ರಾಜ್ಯದ ಪ್ರಮುಖ 20 ತಾಣಗಳ ಅಭಿವೃದ್ಧಿಗೆ ಕ್ರಿಯಾಯೋಜನೆ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್
ಮಂಡ್ಯ

ರಾಜ್ಯದ ಪ್ರಮುಖ 20 ತಾಣಗಳ ಅಭಿವೃದ್ಧಿಗೆ ಕ್ರಿಯಾಯೋಜನೆ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್

June 16, 2018

ನಾಗಮಂಗಲ: ದೇಶದಲ್ಲೇ ಅತ್ಯಂತ ಹೆಚ್ಚಿನ ಪ್ರವಾಸಿ ತಾಣಗಳು ರಾಜ್ಯದಲ್ಲಿದ್ದು, ಅವುಗಳಲ್ಲಿ ಪ್ರಮುಖ 20 ತಾಣಗಳ ಅಭಿವೃದ್ಧಿಗೆ ಕ್ರಿಯಾಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ರಾಜ್ಯ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ತಿಳಿಸಿದರು.

ತಾಲೂಕಿನ ಮನೆದೇವರು ಕೋಟೆಬೆಟ್ಟದ ಕಂಬದನರಸಿಂಹಸ್ವಾಮಿ ಮತ್ತು ವೆಂಕಟರಮಣಸ್ವಾಮಿ ದೇವಸ್ಥಾನಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿ ದೇವರಿಗೆ ಶುಕ್ರವಾರ ಪೂಜೆ ಸಲ್ಲಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಅಂದಾಜು 3 ಸಾವಿರ ಕೋಟಿ ವೆಚ್ಚದಲ್ಲಿ ಕ್ರಿಯಾಯೋಜನೆ ರೂಪಿಸುವಂತೆ ಅಧಿಕಾರಿಗಳ ಸಭೆ ನಡೆಸಿ ಸೂಚಿಸಿದ್ದೇನೆ. ಇನ್ನು ಕೆಲವೇ ದಿನಗಳಲ್ಲಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಅಧಿಕಾರಗಳೊಂದಿಗೂ ಸಭೆ ನಡೆಸುತ್ತೇನೆ. ಮುಖ್ಯಮಂತ್ರಿಗಳಿಗೂ ಪ್ರವಾಸೋದ್ಯಮದ ಅಭಿವೃದ್ಧಿ ಬಗ್ಗೆ ಸಾಕಷ್ಟು ಕಾಳಜಿ ಇರುವುದರಿಂದ ಇದು ಕಾರ್ಯ ರೂಪಕ್ಕೆ ಬರಲಿದೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.

ಪ್ರವಾಸಿ ತಾಣಗಳಲ್ಲಿ ಮೂಲ ಸೌಲಭ್ಯಗಳಾದ ಕುಡಿಯುವ ನೀರು, ಸುಸಜ್ಜಿತವಾದ ಶೌಚಾಲಯ ಮತ್ತು ಉತ್ತಮ ರಸ್ತೆ ಅಭಿವೃದ್ಧಿಯಾಗಬೇಕು. ಆಗಷ್ಠೇ ಪ್ರವಾಸೋದ್ಯಮಕ್ಕೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಆ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಮಂಡ್ಯ ಜಿಲ್ಲೆಯಲ್ಲಿ ಅನೇಕ ಪ್ರವಾಸಿ ತಾಣಗಳಿದ್ದು ಅವುಗಳ ಅಭಿವೃದ್ಧಿಗೆ ಗಮನ ಕೊಡಲಾಗುವುದು. ಪಟ್ಟಣದಿಂದ ಕೋಟೆ ಬೆಟ್ಟಕ್ಕೆ ಬರುವ ಡಾಂಬರು ರಸ್ತೆಯು ಹಾಳಾಗಿದ್ದು ಕೇವಲ 3.5 ಮೀಟರ್ ಅಗಲವಿದೆ. ಅದನ್ನು 5 ಮೀಟರ್ ಅಗಲಕ್ಕೆ ವಿಸ್ತರಿಸುವುದು ಮತ್ತು ವೆಂಕಟಮರಣ ಸ್ವಾಮಿ ದೇವಾಲಯಕ್ಕೆ ಹೋಗುವ ಮೆಟ್ಟಿಲುಗಳು ಹಾಳಾಗಿದ್ದು, ಅದನ್ನು ಸರಿಪಡಿಸಲು ಆದ್ಯತೆ ನೀಡುವಂತೆ ಮತ್ತು ಈ ಕೂಡಲೇ ಒಂದು ಹೈಟೆಕ್ ಶೌಚಾಲಯ ನಿರ್ಮಾಣಕ್ಕೆ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.

