ಅರಮನೆಯಲ್ಲಿ ಸಂಪ್ರದಾಯದಂತೆ ದಸರಾ ನಡೆಯಲಿದೆ: ಯದುವೀರ್
ಮೈಸೂರು

ಅರಮನೆಯಲ್ಲಿ ಸಂಪ್ರದಾಯದಂತೆ ದಸರಾ ನಡೆಯಲಿದೆ: ಯದುವೀರ್

September 24, 2018

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ವೇಳೆ ಮೈಸೂರು ಅರಮನೆಯಲ್ಲಿ ಸಂಪ್ರದಾಯದಂತೆ ವಿವಿಧ ಪೂಜಾ ಕೈಂಕರ್ಯಗಳು ಜರುಗಲಿದ್ದು, ಈ ಬಾರಿ ತಮ್ಮ ಮಗ ಆದ್ಯವೀರ್ ಒಡೆಯರ್ ಅವರು ದಸರಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವುದು ಸಂತೋಷ ತಂದಿದೆ ಎಂದು ರಾಜ ವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ.

ಅರಮನೆಯ ಆವರಣದಲ್ಲಿರುವ ದಸರಾ ಆನೆಗಳ ಮಾವುತರು ಮತ್ತು ಕಾವಾಡಿ ಗಳಿಗೆ ಅಗತ್ಯ ವಸ್ತುಗಳುಳ್ಳ ಕಿಟ್ ವಿತರಿಸಿದ ಬಳಿಕ ಪತ್ರಕರ್ತರೊಂದಿಗೆ ಮಾತ ನಾಡಿದ ಅವರು, ನಾಡ ಹಬ್ಬ ದಸರಾ ಮಹೋತ್ಸವ ಅ.10ರಿಂದ ಆರಂಭಗೊಂಡು 19ಕ್ಕೆ ಜಂಬೂ ಸವಾರಿ ನೆರವೇರಲಿದೆ. ಪ್ರತೀ ವರ್ಷದಂತೆ ಈ ಬಾರಿಯೂ ಅರಮನೆಯಲ್ಲಿ ಸಾಂಪ್ರದಾಯಿಕ ಪೂಜೆಗಳು ಜರುಗಲಿವೆ.

ಆದರೆ ಇದುವರೆಗೂ ಪೂಜಾ ಕೈಂಕರ್ಯಕ್ಕೆ ಸಂಬಂಧಿಸಿದಂತೆ ಯಾವುದೇ ಚರ್ಚೆಗಳು ಅರಮನೆಯಲ್ಲಿ ನಡೆದಿಲ್ಲ. ಈ ತಿಂಗಳ ಅಂತ್ಯದ ಬಳಿಕ ಅರಮನೆಯ ಕಾರ್ಯಕ್ರಮಗಳ ರೂಪು-ರೇಷೆಗಳಿಗೆ ಸಿದ್ಧತೆ ನಡೆಯಲಿದೆ ಎಂದು ಹೇಳಿದ ಅವರು, ಈ ಬಾರಿ ಅರಮನೆಯಲ್ಲಿ ನಡೆಯಲಿರುವ ಸಾಂಪ್ರದಾಯಿಕ ಪೂಜಾ ಕಾರ್ಯಕ್ರಮಗಳಲ್ಲಿ ನಮ್ಮ ಮಗ ಆದ್ಯವೀರ್ ಅವರು ಮೊದಲ ಬಾರಿಗೆ ಭಾಗವಹಿಸುತ್ತಿರುವುದು ಸಂತೋಷ ತಂದಿದೆ. ಈ ಆಚರಣೆಯಲ್ಲಿ ನಾವು ತಲ್ಲೀನರಾಗಿರುತ್ತೇವೆ ಎಂದು ತಿಳಿಸಿದರು.

ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ವಿವಿಧ ಕ್ಯಾಂಪ್‍ಗಳಿಂದ ಆಗಮಿಸಿರುವ ಆನೆಗಳೊಂದಿಗೆ ಮಾವುತರು ಮತ್ತು ಕಾವಾಡಿಗಳು ಅರಮನೆ ಆವರಣದಲ್ಲಿ ಒಂದು ತಿಂಗಳಿಗೂ ಹೆಚ್ಚು ಸಮಯ ವಾಸ್ತವ್ಯ ಹೂಡಿರುತ್ತಾರೆ. ಈ ಹಿನ್ನೆಲೆಯಲ್ಲಿ ಇವರೊಂ ದಿಗೆ ಇಂದು ಬೆರೆತದ್ದು ಸಂತೋಷವನ್ನುಂಟು ಮಾಡಿದೆ ಎಂದು ಅವರು ಹೇಳಿದರು.

Translate »