ಮೋಕ್ಷಕ್ಕಾಗಿ ಕುಟುಂಬ ಆತ್ಮಹತ್ಯೆಗೆ ಪ್ರಚೋದನೆ
ಮಂಡ್ಯ

ಮೋಕ್ಷಕ್ಕಾಗಿ ಕುಟುಂಬ ಆತ್ಮಹತ್ಯೆಗೆ ಪ್ರಚೋದನೆ

July 9, 2018

ಮಂಡ್ಯ:  ಮಂತ್ರವಾದಿಗಳ ಪ್ರಚೋದನೆಯಿಂದ ದೆಹಲಿಯ ಭಾಟಿಯಾ ಕುಟುಂಬದ 11 ಮಂದಿ ಮೋಕ್ಷಕ್ಕಾಗಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಇನ್ನೂ ಹಸಿರಾಗಿರುವಾಗಲೇ ಅದೇ ಮಾದರಿಯಲ್ಲಿ ಮಂಗಳಮುಖಿ ಮಂತ್ರವಾದಿಯೋರ್ವ ಮೋಕ್ಷಕ್ಕಾಗಿ ಮಹಿಳೆಯೋರ್ವಳ ಕುಟುಂಬವನ್ನು ಆತ್ಮಹತ್ಯೆಗೆ ಪ್ರಚೋದಿಸಿರುವ ಪ್ರಕರಣ ಮಂಡ್ಯದಲ್ಲಿ ಬೆಳಕಿಗೆ ಬಂದಿದೆ.

ಮಂಡ್ಯ ತಾಲೂಕಿನ ಮಾರಗೋಡನಹಳ್ಳಿಯ ಅನಿತಾ ಕುಟುಂಬಕ್ಕೆ ಮಂಗಳಮುಖಿ ಮಾಂತ್ರಿಕನೋರ್ವ ಮೋಕ್ಷಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರಚೋದಿಸಿದ್ದಾನೆ ಎಂದು ಆರೋಪಿಸಲಾಗಿದೆ. ಇತ್ತೀಚೆಗೆ ತಾನು ಬೆಳವಾಡಿಯ ಬಳಿ ಕೆಲಸದ ನಿಮಿತ್ತ ಹೋಗಿದ್ದ ವೇಳೆ ಮಂಗಳಮುಖಿ ಮಂತ್ರವಾದಿಯೋರ್ವ “ನಿನ್ನ ಸಾವಿನಿಂದ ಮಕ್ಕಳಿಗೆ ಮುಕ್ತಿ, ಮೋಕ್ಷ ಸಿಗುತ್ತದೆ’ ಇಡೀ ಕುಟುಂಬ ಆತ್ಮಹತ್ಯೆಗೆ ಶರಣಾದರೆ ದೇವರು ನಿಮ್ಮನ್ನ ಮೋಕ್ಷ ಮಾರ್ಗಕ್ಕೆ ಕಳುಹಿಸಿ ಕೊಡುತ್ತಾನೆ ಎಂದು ಪುಸಲಾಯಿಸಿದ್ದ. ಮಂತ್ರವಾದಿ ಹೇಳಿಕೆಯಿಂದ ಭೀತಿಗೊಂಡಿದ್ದ ತಾನು ಪೊಲೀಸರಿಗೆ ದೂರು ನೀಡಲು ಹೋದೆ. ಆದರೆ ಅವರು ನಿರಾಕರಿಸಿದ್ದರಿಂದ ವಾಪಸ್ಸಾದೆ.

ಇದೀಗ ದಿಕ್ಕು ತೋಚದಂತಾಗಿದ್ದೇನೆ. ದಯಮಾಡಿ ತನಗೆ ಮತ್ತು ತನ್ನ ಕುಟುಂಬಕ್ಕೆ ಸೂಕ್ತ ರಕ್ಷಣೆ ಕೊಡಬೇಕೆಂದು ನೊಂದ ಮಹಿಳೆ ಅನಿತಾ ಅವರು ಮಾಧ್ಯಮಗಳ ಮೂಲಕ ಮನವಿ ಮಾಡಿದ್ದಾರೆ. ಮೂಲತಃ ಮಂಡ್ಯ ತಾಲೂಕಿನ ಮಾರಗೋಡನಹಳ್ಳಿಯ ನಿವಾಸಿಯಾದ ಅನಿತಾ ಅವರನ್ನು ಮೈಸೂರು ಮೂಲದ ಉಮೇಶ್ ಎಂಬುವವರಿಗೆ ಮದುವೆ ಮಾಡಿ ಕೊಡಲಾಗಿದೆ. ದಂಪತಿಗಳಿಗೆ ಎರಡು ಮಕ್ಕಳು ಸಹ ಇದ್ದು ಸದ್ಯಕ್ಕೆ ಮೈಸೂರು ತಾಲೂಕಿನ ಹುಣಸೂರಿನಲ್ಲಿ ಟೈಲರ್ ವೃತ್ತಿ ಮಾಡಿಕೊಂಡು ವಾಸವಾಗಿದ್ದಾರೆ ಎನ್ನಲಾಗಿದೆ. ಆದರೆ ಆ ಮಂತ್ರವಾದಿ ಯಾರು, ಎಲ್ಲಿದ್ದಾನೆ, ಹೇಗಿದ್ದಾನೆ ಎಂಬುದು ಮಾತ್ರ ಗೊತ್ತಾಗಿಲ್ಲ.

Translate »