ಜಿಲ್ಲೆಯಲ್ಲಿ ಬೆಳೆ ಸಾಲ ಯೋಜನೆ ಪ್ರಗತಿ ಸಾಲದು
ಮೈಸೂರು

ಜಿಲ್ಲೆಯಲ್ಲಿ ಬೆಳೆ ಸಾಲ ಯೋಜನೆ ಪ್ರಗತಿ ಸಾಲದು

October 31, 2019

ಮೈಸೂರು, ಅ.30(ಪಿಎಂ)-ರೈತರಿಗೆ ನೀಡುವ ಬೆಳೆ ಸಾಲ ಯೋಜನೆಯಲ್ಲಿ ಕೇವಲ ಶೇ.60ರಷ್ಟು ಪ್ರಗತಿ ಸಾಧಿಸಿದ್ದು, ಮೈಸೂರು ಜಿಲ್ಲೆಯಲ್ಲಿ ನೀರಾವರಿ ಅಷ್ಟಕ್ಕಷ್ಟೆ ಇರುವ ಹಿನ್ನೆಲೆಯಲ್ಲಿ ಎರಡನೇ ಬೆಳೆ ಬರುವುದಿಲ್ಲ. ಹೀಗಾದರೆ ಶೇ.100ರಷ್ಟು ಪ್ರಗತಿ ಸಾಧಿಸ ಲಾಗದು ಎಂದು ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಕಾರ್ಯವೈಖರಿ ಬಗ್ಗೆ ಸಂಸದ ಪ್ರತಾಪ್ ಸಿಂಹ ಅಸಮಾಧಾನ ವ್ಯಕ್ತಪಡಿಸಿದರು.

ಮೈಸೂರಿನ ಜಿಲ್ಲಾ ಪಂಚಾಯಿತಿ ಸಭಾಂ ಗಣದಲ್ಲಿ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಜಿಲ್ಲಾ ಬ್ಯಾಂಕುಗಳ ಸಮಾಲೋಚನಾ ಮತ್ತು ಪ್ರಗತಿ ಪರಿಶೀಲನಾ ಸಮಿತಿ ತ್ರೈಮಾಸಿಕ ಸಭೆಯಲ್ಲಿ ಪ್ರಸಕ್ತ ಸಾಲಿನ ಬೆಳೆ ಸಾಲಕ್ಕೆ ಸಂಬಂಧಿಸಿದಂತೆ ಸೆಪ್ಟಂಬರ್‍ವರೆಗಿನ ಪ್ರಗತಿಯ ವರದಿ ಅವಲೋಕಿಸಿ ಅವರು ಆಕ್ಷೇಪ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮಾರ್ಗದರ್ಶಿ ಬ್ಯಾಂಕಿನ (ಲೀಡ್ ಬ್ಯಾಂಕ್) ಜಿಲ್ಲಾ ಮುಖ್ಯ ವ್ಯವಸ್ಥಾಪಕ ವೆಂಕಟಾಚಲಪತಿ, ಇದು ಅರೆ ವಾರ್ಷಿಕ ಪ್ರಗತಿಯಷ್ಟೇ. ಇನ್ನು 6 ತಿಂಗಳು ಕಾಲಾವಕಾಶವಿದ್ದು, ಶೇ.100ರಷ್ಟು ಪ್ರಗತಿ ಸಾಧಿಸಲಾಗುವುದು ಎಂದು ಸಮಾ ಜಾಯಿಷಿ ನೀಡಿದರು. ಇದಕ್ಕೊಪ್ಪದ ಸಂಸ ದರು, ಈಗಾಗಲೇ ಹಲವು ಬೆಳೆಗಳ ಕಟಾವು ಆಗಿದೆ. ಜಿಲ್ಲೆಯಲ್ಲಿ ನೀರಾವರಿ ಹೇಳಿ ಕೊಳ್ಳುವಂತಿಲ್ಲ. ಹೀಗಾಗಿ ಶೇ.100ರಷ್ಟು ಸಾಧನೆ ಆಗುವುದು ಅನುಮಾನವೇ ಎಂದು ಬೇಸರ ವ್ಯಕ್ತಪಡಿಸಿದರು.

