ಕೊಡಗಿನ ನೆರೆ ಸಂತ್ರಸ್ತ ಪ್ರದೇಶಗಳಿಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ
ಮೈಸೂರು

ಕೊಡಗಿನ ನೆರೆ ಸಂತ್ರಸ್ತ ಪ್ರದೇಶಗಳಿಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ

August 25, 2018

ಮಡಿಕೇರಿ: ಕೇಂದ್ರದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಕೊಡಗು ಜಿಲ್ಲೆಯ ಪ್ರಕೃತಿ ವಿಕೋಪ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಹಾನಿಯ ಬಗ್ಗೆ ಪರಿಶೀಲನೆ ನಡೆಸಿದರು. ಸಚಿವರು ಮೈಸೂರಿನಿಂದ ವಿಶೇಷ ಹೆಲಿಕಾಪ್ಟರ್‌ನಲ್ಲಿ ಹಾರಂಗಿಯ ಹೆಲಿಪ್ಯಾಡ್‍ನಲ್ಲಿ ಇಂದು ಬೆಳಿಗ್ಗೆ ಬಂದಿಳಿದರು. ಈ ವೇಳೆ ಜಿಲ್ಲಾಧಿಕಾರಿ ಶ್ರೀವಿದ್ಯಾ, ಸಂಸದ ಪ್ರತಾಪ್ ಸಿಂಹ ಹಾಗೂ ಸೇನಾಧಿಕಾರಿಗಳು ಅವರನ್ನು ಬರಮಾಡಿಕೊಂಡರು.

ಸಚಿವರು ಕುಶಾಲನಗರಕ್ಕೆ ಭೇಟಿ ನೀಡಬೇಕಿತ್ತಾದರೂ, ಅಲ್ಲಿ ಹಾರಂಗಿ ಜಲಾಶಯದಿಂದ ಹೊರ ಬಿಟ್ಟ ನೀರು ಮನೆಗಳಿಗೆ ನುಗ್ಗಿರುವುದು ಬಿಟ್ಟರೆ, ದೊಡ್ಡ ಮಟ್ಟದ ಅನಾಹುತಗಳು ಸಂಭವಿಸಿಲ್ಲ ಎಂಬ ಕಾರಣಕ್ಕಾಗಿ ಅಲ್ಲಿಗೆ ಹೋಗುವುದನ್ನು ರದ್ದುಪಡಿಸಿ, ಹಾರಂಗಿಯಿಂದ ರಸ್ತೆ ಮಾರ್ಗವಾಗಿ ಮುಕ್ಕೋಡ್ಲು, ಮಕ್ಕಂದೂರು ಗ್ರಾಮ ವ್ಯಾಪ್ತಿಗೆ ತೆರಳಿದ ಸಚಿವರು, ಭೂ ಕುಸಿತಕ್ಕೊಳಗಾದ ಪ್ರದೇಶಗಳನ್ನು ವೀಕ್ಷಿಸಿದರು.

ನಂತರ ಮಾದಾಪುರ ನಿರಾಶ್ರಿತರ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಸಂತ್ರಸ್ತರಿಗೆ ಧೈರ್ಯ ತುಂಬಿದರು. ನಂತರ ಮಡಿಕೇರಿಯ ಬ್ರಾಹ್ಮಣರ ಕಲ್ಯಾಣ ಮಂಟಪ ಮತ್ತು ಮೈತ್ರಿ ಭವನ ನಿರಾಶ್ರಿತ ಕೇಂದ್ರಗಳಿಗೆ ಭೇಟಿ ನೀಡಿದ ಸಚಿವರು, ನಿರಾಶ್ರಿತರ ನೋವು-ನಲಿವುಗಳನ್ನು ಆಲಿಸಿ, ಅವರಿಗೆ ಧೈರ್ಯ ತುಂಬಿದರು.

