ರಾಷ್ಟ್ರಪತಿ ಭೇಟಿಗೆ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್  ನೇತೃತ್ವದಲ್ಲಿ ದೆಹಲಿಗೆ ನಿಯೋಗ: ಡಿ.ಕೆ.ಶಿವಕುಮಾರ್
ಮೈಸೂರು

ರಾಷ್ಟ್ರಪತಿ ಭೇಟಿಗೆ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್  ನೇತೃತ್ವದಲ್ಲಿ ದೆಹಲಿಗೆ ನಿಯೋಗ: ಡಿ.ಕೆ.ಶಿವಕುಮಾರ್

November 9, 2019

ಮೈಸೂರು, ನ.8(ಆರ್‍ಕೆಬಿ)-  ಅನರ್ಹ ಶಾಸಕರ ಬಗ್ಗೆ ಬಿ.ಎಸ್.ಯಡಿಯೂರಪ್ಪ ಮಾತನಾಡಿರುವ ಆಡಿಯೋ ವಿಚಾರವಾಗಿ ರಾಷ್ಟ್ರಪತಿಗಳಿಗೆ ದೂರು ನೀಡಲು ದೆಹಲಿಗೆ ಹೋಗುವುದಕ್ಕೆ ಹೈಕಮಾಂಡ್‍ನಿಂದ ಮಾಹಿತಿ ಬಂದಿದೆ. ರಾಷ್ಟ್ರಪತಿಗಳು ಸಮಯ ಕೊಟ್ಟ ತಕ್ಷಣ ಭೇಟಿ ಮಾಡುತ್ತೇವೆ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಶುಕ್ರವಾರ ಮೈಸೂರಿನಲ್ಲಿ ತಿಳಿಸಿದರು.

ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡೂ ರಾವ್ ನೇತೃತ್ವದಲ್ಲಿ ನಿಯೋಗ ತೆರಳಲಿದ್ದು, ಕುಮಾರಸ್ವಾಮಿ, ದಿನೇಶ್ ಗುಂಡೂರಾವ್, ಸಿದ್ದರಾಮಯ್ಯ ಅವರೆಲ್ಲ ಈ ಪ್ರಕರಣದ ಅರ್ಜಿ ದಾರರಾಗಿದ್ದಾರೆ. ಈ ಬಗ್ಗೆ ಏನಾಗಿದೆ ಎಂಬ ಮಾಹಿತಿ ಇಲ್ಲ. ಮಾಧ್ಯಮಗಳಲ್ಲಿ ಬಂದಿದ್ದು ನೋಡಿದ್ದೇನೆ. ದೆಹಲಿಗೆ ಹೋಗೋ ಬಗ್ಗೆ ಮಾಹಿತಿ ನೀಡಿದ್ದಾರೆ. ರಾಷ್ಟ್ರಪತಿಗಳು ಸಮಯ ಕೊಟ್ಟರೆ ಹೋಗುತ್ತೇವೆ ಎಂದು ತಿಳಿಸಿದರು.

ಯಡಿಯೂರಪ್ಪ ನೇರನುಡಿಯ ಮನುಷ್ಯ. ಆಡಿಯೋದಲ್ಲಿನ ಧ್ವನಿ ನನ್ನದೆ ಅಂತ ಅವರು ಹೇಳಿದ್ದಾರೆ. ಅವರು ಹಾಗೆಲ್ಲ ಯಾವುದೇ ವಿಚಾರ ಮುಚ್ಚುಮರೆ ಮಾಡುವುದಿಲ್ಲ. ಧ್ವನಿ ನನ್ನದೆ ಅಂತ ಹೇಳಿದ್ದಾರೆ. ಆದರೆ ಕೆಲ ಸಂದರ್ಭದಲ್ಲಿ ನೇರನುಡಿಯನ್ನು ವಾಪಸ್ ಪಡೆಯುತ್ತಿದ್ದಾರೆ. ಯಾಕಾಗಿ ಅವರು ಮಾತು ಗಳನ್ನು ವಾಪಸ್ ಪಡೆಯುತ್ತಿದ್ದಾರೋ ನನಗೆ ಗೊತ್ತಿಲ್ಲ. ಮುಂದೆ ಏನಾಗುತ್ತದೆ ಎಂದು ನೋಡೋಣ ಎಂದರು.

