ಸಾಂಪ್ರದಾಯಿಕ, ಸರಳ ದಸರಾಗೆ ನಿರ್ಧಾರ: ಮಡಿಕೇರಿ ದಸರಾಗೆ 50, ಗೋಣಿಕೊಪ್ಪಲು ದಸರಾಗೆ 25 ಲಕ್ಷ ಅನುದಾನ
ಕೊಡಗು

ಸಾಂಪ್ರದಾಯಿಕ, ಸರಳ ದಸರಾಗೆ ನಿರ್ಧಾರ: ಮಡಿಕೇರಿ ದಸರಾಗೆ 50, ಗೋಣಿಕೊಪ್ಪಲು ದಸರಾಗೆ 25 ಲಕ್ಷ ಅನುದಾನ

October 9, 2018

ಮಡಿಕೇರಿ: ಮಡಿಕೇರಿ ದಸರಾಕ್ಕೆ 50 ಲಕ್ಷ ರೂ. ಮತ್ತು ಗೋಣಿಕೊಪ್ಪಲು ದಸರಾಕ್ಕೆ 25 ಲಕ್ಷ ರೂ. ಸೇರಿದಂತೆ ಕೊಡಗು ಜಿಲ್ಲೆಯಲ್ಲಿನ ನಾಡಹಬ್ಬಕ್ಕೆ 75 ಲಕ್ಷ ರೂ.ಗಳನ್ನು ಸರ್ಕಾರ ನೀಡುವುದಾಗಿ ಘೋಷಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್, ವಿಜೃಂಭಣೆಯ ಬದಲಿಗೆ ಸಾಂಪ್ರದಾಯಿಕವಾಗಿ ದಸರಾ ಆಚರಿಸುವಂತೆ ಸೂಚಿಸಿದ್ದಾರೆ.

ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಜರುಗಿದ ಕೊಡಗು ಜಿಲ್ಲಾ ದಸರಾ ಆಚರಣೆ ಸಂಬಂ ಧಿತ ಸಭೆಯಲ್ಲಿ ಮಾತನಾಡಿದ ಅವರು, ಪ್ರಕೃತಿ ವಿಕೋಪದಿಂದಾಗಿ ಮಡಿಕೇರಿ ತಾಲೂಕಿನ 7-8 ಪಂಚಾಯತ್‍ಗಳ ಜನ ಸಂಕಷ್ಟದಲ್ಲಿದ್ದಾರೆ. ಹೀಗಾಗಿ ವಿಜೃಂಭಣೆ ಯಿಂದ ದಸರಾ ಆಚರಣೆ ಸರಿಯಲ್ಲ. ಹಾಗೆಂದು ದಸರಾವನ್ನೇ ಆಚರಿಸದೇ ಹೋದಲ್ಲಿ ವ್ಯಾಪಾರೋದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಯಿದೆ. ಹೀಗಾಗಿ ಸಾಂಪ್ರದಾಯಿಕವಾಗಿ ದಸರಾ ಆಚರಿಸುವುದು ಸೂಕ್ತ ಎಂದರು.

ಇದಕ್ಕೂ ಮುನ್ನ ಸಭೆಯಲ್ಲಿ ಮಾತ ನಾಡಿದ ದಸರಾ ಸಮಿತಿ ಕಾರ್ಯಾಧ್ಯಕ್ಷ ಮಹೇಶ್ ಜೈನಿ, ಪ್ರಕೃತಿ ವಿಕೋಪದಿಂದ ಕೊಡಗಿನ ಗ್ರಾಮೀಣ ಪ್ರದೇಶದ ಜನ ನೋವಿನಲ್ಲಿರುವುದರಿಂದಾಗಿ ಸಂಭ್ರಮದಿಂದ ದಸರಾ ಆಚರಿಸದೇ ಇರಲು ನಿರ್ಧರಿಸಲಾಗಿದೆ. ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳು, ಕವಿಗೋಷ್ಟಿ, ಕ್ರೀಡಾ ಕೂಟ, ಮಹಿಳಾ ಮತ್ತು ಮಕ್ಕಳ ದಸರಾ ಆಚರಿಸಲಾಗುವುದಿಲ್ಲ ಎಂದರು.

