ತಂತಿಪಾಲದಲ್ಲಿ ಮಳೆ ಮೀಟಿದ ಮರಣ ಮೃದಂಗ
ಕೊಡಗು

ತಂತಿಪಾಲದಲ್ಲಿ ಮಳೆ ಮೀಟಿದ ಮರಣ ಮೃದಂಗ

September 4, 2018

ಮಡಿಕೇರಿ:  ಭತ್ತದ ಗದ್ದೆಗಳು, ಕಾಫಿ ತೋಟಗಳ ನಡುವೆ ಕಂಗೊಳಿಸುತ್ತಿದ್ದ ಗ್ರಾಮವೇ ತಂತಿಪಾಲ. ಹಲವು ವರ್ಷ ಗಳ ಹಿಂದೆ ಈ ಗ್ರಾಮಕ್ಕೆ ಸಂಪರ್ಕ ಕಲ್ಪಿಸಲು ತೂಗು ಸೇತುವೆಯನ್ನು ನಿರ್ಮಿಸಲಾಗಿತ್ತು. ಸರ್ವಋತುವಲ್ಲೂ ಹರಿಯುವ ಹೊಳೆಗೆ ಕಟ್ಟಿದ ತೂಗು ಸೇತುವೆಯಿಂದ ಈ ಗ್ರಾಮಕ್ಕೆ ತಂತಿಪಾಲ ಎಂಬ ಹೆಸರು ಬಂತು ಎನ್ನಲಾಗುತ್ತಿದೆ.

ಅಧಿಕ ಮಳೆ, ಭೂ ಕುಸಿತ, ರಸ್ತೆ ಸಂಪರ್ಕ ಬಂದ್ ಆಗುವುದು ಈ ಗ್ರಾಮದ ನಿವಾಸಿಗಳಿಗೆ ಹೊಸದೇನಲ್ಲ. ಆದರೆ, ಪ್ರಕೃತಿ ಹರಸಿದ ಊರೇ ಇಂದು ಪ್ರಕೃತಿಯ ವಿಕೋಪಕ್ಕೆ ಭೂ ಸಮಾಧಿಯಾಗಿದೆ. ಕಾಫಿ ತೋಟಗಳು ಗದ್ದೆಯೊಳಗೆ ಹುದುಗಿದ್ದರೆ, ಗದ್ದೆಗಳು 10 ಅಡಿ ಮಣ್ಣಿನಲ್ಲಿ ಮುಚ್ಚಿ ಹೋಗಿದೆ. ಜುಳುಜುಳು ನಾದದ ತಂತಿ ಯನ್ನು ಮೀಟುತ್ತಾ ಹರಿಯುತ್ತಿದ್ದ ಹೊಳೆ ಮರಣ ಮೃದಂಗ ನುಡಿಸಿ ತಂತಿಪಾಲ ಗ್ರಾಮವನ್ನೇ ಆಪೋಷನ ಪಡೆದಿದೆ. ಕೊಡವ ಮತ್ತು ಗೌಡ ಜನಾಂಗದವರು ಒಂದಾಗಿ ಬಾಳಿದ ಊರು ಭೌಗೋಳಿಕವಾಗಿ ಮರೆಯಾಗಿದ್ದು, ಇಡೀ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿದೆ. ಒಂದು ಕಡೆ ನದಿ ಪಾಲಾದ ಎಮ್ಮೆತ್ತಾಳು ಗ್ರಾಮ, ಮತ್ತೊಂದು ಕಡೆ ತಂತಿಪಾಲ. ಬೆಟ್ಟ ತಪ್ಪಲು ಕುಸಿದು ಇಡೀ ತಂತಿಪಾಲ ಗ್ರಾಮವೇ ಟಿಂಬರ್ ಡಿಪೋದಂತೆ ಪರಿವರ್ತನೆಯಾಗಿದೆ. ಭಾರಿ ಗಾತ್ರದ ಸಾವಿರಾರು ಮರಗಳು ತಂತಿ ಪಾಲ ಊರಿನ ಗದ್ದೆಯಲ್ಲಿ ಹರಡಿಕೊಂಡಿದ್ದು, ಪ್ರಕೃತಿಯ ವಿಕೋಪಕ್ಕೆ ಸಾಕ್ಷಿ ಹೇಳುತ್ತಿದೆ.

