ಮೈಸೂರಿಗೆ ದಸರಾ ಗಜಪಡೆ ಮೊದಲ ತಂಡ ಆಗಮನ
ಮೈಸೂರು

ಮೈಸೂರಿಗೆ ದಸರಾ ಗಜಪಡೆ ಮೊದಲ ತಂಡ ಆಗಮನ

August 23, 2019

ವೀರನಹೊಸಳ್ಳಿ ಗೇಟ್ ಬಳಿ ಗಜಪಯಣಕ್ಕೆ ಸಾಂಪ್ರದಾಯಿಕ ಅದ್ಧೂರಿ ಚಾಲನೆ
ವೀರನಹೊಸಳ್ಳಿ, ಆ.22(ಎಂಟಿವೈ, ಹನಗೋಡು ಮಹೇಶ್)- ನಾಡಹಬ್ಬ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳ ಲಿರುವ ಅಂಬಾರಿ ಆನೆ ಅರ್ಜುನ ನೇತೃತ್ವದ ಆರು ಆನೆಗಳ ಮೊದಲ ತಂಡದ `ಗಜಪಯಣ’ಕ್ಕೆ ಸಚಿವ ಆರ್. ಅಶೋಕ್ ಹುಣಸೂರು ತಾಲೂಕಿನ ನಾಗರಹೊಳೆ ಅಭಯಾರಣ್ಯದ ಕಾಡಂಚಿನ ಹಾಡಿ ವೀರನಹೊಸಳ್ಳಿ ಗೇಟ್ ಬಳಿ ಗುರುವಾರ ಪೂಜೆ ಸಲ್ಲಿಸುವ ಮೂಲಕ ವಿಧ್ಯುಕ್ತವಾಗಿ ಚಾಲನೆ ನೀಡಿದರು.

ಸಂಜೆ ಗಜಪಡೆಯ ಮೊದಲ ತಂಡದ ಎಲ್ಲಾ ಆರು ಆನೆಗಳು ಸುರಕ್ಷಿತವಾಗಿ ಮೈಸೂರು ಅಶೋಕಪುರಂನ ಅರಣ್ಯ ಭವನ ತಲುಪಿದವು. ಇಲ್ಲಿ ಅವುಗಳಿಗೆ ಎಲ್ಲಾ ರೀತಿಯ ಸೌಕರ್ಯವನ್ನು ಕಲ್ಪಿಸ ಲಾಗಿದ್ದು, ಆ. 26 ರಂದು ಸಾಂಪ್ರದಾ ಯಿಕ ರೀತಿಯಲ್ಲಿ ಇವುಗಳನ್ನು ಅರ ಮನೆ ಆವರಣಕ್ಕೆ ಸ್ವಾಗತಿಸಲಾಗುತ್ತದೆ.

ಅದ್ಧೂರಿ ಚಾಲನೆ: ಇಂದು ಜಿಲ್ಲಾಡ ಳಿತ ಹಾಗೂ ಅರಣ್ಯ ಇಲಾಖೆ ವತಿ ಯಿಂದ ವೀರನಹೊಸಳ್ಳಿ ಬಳಿ ಆಯೋ ಜಿಸಿದ್ದ ಕಾರ್ಯಕ್ರಮದಲ್ಲಿ ಮೊದಲ ತಂಡದ ಆರು ಆನೆಗಳಿಗೆ ಸಂಪ್ರದಾಯ ದಂತೆ ಪೂಜೆ ಸಲ್ಲಿಸುವ ಮೂಲಕ ಪಯಣಕ್ಕೆ ಚಾಲನೆ ನೀಡಲಾಯಿತು. ಸೆ.29ರಿಂದ ನವರಾತ್ರಿ ಆರಂಭವಾಗ ಲಿದ್ದು, ಅಕ್ಟೋಬರ್ 8ರಂದು ಜಂಬೂಸವಾರಿ ಜರುಗಲಿದೆ. ನವರಾತ್ರಿ ಆರಂಭಕ್ಕೆ ಇನ್ನು 38 ದಿನ (ಜಂಬೂಸವಾರಿಗೆ 47 ದಿನ ಬಾಕಿ ಇದೆ) ಉಳಿದಿದೆ. ಈ ಹಿನ್ನೆಲೆಯಲ್ಲಿ ಇಂದು ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಆರು ಆನೆಗಳನ್ನು ಮೈಸೂರಿಗೆ ಬರಮಾಡಿಕೊಳ್ಳಲಾಯಿತು.