ಇಲ್ಲಿ ಈಗಾಗಲೇ 5 ಕೋಟಿ ರೂ.ಗಳನ್ನು ಪ್ರವಾಸೋದ್ಯಮ ಇಲಾಖೆಯಿಂದ ನೀಡುವಂತೆ ಶಾಸಕ ಸುರೇಶಗೌಡರು ಈ ಹಿಂದೆಯೇ ಕೋರಿದ್ದರು ಅದಕ್ಕೆ ಈಗಾಗಲೇ 2 ಕೋಟಿ ಬಿಡುಗಡೆಯಾಗಿ ಕೆಲಸ ಮುಕ್ತಾಯ ಹಂತದಲ್ಲಿದೆ. ಇನ್ನುಳಿದ ಕೆಲಸಗಳಿಗಾಗಿ ಇನ್ನು 3 ಕೋಟಿ ಹಣವನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದರು.

ಇದಕ್ಕೂ ಮೊದಲು ಕೋಟೆಬೆಟ್ಟಕ್ಕೆ ಆಗಮಿಸಿದ ಸಚಿವರನ್ನು ಕಂಬದ ನರಸಿಂಹಸ್ವಾಮಿ ಸೇವಾಟ್ರಸ್ಟ್‍ನ ಅಧ್ಯಕ್ಷ ತಟ್ಟಳ್ಳಿ ನರಸಿಂಹಮೂರ್ತಿ ಸೇರಿದಂತೆ ಪದಾಧಿಕಾರಿಗಳು ಪೂರ್ಣಕುಂಭ ಸ್ವಾಗತ ನೀಡಿದರು. ಇದಕ್ಕೂ ಮೊದಲೇ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿಗಳ ಆಶೀರ್ವಾದ ಪಡೆದರು.
ಈ ವೇಳೆ ಶಾಸಕ ಸುರೇಶ್‍ಗೌಡ, ಎಂಎಲ್‍ಸಿ ಅಪ್ಪಾಜೇಗೌಡ, ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ರಾಮು, ಪಾಂಡವಪುರ ಎಸಿ ಆರ್.ಯಶೋಧ, ತಹಶೀಲ್ದಾರ್ ನಂಜುಂಡಯ್ಯ, ತಾಲೂಕು ಜೆಡಿಎಸ್ ಅಧ್ಯಕ್ಷ ಜವರೇಗೌಡ, ತಾಪಂ ಅಧ್ಯಕ್ಷ ದಾಸೇಗೌಡ, ಸದಸ್ಯರಾದ ಹೇಮರಾಜು, ವಿದ್ಯಾಶ್ರೀ ಪ್ರವೀಣ್, ಜಿಪಂ ಸದಸ್ಯರಾದ ರುಕ್ಮಿಣ ಶಂಕರ್, ಡಿ.ಕೆ. ಶಿವಪ್ರಕಾಶ್, ಮುತ್ತಣ್ಣ, ಮುಖಂಡರಾದ ಎ.ಜಿ. ಶ್ರೀನಿವಾಸ್, ಎನ್.ವೈ, ಎಲ್ಲೇಗೌಡ, ರಾಜ್ಯ ಪಡಿತರ ವಿತರಕರ ಸಂಘದ ಅಧ್ಯಕ್ಷ ಟಿ.ಕೃಷ್ಣಪ್ಪ, ಟ್ರಸ್ಟ್‍ನ ಖಜಾಂಚಿ ಎಚ್.ಸಿ.ರಾಜಣ್ಣ, ಕಾರ್ಯದರ್ಶಿ ಗೋವಿಂದರಾಜು, ನಿರ್ದೇಶಕರಾದ ಶಿವರಾಮು, ಪುಟ್ಟರಾಜು ಸೇರಿದಂತೆ ಹಲವರಿದ್ದರು.