ಮನೆ, ಆಸ್ತಿ ಕಳೆದುಕೊಂಡ ಜನತೆಯ ನಷ್ಟವನ್ನು ಯಾರಿಂದಲೂ ತುಂಬಿಕೊಡಲು ಸಾಧ್ಯವಿಲ್ಲ. ನಿಮಗಾಗಿರುವ ನೋವಿನ ಬಗ್ಗೆ ಏನು ಹೇಳಬೇಕೆಂದೇ ತಿಳಿಯುತ್ತಿಲ್ಲ ಎಂದು ಭಾವುಕರಾಗಿ ಪ್ರತಿಕ್ರಿಯಿಸಿದ ಸಚಿವರು, ಶಿಬಿರಗಳಲ್ಲಿದ್ದ ಮಕ್ಕಳ ಜೊತೆ ನೆಲದ ಮೇಲೆ ಕುಳಿತು ಮಾತನಾಡಿ ಗಮನ ಸೆಳೆದರು. ಸೇವಾಭಾರತಿ ವತಿಯಿಂದ ಜಿಲ್ಲೆಯ 8 ಕಡೆ ಶಿಬಿರಗಳನ್ನು ತೆರೆದಿರುವ ಬಗ್ಗೆ ಸಚಿವರು ಶ್ಲಾಘಿಸಿದರು. ನಿರಾಶ್ರಿತರು ಸಹಜ ಜೀವನಕ್ಕೆ ಮರಳುವ ನಿಟ್ಟಿನಲ್ಲಿ ಎಲ್ಲಾ ರೀತಿಯ ನೆರವು ನೀಡುವುದಾಗಿಯೂ ಸಚಿವರು ಭರವಸೆ ನೀಡಿದರು.

ಸೇವಾ ಭಾರತಿ ಪ್ರಮುಖರು ಸಚಿವರಿಗೆ ನಿರಾಶ್ರಿತ ಕೇಂದ್ರದ ಬಗ್ಗೆ ಕೂಲಂಕುಷವಾಗಿ ಮಾಹಿತಿ ನೀಡಿದರು.ಸಚಿವರು ಮೈತ್ರಿ ಭವನಕ್ಕೆ ಭೇಟಿ ನೀಡಿದ ವೇಳೆ ಅಲ್ಲಿ ವರಮಹಾಲಕ್ಷ್ಮಿ ಹಬ್ಬ ಆಚರಣೆಗೆ ವ್ಯವಸ್ಥೆ ಮಾಡಲಾಗಿತ್ತು. ಬಳಿಕ ಮಡಿಕೇರಿಯ ಜಿಲ್ಲಾಡಳಿತ ಭವನದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಸಚಿವೆ ನಿರ್ಮಲಾ ಸೀತಾರಾಮನ್, ಅತಿವೃಷ್ಟಿ ಕುರಿತು ಮಾಹಿತಿ ಪಡೆದರು. ಸಮರೋಪಾದಿಯಲ್ಲಿ ಕಾರ್ಯಯೋಜನೆ ರೂಪಿಸಿ ಗ್ರಾಮೀಣ ಪ್ರದೇಶಗಳಲ್ಲಿ ಉಂಟಾಗಿರುವ ಸಂಕಷ್ಟ ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತನ್ನಿ, ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಎಲ್ಲಾ ರೀತಿಯ ಅಗತ್ಯ ನೆರವು ನೀಡಲು ಸಿದ್ಧವಿದೆ ಎಂದರು.

ಸಂಸದರ ನಿಧಿಯಿಂದ ಕೋಟಿ ನೆರವು

ಮಡಿಕೇರಿ: ಅತಿವೃಷ್ಟಿ ಸಂತ್ರಸ್ತರಿಗೆ ಸಂಸದರ ನಿಧಿಯಿಂದ 1 ಕೋಟಿ ರೂ. ನೀಡಲಾಗುವುದು ಎಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಟಿಸಿದರು.