ಪೂಜೆ: ಗಜಪಯಣದ ಹಿನ್ನೆಲೆಯಲ್ಲಿ ಆರು ಆನೆಗಳನ್ನು ಬುಧವಾರವೇ ವಿವಿಧ ಕ್ಯಾಂಪ್‍ಗಳಿಂದ ವೀರನಹೊಸಳ್ಳಿ ಗೇಟ್‍ಗೆ ಕರೆತರಲಾಗಿತ್ತು. ಬೆಳಿಗ್ಗೆ ಈ ಆನೆಗಳಿಗೆ ಸ್ನಾನ ಮಾಡಿಸಿ, ಆಭರಣ, ಹೂವಿನ ಹಾರದೊಂದಿಗೆ ಅಲಂಕರಿಸಲಾಯಿತು. ಬೆಳಿಗ್ಗೆ 11ರಿಂದ 11.30ರೊಳಗೆ ಸಲ್ಲುವ ಅಭಿಜಿನ್ ಲಗ್ನದಲ್ಲ್ಲಿ ಪುರೋಹಿತ ಎಸ್.ವಿ.ಪ್ರಹ್ಲಾದ್ ರಾವ್ ನೇತೃತ್ವದಲ್ಲಿ ಪೂಜೆ ಸಲ್ಲಿಸಲಾಯಿತು. ಮೊದಲು ವನದೇವತೆ, ಗಣಪತಿ ಪ್ರಾರ್ಥನೆ ಸಲ್ಲಿಸಿ ಆನೆಗಳ ಪಾದ ತೊಳೆದು ಹರಿಶಿನ, ಕುಂಕುಮ, ಅಕ್ಷತೆ, ಗಂಧ, ವಿವಿಧ ಪರಿಮಳ ಪುಷ್ಪ-ಪತ್ರಗಳಿಂದ ಪಾದ ಪೂಜೆ ಸಲ್ಲಿಸಲಾಯಿತು. ಗಣಪತಿ ಪ್ರತಿರೂಪವಾಗಿರುವ ಆನೆಗಳಿಗೆ ಮೋದಕ, ಕಡಬು, ಪಂಚಫಲ, ಚಕ್ಕಲಿ, ಕೋಡುಬಳೆ ಸೇರಿದಂತೆ ವಿವಿಧ ಭಕ್ಷ್ಯಗಳನ್ನು ನೈವೇದ್ಯ ಮಾಡಿ, ಮಂತ್ರಪುಷ್ಪ, ಗಣಪತಿ ಅರ್ಚನೆ ಪ್ರಾರ್ಥನೆ ಮಾಡಿ ನಾಡಹಬ್ಬ ದಸರಾ ಯಶಸ್ವಿಯಾಗಲೆಂದು ವಿಶೇಷ ಪೂಜೆ ಸಲ್ಲಿಸಿ 11.26ಕ್ಕೆ ಮಹಾಮಂಗಳಾರತಿ ನಂತರ ನೈವೇದ್ಯ ಅರ್ಪಿಸಲಾಯಿತು. ಮೊದಲು ಅರಣ್ಯ ಇಲಾಖೆಯಿಂದ ಸಂಪ್ರದಾಯದಂತೆ ಹಿರಿಯ ಅಧಿಕಾರಿಗಳು, ಸಿಬ್ಬಂದಿ ಸೇರಿ ಪೂಜೆ ಸಲ್ಲಿಸಿದರು. ಬಳಿಕ ಜಿಲ್ಲಾಡಳಿತದ ವತಿಯಿಂದ ಪೂಜೆ ನೆರವೇರಿತು.

