ರಂಗನತಿಟ್ಟು ಪಕ್ಷಿಧಾಮದಲ್ಲಿನ ನಡುಗಡ್ಡೆಗಳು ನಾಶ
ಮೈಸೂರು

ರಂಗನತಿಟ್ಟು ಪಕ್ಷಿಧಾಮದಲ್ಲಿನ ನಡುಗಡ್ಡೆಗಳು ನಾಶ

August 24, 2019

ಶ್ರೀರಂಗಪಟ್ಟಣ, ಆ.23-ಇತ್ತೀಚೆಗೆ ಕೊಡಗಿನಲ್ಲಿ ಭಾರೀ ಮಳೆ ಸುರಿದ ಪರಿ ಣಾಮ ಕೆಆರ್‍ಎಸ್ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗಿ ಭಾರೀ ಪ್ರಮಾಣದಲ್ಲಿ ನೀರನ್ನು ಅಣೆಕಟ್ಟೆಯಿಂದ ಹೊರ ಬಿಟ್ಟ ಪರಿಣಾಮ ರಂಗನತಿಟ್ಟು ಪಕ್ಷಿಧಾಮ ಸಂಪೂರ್ಣವಾಗಿ ಹಾನಿಗೊಳಗಾಗಿದೆ.

ನೀರಿನ ರಭಸ ಹೆಚ್ಚಾಗಿದ್ದ ಕಾರಣ ಪಕ್ಷಿಧಾಮದಲ್ಲಿದ್ದ 23 ನಡುಗಡ್ಡೆಗಳ ಪೈಕಿ ಕಾಡು ಹುಣಸೇಮರ ಐಲ್ಯಾಂಡ್, ಸ್ಟೋನ್ ಬಿಲ್ ಐಲ್ಯಾಂಡ್, ಸ್ಟೋನ್ ಫ್ಲವರ್ ಐಲ್ಯಾಂಡ್, ನೀರಂಜಿ ಐಲ್ಯಾಂಡ್, ಅತ್ತಿ ಮರ ಐಲ್ಯಾಂಡ್, ಪರ್ಪಲ್ ಹೆರಾನ್ ಐಲ್ಯಾಂಡ್, ಹೊಳೆಮಧ್ಯೆ ಐಲ್ಯಾಂಡ್, ಬಿದುರಿನ ಐಲ್ಯಾಂಡ್ ಸೇರಿದಂತೆ 10 ನಡುಗಡ್ಡೆ ಗಳು ಸಂಪೂರ್ಣವಾಗಿ ಕೊಚ್ಚಿ ಹೋಗಿವೆ.

ಈ ನಡುಗುಡ್ಡಗಳಲ್ಲಿದ್ದ ಮರಗಳು ನೀರಿ ನಲ್ಲಿ ಕೊಚ್ಚಿ ಹೋಗಿದ್ದು, ಈ ಪ್ರದೇಶದಲ್ಲಿ ನಡುಗಡ್ಡೆ ಇತ್ತು ಎಂಬ ಕುರುಹು ಮಾತ್ರ ಉಳಿದಿದೆ. ಈ ನಡುಗಡ್ಡೆಗಳನ್ನು ಪುನರ್ ನಿರ್ಮಾಣ ಮಾಡಬೇಕಾದರೆ ಕೋಟ್ಯಾಂತರ ರೂ. ವೆಚ್ಚವಾಗಲಿದ್ದು, ಅದು ಹಿಂದಿನ ರೂಪ ಪಡೆಯಬೇಕಾದರೆ ಸುಮಾರು ವರ್ಷ ಗಳೇ ಹಿಡಿಯಬಹುದು ಎನ್ನಲಾಗಿದೆ.

ಒಂದೊಂದು ನಡುಗಡ್ಡೆಯ ಮೇಲೆ ಒಂದೊಂದು ಪ್ರಭೇದದ ಪಕ್ಷಿಗಳು ವಾಸ್ತವ್ಯ ಹೂಡುತ್ತಿದ್ದವು. ಈ ಬಾರಿಯ ಪ್ರವಾಹ ರಂಗನತಿಟ್ಟು ಪಕ್ಷಿಧಾಮಕ್ಕೆ ದೊಡ್ಡ ಮಟ್ಟದ ನಷ್ಟವನ್ನುಂಟು ಮಾಡಿದೆ.