ತಂತಿಪಾಲ ಹೊಳೆಯ ತುಂಬಾ ಮಣ್ಣಿನ ರಾಶಿ ತಂಬಿಕೊಂಡಿದ್ದು, ಹೊಳೆಯ ಹರಿ ವಿನ ದಿಕ್ಕೇ ಬದಲಾಗಿದೆ. ಬೆಟ್ಟದ ಮೇಲಿಂದ ಇಂದಿಗೂ ಉಕ್ಕಿ ಹರಿಯುತ್ತಿರುವ ಅಂತ ರ್ಜಲ ಈ ಗ್ರಾಮವನ್ನು ಸಂಪರ್ಕಿಸುವ ಎಲ್ಲಾ ರಸ್ತೆಗಳನ್ನು ಕಡಿದು ಹಾಕಿ ಕಣಿವೆ ಯನ್ನಾಗಿಸಿದೆ. ಕಾಫಿ, ಬಾಳೆ, ಅಡಿಕೆ ತೋಟ ಗಳು ಮಾತ್ರವಲ್ಲದೆ, ಮನೆ ಹಾಗೂ ವಾಹನಗಳನ್ನು ಕೂಡ ಮಹಾ ಮಳೆ ಯಿಂದಾದ ಭೂ ಕುಸಿತ ಬಲಿ ಪಡೆದಿದೆ. ತಂಬು ಕುತ್ತಿರಾ ಕುಟುಂಬದ ಸದಸ್ಯ ರೋರ್ವರು ನಿರ್ಮಿಸುತ್ತಿರುವ ಹೊಸ ಮನೆ ಸಂಪೂರ್ಣ ಕೆಸರಿನಲ್ಲಿ ಮುಳುಗಿದ್ದು, ಮುಂದೆಂದೂ ಈ ಮನೆಯಲ್ಲಿ ವಾಸ ಮಾಡಲಾಗದ ಸ್ಥಿತಿ ತಲೆದೋರಿದೆ. ಈಗಾಗಲೇ ತಂತಿ ಪಾಲ ಹೊಳೆ ತನ್ನ ಹರಿವಿನ ದಿಕ್ಕನ್ನೇ ಬದಲಿಸಿದ್ದು, ಗದ್ದೆ ಬಯಲಲ್ಲಿರುವ ಮನೆ ಭವಿಷ್ಯದ ಮಳೆಗಾಲಗಳಲ್ಲಿ ಸಂಪೂರ್ಣ ಮುಳುಗಡೆ ಯಾಗುವ ಸಾಧ್ಯತೆಗಳಿವೆ. ಹೀಗಾಗಿ ಮನೆ ನಿರ್ಮಾಣಕ್ಕೆ ವ್ಯಯಿಸಲಾದ ಅಂದಾಜು 15 ಲಕ್ಷ ರೂ.ಹಣವನ್ನು ನದಿಗೆ ಸುರಿದಂತಾಗಿದೆ.

