ಸದಾಶಿವ ಶ್ರೀಗಳ ಅಗಲಿಕೆ ಒಂದು ಕಣ್ಣು ಕಳೆದುಕೊಂಡಂತೆ: ಪುಣ್ಯಸ್ಮರಣೆ ಪೂರ್ವಭಾವಿ ಸಭೆಯಲ್ಲಿ ಸಚಿವ ಸಿಎಸ್‍ಪಿ ವಿಷಾದ
ಮಂಡ್ಯ

ಸದಾಶಿವ ಶ್ರೀಗಳ ಅಗಲಿಕೆ ಒಂದು ಕಣ್ಣು ಕಳೆದುಕೊಂಡಂತೆ: ಪುಣ್ಯಸ್ಮರಣೆ ಪೂರ್ವಭಾವಿ ಸಭೆಯಲ್ಲಿ ಸಚಿವ ಸಿಎಸ್‍ಪಿ ವಿಷಾದ

July 9, 2018

ಚಿನಕುರಳಿ:  ಸದಾಶಿವ ಸ್ವಾಮೀಜಿ ಗಳ ಅಗಲಿಕೆಯನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅವರನ್ನು ಕಳೆದುಕೊಂಡ ನಾವು ಒಂದು ಕಣ್ಣನ್ನು ಕಳೆದುಕೊಂಡಂತಾಗಿದೆ ಎಂದು ಸಣ್ಣ ನೀರಾವರಿ ಸಚಿವ ಸಿ.ಎಸ್. ಪುಟ್ಟರಾಜು ವಿಷಾದ ವ್ಯಕ್ತಪಡಿಸಿದರು.

ಜು.15ರಂದು ನಡೆಯುವ ತಾಲೂಕಿನ ಬೇಬಿಬೆಟ್ಟದ ಶ್ರೀರಾಮಯೋಗಿಶ್ವರ ಮಠದ ಪೀಠಾಧ್ಯಕ್ಷ ಲಿಂಗೈಕ್ಯ ಶ್ರೀಸದಾಶಿವ ಸ್ವಾಮೀಜಿಗಳ 11ನೇ ದಿನದ ಪುಣ್ಯಸ್ಮರಣೆ ಅಂಗವಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಮರಿದೇವರು ಸ್ವಾಮೀಜಿಗಳ ಶಿಷ್ಯರಾಗಿದ್ದ ಶ್ರೀಸದಾಶಿವ ಸ್ವಾಮೀಜಿಗಳು ಹಾಗೂ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿಗಳು ಈ ಮಠಗಳ ಎರಡು ಕಣ್ಣುಗಳಾಗಿದ್ದರು. ಆದರೆ ಇದೀಗ ಸದಾಶಿವ ಸ್ವಾಮೀಜಿಗಳನ್ನು ಕಳೆದುಕೊಂಡಿರುವ ನಾವು ಒಂದು ಕಣ್ಣನ್ನು ಕಳೆದುಕೊಂಡಿದ್ದೇವೆ ಎಂದು ವಿಷಾದಿಸಿದರು.

