ಗಗನಕ್ಕೇರಿದ ಕೆಲ ತರಕಾರಿ ಹೂವು, ಹಣ್ಣಿನ ದರ
ಮೈಸೂರು

ಗಗನಕ್ಕೇರಿದ ಕೆಲ ತರಕಾರಿ ಹೂವು, ಹಣ್ಣಿನ ದರ

April 6, 2019

ಮೈಸೂರು: ಯುಗಾದಿ ಹಬ್ಬದ ಹಿಂದಿನ ದಿನವಾದ ಶುಕ್ರವಾರ ಮೈಸೂರಿನ ದೇವರಾಜ ಮಾರುಕಟ್ಟೆ ಭಾರೀ ಜನಜಂಗುಳಿಯಿಂದ ಕೂಡಿತ್ತು. ಹೂವು, ಹಣ್ಣು, ತರಕಾರಿ ಕೊಳ್ಳುವವರಿಂದ ತುಂಬಿ ತುಳುಕಿ ಕಾಲಿಡಲು ಜಾಗವಿಲ್ಲ ಎಂಬಂತಿತ್ತು.

ಹಿಂದು ಪಂಚಾಂಗದ ಪ್ರಕಾರ ವಿಳಂಬಿ ನಾಮ ಸಂವತ್ಸರ ಕಳೆದು ಶನಿವಾರದಿಂದ (ಏ.6) ಶ್ರೀವಿಕಾರಿನಾಮ ಸಂವತ್ಸರ ಆರಂಭ ವಾಗುತ್ತಿದೆ. ಸಂವತ್ಸರದ ಆರಂಭವನ್ನು ಹಿಂದೂಗಳು ಯುಗದ ಆದಿ ಯುಗಾದಿ ಹಬ್ಬವಾಗಿ ಆಚರಿಸುತ್ತಾ ಬಂದಿದ್ದಾರೆ. ಯುಗಾದಿ ಅಂಗವಾಗಿ ಮೈಸೂರಿನ ದೇವರಾಜ ಮಾರುಕಟ್ಟೆ, ಚಿಕ್ಕಗಡಿಯಾರ ಸುತ್ತಮುತ್ತ ಹಾಗೂ ಮೈಸೂರಿನ ವಿವಿಧೆಡೆ ಇರುವ ಮಾರುಕಟ್ಟೆ, ರಸ್ತೆಗಳ ಬದಿ ಹೂವು, ಹಣ್ಣು ಮಾರಾಟಗಾರರಿಂದ ತುಂಬಿದ್ದರೆ, ಗ್ರಾಹಕರೂ ಹಬ್ಬದ ಪದಾರ್ಥಗಳನ್ನು ಮುಗಿಬಿದ್ದು ಕೊಳ್ಳುತ್ತಿದ್ದದ್ದು ಕಂಡು ಬಂತು.