ಕೆಆರ್‍ಎಸ್‍ನಿಂದ ನೀರನ್ನು ಹೊರ ಬಿಟ್ಟಾಗ ರಂಗನತಿಟ್ಟು ಪಕ್ಷಿಧಾಮದಲ್ಲಿ ಅಪಾಯದ ಮಟ್ಟ ಮೀರಿ ನೀರು ಹರಿಯುತ್ತಿತ್ತು. ಪಕ್ಷಿ ಧಾಮಕ್ಕೆ ಪ್ರವಾಸಿಗರಿರಲೀ, ಅಲ್ಲಿನ ಸಿಬ್ಬಂದಿಯೇ ಹೋಗಲಾರದಷ್ಟು ಸಂಪೂರ್ಣವಾಗಿ ಪಕ್ಷಿ ಧಾಮ ಮುಳುಗಡೆಯಾಗಿದೆ. ಆ ಸಂದರ್ಭ ದಲ್ಲಿ ಪಕ್ಷಿಧಾಮಕ್ಕೆ ಸುಮಾರು 30 ಲಕ್ಷದಷ್ಟು ಆದಾಯ ನಷ್ಟವಾಗಿತ್ತು. ಅದರ ಜೊತೆಗೆ ಗಾಯದ ಮೇಲೆ ಬರೆ ಎಳೆದಂತೆ ನಡುಗಡ್ಡೆಗಳು ನಾಶವಾಗಿವೆ.

ರಂಗನತಿಟ್ಟು ಹಿನ್ನೆಲೆ: ಮೈಸೂರು ಮಹಾರಾಜರ ಕಾಲದಲ್ಲಿ ರಂಗನತಿಟ್ಟು ಪಕ್ಷಿಧಾಮದ ಬಳಿ ಕಾವೇರಿ ನದಿಗೆ ಅಡ್ಡಲಾಗಿ ತಡೆಗೋಡೆ ನಿರ್ಮಿಸಿ ಇಲ್ಲಿ ನೀರು ಶೇಖರಣೆ ಆಗುವಂತೆ ಮಾಡಲಾಗಿತ್ತು. ತಡೆಗೋಡೆ ನಿರ್ಮಾಣದಿಂದ ನೀರಿನ ರಭಸವು ಕಡಿಮೆಯಾಯಿತು. ಜೊತೆಗೆ ನೀರು ಶೇಖರಣೆಯಾದಾಗ ಹಲವಾರು ನಡುಗಡ್ಡೆಗಳು ಪ್ರಾಕೃತಿಕವಾಗಿಯೇ ತಲೆ ಎತ್ತಿದವು. ಹೀಗೆ ಆ ಸಂದರ್ಭದಲ್ಲಿ ಪ್ರಮುಖವಾಗಿ 6 ನಡುಗಡ್ಡೆಗಳು ಸೇರಿದಂತೆ ಸುಮಾರು 20 ನಡುಗಡ್ಡೆಗಳು ನಿರ್ಮಾಣವಾದವು.

