ಕಾವೇರಿ ನದಿ ಪಕ್ಕದ ಮೈಸೂರು ಅರಸರ ಮಂಟಪ ನಾಶ.!
ಮಂಡ್ಯ

ಕಾವೇರಿ ನದಿ ಪಕ್ಕದ ಮೈಸೂರು ಅರಸರ ಮಂಟಪ ನಾಶ.!

August 30, 2018

ಮಂಡ್ಯ:  ಮೈಸೂರು ಅರಸರ ಹೆಸರಿನಲ್ಲಿರುವ ಅದೆಷ್ಟೋ ಜಾಗಗಳನ್ನು ಪಟ್ಟಭದ್ರರು ಅಕ್ರಮವಾಗಿ ಲಪಟಾಯಿಸಿರುವುದು, ಲಪಟಾಯಿಸಲು ಸಂಚು ನಡೆಯುತ್ತಿರುವುದನ್ನು ನಾವು ನೀವೆಲ್ಲಾ ನೋಡಿದ್ದೇವೆ. ಅಂಥದ್ದೇ ಮತ್ತೊಂದು ರಾಜ ಮನೆತನ ಬಳಸುತ್ತಿದ್ದ ಜಾಗವನ್ನು ಪಟ್ಟಭದ್ರರು ಕಬಳಿಸಲು ಸಂಚು ನಡೆಸಿರುವ ಪ್ರಕರಣ ಶ್ರೀರಂಗಪಟ್ಟಣ ಸಮೀಪದ ಕಿರಂಗೂರು ಬಳಿ ನಡೆದಿದೆ.

ಮೈಸೂರು ಅರಸರು ವಿಶ್ವವಿಖ್ಯಾತ ದಸರಾ ಉತ್ಸವವನ್ನು ಶ್ರೀರಂಗಪಟ್ಟಣದಲ್ಲಿ ಆಚರಿಸುತ್ತಿದ್ದರು ಎಂಬ ಸತ್ಯ ಎಲ್ಲರಿಗೂ ಗೊತ್ತೇ ಇದೆ. ಅದರ ಕುರುಹಾಗಿ ಇಂದಿಗೂ ಕಿರಂಗೂರು ಬಳಿ ದಸರಾ ಮಂಟಪ ಇರುವುದನ್ನು ಕಾಣಬಹುದಾಗಿದೆ. ಜೊತೆಗೆ ಈ ದಸರಾ ಮಂಟಪದ ಅನತಿ ದೂರದಲ್ಲಿಯೇ ರಾಜರಮಂಟಪ ಇತ್ತೀಚಿನ ದಿನಗಳವರೆಗೂ ಇತ್ತು. ರಾಜರ ಕಾಲದಲ್ಲಿ ನಡೆಯುತ್ತಿದ್ದ ಉತ್ಸವದ ವೇಳೆ ರಾಜರು ತಂಗುವುದಕ್ಕಾಗಿ ನಿರ್ಮಿಸಲಾಗಿದ್ದ ಮಂಟಪ ಇದಾಗಿತ್ತು. ಆದರೆ, ಇತ್ತೀಚೆಗೆ ಪಟ್ಟಭದ್ರರ ವಕ್ರದೃಷ್ಟಿಗೆ ಸಿಕ್ಕಿಬಿದ್ದಿರುವ ರಾಜರ ಮಂಟಪ ಈಗ ನಾಶವಾಗಿದೆ. ಅದರ ಸುತ್ತಲಿನ ಎಕರೆಗಟ್ಟಲೆ ಜಾಗವನ್ನೂ ಸಹ ಅಕ್ರಮವಾಗಿ ಒತ್ತುವರಿ ಮಾಡಿಕೊಳ್ಳಲಾಗಿದೆ.

