ಕ್ರಿಕೆಟ್ ಬೆಟ್ಟಿಂಗ್: ನಾಲ್ವರ ಬಂಧನ
ಮೈಸೂರು

ಕ್ರಿಕೆಟ್ ಬೆಟ್ಟಿಂಗ್: ನಾಲ್ವರ ಬಂಧನ

April 6, 2019

ಮೈಸೂರು: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್‍ನಲ್ಲಿ ತೊಡಗಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಕುವೆಂಪುನಗರ ಪೊಲೀಸರು, ಪಣಕ್ಕಿಟ್ಟಿದ್ದ 28,100 ರೂ. ನಗದು, 5 ಮೊಬೈಲ್ ಫೋನ್, ಬೆಲೆಬಾಳುವ ಎಲ್‍ಇಡಿ ಟಿವಿ ಹಾಗೂ ಇತರೆ ಪರಿಕರಗಳನ್ನು ಗುರುವಾರ ವಶಪಡಿಸಿಕೊಂಡಿದ್ದಾರೆ. ಶ್ರೀರಂಗಪಟ್ಟಣ ತಾಲೂಕು ಹುರುಳಿ ಕ್ಯಾತನಹಳ್ಳಿಯ ನಿವಾಸಿ, ಮಹಾಲಕ್ಷ್ಮೀ ಟೀ ಕಾರ್ನರ್ ಮಾಲೀಕ ಹರೀಶ್ (30) ಬೆಟ್ಟಿಂಗ್ ನಡೆಸುತ್ತಿದ್ದ ವ್ಯಕ್ತಿ. ಇದೇ ಗ್ರಾಮದ ಅರವಿಂದ (22), ಹೆಚ್.ಡಿ. ಕೋಟೆ ತಾಲೂಕು ಸರಗೂರು ಹೋಬಳಿ ನಾಜೀಪುರದ ಉಮೇಶ್ (19), ಚಾಮರಾಜ ನಗರದ ಕೆಎಚ್‍ಬಿ ಕಾಲೋನಿಯ ಡಾಮಿನಿಕ್ ಆದರ್ಶ(22) ಬಂಧಿತರು. ಮೈಸೂರು ದಟ್ಟಗಳ್ಳಿ 3ನೇ ಹಂತದ ಕನಕದಾಸನಗರ ಮುಖ್ಯ ರಸ್ತೆಯಲ್ಲಿರುವ ಮಹಾಲಕ್ಷ್ಮೀ ಟೀ ಕಾರ್ನರ್ ಮೇಲೆ ದಾಳಿ ಮಾಡಿ, ಏ.4ರಂದು `ಸನ್‍ರೈಸರ್ಸ್ ಹೈದ್ರಾಬಾದ್’ ಹಾಗೂ `ದೆಹಲಿ ಕ್ಯಾಪಿಟಲ್ಸ್’ ನಡುವಿನ ಟಿ-20 ಕ್ರಿಕೆಟ್ ಪಂದ್ಯಾವಳಿಯಲ್ಲಿ ಮೇಲೆ ಈ ನಾಲ್ವರು ಆರೋಪಿಗಳು ಬೆಟ್ಟಿಂಗ್‍ನಲ್ಲಿ ತೊಡಗಿದ್ದರು. ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಈ ಪತ್ತೆ ಕಾರ್ಯದಲ್ಲಿ ಕುವೆಂಪುನಗರ ಪೊಲೀಸ್ ಠಾಣೆ ಇನ್ಸ್‍ಪೆಕ್ಟರ್ ಜಿ.ಸಿ.ರಾಜು, ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಕೆ.ರಘು, ಸಿಬ್ಬಂದಿಗಳಾದ ಮಹೇಂದ್ರ, ಯೋಗೇಶ್, ಆದರ್ಶ ಇದ್ದರು.

Translate »