ಹೀಗೆ ರಂಗನತಿಟ್ಟಿನಲ್ಲಿ ನಡುಗಡ್ಡೆಗಳು ನಿರ್ಮಾಣವಾದಾಗ ಕಾಲಕ್ರಮೇಣ ಇಲ್ಲಿಗೆ ಅನೇಕ ಪ್ರಭೇದದ ಪಕ್ಷಿಗಳು ದೇಶ-ವಿದೇಶದಿಂದ ವಲಸೆ ಬಂದು ಇಲ್ಲೇ ಸಂತಾನೋ ತ್ಪತ್ತಿ ಮಾಡಿ ಕೆಲ ದಿನಗಳ ನಂತರ ತಮ್ಮ ಸ್ವಸ್ಥಾನಕ್ಕೆ ಮರಳುವುದು ವಾಡಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ಪಕ್ಷಿಗಳ ವೀಕ್ಷಣೆಗಾಗಿ ದೇಶ-ವಿದೇಶದಿಂದ ಪ್ರವಾಸಿಗರು ರಂಗನತಿಟ್ಟಿನತ್ತ ಮುಖ ಮಾಡತೊಡಗಿದರು. ಮಹಾರಾಜರ ಕಾಲದಲ್ಲಿ ನಿರ್ಮಾಣವಾಗಿದ್ದ ತಡೆಗೋಡೆ ಈ ಬಾರಿಯ ಪ್ರವಾಹದಲ್ಲಿ ಬಹುತೇಕ ಕೊಚ್ಚಿ ಹೋಗಿದೆ. ನೀರು ಶೇಖರಣೆಯಾಗದೇ ರಭಸವಾಗಿ ಹೋಗುತ್ತಿರುವುದರಿಂದ ಕೆಲ ನಡುಗಡ್ಡೆಗಳು ಸವೆತದ ಅಪಾಯವನ್ನು ಎದುರಿಸುತ್ತಿವೆ. ನೀರಿನ ರಭಸ ಹೆಚ್ಚಾದಾಗ ಬೋಟಿಂಗ್ ನಡೆಸುವುದು ಕಷ್ಟಕರವಾಗುತ್ತದೆ. ಇಲ್ಲಿಗೆ ಬರುವ ಪ್ರವಾಸಿಗರು ಬೋಟ್‍ಗಳ ಮೂಲಕ ನಡುಗಡ್ಡೆಗಳ ಬಳಿಗೆ ಹೋಗಿ ಪಕ್ಷಿಗಳನ್ನು ಕಣ್ತುಂಬಿಕೊಳ್ಳುತ್ತಾರೆ. ಈಗ ಆಗಿರುವ ಅನಾಹುತದಿಂದಾಗಿ ಬೋಟಿಂಗ್ ನಡೆಸುವುದೂ ಕೂಡ ಕಷ್ಟಕರವಾಗಿದೆ. ಬೋಟಿಂಗ್‍ನಿಂದಲೇ ಆದಾಯ ಕಂಡುಕೊಂಡಿದ್ದ ರಂಗನತಿಟ್ಟು ಪಕ್ಷಿಧಾಮದ ಆದಾಯಕ್ಕೂ ಇದರಿಂದ ಕೊಡಲಿ ಪೆಟ್ಟು ಬಿದ್ದಿದೆ.

ರಂಗನತಿಟ್ಟು ಪಕ್ಷಿಧಾಮವು ಅರಣ್ಯ ಇಲಾಖೆಯ ಸುಪರ್ಧಿಯಲ್ಲಿದ್ದು, ಇಲಾಖೆಯು ನಡುಗಡ್ಡೆಗಳು ಹಾಗೂ ತಡೆಗೋಡೆಯ ಪುನರ್ ನಿರ್ಮಾಣವನ್ನು ತ್ವರಿತಗತಿಯಲ್ಲಿ ಕೈಗೊಳ್ಳಬೇಕಾದ ಅವಶ್ಯವಿದೆ. ಈ ತಡೆಗೋಡೆಯಿಂದಾಗಿ ಬಂಗಾರ ದೊಡ್ಡಿ ನಾಲೆಗೆ ಹೆಚ್ಚಿನ ರಭಸದಿಂದ ನೀರು ಹರಿಯುತ್ತಿತ್ತು. ಈ ನಾಲೆಯಲ್ಲಿ ರಭಸವಾಗಿ ನೀರು ಹರಿದರೆ ಮಾತ್ರ ಕೊನೆಯ ಹಂತದಲ್ಲಿರುವ ಜಮೀನುಗಳಿಗೂ ನೀರು ದೊರೆಯುವುದು ಸಾಧ್ಯ. ಈಗ ತಡೆಗೋಡೆಗೆ ಹಾನಿಯಾಗಿರುವುದರಿಂದ ರೈತರೂ ಕೂಡ ಸಂಕಷ್ಟ ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ರಂಗನತಿಟ್ಟು ಪಕ್ಷಿಧಾಮವು 0.67 ಚದರ ಕಿಲೋಮೀಟರ್‍ನಷ್ಟು ಅಧಿಸೂಚಿತ ಪ್ರದೇಶ ಹಾಗೂ 28.08 ಚದರ ಕಿಲೋಮೀಟರ್‍ನಷ್ಟು ಪರಿಸರ ಸೂಕ್ಷ್ಮ ವಲಯದಿಂದ ಆವೃತ್ತಗೊಂಡಿದೆ.

ವಿನಯ್ ಕಾರೇಕುರ

Translate »