ದಸರಾ ಗಜ, ಅಶ್ವಪಡೆಗೆ ಸಿಡಿಮದ್ದು ಸದ್ದು ಸಹಿಸುವ ತಾಲೀಮು
ಮೈಸೂರು

ದಸರಾ ಗಜ, ಅಶ್ವಪಡೆಗೆ ಸಿಡಿಮದ್ದು ಸದ್ದು ಸಹಿಸುವ ತಾಲೀಮು

September 28, 2018

ಮೈಸೂರು: ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲಿರುವ ಗಜ ಹಾಗೂ ಅಶ್ವಪಡೆಗೆ ಗುರುವಾರ ಅರಮನೆಯ ವರಾಹ ಗೇಟ್ ಬಳಿಯಿರುವ ವಾಹನ ನಿಲುಗಡೆ ಸ್ಥಳದಲ್ಲಿ ಸಿಡಿಮದ್ದು ಸಿಡಿಸುವ ತಾಲೀಮು ನಡೆಸಲಾಯಿತು.

ಜಂಬೂ ಸವಾರಿ ಹಾಗೂ ಬನ್ನಿಮಂಟಪದ ಪಂಚಿನ ಕವಾಯತು ವೇಳೆ ವಿಜಯದ ಸಂಕೇತವಾಗಿ 21 ಸುತ್ತು ಕುಶಾಲ ತೋಪು ಸಿಡಿಸುವ ಪರಂಪರೆಯಿದ್ದು, ಈ ಹಿನ್ನೆಲೆಯಲ್ಲಿ ಆನೆ ಹಾಗೂ ಕುದುರೆಗಳು ಹೆದರದಂತೆ ನೋಡಿಕೊಳ್ಳುವುದಕ್ಕಾಗಿ ಸಿಡಿಮದ್ದಿನ ತಾಲೀಮು ನಡೆಸಲಾಗುತ್ತದೆ. ಇಂದು ಮಧ್ಯಾಹ್ನ ನಡೆಸಿದ ಈ ಸಾಲಿನ ಮೊದಲ ತಾಲೀಮಿನಲ್ಲಿ ಫಿರಂಗಿ ದಳದ 30 ಮಂದಿ ಸಿಎಆರ್ ಪೊಲೀಸರು ಮೂರು ಫಿರಂಗಿಗಳ ಮೂಲಕ ಆರು ಸುತ್ತು 18 ಸಿಡಿಮದ್ದು ಸಿಡಿಸುವ ಮೂಲಕ ಗಜಪಡೆ ಹಾಗೂ ಅಶ್ವಾರೋಹಿ ಪಡೆಗೆ ಶಬ್ದದ ತಾಲೀಮು ನೀಡಿದರು.

ಆನೆಗಳ ತಾಲೀಮಿಗಾಗಿ ವರಾಹ ಗೇಟ್ ಬಳಿಯಿರುವ ಪಾರ್ಕಿಂಗ್ ಸ್ಥಳದಲ್ಲಿ ವಾಹನ ನಿಲುಗಡೆ ನಿರ್ಬಂಧಿಸಲಾಗಿತ್ತು. ಜಂಬೂ ಸವಾರಿಯಲ್ಲಿ ಅಂಬಾರಿ ಹೊರುವ ಅರ್ಜುನ ನೇತೃತ್ವದ 12 ಆನೆ ಹಾಗೂ ಅಶ್ವಾರೋಹಿ ದಳದ 12 ಕುದುರೆ ಗಳನ್ನು ಸಾಲಾಗಿ ನಿಲ್ಲಿಸಿ ಮಧ್ಯಾಹ್ನ 12.20ಕ್ಕೆ ತಾಲೀಮು ಆರಂಭಿಸಲಾಯಿತು. ಇದೇ ಮೊದಲ ತಾಲೀಮು ಆಗಿದ್ದರಿಂದ ಮೂರ್ನಾಲ್ಕು ಆನೆಗಳು ಸಿಡಿಮದ್ದಿನ ಶಬ್ದಕ್ಕೆ ಬೆಚ್ಚಿದವು. ಆ ನಂತರ ನಿಯಂತ್ರಣಕ್ಕೆ ಬಂದವು. ಕುದುರೆಗಳಲ್ಲಿಯೂ ಹಲವು ಸಿಡಿಮದ್ದಿನ ಶಬ್ದಕ್ಕೆ ಬೆದರಿದವು.

ತಾಲೀಮು ವೇಳೆ ನಗರ ಪೊಲೀಸ್ ಆಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವರ ರಾವ್, ಡಿಸಿಪಿ ಗಳಾದ ಬಿ.ವಿ.ಕಿತ್ತೂರ್, ಡಾ.ವಿಷ್ಣುವರ್ಧನ್, ಎಸಿಪಿ ಸುರೇಶ್, ಆರ್‍ಎಫ್‍ಒ ಅನನ್ಯಕುಮಾರ್, ಅರಮನೆಯ ಭದ್ರತಾ ವಿಭಾಗದ ಎಸಿಪಿ ಶೈಲೇಂದ್ರ, ಪಶುವೈದ್ಯ ಡಾ.ಡಿ.ಎನ್.ನಾಗರಾಜು, ಅರಣ್ಯ ಸಿಬ್ಬಂದಿಗಳಾದ ಕುಮಾರ್, ರವಿಕುಮಾರ್, ಅಕ್ರಮ್ ಪಾಶ, ರಂಗರಾಜು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Translate »