ರಾಜರು ಪೂಜೆ ಸಲ್ಲಿಸುತ್ತಿದ್ದ ಸ್ಥಳವಿದು: ಮೈಸೂರಿನ ರಣಧೀರ ಕಂಠೀರವ ನರಸಿಂಹರಾಜ್ ಒಡೆಯರ್ ಹಾಗೂ ಅವರ ಹಿಂದಿನ ಮಹಾರಾಜರುಗಳು ಪಟ್ಟಣದ ಸರ್ವೆ ನ.415ರ ಕಾವೇರಿ ತೀರದ ವೆಲ್ಲೆಸ್ಲಿ ಸೇತುವೆ ಪಕ್ಕದ ಕಿರಂಗೂರು ಗ್ರಾಮದಲ್ಲಿ ಬನ್ನಿಮಂಟಪವನ್ನು ಸ್ಥಾಪಿಸಿ ದಸರಾ ಹಬ್ಬದಂದು ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸುತ್ತಿದ್ದರು. ಉತ್ಸವದ ವೇಳೆ ವಾದ್ಯಗೋಷ್ಠಿಗಳೊಡನೆ ದೇವಿಯ ಮೆರವಣಿಗೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದವು. ತದನಂತರ ರಂಗನಾಥ ದೇವಾಲಯಕ್ಕೆ ಹೋಗಿ ಪೂಜೆ ಸಲ್ಲಿಸಿ ದಸರಾ ಮೆರವಣಿಗೆ ಮೈಸೂರಿಗೆ ತೆರಳುತ್ತಿತ್ತು. ಈ ಸಂಗತಿ ಇತಿಹಾಸ ತಜ್ಞರು, ಗ್ರಾಮದ ಹಿರಿಯರ ಮಾಹಿತಿ ಪುಟದಲ್ಲಿಯೇ ದಾಖಲಾಗಿದೆ.

ಕಾನೂನು ಕ್ರಮಕ್ಕೆ ಆಗ್ರಹ: ಶ್ರೀರಂಗಪಟ್ಟಣ ಕಿರಂಗೂರು ಗ್ರಾಮದಲ್ಲಿರುವ ಐತಿಹಾಸಿಕ ಸ್ಥಳವಾದ ದಸರಾ ಬನ್ನಿಮಂಟಪದ ರಾಜರ ಮಂಟಪವನ್ನು ನಾಶ ಮಾಡಿರುವವರ ವಿರುದ್ಧ ತನಿಖೆ ನಡೆಸಿ ಕಾನೂನು ಕ್ರಮಕೈಗೊಳ್ಳಬೇಕು ಎಂದು ರಾಜ್ಯ ರೈತ ಸಂಘದ ಮುಖಂಡ ಕಿರಂಗೂರು ಪಾಪು(ಮೋಹನ್‍ಕುಮಾರ್) ಆಗ್ರಹಿಸಿದ್ದಾರೆ.

ರಾಜರ ಮಂಟಪವನ್ನು ಪುನರ್ ನಿರ್ಮಾಣ ಮಾಡಿ ದಸರಾ ಆಚರಣೆಯನ್ನು ಎಂದಿನಂತೆ ಆಚರಿಸಿ ಕೊಂಡು ಬರಬೇಕೆಂದು ಹೆಚ್ಚುವರಿ ಜಿಲ್ಲಾಧಿಕಾರಿ ವಿಜಯ್, ಪಾಂಡವಪುರ ಉಪವಿಭಾಗಾಧಿಕಾರಿ ಮತ್ತು ಶ್ರೀರಂಗಪಟ್ಟಣ ತಹಶೀಲ್ದಾರ್ ನಾಗೇಶ್ ಅವರಿಗೂ ಪಾಪು ಅವರು ಮನವಿ ಸಲ್ಲಿಸಿದ್ದಾರೆ.