ಜನಪದ ಕಲಾ ಮೆರಗು: ಗಜಪಯಣ ಕಾರ್ಯಕ್ರಮ ಹಬ್ಬದ ಸಡಗರವಾಗಿ ಮಾರ್ಪ ಟ್ಟಿತ್ತು. ಹುಣಸೂರು-ನಾಗರಹೊಳೆ ರಸ್ತೆಯಲ್ಲಿ ಹಲವೆಡೆ ತಳಿರು ತೋರಣದೊಂದಿಗೆ ಕಾರ್ಯಕ್ರಮಕ್ಕೆ ಕಳೆ ಬಂದಿತ್ತು. ಸುತ್ತಮುತ್ತಲಿನ ಗ್ರಾಮಗಳ ಜನರು, ಹಾಡಿಗಳ ನಿವಾಸಿಗಳು ಕುಟುಂಬದ ಸದಸ್ಯರೊಂದಿಗೆ ತಂಡೋಪತಂಡವಾಗಿ ಕಾರ್ಯಕ್ರಮ ಸ್ಥಳಕ್ಕೆ ನಡೆದುಕೊಂಡು ಬರುವ ಮೂಲಕ ಸಡಗರಕ್ಕೆ ಇಂಬು ನೀಡಿದರು. ಮಂಗಳವಾದ್ಯ, ಕಂಸಾಳೆ, ವೀರಗಾಸೆ, ಡೊಳ್ಳು, ಪೂಜಾ ಕುಣಿತ ಸೇರಿದಂತೆ ವಿವಿಧ ಜನಪದ ಕಲಾ ತಂಡಗಳ ಕಲಾವಿದರು ಗಜಪಯಣದ ಮೆರಗು ಹೆಚ್ಚಿಸಿದರು. ನಂತರ ನಾಗಾಪುರ ಹಾಡಿ ಬಳಿ ನಡೆದ ಗಜಪಯಣದ ವೇದಿಕೆ ಕಾರ್ಯಕ್ರಮದಲ್ಲಿ ಹಾಡಿ ಶಾಲೆಯ ವಿದ್ಯಾರ್ಥಿಗಳು, ಬುಡಕಟ್ಟು ಸಮುದಾಯದ ಮಕ್ಕಳು, ಟಿಬೆಟಿಯನ್ ಮಕ್ಕಳು ಸಾಮಾಹಿಕ ನೃತ್ಯ ಪ್ರದರ್ಶಿಸುವ ಮೂಲಕ ಕಾರ್ಯಕ್ರಮ ಕಳೆಗಟ್ಟುವಂತೆ ಮಾಡಿದರು.

ಕಾರ್ಯಕ್ರಮದಲ್ಲಿ ಸಚಿವ ವಿ.ಸೋಮಣ್ಣ, ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ನಿರಂಜನ್‍ಕುಮಾರ್, ಎಂ.ಕೃಷ್ಣಪ್ಪ, ಮೈಸೂರು ಮೇಯರ್ ಪುಷ್ಪಲತಾ ಜಗನ್ನಾಥ್, ಉಪ ಮೇಯರ್ ಷಫಿ ಅಹ್ಮದ್, ಜಿ.ಪಂ ಅಧ್ಯಕ್ಷೆ ಪರಿಮಳಾ ಶ್ಯಾಮ್, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಮೈಸೂರು ವೃತ್ತದ ಸಿಸಿಎಫ್ ಟಿ.ಹೀರಾಲಾಲ್, ನಾಗರಹೊಳೆ ಸಿಎಫ್ ನಾರಾಯಣಸ್ವಾಮಿ, ಡಿಸಿಎಫ್‍ಗಳಾದ ಅಲೆಕ್ಸಾಂಡರ್, ಡಾ.ಕೆ.ಸಿ.ಪ್ರಶಾಂತ್ ಕುಮಾರ್, ಎಸ್‍ಪಿ ರಿಷ್ಯಂತ್, ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಎಂ.ಕುಲಕರ್ಣಿ, ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ, ಜಿ.ಪಂ ಸಿಇಒ ಕೆ.ಜ್ಯೋತಿ, ಪಶುವೈದ್ಯ ಡಾ.ಡಿ.ಎನ್.ನಾಗರಾಜು, ವೈಲ್ಡ್‍ಲೈಫ್ ವಾರ್ಡನ್ ಕೃತಿಕಾ ಆಲನಹಳ್ಳಿ, ವಿಧಾನ ಪರಿಷತ್ ಮಾಜಿ ಸದಸ್ಯ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ, ಮೈಸೂರು ನಗರ ಪಾಲಿಕೆಯ ಬಹುತೇಕ ಸದಸ್ಯರು ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.

