ಎಸ್‍ಎಸ್‍ಎಲ್‍ಸಿ ಫಲಿತಾಂಶ ಸುಧಾರಣೆಗೆ ಸಂಕಲ್ಪ
ಮೈಸೂರು

ಎಸ್‍ಎಸ್‍ಎಲ್‍ಸಿ ಫಲಿತಾಂಶ ಸುಧಾರಣೆಗೆ ಸಂಕಲ್ಪ

December 16, 2019

ಮೈಸೂರು, ಡಿ.15(ಎಸ್‍ಬಿಡಿ)- ಎಸ್‍ಎಸ್‍ಎಲ್‍ಸಿ ಪರೀಕ್ಷೆ ಫಲಿತಾಂಶ ಸುಧಾರಣೆಗೆ ಮೈಸೂರು ಜಿಲ್ಲೆಯಲ್ಲಿ ವಿಶಿಷ್ಟ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ.

ಕಳೆದ 2018-19ನೇ ಸಾಲಿನಲ್ಲಿ ಮೈಸೂರು ಜಿಲ್ಲೆ 17ನೇ ಸ್ಥಾನಕ್ಕೆ ಕುಸಿದಿತ್ತು. ಪ್ರಸಕ್ತ 2019-20ನೇ ಸಾಲಿನಲ್ಲಿ ಟಾಪ್ 10ರೊಳಗೆ ಸ್ಥಾನ ಪಡೆಯಬೇಕೆಂಬ ಗುರಿ ಯೊಂದಿಗೆ ಇದೇ ಮೊದಲ ಬಾರಿಗೆ `ಆಕಾಶವಾಣಿ ಫೋನ್ ಇನ್’ ಸೇರಿದಂತೆ 20 ಅಂಶಗಳ ಕಾರ್ಯಕ್ರಮ ರೂಪಿಸಲಾಗಿದ್ದು, ಈ ನಿಟ್ಟಿನಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು(ಡಿಡಿಪಿಐ), ಶಿಕ್ಷಕರಿಗೆ ಸೂಚನೆ ನೀಡಿದ್ದಾರೆ.

ಡಿ.17ರಿಂದ ಫೋನ್ ಇನ್: ಗುಣಾತ್ಮಕ ಶಿಕ್ಷಣ ಹಾಗೂ ಎಸ್‍ಎಸ್‍ಎಲ್‍ಸಿ ಫಲಿತಾಂಶ ಸುಧಾರಣೆ ನಿಟ್ಟಿನಲ್ಲಿ ಡಿ.17ರಿಂದ ಮುಂಬರುವ ಫೆ.1ರವರೆಗೆ ಪ್ರತೀ ಮಂಗಳವಾರ ಬೆಳಿಗ್ಗೆ 11ರಿಂದ 12ರವರೆಗೆ ಮೈಸೂರು ಆಕಾಶವಾಣಿ ಕೇಂದ್ರದಿಂದ ಪರೀಕ್ಷಾ ಸಿದ್ಧತೆ ಕಾರ್ಯಕ್ರಮ ಪ್ರಸಾರವಾಗಲಿದೆ. ಪ್ರತೀ ವಾರ ಒಂದೊಂದು ವಿಷಯಕ್ಕೆ ಸಂಬಂಧಿಸಿದಂತೆ ಇಬ್ಬರು ಶಿಕ್ಷಕರು ಫೋನ್ ಇನ್ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ಅಂದು ಜಿಲ್ಲೆಯ ಎಲ್ಲಾ ಶಾಲೆ ಮಕ್ಕಳು ರೇಡಿಯೋ ಕೇಳುವುದರ ಜೊತೆಗೆ ನೇರ ಪ್ರಶ್ನೋತ್ತರದಲ್ಲಿ ಪಾಲ್ಗೊಂಡು ಮಾಹಿತಿ ಪಡೆಯಬಹುದು.

ಹೊಸ ಪರೀಕ್ಷಾ ಪದ್ಧತಿ, ಪರೀಕ್ಷೆ ತಯಾರಿ, ಕಠಿಣ ಪಠ್ಯ ವಿಷಯಗಳ ಅಭ್ಯಾಸ ಕ್ರಮ ಸೇರಿದಂತೆ ಪರೀಕ್ಷೆಗೆ ಸಂಬಂಧಿಸಿದ ಸಂದೇಹಗಳ ಬಗ್ಗೆ ಮಕ್ಕಳು ಖುದ್ದು ಕರೆ ಮಾಡಿ, ಸಲಹೆ ಪಡೆಯಬಹುದು.

