ಬಾಲ್ಯವಿವಾಹ ತಡೆ ಕುರಿತು ನಿತ್ಯ ಎಲ್ಲಾ ಶಾಲೆಗಳಲ್ಲಿ ಮಕ್ಕಳಿಗೆ ಪ್ರತಿಜ್ಞಾವಿಧಿ ಬೋಧಿಸಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿರ್ದೇಶನ
ಮೈಸೂರು

ಬಾಲ್ಯವಿವಾಹ ತಡೆ ಕುರಿತು ನಿತ್ಯ ಎಲ್ಲಾ ಶಾಲೆಗಳಲ್ಲಿ ಮಕ್ಕಳಿಗೆ ಪ್ರತಿಜ್ಞಾವಿಧಿ ಬೋಧಿಸಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿರ್ದೇಶನ

December 19, 2019

ಮೈಸೂರು,ಡಿ.18(ಆರ್‍ಕೆ)-ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ‘ಬಾಲ್ಯ ವಿವಾಹ’ ತಡೆಗಟ್ಟುವ ಬಗ್ಗೆ ಮಕ್ಕಳಿಗೆ ನಿತ್ಯ ಪ್ರತಿಜ್ಞಾವಿಧಿ ಬೋಧಿಸಿ ಎಂದು ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್ ಅವರು ಇಂದಿಲ್ಲಿ ಅಧಿಕಾರಿ ಗಳಿಗೆ ನಿರ್ದೇಶನ ನೀಡಿದ್ದಾರೆ.

ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಕ್ಕಳ ಸಹಾಯವಾಣಿ (Child Helpline-1098) 2018ರ ಡಿಸೆಂಬರ್‍ನಿಂದ 2019ರ ನವೆಂಬರ್ ಮಾಹೆವರೆಗೆ ಒಂದು ವರ್ಷದ ಅವಧಿ ಯಲ್ಲಿ ಸಾಧಿಸಿದ ಪ್ರಗತಿ ಕುರಿತಂತೆ ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಜಿಲ್ಲಾಧಿಕಾರಿಗಳು, ಇನ್ನು ಮುಂದೆ ಮೈಸೂರು ಜಿಲ್ಲೆಯ ಎಲ್ಲಾ ಖಾಸಗಿ ಅನುದಾನಿತ ಹಾಗೂ ಸರ್ಕಾರಿ ಪ್ರಾಥಮಿಕ, ಮಾಧ್ಯಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಸಮಾಜಕ್ಕೆ ಮಾರಕವಾಗುತ್ತಿರುವ ಬಾಲ್ಯವಿವಾಹವನ್ನು ತಡೆಗಟ್ಟಲು ಪ್ರತಿನಿತ್ಯ ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ ವೇಳೆ ಪ್ರತಿಜ್ಞಾ ವಿಧಿ ಬೋಧಿಸುವ ಕಾರ್ಯ ನಡೆಸಬೇಕು ಎಂದು ಸೂಚಿಸಿದರು.

ಎಷ್ಟೇ ಆಧುನಿಕತೆ ಬಂದಿದ್ದರೂ, ತಂತ್ರಜ್ಞಾನ ಬೆಳೆದಿದ್ದರೂ, ಸರ್ಕಾರ ಮತ್ತು ಸಂಘ-ಸಂಸ್ಥೆಗಳ ಮೂಲಕ ತಿಳುವಳಿಕೆ ಮೂಡಿ ಸುತ್ತಿದ್ದರೂ ಗ್ರಾಮೀಣ ಭಾಗಗಳು, ಅರಣ್ಯ ದಂಚು, ಆದಿವಾಸಿಗಳಿರುವ ಬುಡಕಟ್ಟು ಪ್ರದೇಶಗಳಲ್ಲಿ ಹೆಣ್ಣು ಮಕ್ಕಳಿಗೆ 18 ವರ್ಷ ಹಾಗೂ ಗಂಡು ಮಕ್ಕಳಿಗೆ 21 ವರ್ಷದೊಳಗೆ ವಿವಾಹ ಮಾಡುತ್ತಿರುವುದು ಕಂಡುಬರುತ್ತಿದೆ. ಜಿಲ್ಲೆಯಲ್ಲಿ ಬಾಲ್ಯವಿವಾಹದ ಬಗ್ಗೆ ಒಟ್ಟು 65 ದೂರುಗಳು ಬಂದಿದ್ದು, ಅದರಲ್ಲಿ 62 ಪ್ರಕರಣಗಳನ್ನು ತಡೆಯಲಾಗಿದೆ. 3 ಪ್ರಕರಣಗಳನ್ನು ಎಫ್‍ಐಆರ್ ದಾಖಲಿಸ ಲಾಗಿದೆ ಎಂದು ಅವರು ತಿಳಿಸಿದರು.