2 ಬಾರಿ ಪೂಜೆ ಗೊಂದಲ…!
ಅರ್ಜುನ ನೇತೃತ್ವದ ಗಜಪಡೆಗೆ ಎರಡು ಬಾರಿ ಪೂಜೆ ಹಾಗೂ ಪುಷ್ಪಾ ರ್ಚನೆ ಮಾಡಿದ್ದು ಗೊಂದಲಕ್ಕೆ ಎಡೆ ಮಾಡಿಕೊಟ್ಟಿತು. ಸಾಂಪ್ರದಾಯಿಕವಾಗಿ ಬೆಳಿಗ್ಗೆ 11ರಿಂದ 11.30ರೊಳಗೆ ಸಲ್ಲುವ ಅಭಿಜಿನ್ ಲಗ್ನದಲ್ಲಿ ಪೂಜೆ ಸಲ್ಲಿಸಬೇಕಾ ಗಿತ್ತು. ಸಚಿವ ಆರ್.ಅಶೋಕ್ ಗಜ ಪಡೆಗೆ ಪೂಜೆ ಸಲ್ಲಿಸುವ ಕಾರ್ಯಕ್ರಮ ನಿಗದಿ ಮಾಡಲಾಗಿತ್ತು. ಆದರೆ ನಿಗದಿತ ಸಮಯಕ್ಕೆ ಸಚಿವರು ಆಗಮಿಸಲಿಲ್ಲ. ಆದರೆ ಶಾಸ್ತ್ರೋಕ್ತವಾಗಿ ಶುಭ ಮುಹೂರ್ತ ದಲ್ಲೇ ಪೂಜೆ ಆರಂಭಿಸಲಾಯಿತು. ಆ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಶಾಸಕ ಎಸ್.ಎ.ರಾಮದಾಸ್ ಉಪಸ್ಥಿತರಿದ್ದು, ಧಾರ್ಮಿಕ ವಿಧಿವಿಧಾನ ಮುಂದುವರೆಸ ಲಾಯಿತು. 11.26ಕ್ಕೆ ಪೂಜಾ ಕಾರ್ಯ ಪೂರ್ಣಗೊಂಡು ಮಹಾಮಂಗಳಾ ರತಿಯೂ ಆಯಿತು. 11.28ಕ್ಕೆ ರಾಮ ದಾಸ್ ಆನೆಗಳಿಗೆ ನೈವೇದ್ಯ ಅರ್ಪಿಸಿ ದರು. 11.29ಕ್ಕೆ ಪುಷ್ಪಾರ್ಚನೆ ನೆರ ವೇರಿಸಲಾಯಿತು.

11.36ಕ್ಕೆ ಸಚಿವ ಆರ್.ಅಶೋಕ್ ಆಗಮಿಸಿದರು. ಅವರು, ನಾವು ಬರುವ ಮೊದಲೇ ಪೂಜೆ ಮುಗಿಸಿದ್ದೀರಿ ಎಂದು ಅಸಮಾಧಾನದಿಂದಲೇ ನುಡಿದರು. ಮುಹೂರ್ತದಂತೆ ಚಾಮುಂಡಿ ಮಾತೆಗೆ ಪೂಜೆ ಸಲ್ಲಬೇಕು. ಇದಕ್ಕಾಗಿ ನಿಗದಿತ ಸಮಯದಲ್ಲಿ ಪೂಜೆ ಆರಂಭಿಸಲಾಗಿದೆ ಎಂದು ಎಸ್.ಎ.ರಾಮದಾಸ್, ಸಚಿವರಿಗೆ ವಿವರಿಸಿದರು. ಬಳಿಕ ಸಚಿವರಿಂದ ಮತ್ತೊಮ್ಮೆ ಆನೆಗಳಿಗೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿಸಲಾಯಿತು. ಈ ವೇಳೆ ಸಚಿವ ವಿ.ಸೋಮಣ್ಣ ಜತೆಗೂಡಿದರು.

Translate »