ನ.30, ವಿಯೆಟ್ನಾಂ ಕರಿಮೆಣಸು ಆಮದು ವಿರೋಧಿಸಿ ಡೆಲ್ಲಿ ಚಲೋ
ಕೊಡಗು

ನ.30, ವಿಯೆಟ್ನಾಂ ಕರಿಮೆಣಸು ಆಮದು ವಿರೋಧಿಸಿ ಡೆಲ್ಲಿ ಚಲೋ

November 28, 2018

ಗೋಣಿಕೊಪ್ಪಲು: ಅಖಿಲ ಭಾರತ ಕಿಸಾನ್ ಸಂಘರ್ಷ ಸಮಿತಿಯ ವತಿಯಿಂದ ನ.30ರಂದು ನವದೆಹಲಿಯ ರಾಮ್‍ಲೀಲಾ ಮೈದಾನದಲ್ಲಿ ರೈತರ ಬೃಹತ್ ಪ್ರತಿಭಟನೆಯು ಉತ್ತರ ಪ್ರದೇಶದ ರೈತ ಚಳವಳಿಯ ಮುಖಂಡ ವಿ.ಎಂ.ಸಿಂಗ್ ನೇತೃತ್ವದಲ್ಲಿ ನಡೆಯಲಿದೆ.

ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಜಿಲ್ಲಾ ಘಟಕದಿಂದ ನೂರಕ್ಕೂ ಅಧಿಕ ರೈತರು ಡೆಲ್ಲಿ ಚಲೋ ರ್ಯಾಲಿಯಲ್ಲಿ ಭಾಗಿಯಾಗಲಿದ್ದಾರೆಂದು ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ ಹೇಳಿದರು. ದಕ್ಷಿಣ ಭಾರತದಿಂದ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರು ಪ್ರಮುಖ ಪಾತ್ರ ವಹಿಸಲಿದ್ದು, ರೈತರ ವಿವಿಧ ಬೇಡಿಕೆಗಳನ್ನು ಈಡೇ ರಿಸುವಂತೆ ಒತ್ತಾಯಿಸಲಿದ್ದಾರೆ. ಡೆಲ್ಲಿ ಚಲೋ ಚಳವಳಿಗೆ ತೆರಳುವ ವಿಚಾರದಲ್ಲಿ ಸಂಘದ ಕಛೇರಿಯಲ್ಲಿ ಏರ್ಪಾಡಾಗಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ನ.29 ರಂದು ಕೊಡಗಿನ ರೈತರು ಪ್ರಯಾಣ ಬೆಳೆಸಲಿದ್ದು, ಪ್ರಮುಖವಾಗಿ ಕರಿಮೆಣಸು ಆಮದು ನೀತಿಯ ವಿರುದ್ಧ ಕೇಂದ್ರದ ವಾಣಿಜ್ಯ ಮಂತ್ರಿಗಳನ್ನು ಭೇಟಿ ಮಾಡಿ ಯಾವುದೇ ಕಾರಣಕ್ಕೂ ಜಿಲ್ಲೆಗೆ ವಿಯೆಟ್ನಾಂ ಕರಿಮೆಣಸು ಆಮದು ಮಾಡಿಕೊಳ್ಳ ದಂತೆ ಒತ್ತಾಯಿಸಲಾಗುವುದು ಎಂದರು.

ರೈತ ಸಂಘದ ಮುಖಂಡ ಪುಚ್ಚಿಮಾಡ ಸುಭಾಶ್ ಮಾತನಾಡಿ, ದೇಶದಾದ್ಯಂತವಿರುವ 204ಕ್ಕೂ ಅಧಿಕ ರೈತ ಪರ ಹೋರಾಟ ಸಮಿತಿ ಗಳು ಈ ಹೋರಾಟಕ್ಕೆ ಧುಮುಕ್ಕಿದ್ದು, 3 ಲಕ್ಷಕ್ಕೂ ಅಧಿಕ ರೈತರು ಜಮಾವಣೆಗೊಳ್ಳಲಿದ್ದಾರೆ. ಸ್ವಾಮಿನಾಥನ್ ವರದಿ ಜಾರಿಗೊಳಿಸುವಂತೆ ರ್ಯಾಲಿಯಲ್ಲಿ ಆಗ್ರಹಿಸಲಾಗುವುದು. ನವದೆಹಲಿಯ ರಾಮಲೀಲಾ ಮೈದಾ ನಕ್ಕೆ ವಿವಿಧ 10 ಮುಖ್ಯ ದ್ವಾರಗಳಿಂದ ಏಕ ಕಾಲದಲ್ಲಿ ದೇಶದ ಎಲ್ಲಾ ರೈತರು ಆಗಮಿಸಲಿದ್ದಾರೆ. ಕೇಂದ್ರ ಸರ್ಕಾರ ರೈತರ ಬಗ್ಗೆ ಮೃಧು ಧೋರಣೆ ಅನುಸರಿಸಿರುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಲಾಗುವುದು ಎಂದರು. ರೈತ ಸಂಘದ ತಿತಿಮತಿ ಭಾಗದ ರೈತ ಮುಖಂಡ ಚೆಪ್ಪುಡೀರ ಕಾರ್ಯಪ್ಪ ಮಾತನಾಡಿ, ಕೊಡಗಿನಿಂದ ತೆರಳುತ್ತಿರುವ ನೂರಕ್ಕೂ ಅಧಿಕ ರೈತರನ್ನು ಬರ ಮಾಡಿ ಕೊಳ್ಳಲಿರುವ ದೆಹಲಿಯ ಕೊಡವ ಸಮಾಜದ ಅಧ್ಯಕ್ಷ ಮಾಚಿಮಂಡ ತಮ್ಮು ಕಾರ್ಯಪ್ಪನವರು ಆತಿಥ್ಯ ನೀಡಲಿದ್ದು, ಸ್ವತಃ ಹೋರಾಟದಲ್ಲಿ ಭಾಗಿಗಳಾಗಲಿದ್ದಾರೆ. ಕೊಡಗು ಜಿಲ್ಲೆಯ ರೈತರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕೇಂದ್ರ ಸಚಿವರಿಗೆ ಕೊಡಗು ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಮುಂದಾಳತ್ವದಲ್ಲಿ ಮನವಿ ಪತ್ರ ನೀಡುವ ಮೂಲಕ ಕೇಂದ್ರ ಸರ್ಕಾರದ ಗಮನ ಸೆಳೆಯಲಾಗುವುದು ಎಂದರು. ಸಭೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಜಿಲ್ಲಾ ಘಟಕದ ಪದಾಧಿಕಾರಿಗಳಾದ ಹೆಚ್.ಟಿ.ಉಮೇಶ್, ಹೆಚ್.ಯು. ಕಿರಣ್ ಮುಂತಾದವರು ಹಾಜರಿದ್ದರು.

Translate »