ಮೈಸೂರು, ಫೆ.24(ಆರ್‍ಕೆ)- ಮೈಸೂರಿನ ಕುಕ್ಕರಹಳ್ಳಿ ಕೆರೆ ರಸ್ತೆ ಬದಿಯ ನೀರಿನ ಹೊಂಡದಲ್ಲಿ ಅರಣ್ಯ ವೀಕ್ಷಕನ ಮೃತ ದೇಹ ಸೋಮವಾರ ಮಧ್ಯಾಹ್ನ ಪತ್ತೆಯಾಗಿದೆ. ಸರಗೂರು ಪಟ್ಟಣ ನಿವಾಸಿ ಮಹೇಶ (39) ಸಾವನ್ನಪ್ಪಿದವರು. ಅರಣ್ಯ ಇಲಾಖೆಯಲ್ಲಿ ಅರಣ್ಯ ವೀಕ್ಷಕ (ವಾಚರ್) ರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹೇಶ ಅವರ ಮೃತದೇಹ ಮೈಸೂರಿನ ಸರಸ್ವತಿ ಪುರಂನಲ್ಲಿರುವ ಕುಕ್ಕರಹಳ್ಳಿ ಕೆರೆ ರಸ್ತೆ ಬದಿ ಸಣ್ಣ ನೀರಿನ ಹೊಂಡದಲ್ಲಿ ಇಂದು ಮಧ್ಯಾಹ್ನ 2 ಗಂಟೆ ವೇಳೆ ಪತ್ತೆಯಾಗಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಜಯಲಕ್ಷ್ಮಿಪುರಂ ಠಾಣೆ ಇನ್ ಸ್ಪೆಕ್ಟರ್ ಸುರೇಶಕುಮಾರ್ ಹಾಗೂ ಸಿಬ್ಬಂದಿ ಮಹಜರು ನಡೆಸಿ ಮೃತದೇಹವನ್ನು ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಶವಾಗಾರಕ್ಕೆ ಸ್ಥಳಾಂ ತರಿಸಿದರು. ಮೃತದೇಹ ಕೊಳೆತ ಸ್ಥಿತಿಯಲ್ಲಿರುವುದರಿಂದ ಎರಡು-ಮೂರು ದಿನಗಳ ಹಿಂದೆಯೇ ನೀರಿನಲ್ಲಿ ಬಿದ್ದು ಸಾವನ್ನಪ್ಪಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಜಯಲಕ್ಷ್ಮೀಪುರಂ ಠಾಣೆ ಪೊಲೀಸರು, ತನಿಖೆ ಕೈಗೊಂಡಿ ದ್ದಾರೆ. ಪಕ್ಕದಲ್ಲೇ ಇರುವ ಕಟ್ಟೆ ಮೇಲೆ ಕುಳಿತಿದ್ದಾಗ ಆಯತಪ್ಪಿ ನೀರಿನ ಹೊಂಡಕ್ಕೆ ಬಿದ್ದು ಸಾವನ್ನಪ್ಪಿರುವ ಸಾಧ್ಯತೆಯೂ ಇದೆ, ಮರಣೋತ್ತರ ಪರೀಕ್ಷಾ ವರದಿ ಬಂದ ನಂತರ ಮಹೇಶ ಸಾವಿಗೆ ಕಾರಣ ತಿಳಿಯಲಿದೆ ಎಂದು ಇನ್‍ಸ್ಪೆಕ್ಟರ್ ಸುರೇಶಕುಮಾರ್ ತಿಳಿಸಿದ್ದಾರೆ.