ಬೆಳೆ ಸಾಲದಲ್ಲಿ ಪ್ರಗತಿ ಸಾಧಿಸಿದರೆ ರೈತ ರಿಗೆ ಸಾಲಸೌಲಭ್ಯ ದೊರೆಯುವ ಜೊತೆಗೆ ಅವರು ಪ್ರಧಾನ ಮಂತ್ರಿ ಬೆಳೆ ವಿಮಾ ಯೋಜನೆಗೆ ಒಳಪಡಲಿದ್ದಾರೆ. ಇದರಿಂದ ಬೆಳೆ ನಷ್ಟವಾದಾಗ ಅವರಿಗೆ ಪರಿಹಾರ ದೊರೆಯಲಿದೆ ಎಂದು ಅಭಿಪ್ರಾಯಪಟ್ಟ ಸಂಸದರು, ಯಾವ ಬೆಳೆಗೆ ಎಷ್ಟು ಪ್ರೀಮಿ ಯಮ್ (ವಿಮಾ ಕಂತು) ಇದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಹಂತೇ ಶಪ್ಪ ಅವರನ್ನು ಪ್ರಶ್ನಿಸಿದರು.

ಈ ವೇಳೆ ಉತ್ತರಿಸಲು ತಡಕಾಡಿದ ಮಹಂತೇಶಪ್ಪ ಅವರ ವಿರುದ್ಧ ಇದೆಲ್ಲಾ ನಿಮಗೆ ಗೊತ್ತಿರಬೇಕೆಂದು ಅಸಮಾಧಾನ ವ್ಯಕ್ತಪಡಿಸಿದ ಸಂಸದರು, ಗೊಬ್ಬರದ ಬಗ್ಗೆ ಮಾಹಿತಿ ಕೇಳಿದರು. ಆಗಲೂ ಚೀಟಿ ನೋಡಿ ಹೇಳಲು ಮುಂದಾದ ಮಹಂತೇಶಪ್ಪ ವಿರುದ್ಧ ಬೇಸರ ವ್ಯಕ್ತಪಡಿಸಿ, ಏಳೆಂಟು ದಿನಗಳಲ್ಲಿ ಜಾಗೃತಿ ಸಮಿತಿ ಸಭೆ ನಡೆಯಲಿದ್ದು, ಆ ಸಂದರ್ಭದಲ್ಲಿ ಸರಿಯಾದ ಮಾಹಿತಿ ಯೊಂದಿಗೆ ಬರಬೇಕೆಂದು ತಾಕೀತು ಮಾಡಿ ದರು. ಅಲ್ಲದೆ, ಬೆಳೆ ಸಾಲದಲ್ಲಿ ಶೇ.60 ಸಾಧನೆ ಎಂದು ತೋರಿಸಿದ್ದಾರೆ. ಆದರೆ ಅಷ್ಟು ಕೂಡ ಆಗಿಲ್ಲ ಎಂದು ಮಹಂತೇ ಶಪ್ಪ ಹೇಳಿದಾಗ, ಅದು ಕೃಷಿ ಇಲಾಖೆ ಕೆಲಸ ವಲ್ಲವೇ? ಎಂದು ಸಂಸದ ಪ್ರತಾಪ್ ಸಿಂಹ ಕಿಡಿಕಾರಿದರು.

ಜಿಲ್ಲೆಯಲ್ಲಿ ಮುದ್ರಾದಡಿ 558.74 ಕೋಟಿ ಸಾಲ: ಇದಕ್ಕೂ ಮುನ್ನ ಸಭೆಗೆ ಮಾಹಿತಿ ನೀಡಿದ ಲೀಡ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ವೆಂಕಟಾಚಲಪತಿ, 2019ರ ಸೆಪ್ಟಂಬರ್ ವರೆಗೆ ಪ್ರಧಾನ ಮಂತ್ರಿ ಮುದ್ರಾ ಯೋಜನೆ ಯಡಿ ಜಿಲ್ಲೆಯಲ್ಲಿ 35 ವಿವಿಧ ಬ್ಯಾಂಕು ಗಳಿಂದ ಒಟ್ಟಾರೆ 27,340 ಫಲಾನುಭವಿ ಗಳಿಗೆ ಒಟ್ಟು 558 ಕೋಟಿ 74 ಲಕ್ಷ ರೂ. ಸಾಲ ನೀಡಲಾಗಿದೆ. ಈ ಯೋಜನೆಯಡಿ 50 ಸಾವಿರ ರೂ.ವರೆಗೆ ದೊರೆಯುವ ಶಿಶು ಉಪಯೋಜನೆಯಡಿ 12,740 ಫಲಾನು ಭವಿಗಳಿಗೆ 61 ಕೋಟಿ 76 ಲಕ್ಷ ರೂ., 50 ಸಾವಿರ ರೂ.ನಿಂದ 5 ಲಕ್ಷ ರೂ.ವರೆಗೆ ದೊರೆಯುವ ಕಿಶೋರ ಉಪ ಯೋಜನೆ ಯಡಿ 11,673 ಫಲಾನುಭವಿಗಳಿಗೆ 241 ಕೋಟಿ 11 ಲಕ್ಷ ರೂ. ಹಾಗೂ 5 ಲಕ್ಷ ರೂ.ನಿಂದ 10 ಲಕ್ಷ ರೂ.ವರೆಗೆ ಸಾಲಸೌಲಭ್ಯ ದೊರೆಯುವ ತರುಣ ಉಪಯೋಜನೆ ಯಡಿ 2,927 ಫಲಾನುಭವಿಗಳಿಗೆ 255 ಕೋಟಿ 87 ಲಕ್ಷ ರೂ. ಸಾಲಸೌಲಭ್ಯ ನೀಡಲಾಗಿದೆ ಎಂದು ವಿವರಿಸಿದರು.