ಕೆಲ ಸಣ್ಣ ಪುಟ್ಟ ಸಭಾಂಗಣ, ಮನೆ ಗಳಲ್ಲಿ 50-60 ಮಂದಿ ಸೇರಿಕೊಂಡು ಯಾರಿಗೂ ಗೊತ್ತಾಗದ ಹಾಗೆ ಬಾಲ್ಯ ವಿವಾಹಗಳು ನಡೆಯುತ್ತಿರುತ್ತವೆ. ವಿಷಯ ತಿಳಿದು ಅಧಿಕಾರಿಗಳು ಅಥವಾ ಪೊಲೀಸರು ಸ್ಥಳಕ್ಕೆ ಹೋದರೆ ಹುಡುಗಿ-ಹುಡುಗನಿಗೆ ಹಾಕಿದ ಹಾರ ತೆಗೆದು, ಹುಡುಗಿಯ ಮಾಂಗಲ್ಯ, ಕಾಲುಂಗುರ ಕಳಚಿಟ್ಟು, ನಾವು ಸಣ್ಣ ಹಬ್ಬ ಮಾಡುತ್ತಿದ್ದೇವೆಂದು ಹೇಳಿ ಕಳುಹಿಸುತ್ತಿರುವ ಪ್ರಕರಣಗಳು ನಡೆಯುತ್ತಿವೆ ಎಂದರು.

ಬಾಲ್ಯವಿವಾಹ ಕಾಯ್ದೆ ಬಲಿಷ್ಠವಾಗಿದ್ದರೂ ಅದರ ಅರಿವಿನ ಕೊರತೆಯಿಂದಾಗಿ ಇದು ಇನ್ನೂ ಜೀವಂತವಾಗಿದೆ. ಈ ಸಾಮಾಜಿಕ ಪಿಡುಗನ್ನು ನಿರ್ಮೂಲನೆ ಮಾಡಬೇಕಾದರೆ ಅರಿವು ಮೂಡಿಸುವುದು ಅನಿವಾರ್ಯ ಎಂದು ತಿಳಿಸಿದರು. ಶಾಲಾ ಮಕ್ಕಳ ಮೂಲಕ ಜಾಗೃತಿ ಮೂಡಿಸಲು ಪ್ರತಿದಿನ ಶಾಲಾ ಆವರಣದಲ್ಲಿ ನಡೆಯುವ ಪ್ರಾರ್ಥನೆ ವೇಳೆ ಬಾಲ್ಯ ವಿವಾಹ ನಿರ್ಮೂಲನೆ ಕುರಿತು ಶಿಕ್ಷಕರು ಪ್ರತಿಜ್ಞಾ ವಿಧಿ ಬೋಧಿಸುವುದನ್ನು ಅಭ್ಯಾಸ ಮಾಡಿ ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಅಲ್ಲದೆ ಶಾಲಾಭಿವೃದ್ಧಿ ಸಮಿತಿ ಸಭೆಗಳಲ್ಲೂ ಬಾಲ್ಯವಿವಾಹ ತಡೆಗಟ್ಟುವ ಸಂಬಂಧ ಅಜೆಂಡಾ ಇಟ್ಟು ಜಾಗೃತಿ ಚರ್ಚೆ ನಡೆಸಬೇಕು, ನಂತರ ಜನರಿಗೂ ಅರಿವು ಮೂಡಿಸುವ ಕಾರ್ಯಕ್ರಮ ಮಾಡಿ ಎಂದು ಇದೇ ವೇಳೆ ಸಲಹೆ ನೀಡಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ದೇವಮಾನೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಪದ್ಮಾ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಪಾಂಡುರಂಗ, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿ ಗಳು ಸಭೆಯಲ್ಲಿ ಹಾಜರಿದ್ದರು.

Translate »