ಹೆಚ್.ಡಿ.ಕೋಟೆ-ಮೈಸೂರು ಗಡಿಯಲ್ಲಿ ಕಾಡಾನೆ ದಾಂಧಲೆಕೂಲಿ ಕಾರ್ಮಿಕ ಬಲಿ
ಮೈಸೂರು

ಹೆಚ್.ಡಿ.ಕೋಟೆ-ಮೈಸೂರು ಗಡಿಯಲ್ಲಿ ಕಾಡಾನೆ ದಾಂಧಲೆಕೂಲಿ ಕಾರ್ಮಿಕ ಬಲಿ

May 5, 2019

ಹೆಚ್.ಡಿ.ಕೋಟೆ: ತಾಲೂಕಿನ ಮಾದಾಪುರ ಗ್ರಾಮದ ಬಳಿ ಇಂದು ಕಾಡಾನೆ ದಾಳಿಗೆ ಕೂಲಿ ಕಾರ್ಮಿಕನೋರ್ವ ಬಲಿಯಾಗಿದ್ದಾನೆ. ಹನುಮಂತಪ್ಪ (35) ಮೃತರು. ಇವರು ಮೂಲತಃ ಯಾದಗಿರಿ ಜಿಲ್ಲೆ, ಸುರಪುರ ತಾಲೂಕು, ಕಕ್ಕೇರಿ ಗ್ರಾಮದವರಾಗಿದ್ದು, ತಾಲೂಕಿನ ಮಾದಾಪುರ ಗ್ರಾಮದ ಬಳಿ ನಾಲೆ ಆಧುನೀಕರಣ ಕಾಮಗಾರಿಗೆ ಕೂಲಿ ಕಾರ್ಮಿಕರಾಗಿ ಬಂದಿದ್ದರು.

ಇಂದು ಬೆಳಿಗ್ಗೆ ತಾವು ತಂಗಿದ್ದ ಸ್ಥಳದಿಂದ, ಕಾಮಗಾರಿ ಸ್ಥಳಕ್ಕೆ ತೆರಳುತ್ತಿದ್ದಾಗ ಹಿಂದಿನಿಂದ ಬಂದ ಆನೆ ದಾಳಿ ನಡೆಸಿದೆ. ಗ್ರಾಮಕ್ಕೆ ಬಂದ ಆನೆಯನ್ನು ಓಡಿಸಿಕೊಂಡು ಬರುತ್ತಿದ್ದ ಗ್ರಾಮಸ್ಥರು, ದಾರಿ ಬಿಡುವಂತೆ ಕೂಗಿದ್ದಾರೆ. ಆದರೆ ಈತನಿಗೆ ಕೇಳಿಸಿಲ್ಲ. ಈ ವೇಳೆ ಆನೆ ಈತನ ಮೇಲೆ ಹರಿಹಾಯ್ದು ಎದೆಗೆ ದಂತದಿಂದ ತಿವಿದಿದೆ. ಇದರಿಂದ ಎದೆ ಭಾಗಕ್ಕೆ ತೀವ್ರತರ ಗಾಯವಾಗಿದೆ. ಆಸ್ಪತ್ರೆಗೆ ಸಾಗಿಸಲು ಯತ್ನಿಸಿದರೂ ಹನುಮಂತಪ್ಪ ಸ್ಥಳದಲ್ಲೇ ಅಸು ನೀಗಿದ್ದಾರೆ. ಶವವನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಡಿಎಫ್‍ಓ ಪ್ರಶಾಂತ್ ಕುಮಾರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಪರಮೇಶ್ವರಪ್ಪ, ಕೃಪಾನಿಧಿ, ಹೆಚ್.ಡಿ.ಕೋಟೆ ಪ್ರಾದೇಶಿಕ ಅರಣ್ಯ ವಲಯ ಅರಣ್ಯಾಧಿಕಾರಿ ಮಧು ಸೇರಿದಂತೆ ಸಿಬ್ಬಂದಿ ಪರಿಶೀಲಿಸಿ, ಮಾಹಿತಿ ಪಡೆದರು.

ಅರಣ್ಯಾಧಿಕಾರಿ ಮಧು ಮಾತನಾಡಿ, ಮೈಸೂರು ತಾಲೂಕಿನ ಚಿಕ್ಕನಹಳ್ಳಿ ಅರಣ್ಯ ಪ್ರದೇಶದಲ್ಲಿ 14 ದಿನಗಳ ಹಿಂದೆ ಕಾಣಿಸಿಕೊಂಡ ಈ ಎರಡು ಕಾಡಾನೆಗಳು ಇಂದು ಇಲ್ಲಿಗೆ ಬಂದಿವೆ. ಬೆಳಿಗ್ಗೆ ತಾಲೂಕಿನ ಪಡುಕೋಟೆ ಬಳಿ ಕಾಡಾನೆಗಳು ಪ್ರತ್ಯಕ್ಷವಾಗಿರುವ ಬಗ್ಗೆ ಮಾಹಿತಿ ಬಂತು. ತಕ್ಷಣ ಸಿಬ್ಬಂದಿ ಕಳುಹಿಸಲಾಯಿತು. ಆದರೆ ಆನೆಗಳು ಅಲ್ಲಿಂದ ಕೊಡಸೀಗೆ ಗ್ರಾಮ ಬಳಸಿಕೊಂಡು ಮಾದಾಪುರಕ್ಕೆ ಕಾಲಿಟ್ಟಿವೆ. ಸಿಬ್ಬಂದಿ ಕೂಡ ಸಾರ್ವಜನಿಕರ ಮಾಹಿತಿ ಮೇರೆಗೆ ಆನೆಗಳನ್ನು ಹಿಂಬಾಲಿಸಿಕೊಂಡು ಬಂದಿ ದ್ದಾರೆ. ಸುತ್ತಲೂ ಜನ ಇದ್ದರಿಂದ ಆನೆಗಳು ಗಾಬರಿಗೊಂಡು ಈ ದುರಂತ ಸಂಭವಿಸಿದೆ ಎಂದರಲ್ಲದೆ, ಮೃತನ ಕುಟುಂಬಕ್ಕೆ 5 ಲಕ್ಷ ರೂ.ಗಳ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದರು. ಸದ್ಯ ಎರಡು ಕಾಡಾನೆಗಳು ತಾಲೂಕಿನ ಮಾದಾಪುರ-ಗದ್ದಿಗೆ ರಸ್ತೆಯ ಕುರ್ಣಿಗಾಲ ಗ್ರಾಮದ ಸಮೀಪದ ಕುರುಚಲು ಕಾಡಿನ ಮದ್ಯೆ ಇದ್ದು, ಅವುಗಳನ್ನು ಕಾಡಿಗಟ್ಟಲು ಹಗಲಿನಲ್ಲಿ ಸಾಧ್ಯವಿಲ್ಲದ ಕಾರಣ ಸಂಜೆ ಕಾರ್ಯಾಚರಣೆ ನಡೆಸಲು ಅರಣ್ಯ ಇಲಾಖೆ ನಿರ್ಧರಿಸಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಸಾಕಾನೆಗಳಾದ ಅಭಿಮನ್ಯು, ಕೃಷ್ಣ ಮತ್ತು ಭೀಮನನ್ನು ಕರೆಸಿಕೊಳ್ಳಲಾಗಿದೆ.

Translate »