ನನ್ನ, ಭವಾನಿ ರೇವಣ್ಣ ನಡುವೆ ಭಿನ್ನಾಭಿಪ್ರಾಯವಿಲ್ಲ

ನನ್ನ ಮತ್ತು ಭವಾನಿ ರೇವಣ್ಣ ಅವರ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ನಮ್ಮ ಕ್ಷೇತ್ರ ಮತ್ತು ಹೊಳೆನರಸೀಪುರ ಕ್ಷೇತ್ರ ಎರಡೂ ಒಂದಕ್ಕೊಂದು ಸನಿಹದಲ್ಲಿದ್ದು, ನಮ್ಮ ಕಾರ್ಯಕರ್ತರು ಕೆಲವು ಅಭಿಪ್ರಾಯಗಳನ್ನು ಅವರೊಂದಿಗೆ ಹಂಚಿಕೊಳ್ಳುತ್ತಾರೆ. ಅದನ್ನು ಹೊರತುಪಡಿಸಿ ಬೇರೆನಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸಚಿವರಿಗೆ ಬೀಗ ಹಾಕಿದ ಯಾತ್ರಿ ನಿವಾಸದ ದರ್ಶನ

ನಾಗಮಂಗಲ: ತಾಲೂಕಿನಲ್ಲಿ ಪ್ರವಾಸ ಕೈಗೊಂಡಿದ್ದ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಅವರು ನಾಗಮಂಗಲ ಪ್ರವಾಸಿ ಮಂದಿರಕ್ಕೆ ಆಗಮಿಸಿದರು. ಈ ವೇಳೆ ಅಲ್ಲಿಯೇ ನೂತನವಾಗಿ ನಿರ್ಮಾಣಗೊಂಡು ಉದ್ಘಾಟನೆಗೊಂಡಿರುವ ಯಾತ್ರಿ ನಿವಾಸದ ಕೀ ದೊರೆಯದೇ, ಅವರು ಅಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದ ಘಟನೆ ಶುಕ್ರವಾರ ನಡೆಯಿತು.

ತಾಲೂಕಿನ ಆದಿಚುಂಚನಗಿರಿಗೆ ಭೇಟಿ ನೀಡಿದ ನಂತರ ಪಟ್ಟಣದ ಟಿ.ಬಿ.ಬಡಾವಣೆಯ ಪ್ರವಾಸಿ ಮಂದಿರಕ್ಕೆ ದಿಢೀರ್ ಆಗಮಿಸಿದ ಸಂದರ್ಭ, ಅಲ್ಲಿಯೇ ಆವರಣದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಯಾತ್ರಿ ನಿವಾಸದ ಕಟ್ಟಡ ವೀಕ್ಷಿಸಲು ಸಚಿವರು ಬಯಸಿದರು. ಆಗ ಗೇಟ್‍ಗೆ ಬೀಗ ಹಾಕಲಾಗಿತ್ತು. ಬೀಗ ತೆರೆಯುವಂತೆ ಸ್ಥಳದಲ್ಲಿದ್ದ ಪಾಂಡವಪುರ ಎಸಿ ಆರ್.ಯಶೋಧ ಅವರಿಗೆ ಸೂಚಿಸಿದರು. ಆದರೆ ಕೀ ಯಾರ ಬಳಿ ಇದೆ ಎಂಬುದೇ ತಿಳಿಯದೆ ಅಧಿಕಾರಿಗಳು ತಿಣುಕಾಡಿದರು. ಇದರಿಂದ ಕೋಪಗೊಂಡ ಸಚಿವ ಸಾ.ರಾ. ಮಹೇಶ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಇನ್ನು ಅರ್ಧ ಗಂಟೆಯಲ್ಲಿ ವಾಪಸ್ ಬರುತ್ತೇನೆ ಅಷ್ಟರಲ್ಲಿ ಗೇಟ್ ಬೀಗ ತೆಗೆದಿರುವಂತೆ ಉಪವಿಭಾಗಾಧಿಕಾರಿಗೆ ಸೂಚಿಸಿ ಪ್ರವಾಸಕ್ಕೆ ತೆರಳಿದರು.

ಈ ಸಂದರ್ಭ ಶಾಸಕ ಸುರೇಶ್‍ಗೌಡ, ವಿಧಾನಪರಿಷತ್ ಸದಸ್ಯ ಅಪ್ಪಾಜೇಗೌಡ ಸೇರಿದಂತೆ ಹಲವರಿದ್ದರು.

Translate »