ಇನ್ನು ಮಕ್ಕಂದೂರಿನಲ್ಲಿ ನೆಲೆ ನಿಂತಿರುವ ಅತ್ಯಂತ ಚಿಕ್ಕ ಒಕ್ಕ ಎಂದೇ ಕರೆಯಲಾಗುವ ಮಡ್ಲಂಡ ಕುಟುಂಬದ ಸದಸ್ಯರೋರ್ವರು ಕೂಡ ತಮ್ಮ ಸ್ವಲ್ಪ ಜಮೀನು ಮಾರಿ 2 ಅಂತಸ್ತಿನ ಮನೆ ನಿರ್ಮಿಸುತ್ತಿದ್ದು, ಆ ಮನೆಗೂ ಅಲ್ಪ ಹಾನಿಯಾಗಿದೆ. ಮಾತ್ರ ವಲ್ಲದೇ ಈ ಮನೆ ಕೂಡ ಭವಿಷ್ಯದಲ್ಲಿ ಜನ ವಾಸಕ್ಕೆ ಯೋಗ್ಯವಾಗಿ ಉಳಿದಿಲ್ಲ. ಮನೆಯ ಹಿಂಭಾಗವಿರುವ ಬೃಹತ್ ಬೆಟ್ಟ ಶ್ರೇಣಿ ಈಗಾಗಲೇ ಅರ್ಧ ಭಾಗ ಕುಸಿದಿದ್ದು, ಉಳಿದ ಭಾಗ ಕುಸಿದು ಬೀಳಲು ತಯಾರಾ ಗಿದೆ. ಇದೀಗ ಮಳೆ ಬಿಡುವು ನೀಡಿದೆ. ಆದರೆ, ವಿಕೋಪಗಳನ್ನು ಅಲ್ಲಗಳೆಯಲಾಗದ ಪರಿಸ್ಥಿತಿಯೂ ಇದ್ದು, ಮುಂದಿನ ಮಳೆ ಗಾಲದಲ್ಲಾದರೂ ಈ ಬೆಟ್ಟ ಕುಸಿಯುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಈ ಬೆಟ್ಟ ಕುಸಿದರೆ ಇಡೀ ತಂತಿಪಾಲ ಗ್ರಾಮವೇ ಮಣ್ಣಿನಡಿಯಲ್ಲಿ ಸಣ್ಣ ಕುರುಹೂ ಸಿಗದಂತೆ ಭೂ ಸಮಾಧಿಯಾಗಲಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ.

ಹಲವು ತಲೆಮಾರುಗಳಿಂದ ತಂತಿ ಪಾಲದಲ್ಲಿ ಬದುಕಿ ಬಾಳಿದ ಕುಟುಂಬ ಗಳು ಇಂದು ಊರು ತೊರೆದು ನಿರಾಶ್ರಿತರ ಕೇಂದ್ರ ಮತ್ತು ಸಂಬಂಧಿಕರ ಮನೆಗಳಲ್ಲಿ ಆಶ್ರಯ ಪಡೆದಿದಾರೆ. ಹಲವು ಮನೆಗಳು ಹಾನಿಗೆ ಒಳಗಾಗಿವೆ. ಸಂಪರ್ಕ ರಸ್ತೆಗಳೆಲ್ಲವೂ ಧ್ವಂಸವಾಗಿರುವ ಹಿನ್ನೆಲೆಯಲ್ಲಿ ತಂತಿಪಾಲ ಗ್ರಾಮದ ನಿವಾಸಿಗಳಿಗೆ ತಮ್ಮೂರಿಗೆ ಕಾಲಿಡಲೂ ಸಾಧ್ಯವಾಗುತ್ತಿಲ್ಲ.
ಪ್ರಕೃತಿ ಹರಸಿ ಬೆಳೆಸಿದ ತಂತಿಪಾಲದಲ್ಲಿ ಆಗಸ್ಟ್ 16 ರಂದು ಮಳೆ ಮೀಟಿದ ಮರಣ ಮೃದಂಗ, ಕೇವಲ ಗ್ರಾಮವನ್ನು ಮಾತ್ರವಲ್ಲದೆ ಅಲ್ಲಿ ಶತಮಾನಗಳಿಂದ ನೆಲೆನಿಂತ ಗ್ರಾಮಸ್ಥರ ಬದುಕಿಗೂ ಚರಮಗೀತೆ ಹಾಡಿರುವುದು ಮಾತ್ರ ದುರಂತವೇ ಸರಿ.

Translate »