ರಾಜ್ಯ ಸರ್ಕಾರಿ ನೌಕರರು ಎಂದು ಪರಿಗಣಿಸಲು ಆಗ್ರಹಿಸಿ ಇಂದು ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರ ಜಾಥಾ
ಮೈಸೂರು

ರಾಜ್ಯ ಸರ್ಕಾರಿ ನೌಕರರು ಎಂದು ಪರಿಗಣಿಸಲು ಆಗ್ರಹಿಸಿ ಇಂದು ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರ ಜಾಥಾ

January 30, 2020

ಸಾರ್ವಜನಿಕರ ಹಿತದೃಷ್ಟಿಯಿಂದ ವಾರದ ರಜೆ ಇರುವವರು, ಕರ್ತವ್ಯ ಮುಗಿಸಿದವರು, ಕುಟುಂಬದವರು ಭಾಗಿ
ಮೈಸೂರು, ಜ.29(ಪಿಎಂ)- ರಾಜ್ಯ ಸರ್ಕಾರಿ ನೌಕರರ ವೇತನಕ್ಕೆ ಹೋಲಿಸಿದರೆ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರ ವೇತನ ಶೇ.30ರಷ್ಟು ಕಡಿಮೆ ಇದೆ. ಹೀಗಾಗಿ ಸಾರಿಗೆ ನಿಗಮದ ನೌಕರರನ್ನು ಸರ್ಕಾರಿ ನೌಕರರು ಎಂದು ಘೋಷಿಸಿ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕೆಂದು ಆಗ್ರಹಿಸಿ ಜ.30ರಂದು ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಮೈಸೂರು ಗ್ರಾಮಾಂತರ ಕೆಎಸ್‍ಆರ್‍ಟಿಸಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ವೈ.ಇ.ಮಂಜುನಾಥ್ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ, ಮೈಸೂರು ನಗರ ಮತ್ತು ಗ್ರಾಮಾಂತರ ವಿಭಾಗಗಳ ನೌಕರರ ಕೂಟದ ಜಂಟಿ ಆಶ್ರಯದಲ್ಲಿ ಈ ಹೋರಾಟ ರೂಪಿಸಲಾಗಿದೆ ಎಂದರು. ವರ್ಗಾವಣೆ, ಬಸ್‍ಗಳ ಖರೀದಿ, ನೌಕರರ ವೇತನ ಹೆಚ್ಚಳ, ಟಿಕೆಟ್ ದರ ನಿಗದಿ ಹೀಗೆ ಎಲ್ಲವೂ ಸರ್ಕಾರದ ನಿರ್ದೇ ಶನದಂತೆ ನಡೆಯುತ್ತದೆ. ಆದರೆ ನಿಗಮದ ನೌಕರರನ್ನು ಮಾತ್ರ ಸರ್ಕಾರಿ ನೌಕರರು ಎಂದು ಪರಿಗಣಿಸಿಲ್ಲ. ಇದರಿಂದ ಸರ್ಕಾರಿ ನೌಕರರಿಗೆ ದೊರೆಯುವ ಹಲವು ಸೌಲಭ್ಯಗಳು ನಮಗೆ ಇಲ್ಲವಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಅಂದು ಬೆಳಿಗ್ಗೆ 10.30ಕ್ಕೆ ಮೈಸೂರು ಅರಮನೆ ಕೋಟೆ ಆಂಜನೇಯಸ್ವಾಮಿ ದೇವ ಸ್ಥಾನದ ಎದುರಿನಿಂದ ಡಿಸಿ ಕಚೇರಿವರೆಗೆ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಗಿದೆ. ಸಾರ್ವ ಜನಿಕರ ಹಿತದೃಷ್ಟಿಯಿಂದ ಕರ್ತವ್ಯಕ್ಕೆ ಗೈರು ಹಾಜರಾಗದೇ ವಾರದ ರಜೆ ಇರುವವರು, ಕರ್ತವ್ಯ ಮುಗಿಸಿದವರು ಹಾಗೂ ಕುಟುಂಬ ಸದಸ್ಯರು ಭಾಗಿಯಾಗಲು ಮನವಿ ಮಾಡ ಲಾಗಿದೆ ಎಂದರು. ಮೈಸೂರು, ಮಂಡ್ಯ ಹಾಗೂ ಚಾಮರಾಜನಗರ ಜಿಲ್ಲೆಗಳಿಂದ ಸುಮಾರು 3 ಸಾವಿರ ನೌಕರರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಆಂಧ್ರಪ್ರದೇಶದಲ್ಲಿ ಸಾರಿಗೆ ನಿಗಮದ ನೌಕರರನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಲಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಈ ಬಾರಿಯ ಬಜೆಟ್‍ನಲ್ಲಿ ರಾಜ್ಯ ರಸ್ತೆ ಸಾರಿಗೆ ನೌಕರರನ್ನು ಸರ್ಕಾರಿ ನೌಕರರು ಎಂದು ಘೋಷಿಸಬೇಕು ಎಂದು ಒತ್ತಾಯಿಸಿದರು.

Translate »