ಶ್ರವಣಶಕ್ತಿ ಸಂರಕ್ಷಣೆ ಜಾಗೃತಿಗೆ ಸೈಕಲ್ ಜಾಥಾ
ಮೈಸೂರು

ಶ್ರವಣಶಕ್ತಿ ಸಂರಕ್ಷಣೆ ಜಾಗೃತಿಗೆ ಸೈಕಲ್ ಜಾಥಾ

March 4, 2020

`ವಿಶ್ವ ಶ್ರವಣ ದಿನ’ ಹಿನ್ನೆಲೆ ಜೆಎಸ್‍ಎಸ್ ವಾಕ್ ಶ್ರವಣ ಸಂಸ್ಥೆಯಿಂದ ಆಯೋಜನೆ
ಮೈಸೂರು, ಮಾ.3(ಪಿಎಂ)- `ವಿಶ್ವ ಶ್ರವಣ ದಿನ’ದಂಗವಾಗಿ ಶ್ರವಣಶಕ್ತಿಯ ಮೇಲೆ ಭಾರೀ ಶಬ್ದದ ದುಷ್ಪರಿಣಾಮ ತಡೆ, ಶ್ರವಣ ಸಂರಕ್ಷಣೆ ಮತ್ತು ಶ್ರವಣ ಪರೀಕ್ಷೆಯ ಅಗತ್ಯತೆ ಕುರಿತು ಜೆಎಸ್‍ಎಸ್ ವಾಕ್ ಶ್ರವಣ ಸಂಸ್ಥೆಯಿಂದ ನಗರದಲ್ಲಿ ಮಂಗಳವಾರ ಸೈಕಲ್ ಜಾಥಾ ನಡೆಸಲಾಯಿತು.

`ಉತ್ತಮ ಬದುಕು ಸಾಗಿಸಲು ಶ್ರವಣ ಸಂರಕ್ಷಣೆ ಅತ್ಯಂತ ಅಗತ್ಯ’, `ಮನಸು ಮಾಡಿದರೆ ಶ್ರವಣ ರಕ್ಷಣೆ ಸುಲಭ’, `ಶ್ರವಣ ಪರೀಕ್ಷೆಯ ಅಗತ್ಯತೆ ಅರಿಯಿರಿ’ ಘೋಷಣಾ ಫಲಕಗಳೊಂದಿಗೆ ನೂರಾರು ವಿದ್ಯಾರ್ಥಿಗಳು ಟ್ರಿಣ್ ಟ್ರಿಣ್ ಸೈಕಲ್‍ನಲ್ಲಿ ಜಾಥಾ ನಡೆಸಿ ಶ್ರವಣ ಸಂರಕ್ಷಣೆಯ ಮಹತ್ವ ಸಾರಿದರು.

ಎಂಜಿ ರಸ್ತೆಯ ಜೆಎಸ್‍ಎಸ್ ಆಸ್ಪತ್ರೆ ಹಳೇ ಕಟ್ಟಡದಲ್ಲಿರುವ `ವಾಕ್ ಶ್ರವಣ ಸಂಸ್ಥೆ’ ಆವರಣದಲ್ಲಿ ಜಾಥಾಕ್ಕೆ ಜೆಎಸ್‍ಎಸ್ ಮಹಾವಿದ್ಯಾಪೀಠದ ವೈದ್ಯಕೀಯ ಶಿಕ್ಷಣ ವಿಭಾಗದ ನಿರ್ದೇಶಕ ಆರ್.ಮಹೇಶ್ ಚಾಲನೆ ನೀಡಿದರು. ಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ಬೋಧಕ ವರ್ಗ ಸೇರಿದಂತೆ 100ಕ್ಕೂ ಹೆಚ್ಚು ಮಂದಿ ಪಾಲ್ಗೊಂಡು ಶ್ರವಣಶಕ್ತಿ ಸಂರಕ್ಷಣೆಯ ಸಂದೇಶ ಸಾರಿದರು.

ಅಗ್ರಹಾರ ವೃತ್ತ, ವಾಣಿವಿಲಾಸ ರಸ್ತೆ, ಆರ್‍ಟಿಓ ವೃತ್ತ, ಕೃಷ್ಣರಾಜ-ಬುಲೆವಾರ್ಡ್ ರಸ್ತೆ, ರಾಮಸ್ವಾಮಿ ವೃತ್ತ, ಚಾಮರಾಜ ಜೋಡಿ ರಸ್ತೆ, ಬಸವೇಶ್ವರ ವೃತ್ತ ಮೂಲಕ ಸಾಗಿದ ಜಾಥಾ ಸಂಸ್ಥೆಯ ಆವರಣಕ್ಕೆ ಹಿಂತಿರುಗಿ ಅಂತ್ಯಗೊಂಡಿತು. ಸಂಸ್ಥೆಯ ನಿರ್ದೇಶಕ ಡಾ. ಎನ್.ಪಿ.ನಟರಾಜ್, ಪ್ರಾಂಶುಪಾಲರಾದ ಡಾ.ಆರ್.ಸುಮಾ ಮತ್ತಿತರರು ಹಾಜರಿದ್ದರು.

Translate »