ದಶಮಂಟಪ ಸಮಿತಿ ಅಧ್ಯಕ್ಷ ರವಿ ಕುಮಾರ್ ಮಾತನಾಡಿ, ಪ್ರಕೃತಿ ವಿಕೋಪ ವಾದರೂ ಗ್ರಾಮೀಣ ಪ್ರದೇಶದಲ್ಲಿನ ದೇವಾಲಯಗಳಿಗೆ ಯಾವುದೇ ಹಾನಿಯುಂಟಾಗಿಲ್ಲ. ರಾಜರ ಕಾಲದಿಂದಲೂ ದಸರಾವನ್ನು ಮಡಿಕೇರಿಯಲ್ಲಿ ಆಚರಿಸಿಕೊಂಡು ಬರಲಾಗಿದೆ. ಶಕ್ತಿದೇವತೆಗಳ ಪೂಜಾರಾಧನೆ ನಿಲ್ಲಿಸುವ ಪ್ರಶ್ನೆಯೇ ಇಲ್ಲ. ಶಕ್ತಿದೇವತೆಗಳ ಕರಗ, ದಶಮಂಟಪಗಳ ಮೆರವಣಿಗೆ ನಡೆಯ ಲೇಬೇಕು. ಇಲ್ಲದೇ ಹೋದಲ್ಲಿ ಖಂಡಿತಾ ನಾಡಿಗೇ ಅನಾಹುತವಾಗಲಿದೆ ಎಂದು ಎಚ್ಚರಿಸಿದರು. ದಸರಾ ಸಮಿತಿ ಗೌರವಾಧ್ಯಕ್ಷ ಜಿ.ಚಿದ್ವಿಲಾಸ್ ಮಾತನಾಡಿ, ಸರ್ಕಾರ ನೀಡಲಿರುವ ಅನುದಾನದ ವಿತರಣೆ ಹೇಗಾಗಬೇಕು ಎಂಬ ಯೋಜನೆಯೂ ಇಂದಿನ ಸಭೆಯಲ್ಲಿ ಆಗಬೇಕು ಎಂದು ಸಲಹೆ ನೀಡಿದರು.

ದಸರಾ ಅಂದರೆ ಮಂಟಪ ಮೆರವಣಿಗೆ ಮಾತ್ರವೇ ಅಲ್ಲ, 1 ಲಕ್ಷ ಜನ ಮಡಿಕೇರಿ ದಸರಾ ವೀಕ್ಷಿಸಲು ಬರುತ್ತಾರೆ. ಕೊಡಗಿನ ಉದ್ಯಮಿಗಳು, ಪ್ರವಾಸೋದ್ಯಮಿಗಳಿಗೂ ದಸರಾ ಮುಖ್ಯವಾಗುತ್ತದೆ ಎಂದರು.

ನಗರಸಭಾ ಸದಸ್ಯ ಕೆ.ಎಸ್.ರಮೇಶ್ ಮಾತನಾಡಿ, ಪ್ರಕೃತಿ ವಿಕೋಪದಿಂದಾಗಿ ಕೊಡಗಿನಾದ್ಯಂತ ವ್ಯಾಪಾರೋದ್ಯಮವೇ ಬಿದ್ದುಹೋಗಿದೆ. ಮಡಿಕೇರಿಗೆ ಮೊದಲಿನಂತೆ ಜನ ಬರುವಂತಾಗಲು ದಸರಾ ಬೇಕೇ ಬೇಕು ಎಂದು ಅಭಿಪ್ರಾಯಪಟ್ಟರು.
ದಸರಾ ಸಮಿತಿಯ ಪ್ರಮುಖ ಆರ್.ಬಿ. ರವಿ ಅವರು, ದಸರಾ ಆಚರಿಸದೇ ಹೋದಲ್ಲಿ ವ್ಯವಹಾರಿಕವಾಗಿ ಉಂಟಾಗುವ ನಷ್ಟ ಲೆಕ್ಕಕ್ಕೇ ಸಿಗದಷ್ಟು ಎಂದು ಎಚ್ಚರಿಸಿದರು.

ಸಭೆಯಲ್ಲಿ ಮಡಿಕೇರಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ವೀರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ, ಎಂಎಲ್‍ಸಿ ವೀಣಾ ಅಚ್ಚಯ್ಯ, ನಗರಸಭಾಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಪ್ರಧಾನ ಕಾರ್ಯದರ್ಶಿ ಎ.ಸಿ.ದೇವಯ್ಯ, ಖಚಾಂಚಿ ಸಂಗೀತಾ ಪ್ರಸನ್ನ, ಪೊಲೀಸ್ ವರಿಷ್ಟಾಧಿಕಾರಿ ಸುಮನ್ ಡಿ.ಪನ್ನೇಕರ್, ಹೆಚ್ಚುವರಿ ವಿಶೇಷ ಜಿಲ್ಲಾಧಿ ಕಾರಿ ಎಂ.ಕೆ.ಜಗದೀಶ್, ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಟಿ.ಉಣ್ಣಿಕೃಷ್ಣ ಸೇರಿದಂತೆ ಪ್ರಮುಖರು ಹಾಜರಿದ್ದರು. ವಿವಿಧ ದಶಮಂಟಪ ಸಮಿತಿ ಪದಾಧಿಕಾರಿಗಳು, ಸಾರ್ವಜನಿಕರು ಸಭೆ ನಡೆದ ಕಾವೇರಿ ಕಲಾಕ್ಷೇತ್ರದಲ್ಲಿ ಕಿಕ್ಕಿರಿದು ಸೇರಿದ್ದರು.

Translate »