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸಚಿವರು, ರಾಜ್ಯದಲ್ಲಿರುವ ರಕ್ಷಣಾ ಸಾಮಗ್ರಿ ಉತ್ಪಾದನಾ ಘಟಕ ಗಳಿಂದ 7 ಕೋಟಿ ರೂ ಒದಗಿಸಲಾಗುವುದು ಎಂದರು. ಭಾರತೀಯ ಸೇನೆಯು ಮುಕ್ಕೋಡ್ಲು ಮತ್ತು ಕಾಲೂರಿನಲ್ಲಿ ಎರಡು ತಾತ್ಕಾಲಿಕ ಸೇತುವೆಗಳನ್ನು ನಿರ್ಮಿಸಿದ್ದು, ಭೂ ಸಾರಿಗೆ ಸಚಿವರ ಒಪ್ಪಿಗೆ ಮೇರೆಗೆ ಭಾರತೀಯ ಗಡಿ ರಸ್ತೆ ನಿರ್ಮಾಣ ಸಂಸ್ಥೆಯ ಒಂದು ತಾಂತ್ರಿಕ ತಂಡವನ್ನು ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾದ ರಸ್ತೆಗಳ ಪುನರ್ ನಿರ್ಮಾಣಕ್ಕೆ ನಿಯೋಜಿಸಲಾಗಿದೆ ಎಂದು ತಿಳಿಸಿದರು. ಪ್ರಸ್ತುತ ಸನ್ನಿವೇಶದಲ್ಲಿ ಯಾವುದೇ ಶಾಶ್ವತ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಕಷ್ಟ ಸಾಧ್ಯವಾಗಿದ್ದು, ಅಗತ್ಯವಿರುವ ತುರ್ತು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಜಿಲ್ಲಾಡಳಿತವು ಕಾರ್ಯ ಪ್ರವೃತವಾಗಿದ್ದು, ತಾತ್ಕಾಲಿಕ ಸಂಚಾರಕ್ಕೆ ಸೇತುವೆಗಳ ದುರಸ್ತಿಪಡಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು.

ಮಳೆಯು ಸಂಪೂರ್ಣವಾಗಿ ನಿಂತ ನಂತರ ಶಾಶ್ವ್ವತ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು. ಕೇಂದ್ರ ಸರ್ಕಾರವು ರಕ್ಷಣಾ ಕಾರ್ಯಚರಣೆಯಲ್ಲಿ ಅಗತ್ಯ ಸಹಾಯ ನೀಡಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಗೆ ಬೇಕಾದ ಅಗತ್ಯ ನೆರವನ್ನು ಕೇಂದ್ರ ಸರ್ಕಾರ ನೀಡಲಿದೆ ಎಂದು ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ಸಂಭವಿಸಿದ ಅತಿವೃಷ್ಟಿಯಿಂದ ಉಂಟಾಗಿರುವ ನಷ್ಟದ ವರದಿ ನೀಡಲು ಕೇಂದ್ರ ತಂಡವನ್ನು ಕಳುಹಿಸಲಾಗುವುದು.

ಈ ತಂಡವು ಹಾನಿಗೊಳಗಾದ ಪ್ರದೇಶ, ಸಂಭವಿಸಿದ ನಷ್ಟದ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದ್ದು, ಈ ವರದಿಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯಾದ್ಯಂತ ಹಾನಿಗೊಳಗಾದ ರಸ್ತೆಗಳ ಮಾಹಿತಿಯನ್ನು ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರ ಗಮನಕ್ಕೆ ತರಲಾಗುವುದು ಹಾಗೂ ಈ ಸಂಬಂಧ ಪ್ರಧಾನಮಂತ್ರಿ ಮತ್ತು ಕೇಂದ್ರ ಗೃಹ ಸಚಿವರೊಂದಿಗೆ ಚರ್ಚಿಸ ಲಾಗುವುದು ಎಂದರು. ಅತಿವೃಷ್ಟಿಯಿಂದ ಸಂತ್ರಸ್ತರಾಗಿರುವ ಜಿಲ್ಲೆಯ ಜನತೆಯೊಂದಿಗೆ ಕೇಂದ್ರ ಸರ್ಕಾರ, ಜಿಲ್ಲಾಡಳಿತ ಸಂಸದರು, ಶಾಸಕರು, ಉಸ್ತುವಾರಿ ಸಚಿವರು ಎಲ್ಲರೂ ಜೊತೆಗೂಡಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್, ಸಂಸದ ಪ್ರತಾಪ ಸಿಂಹ, ಶಾಸಕರಾದ ಕೆ.ಜಿ.ಬೋಪಯ್ಯ, ಅಪ್ಪಚ್ಚುರಂಜನ್, ಸುನೀಲ್ ಸುಬ್ರಮಣಿ, ಜಿ.ಪಂ.ಅಧ್ಯಕ್ಷ ಬಿ.ಎ.ಹರೀಶ್, ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ, ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆನ್ನೇಕರ್, ಜಿ.ಪಂ.ಸಿಇಒ ಪ್ರಶಾಂತ ಕುಮಾರ್ ಮಿಶ್ರ, ಚಾರುಲತಾ ಸೋಮಲ್ ಇತರರು ಇದ್ದರು.

Translate »