ಮೊದಲ ದಿನ(ಡಿ.17) ಜಿಲ್ಲಾ ಪಂಚಾಯ್ತಿ ಸಿಇಓ ಕೆ.ಜ್ಯೋತಿ, ಡಿಡಿಪಿಐ ಡಾ.ಪಾಂಡುರಂಗ, ಶಿಕ್ಷಣಾಧಿಕಾರಿ ರಾಜಶೇಖರ್, ಮೈಸೂರಿನ ಡಯಟ್ ಪ್ರಾಂಶುಪಾಲ ಮಹದೇವಪ್ಪ ಹಾಗೂ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ರೀಡರ್ ಮಂಜುಳಾ ಅವರು `ಪರೀಕ್ಷಾ ಕೇಂದ್ರಗಳು, ಪರೀಕ್ಷಾ ಸಿದ್ಧತೆ ಸೇರಿದಂತೆ ಪರೀಕ್ಷಾ ಸಂಬಂಧಿ ವಿಷಯ’ದ ಬಗ್ಗೆ ಫೋನ್ ಇನ್ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ಡಿ.24ರಂದು ಪ್ರಥಮ ಭಾಷೆ ಕನ್ನಡ, ಡಿ.31ರಂದು ದ್ವಿತೀಯ ಭಾಷೆ ಇಂಗ್ಲಿಷ್, 2020ರ ಜ.7ರಂದು ಹಿಂದಿ, ಜ.14ರಂದು ಗಣಿತ, ಜ.21ರಂದು ಸಾಮಾನ್ಯ ವಿಜ್ಞಾನ, ಜ.28ರಂದು ಸಮಾಜ ವಿಜ್ಞಾನ ವಿಷಯದ ಬಗ್ಗೆ ಶಿಕ್ಷಕರು ಮಾಹಿತಿ ನೀಡಲಿದ್ದಾರೆ.

ಫೆಬ್ರವರಿ 4ರಂದು ಮನೋವೈದ್ಯರು ಮಕ್ಕಳಿಗೆ ಅಗತ್ಯ ಸಲಹೆ-ಸೂಚನೆ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲಾ ಶಾಲೆಗಳಲ್ಲಿ ಸುಸ್ಥಿತಿಯಲ್ಲಿರುವ ರೇಡಿಯೋ ಇಟ್ಟಿರಬೇಕು. ಮಕ್ಕಳು ಹಾಗೂ ಶಿಕ್ಷಕರ ಪ್ರಶ್ನೆಗಳು ಹಾಗೂ ಸಂದೇಹಗಳ ಪಟ್ಟಿ ಸಿದ್ಧಪಡಿಸಿಟ್ಟುಕೊಳ್ಳುವಂತೆ ಸೂಚನೆ ನೀಡಲಾಗಿದೆ. ದೂ.ಸಂ.0821-2515089/2512582ಗೆ ಕರೆ ಮಾಡಿ, ಸಲಹೆ ಪಡೆಯಬಹುದು.

ತಂತ್ರಜ್ಞಾನ ಬಳಕೆ: ವಿದ್ಯಾರ್ಥಿಗಳಿಗೆ ಕ್ಲಿಷ್ಟಕರವಾದ ವಿಷಯಗಳನ್ನು ಶಿಕ್ಷಕರು ಬಳಸುವ ಆಂಡ್ರಾಯ್ಡ್ ಫೋನ್ ಹಾಗೂ ಶಾಲೆಯಲ್ಲಿರುವ ಕಂಪ್ಯೂಟರ್‍ಗಳನ್ನು ಬಳಸಿ ಕೊಂಡು ಮನವರಿಕೆ ಮಾಡಿಕೊಡಬೇಕು. ಚಿತ್ರಗಳ ವಿವರಣೆ, ಪ್ರಬಂಧ ರಚನೆ, ಲೆಕ್ಕ ಬಿಡಿಸುವುದು ಹಾಗೂ ದೃಶ್ಯ ಮತ್ತು ಆಡಿಯೋ ಮೂಲಕ ಮಕ್ಕಳಿಗೆ ಸುಲಭವಾಗಿ ಅರ್ಥ ಮಾಡಿಸುವಂತೆ ಶಿಕ್ಷಕರಿಗೆ ಆದೇಶಿಸಲಾಗಿದೆ.

ಇದರೊಂದಿಗೆ ಯಾವ ಮಗು ಕಲಿಕೆಯಲ್ಲಿ ಹಿಂದುಳಿದಿದೆ? ನಿಧಾನಗತಿಯಲ್ಲಿ ಕಲಿಯುತ್ತಿದೆ? ಶಾಲೆಗೆ ಪದೆ ಪದೇ ಗೈರಾಗುತ್ತಿದೆ? ಎಂದು ಶಾಲೆ ಮುಖ್ಯೋ ಪಾಧ್ಯಾಯರು ಮಾಹಿತಿ ಪಡೆದು, ಅಂತಹ ವಿದ್ಯಾ ರ್ಥಿಯ ಪೆÇೀಷಕರಿಗೆ ಕರೆ ಮಾಡಿ, ನಿಗಾವಹಿಸಲು ಸೂಚಿಸ ಬೇಕು. ಅಗತ್ಯವೆನಿಸಿದರೆ ಅಂತಹ ಮಕ್ಕಳ ಮನೆಗೆ ಹೋಗಿ, ಸಮಸ್ಯೆ ಅರಿಯಲು ಕಾರ್ಯಕ್ರಮ ರೂಪಿಸಲಾಗಿದೆ.

Translate »