ನಾನು ಅಧಿಕಾರದಲ್ಲಿ ಇರಲಿ, ಇಲ್ಲದಿರಲ್ಲಿ ಮೊದಲಿಂದಲೂ ಬೇಬಿ ಬೆಟ್ಟದ ಶ್ರೀರಾಮ ಯೋಗಿಶ್ವರ ಮಠ ಹಾಗೂ ಬೇಬಿ ಗ್ರಾಮದ ದುದರ್ಂಡೇಶ್ವರ ಮಠಗಳ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ನನ್ನ ಕೈಲಾದಷ್ಟು ಸಹಕಾರ ನೀಡಿದ್ದೇನೆ. ಮುಂದೆಯೂ ನಾನು ಮಠ ದೊಂದಿಗೆ ಇರುತ್ತೇನೆ. ಶ್ರೀಸದಾಶಿವ ಸ್ವಾಮೀಜಿಗಳ ಗದ್ದುಗೆ ನಿರ್ಮಾಣ ಮಾಡಿ ಕೊಡುವಂತೆ ಮಠಾಧೀಶರು, ಭಕ್ತರು ಹಾಗೂ ಸಮುದಾಯದ ಮುಖಂಡರು ಮನವಿ ಮಾಡಿದ್ದು, ಆ ಜವಾಬ್ದಾರಿಯನ್ನು ನಾನೇ ತೆಗೆದುಕೊಂಡು ಗದ್ದುಗೆ ನಿರ್ಮಾಣ ಮಾಡಿ ಕೊಡುತ್ತೇನೆ. ಅಲ್ಲದೇ ಸದಾಶಿವ ಸ್ವಾಮೀಜಿಗಳ 11ನೇ ದಿನದ ಕಾರ್ಯಕ್ಕೆ ನೀವು ಯಾವುದೇ ಜವಾಬ್ದಾರಿ ವಹಿಸಿದರೂ, ಅದನ್ನು ಈ ಭಾಗದ ಜಿಪಂ ಸದಸ್ಯ ಸಿ. ಅಶೋಕ್ ಅವರ ಕಡೆಯಿಂದ ನಿಭಾಯಿಸುತ್ತೇನೆ ಎಂದು ತಿಳಿಸಿದರು.

ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಮಾತನಾಡಿ, ಸದಾಶಿವ ಸ್ವಾಮೀಜಿಗಳ ಅಗಲಿಕೆ ನಮಗೆ ವೈಯುಕ್ತಿಕವಾಗಿ ಸಾಕಷ್ಟು ನೋವುಂಟಾಗಿದೆ. ಕೂಡಿ ಬಾಳುವ ಸಂಸ್ಕೃತಿ ವೀರಶೈವ ಸಂಸ್ಕೃತಿ. ಹಾಗಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ಸ್ವಾಮೀಜಿಗಳ ಪುಣ್ಯ ಸ್ಮರಣೆ ಕಾರ್ಯಕ್ರಮ ಆಚರಿಸೋಣ. ಸಮುದಾಯದ ಮುಖಂಡರು, ಭಕ್ತರು ಎಲ್ಲರು ಒಗ್ಗೂಡಿ ಜವಾಬ್ದಾರಿ ಹೊತ್ತು ಪುಣ್ಯಸ್ಮರಣೆ ಆಚರಿಸುವ ಮೂಲಕ ಗುರುಗಳಿಗೆ ವಂದನೆ ಸಲ್ಲಿಸೋಣ ಎಂದರು.

ಜಿಪಂ ಸದಸ್ಯ ಸಿ.ಅಶೋಕ್ ಮಾತನಾಡಿ, ಸರಳ ಸಜ್ಜನಿಕೆ ವ್ಯಕ್ತಿತ್ವದ ಸದಾಶಿವ ಸ್ವಾಮೀಜಿ ಗಳು ನಮ್ಮೆಲ್ಲರಿಗೂ ಮಾರ್ಗದರ್ಶಕರಾಗಿ ಮಠವನ್ನು ಅಭಿವೃದ್ಧಿಪಡಿಸಿದರು. ಸದಾಶಿವ ಸ್ವಾಮೀಜಿಗಳ ಆದರ್ಶವನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಮಠದ ಕಿರಿಯ ಸ್ವಾಮೀಜಿ ಗುರುಸಿದ್ದೇಶ್ವರ ಸ್ವಾಮೀಜಿ, ತಹಶೀಲ್ದಾರ್ ಡಿ.ಹನುಮಂತರಾಯಪ್ಪ, ವೀರಶೈವ ಸಮುದಾಯದ ಅಧ್ಯಕ್ಷ ಮಂಜುನಾಥ್, ಗ್ರಾಪಂ ಮಾಜಿ ಅಧ್ಯಕ್ಷ ನಾಗಣ್ಣ, ಮುಖಂಡರಾದ ಎಸ್.ಎ.ಮಲ್ಲೇಶ್, ಸುರೇಶ್, ದ್ಯಾವಪ್ಪ, ಶಿಕ್ಷಕ ಮಹದೇವಪ್ಪ ಸೇರಿದಂತೆ ಹಲವರಿದ್ದರು.

Translate »