒಬ್ಬೊಬ್ಬರಾಗಿ ಹೇಳಿ ಎಂದು ಇನ್‍ಸ್ಪೆಕ್ಟರ್ ಸ್ವಲ್ಪ ಗದರಿಸಿದ್ದಾರಷ್ಟೇ. ನಾಳೆ ಬೆಳಿಗ್ಗೆ 10.30 ಗಂಟೆಗೆ ಅವರನ್ನು ಕರೆದಿದ್ದೇನೆ. ವಿಚಾರ ಏನೆಂದು ತಿಳಿದುಕೊಂಡು ಸಮಸ್ಯೆ ಬಗೆಹರಿಸುತ್ತೇನೆ’ ಎಂದರು.