ಪರಿಹಾರದ ಹಣ ಸೇರಿದಂತೆ ಸರ್ಕಾ ರದ ಸಹಾಯಧನಗಳನ್ನು ಖಾತೆ ಮೂಲಕ ಹಾಕುವ ಹಿನ್ನೆಲೆಯಲ್ಲಿ ಜನಧನ ಖಾತೆ ಬಗ್ಗೆ ಅರಿವು ಮೂಡಿಸಲು ಕಾರ್ಯಕ್ರಮ ರೂಪಿಸಿ. ಶೇ.100ರಷ್ಟು ಜನಧನ ಖಾತೆ ಆಗಿದೆ ಎಂದುಕೊಂಡರೂ ಖಾತೆ ಮಾಡಿಸು ವವರು ಇರುತ್ತಾರೆ. ಹೀಗಾಗಿ ಇದರ ಬಗ್ಗೆ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಬೇ ಕೆಂದು ಸಂಸದರು ನಿರ್ದೇಶನ ನೀಡಿದರು.

63.43 ಕೋಟಿ ಸಾಲ ವಿತರಣೆ: ಇದೇ ಅ.4 ಮತ್ತು 5ರಂದು ಎರಡು ದಿನಗಳು ನಡೆದ ಮುದ್ರಾ, ಸ್ಟಾರ್ಟ್‍ಅಪ್ ಸೇರಿ ದಂತೆ ವಿವಿಧ ಸಾಲ ಸೌಲಭ್ಯ ಯೋಜನೆ ಗಳ ಸಾಲ ಮೇಳದಲ್ಲಿ 1,748 ಫಲಾನು ಭವಿಗಳಿಗೆ ಒಟ್ಟು 63 ಕೋಟಿ 43 ಲಕ್ಷ ರೂ. ಸಾಲ ಸೌಲಭ್ಯವನ್ನು ಸ್ಥಳದಲ್ಲೇ ನೀಡಲಾಗಿದೆ. ಎಸ್‍ಬಿಐ ಪ್ರಾಯೋಜಕತ್ವ ದಲ್ಲಿ ನಡೆದ ಈ ಮೇಳದಲ್ಲಿ 18 ಬ್ಯಾಂಕು ಗಳು ಪಾಲ್ಗೊಂಡಿದ್ದವು ಎಂದು ವೆಂಕಟಾ ಚಲಪತಿ ಸಭೆಗೆ ಮಾಹಿತಿ ನಿಡಿದರು.

ಜಿಪಂ ಸಿಇಓ ಕೆ. ಜ್ಯೋತಿ, ಆರ್‍ಬಿಐ ಎಜಿಎಂ ಎನ್.ದತ್ತಾತ್ರೇಯ, ಎಸ್‍ಬಿಐ ಮೈಸೂರು ಮುಖ್ಯ ಶಾಖೆಯ ಎಜಿಎಂ ಎನ್.ಪರಮೇಶ್ವರನ್, ನಬಾರ್ಡ್‍ನ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ಮಣಿಕಂಠನ್, ಜಿಲ್ಲಾ ಲೀಡ್ ಬ್ಯಾಂಕ್‍ನ ಹಿರಿಯ ಸಂಯೋಜಕ ಟಿ.ಕೆ.ಕುಮಾರ ಸ್ವಾಮಿ ಸೇರಿದಂತೆ ವಿವಿಧ ಬ್ಯಾಂಕ್‍ಗಳ ಅಧಿ ಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

Translate »