ರೈತರು ಇನ್ನು ಮುಂದೆ ಖಾಸಗಿ ಶಾಲೆ ಶುಲ್ಕ ಪಾವತಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುವ ಸಂದರ್ಭ ಬರುತ್ತೆ
ಮೈಸೂರು

ರೈತರು ಇನ್ನು ಮುಂದೆ ಖಾಸಗಿ ಶಾಲೆ ಶುಲ್ಕ ಪಾವತಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುವ ಸಂದರ್ಭ ಬರುತ್ತೆ

July 9, 2018

ಮೈಸೂರು:  ಇಂದಿನ ವಿದ್ಯಾರ್ಥಿಗಳು ಮತ್ತು ಯುವಕರಲ್ಲಿ ಸೇವಾ ಮನೋಭಾವನೆ ಕ್ಷೀಣಿಸುತ್ತಿದೆ ಎಂದು ಮಾಜಿ ವಿಧಾನಸಭಾ ಅಧ್ಯಕ್ಷ ಕೃಷ್ಣ ಬೇಸರ ವ್ಯಕ್ತಪಡಿಸಿದರು.

ವಿದ್ಯಾರಣ್ಯಪುರಂನ ಒಕ್ಕಲಿಗರ ಸಂಘದ ಸಭಾಂಗಣದಲ್ಲಿ ನಡೆದ ‘ಅತ್ತಿಗುಪ್ಪೆ ಗೆಳೆಯರ ಬಳಗ’ದ ಉದ್ಘಾಟನೆ ಮತ್ತು ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸೇವೆ ಮಾಡಲ್ಲ, ಬದಲು ದುಡ್ ಮಾಡ್‍ಬೇಕು ಎನ್ನುವ ಇಂದಿನ ವಿದ್ಯಾರ್ಥಿಗಳು ಮತ್ತು ಯುವಕರಿಗೆ ಆದರ್ಶಗಳೇ ಇಲ್ಲವಾಗಿವೆ.

‘ದುಡ್ಡೆ ದೊಡ್ಡಪ್ಪ ವಿದ್ಯೆ ಅದರಪ್ಪಾ’ ಎನ್ನುವ ಕಾಲ ಹೋಗಿ ದುಡ್ಡೆ ಎಲ್ಲರಪ್ಪ ಎಂಬಂತಾಗಿದೆ. ಹೋರಾಟಗಾರರು ಮತ್ತು ಸಮಾಜ ಸೇವಕರನ್ನು ಗೌರವಿಸದೆ, ದುಡ್ಡು ಇರುವ ವ್ಯಕ್ತಿಯನ್ನು ಗೌರವಿಸುವುದು, ಸನ್ಮಾನಿಸುವುದನ್ನು ನೋಡುತ್ತಿದ್ದೇವೆ. ಹತ್ತು ಭಾರಿ ಜೈಲಿಗೆ ಹೊಗಿ ಬಂದಿದ್ದರು, ಗಾಂದೀಜಿಯವರೇ ಜೈಲಿಗೆ ಹೋಗಿಬಂದಿದ್ದಾರೆ ಎಂದು ಉಡಾಫೆ ಮಾತುಗಳನ್ನಾಡುತ್ತಾರೆ. ಇಂತಹ ಯುವಕರಿಗೆ ಸರಿಯಾದ ಮಾರ್ಗದರ್ಶನ ನೀಡಬೇಕಾಗಿದೆ. ಸಮಾಜ ಸೇವಾ ಸಂಘಟನೆಗಳು ಈ ನಿಟ್ಟಿನಲ್ಲಿ ಕಾರ್ಯನಿರತವಾಗಬೇಕು.

ನಗರ ಮತ್ತು ಗ್ರಾಮೀಣ ಭಾಗದ ಜನರು ಸರ್ಕಾರಿ ಶಾಲೆಗಳನ್ನು ಬಿಟ್ಟು ಮಮ್ಮಿ ಡ್ಯಾಡಿ ಸ್ಕೂಲ್‍ಗಳಿಗೆ ಹೆಚ್ಚು ಒಲವನ್ನು ತೋರುತ್ತಿದ್ದಾರೆ. ರೈತರು ಮುಂದಿನ ದಿನಗಳಲ್ಲಿ ಖಾಸಗಿ ಶಾಲೆಗಳ ಶುಲ್ಕ ಪಾವತಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುವ ಸಂದರ್ಭ ಬರುತ್ತದೆ. ಇದರ ಬಗ್ಗೆ ಶಿಕ್ಷಕರಾದವರು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಸರಿಯಾದ ಮಾರ್ಗ ತೋರಿಸಬೇಕು ಎಂದು ಹೇಳಿದರು.

ನಂತರ ಅತ್ತಿಗುಪ್ಪೆ ಗೆಳೆಯರ ಬಳಗದ ವತಿಯಿಂದ ಶಿಕ್ಷಣ ಕ್ಷೇತ್ರದಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದ ಡಾ. ಅಂ.ಚಿ ಸಣ್ಣಸ್ವಾಮಿಗೌಡ ಅವರನ್ನು ಸನ್ಮಾನಿಸಲಾಯಿತು.

ಡಾ. ಅಂ.ಚಿ ಸಣ್ಣಸ್ವಾಮಿಗೌಡ ಮಾತನಾಡಿ, ಹೆತ್ತವರು ಮತ್ತು ಸಹೋದರರನ್ನು ಕಡೆಗಾಣಿಸಬೇಡಿ. ಸಂಬಂಧಗಳು ಅಮೂಲ್ಯವಾದವು, ಸರ್ಕಾರಿ ನೌಕರಿ ಸಿಕ್ಕಿತೆಂದು ಗ್ರಾಮೀಣ ಪ್ರದೇಶಗಳನ್ನು ತೊರೆಯಬಾರದು. ಇದ್ದಷ್ಟು ದಿನ ಸಮಾಜ ಸೇವೆಯಲ್ಲಿ ತೊಡಗಿಕೊಳ್ಳಿ ಎಂದು ತಿಳಿಸಿದರು.

ಡಾ. ಬೋಗೆಗೌಡ, ನಿವೃತ ಶಿಕ್ಷಕ ಕೆ. ಗೋಪಾಲ್, ಅತ್ತಿಗುಪ್ಪೆ ಗೆಳೆಯರ ಬಳಗದ ಅಧ್ಯಕ್ಷÀ ಅ.ಮ ಶ್ಯಾಮೇಶ್, ಜೈನಹಳ್ಳಿ ಸತ್ಯನಾರಾಯಣಗೌಡ, ಪದ್ಮೇಶ್, ವಿಜಯ್‍ಕುಮಾರ್ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Translate »