ಇಂತಹ ಪುರಾತನ ಬನ್ನಿಮಂಟಪ ಸರ್ಕಾರಿ ಖರಾಬು ಭೂಮಿಯಾಗಿದ್ದು, ಇದನ್ನು ಕೆಲವು ಪಟ್ಟ ಭದ್ರ ಹಿತಾಸಕ್ತಿಗಳು ಅಕ್ರಮವಾಗಿ ತಮ್ಮ ಹೆಸರುಗಳಿಗೆ ಖಾತೆ ಮಾಡಿಕೊಂಡು ಜೆಸಿಬಿ ಮೂಲಕ ನಾಶ ಮಾಡಿದ್ದಾರೆ. ಇದೇ ವೇಳೆ ಮಂಟಪದ ಮುಂಭಾಗ ಸುಮಾರು 20 ಅಡಿ ಉದ್ದದ ಗರುಡ ಕಂಬವನ್ನು ಬೇರೆ ಕಡೆ ಸಾಗಿಸಿದ್ದಾರೆ, ಮಂಟಪ ದೊಳಗೆ ಇದ್ದ ವಿವಿಧ ದೇವರುಗಳ ವಿಗ್ರಹಗಳು ಇಂದಿಗೂ ಅನಾಥವಾಗಿ ಬಿದ್ದಿವೆ ಎಂದು ದೂರಿದ್ದಾರೆ.

ಪ್ರತಿಭಟನೆ ಎಚ್ಚರಿಕೆ: ಕೆಲವು ಪಟ್ಟಭದ್ರರು ರೆಸಾರ್ಟ್ ಹಾಗೂ ಕಮರ್ಷಿಯಲ್ ಕಟ್ಟಡಗಳನ್ನು ನಿರ್ಮಾಣ ಮಾಡಲು ಇಂತಹ ಐತಿಹಾಸಿಕ ಬನ್ನಿ ಮಂಟಪವನ್ನು ಕೆಡವಿದ್ದಾರೆ. ಇದರಿಂದ ಶ್ರೀರಂಗ ಪಟ್ಟಣಕ್ಕೆ ಕಪ್ಪುಚುಕ್ಕೆ ಬಳಿದಂತಾಗಿದೆ. ಬನ್ನಿಮಂಟಪ ವನ್ನು ಪುನರ್ ನಿರ್ಮಾಣ ಮಾಡಿ ರಾಜಮಹಾ ರಾಜರ ಕಾಲದಲ್ಲಿ ನಡೆಯುತ್ತಿದ್ದಂತೆಯೇ ದಸರಾ ಆಚರಣೆಯ ಕಾರ್ಯಕ್ರಮಗಳನ್ನು ಇಲ್ಲಿಯೂ ಮುಂದುವರೆಸಬೇಕು ಎಂದು ಆಗ್ರಹಿಸಿದ್ದಾರೆ.

ರಾಜಮಾತೆಗೆ ಮನವಿ

ಮೈಸೂರು ರಾಜಮಾತೆ ಪ್ರಮೋದಾದೇವಿ ಹಾಗೂ ಯುವರಾಜ ಯದುವೀರ ಒಡೆಯರ್ ಅವರು ಕೂಡಲೇ ಶ್ರೀರಂಗಪಟ್ಟಣದ ಬನ್ನಿಮಂಟಪಕ್ಕೆ ಆಗಮಿಸಿ ಪರಿಶೀಲಿಸಬೇಕು. ಹಿಂದಿನ ಮಹಾರಾಜರು ಉಳಿಸಿದ್ದ ಕುರುಹುಗಳನ್ನು ಉಳಿಸಬೇಕು ಎಂದು ಸಾರ್ವಜನಿಕರು ಹಾಗೂ ರೈತ ಸಂಘದ ಮುಖಂಡ ಕಿರಂಗೂರು ಪಾಪು ಮನವಿ ಮಾಡಿದ್ದಾರೆ.

ಈಗಾಗಲೇ ಶ್ರೀರಂಗಪಟ್ಟಣ ಬಳಿ ರೈಲ್ವೆ ಹಳಿ ನಿರ್ಮಾಣಕ್ಕೆ ಅಡ್ಡಿಯಾಗಿದ್ದ ಮದ್ದಿನ ಮನೆಯೊಂದನ್ನು ಕೋಟ್ಯಾಂತರ ರೂ. ಖರ್ಚು ಮಾಡಿ ಸ್ಥಳಾಂತರಿಸಲಾಗಿದೆ.

Translate »