ಜು.28ರಿಂದ ಪುರೋಹಿತ, ಜೋತಿಷಿಗಳಿಗಾಗಿ ಕ್ರಿಕೆಟ್ ಪಂದ್ಯಾವಳಿ
ಮೈಸೂರು

ಜು.28ರಿಂದ ಪುರೋಹಿತ, ಜೋತಿಷಿಗಳಿಗಾಗಿ ಕ್ರಿಕೆಟ್ ಪಂದ್ಯಾವಳಿ

July 24, 2018

ಮೈಸೂರು:  ಮೈಸೂರಿನ ಮಾಯಕಾರ ಗುರುಕುಲ ವತಿಯಿಂದ ಜು.28 ಮತ್ತು 29ರಂದು ಮೈಸೂರಿನ ರೈಲ್ವೆ ಆಟದ ಮೈದಾನದಲ್ಲಿ ಜ್ಯೋತಿಷಿ ಹಾಗೂ ಪುರೋಹಿತರ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ.

ಸದಾ ಮಂತ್ರ, ಹೋಮ, ಹವನ, ಪೂಜೆ, ಅಭಿಷೇಕ ಇನ್ನಿತರ ವಿಧಿ ವಿಧಾನಗಳಲ್ಲೇ ಕಾಲ ಕಳೆಯುವ ಪೌರೋಹಿತ್ಯರದ್ದು ಒತ್ತಡದ ಜೀವನವಾಗಿದೆ. ಈ ಒತ್ತಡದಿಂದ ಅವರನ್ನು ಹೊರ ತರುವ ನಿಟ್ಟಿನಲ್ಲಿ ಈ ಪಂದ್ಯಾವಳಿ ಏರ್ಪಡಿಸಲಾಗಿದೆ ಎಂದು ಮಾಯಕಾರ ಗುರುಕುಲದ ಅಧ್ಯಕ್ಷ ಡಾ.ಮೂಗೂರು ದೀಕ್ಷಿತ್ ಸೋಮವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇದೇ ಮೊದಲ ಬಾರಿಗೆ ನಡೆಯುತ್ತಿರುವ ಈ ಪಂದ್ಯಾವಳಿಯಲ್ಲಿ ಮೈಸೂರಿನ 4 ತಂಡಗಳ ಜೊತೆಗೆ ಬೆಂಗಳೂರು, ಶಿವಮೊಗ್ಗ, ತುಮಕೂರು, ಹಾವೇರಿ ಇನ್ನಿತರ ಜಿಲ್ಲೆಗಳಿಂದ 16 ತಂಡಗಳು ಪಾಲ್ಗೊಳ್ಳಲಿದ್ದು, ಪುರೋಹಿತರು ಹಾಗೂ ಜ್ಯೋತಿಷಿಗಳು ಕೇವಲ ಮಂತ್ರ, ಹೋಮ ಹವನಕ್ಕೆ ಸೀಮಿತವಾಗಿಲ್ಲ. ಅವರಲ್ಲೂ ಕ್ರೀಡಾ ಪ್ರತಿಭೆ ಇದೆ ಎಂಬುದನ್ನು ಪರಿಚಯಿಸುವುದೇ ಪಂದ್ಯಾವಳಿಯ ಉದ್ದೇಶವಾಗಿದೆ ಎಂದರು.

ಪಂದ್ಯಗಳು 8 ಓವರ್‍ನಲ್ಲಿ ನಡೆಯಲಿದ್ದು, ಅಂತಿಮ ಪಂದ್ಯ 12 ಓವರ್‍ಗೆ ನಡೆಯಲಿದೆ. ವಿಜೇತ ತಂಡಕ್ಕೆ ರೂ.10,000 ನಗದು ಮತ್ತು ಟ್ರೋಫಿ ಹಾಗೂ ರನ್ನರ್ ತಂಡಕ್ಕೆ ರೂ.5000 ನಗದು ಬಹುಮಾನ ನೀಡಲಾಗುವುದು. ಪಂದ್ಯಾವಳಿಯ ಟ್ರೋಫಿಯನ್ನು ಚಿತ್ರನಟ ಕಿಚ್ಚ ಸುದೀಪ್ ಜು21ರಂದು ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ನಾಗೇಂದ್ರ, ಭಾಸ್ಕರ್, ರಾಮನಾಥ್ ಗುಪ್ತ ಇನ್ನಿತರರು ಉಪಸ್ಥಿತರಿದ್ದರು.

Translate »