ಕಾಂಗ್ರೆಸ್ ಬೆಂಬಲಿಸಲು ಕ್ರೈಸ್ತ ಸಮುದಾಯದ ನಿರ್ಧಾರ
ಮೈಸೂರು

ಕಾಂಗ್ರೆಸ್ ಬೆಂಬಲಿಸಲು ಕ್ರೈಸ್ತ ಸಮುದಾಯದ ನಿರ್ಧಾರ

May 4, 2018

ಮೈಸೂರು:  ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕ್ರೈಸ್ತ ಸಮುದಾಯವನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಹೆಚ್ಚು ನೆರವಾಗಿರುವ ಹಿನ್ನೆಲೆಯಲ್ಲಿ ಕ್ರೈಸ್ತ ಸಮುದಾಯ, ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲು ನಿರ್ಧರಿಸಿದೆ ಎಂದು ಮೈಸೂರು ಜಿಲ್ಲಾ ಕ್ರೈಸ್ತರ ಸಂಘಗಳ ಒಕ್ಕೂಟದ ಮುಖಂಡ, ಕನ್ನಡ ಕ್ರೈಸ್ತ ಸಂಘದ ಪ್ರೊ.ರಾಫೆಲ್ ತಿಳಿಸಿದರು. ಕ್ರೈಸ್ತ ಸಮುದಾಯದ ಇಬ್ಬರಿಗೆ ವಿಧಾನಸಭೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ ನೀಡಿದೆ. ಐವಾನ್ ಡಿಸೋಜ ಅವರನ್ನು ವಿಧಾನ ಪರಿಷತ್ ಸದಸ್ಯರಾಗಿ ನೇಮಿಸಿದೆ. ಹಲವರನ್ನು ವಿವಿಧ ನಿಗಮ ಮಂಡಳಿಗಳಿಗೆ ಸದಸ್ಯರಾಗಿ ನೇಮಕ ಮಾಡಿದೆ. ಪದೇ ಪದೆ ಚರ್ಚ್‍ಗಳ ಮೇಲೆ ನಡೆಯುತ್ತಿದ್ದ ದಾಳಿಗಳನ್ನು ಈ ಸರ್ಕಾರ ಹತೋಟಿಗೆ ತಂದಿದೆ. ಎಂದು ಅವರು ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಈ ಪ್ರಾತಿನಿಧ್ಯವನ್ನು ಬಿಜೆಪಿ, ಜೆಡಿಎಸ್ ಅಥವಾ ಇನ್ಯಾವ ಪಕ್ಷದಲ್ಲೂ ಕಾಣಲು ಸಾಧ್ಯವಾಗಿಲ್ಲ. ಎಲ್ಲಾ ಧರ್ಮೀಯರನ್ನು

ಸಮಾನತೆಯಿಂದ ಕಂಡು, ಕೋಮು ಸೌಹಾರ್ಧತೆ ಕಾಪಾಡಿಕೊಂಡು ಬರುವಲ್ಲಿ ಯಶಸ್ವಿಯಾಗಿರುವ ಕಾಂಗ್ರೆಸ್ ಸರ್ಕಾರವನ್ನು ಅಲ್ಪಸಂಖ್ಯಾತ ಕ್ರೈಸ್ತರು ಬೆಂಬಲಿಸಲಿದ್ದೇವೆ ಎಂದರು.

ಈ ಸಂಬಂಧ ಮೇ 6ರಂದು ಮಧ್ಯಾಹ್ನ 3 ಗಂಟೆಗೆ ಮೈಸೂರಿನ ರೈಲ್ವೆ ನಿಲ್ದಾಣದ ಬಳಿಯಿರುವ ಕಾಂಗ್ರೆಸ್ ಭವನದಲ್ಲಿ ಕ್ರೈಸ್ತ ಸಮುದಾಯದವರ ಸಭೆ ಕರೆಯಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಕ್ಯಾಥೊಲಿಕ್ ಕ್ರೈಸ್ತ ಸಂಘದ ಅಲೆಗ್ಸಾಂಡರ್ ವಿನ್ಸೆಂಟ್, ಕೊಂಕಣ ಕ್ರಿಶ್ಚಿಯನ್ ಸಂಘದ ಅಧ್ಯಕ್ಷ ಕ್ರಾಸ್ಟ್, ಕ್ಯಾಥೊಲಿಕ್ ತಮಿಳು ಟ್ರಸ್ಟ್ ಅಧ್ಯಕ್ಷ ಜೇಮ್ಸ್ ಕ್ರಿಸ್ಟೋಫರ್, ಗ್ರೇಷಿಯಸ್ ರಾಡ್ರಿಕ್ಸ್ ಇದ್ದರು.

Translate »