ಹಬ್ಬದ ಪ್ರಯುಕ್ತ ಹೂವು ಮತ್ತು ಹಣ್ಣಿನ ಬೆಲೆ ಏರಿಕೆಯಾಗಿದ್ದು, ಸೇವಂತಿಗೆ ಮಧ್ಯಾಹ್ನದವರೆಗೆ ಮಾರಿಗೆ 80ರಿಂದ 100 ರೂ. ಗಳಿಗೆ ಮಾರಾಟವಾಗುತ್ತಿತ್ತು. ಆದರೆ ಸಂಜೆಯ ನಂತರ 100ರ ಗಡಿ ದಾಟಿ 120 ರೂ.ವರೆಗೂ ಮಾರಾಟ ವಾಗುತ್ತಿತ್ತು.
ಸಾಮಾನ್ಯ ದಿನಗಳಲ್ಲಿ ಕಾಲು ಕೆಜಿಗೆ 15 ರೂ.ಗಳಿಗೆ ಮಾರಾಟವಾಗುತ್ತಿದ್ದ ಬಟನ್ ಗುಲಾಬಿ, ಇಂದು ಕಾಲು ಕೆಜಿಗೆ 50 ರೂ., ವಿವಿಧ ವರ್ಣದ ಮಿಶ್ರಣ ಗುಲಾಬಿ ರೂ.60ರವರೆಗೆ ಮಾರಾಟ ವಾಯಿತು. ಉಳಿದಂತೆ ಬಿಡಿ ಕನಕಾಂಬರ ಕಾಲು ಕೆಜಿಗೆ 125 ರೂ., ಊಟಿ ಮಲ್ಲಿಗೆ ಪ್ರತಿ ಕೆಜಿಗೆ 250ರಿಂದ 400 ರೂ.ವರೆಗೂ ಮಾರಾಟವಾಗುತ್ತಿತ್ತು. ಚೆಂಡು ಹೂವು ಕೆಜಿಗೆ 60 ರೂ. ಹಣ್ಣುಗಳ ಬೆಲೆ ಯಲ್ಲಿಯೂ ಕೊಂಚ ಏರಿಕೆ ಕಂಡಿದ್ದು, ಸೇಬು ಕೆಜಿಗೆ 140ರಿಂದ 180 ರೂ., ಇನ್ನೂ ಉತ್ತಮ ಸೇಬು 200 ರೂ., ದ್ರಾಕ್ರಿ ಕೆಜಿಗೆ 160 ರೂ., ಸಾಮಾನ್ಯ ದಿನಗಳಲ್ಲಿ 40 ರಿಂದ 50ರ ಆಸುಪಾಸಿನಲ್ಲಿ ಮಾರಾಟ ವಾಗುತ್ತಿದ್ದ ಏಲಕ್ಕಿ ಬಾಳೆ ಇಂದು ಕೆಜಿಗೆ 70ರಿಂದ 90 ರೂ.ಗಳಿತ್ತು. ರಸಬಾಳೆ- 100ರಿಂದ 110 ರೂ. ತರಕಾರಿಗಳ ಬೆಲೆ ಯಲ್ಲೂ ಒಂದಷ್ಟು ಏರಿಕೆ ಕಂಡಿದ್ದು, ಕ್ಯಾರೆಟ್- 40ರಿಂದ 60 ರೂ., ಬೀನ್ಸ್ 60ರಿಂದ 70 ರೂ., ಸೌತೇಕಾಯಿ ಒಂದಕ್ಕೆ 8ರಿಂದ 10 ರೂ., ತೆಂಗಿನಕಾಯಿ ಬೆಲೆಯಂತೂ ಗಗನಕ್ಕೇರಿದ್ದು, ಪ್ರತಿ ಕಾಯಿಗೆ ಅದರ ಗಾತ್ರದ ಆಧಾರದ ಮೇಲೆ ಮಾರಾಟವಾಗುತ್ತಿತ್ತು. ಸಣ್ಣ ಗಾತ್ರದ್ದು 25 ರೂ., ಮಧ್ಯಮ- 30, ದೊಡ್ಡದು- 35ರಿಂದ 38 ರೂ.ಗೆ ಏರಿಕೆಯಾಗಿದೆ.

ಯುಗಾದಿ ಎಂದರೆ ಹೋಳಿಗೆ ಇದ್ದೇ ಇರುತ್ತದೆ. ಅದಕ್ಕೆ ಅಗತ್ಯವಾದ ಬೆಲ್ಲದ ದರವೂ ಏರಿಕೆಯಾಗಿತ್ತು. ಉಂಡೆ ಬೆಲ್ಲ ಕೆಜಿಗೆ 60 ರೂ.ಗಳಾದರೆ, 100ರಿಂದ 150 ಗ್ರಾಂ ತೂಕದ ಅಚ್ಚು ಬೆಲ್ಲ 10 ರೂ.ಗಳಿಗೆ ಮಾರಾಟವಾಗುತ್ತಿದ್ದದ್ದು ಕಂಡು ಬಂತು. ಬೇವು ಮತ್ತು ಮಾವಿನ ಎಲೆಯ ಒಂದು ಸಣ್ಣ ಕಟ್ಟಿಗೆ 10ರಿಂದ 15 ರೂ. ಹೂವು, ಹಣ್ಣು, ತರಕಾರಿ ದರ ಮೈಸೂರಿನ ಇತರೆ ಮಾರುಕಟ್ಟೆಗಳಾದ ಮಂಡಿ ಮಾರುಕಟ್ಟೆ, ಅಗ್ರಹಾರ ವಾಣಿ ವಿಲಾಸ ಮಾರುಕಟ್ಟೆಗಳಲ್ಲಿಯೂ ಬೆಲೆ ಯಲ್ಲಿ ಯಾವುದೇ ವ್ಯತ್ಯಾಸವಿರಲಿಲ್ಲ.
ಮೈಸೂರಿನ ಪ್ರಮುಖ ವೃತ್ತ, ರಸ್ತೆಗಳಲ್ಲಿ ಬೇವು, ಮಾವಿನ ಎಲೆಗಳು, ಸೇವಂತಿಗೆ ಹೂವುಗಳು ಮಾರಾಟ ಜೋರಾಗಿತ್ತು. ಕೆಲ ರಸ್ತೆಗಳಲ್ಲಂತೂ ರೈತರೇ ನೇರವಾಗಿ ಸೇವಂತಿಗೆ ಹೂವು ತಂದು ಮಾರುಕಟ್ಟೆ ದರಕ್ಕಿಂತ 10-20 ರೂ. ಕಡಿಮೆಗೆ ಮಾರಾಟ ಮಾಡುತ್ತಿದ್ದದ್ದು ಕಂಡು ಬಂತು.

Translate »