ರಾಜಕಾರಣ ಬೇರೆ, ಸ್ನೇಹ ಬೇರೆ. ಬಿಜೆಪಿಯ ಸಚಿವರು, ಶಾಸಕರು ನನ್ನ ಜೊತೆ ಮಾತನಾಡಿದ್ದಾರೆ. ಎಲ್ಲರೂ ನನ್ನ ಸ್ನೇಹಿತರು. ಎಸ್.ಎಂ.ಕೃಷ್ಣ ನಮ್ಮ ಗುರುಗಳು. ಅವರೀಗ ಬೇರೆ ಪಕ್ಷದಲ್ಲಿದ್ದಾರೆ. ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದೆ. ಅದನ್ನೆಲ್ಲ ಮಾಧ್ಯಮದ ಮುಂದೆ ಹೇಳೋಕಾಗೋಲ್ಲ. ಹಾಗೇ ರಾಜ ಕಾರಣ ಬೇರೆ, ವೈಯುಕ್ತಿಕ ವಿಚಾರ ಬೇರೆ. ನಮ್ಮ ಸಿದ್ಧಾಂತ ನಮ್ಮ ಜೊತೆ ಇರುತ್ತೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ಸಿಬಿಐನವರು ನಿಯಮ ಮೀರಿ ಹೋಗುವು ದಿಲ್ಲ ಎಂಬ ನಂಬಿಕೆ ಇದೆ:  ಇಡಿ ಮೇಲೆ ಕೆಂಡಕಾರಿ ಸಿಬಿಐ ಒಲವು ತೋರಿದ ಡಿ.ಕೆ. ಶಿವಕುಮಾರ್, ಇಡಿ ಹೇಗೆ ಬೇಕಾದರೂ ಹೋಗಬಹುದು. ಆದ್ರೆ ಸಿಬಿಐ ಒಂದು ಜವಾಬ್ದಾರಿಯುತ ಸಂಸ್ಥೆ. ಅವರು ಕಾನೂನು ಪ್ರಕಾರವೇ  ಹೋಗೋದು. ಸಿಬಿಐ ಒಂದು ಒಳ್ಳೆ ಸಂಸ್ಥೆ. ಅದನ್ನು ಹೇಗೆ ದುರುಪಯೋಗ ಮಾಡಿಕೊಳ್ತಾರೆ ಎಂಬುದರ ಬಗ್ಗೆ ನಾನು ಮಾತನಾಡುವುದಿಲ್ಲ. ಆದರೆ ಅವರು ಯಾರ ಮಾತು ಕೇಳೋಲ್ಲ. ಅವರೆಲ್ಲ ಒಂದು ನಿಯ ಮಾವಳಿ ಪ್ರಕಾರವೇ ಹೋಗೋದು. ನನಗೆ ನಂಬಿಕೆ ಇದೆ ಸಿಬಿಐನವರು ನಿಯಮ ಮೀರಿ ತನಿಖೆ ಮಾಡೋಲ್ಲ ಅಂತ. ತನಿಖೆ ಮಾಡಲಿ ಕಾನೂನು ಮೀರಿ ಏನು ಆಗಬಾರದು ಅನ್ನೋದು ನನ್ನ ಅಭಿಪ್ರಾಯ. ಅವರು ಕಾನೂನು ಮೀರಿ ಹೋಗೋಲ್ಲ ಅನ್ನೋ ನಂಬಿಕೆ ಇದೆ. ನಾನು ಸಿಬಿಐಗೆ ಉತ್ತರ ಕೊಡಲು ಸಿದ್ದನಿದ್ದೇನೆ. ಎಷ್ಟು ತನಿಖೆ ಆದರೂ ಆಗಲಿ. ನನ್ನ ಬಗ್ಗೆ ನನಗೆ ಸ್ಪಷ್ಟತೆ ಇರುವಾಗ ನನಗೆನು ಭಯ ಎಂದು ಪ್ರಶ್ನಿಸಿದರು.

ಸಾರಾ ಮಹೇಶ್ ಜೊತೆಗೆ ರಹಸ್ಯ ಮಾತುಕತೆ: ಡಿಕೆಶಿ ಸ್ಪಷ್ಟನೆ:  ಮಾಜಿ ಸಚಿವ ಸಾ.ರಾ ಮಹೇಶ್ ಜತೆ ರಹಸ್ಯ ಮಾತುಕತೆ ಕುರಿತು ಸ್ಪಷ್ಟನೆ ನೀಡಿದ ಡಿ.ಕೆ.ಶಿವಕುಮಾರ್, ನಾನು ಸಾ.ರಾ.ಮಹೇಶ್ ಸ್ನೇಹಿತರು ಒಟ್ಟಿಗೆ ಕೆಲಸ ಮಾಡಿದ್ದೀವಿ. ಅದಕ್ಕೆ ಅವರನ್ನು ಭೇಟಿ ಮಾಡಿದೆ. ಅವರ ಕ್ಷೇತ್ರದಲ್ಲಿ ಅನುದಾನ ಕಡಿತ ಆಗಿದೆ ಅದನ್ನೆಲ್ಲ ಪಟ್ಟಿ ಮಾಡಿಸುತ್ತಿದ್ದೇನೆ. ಎಲ್ಲವನ್ನು ಪಟ್ಟಿ ಮಾಡಿಸಿ ಒಂದು ನಿರ್ಧಾರ ಮಾಡುತ್ತೇವೆ ಎಂದರು.

 

 

Translate »