ಏಕರೂಪ ಯೋಜನೆಗಳಿಂದ ಬುಡಕಟ್ಟು ಸಮುದಾಯದ ಅಭಿವೃದ್ಧಿ ಅಸಾಧ್ಯ
ಮೈಸೂರು

ಏಕರೂಪ ಯೋಜನೆಗಳಿಂದ ಬುಡಕಟ್ಟು ಸಮುದಾಯದ ಅಭಿವೃದ್ಧಿ ಅಸಾಧ್ಯ

November 29, 2018

ಮೈಸೂರು: ದೇಶದ ವಿವಿಧ ರಾಜ್ಯ ಗಳಲ್ಲಿರುವ ಬುಡಕಟ್ಟು ಸಮುದಾಯಗಳ ಅಭಿವೃದ್ಧಿ ಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಏಕರೂಪದ ಯೋಜನೆಗಳನ್ನು ಜಾರಿಗೊಳಿಸುತ್ತಿರುವುದರಿಂದ ಇಂದಿಗೂ ಬುಡಕಟ್ಟು ಜನರ ಏಳಿಗೆ ಸಾಧ್ಯವಾಗಿಲ್ಲ. ಇನ್ನಾದರೂ ಪ್ರತಿಯೊಂದು ಸಮುದಾಯ ಕೇಂದ್ರೀ ಕೃತ ಯೋಜನೆಗಳನ್ನು ಅನುಷ್ಠಾನಗೊಳಿಸಿದರೆ ಸಮಗ್ರ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಕರ್ನಾಟಕ ವಿಶ್ವ ವಿದ್ಯಾನಿಲಯ ಮಾನವಶಾಸ್ತ್ರ ವಿಭಾಗದ ಪೆÇ್ರಫೆಸರ್ ಸಿ.ಜಿ.ಹುಸೇನ್ ಖಾನ್ ಅಭಿಪ್ರಾಯಪಟ್ಟಿದ್ದಾರೆ.

ಮೈಸೂರಿನ ಆಡಳಿತ ತರಬೇತಿ ಸಂಸ್ಥೆ ಸಭಾಂಗಣ ದಲ್ಲಿ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಹಾಗೂ ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾ ಲಯ ಆಯೋಜಿಸಿದ್ದ `ಜೇನುಕುರುಬ’ ಮತ್ತು `ಕೊರಗ’ ಮೂಲ ನಿವಾಸಿ ಬುಡಕಟ್ಟು ಸಮುದಾಯಗಳ ಸಂಪ್ರ ದಾಯ, ನಂಬಿಕೆ ಮತ್ತು ಆಚರಣೆಗಳು ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದೇಶದ ಜನಸಂಖ್ಯೆಯಲ್ಲಿ ಬುಡಕಟ್ಟು ಸಮುದಾಯ ಶೇ.8.8ರಷ್ಟಿದೆ. ವಿಶ್ವದಲ್ಲಿಯೇ ಅತೀ ಹೆಚ್ಚು ಬುಡಕಟ್ಟು ಸಮುದಾಯ ಹೊಂದಿರುವ ಎರಡನೇ ರಾಷ್ಟ್ರ ಭಾರತ. ದೇಶದಲ್ಲಿ ಸಂಪನ್ಮೂಲಗಳು ಹೇರಳವಾಗಿವೆಯಾ ದರೂ, ನಗರ, ಮಹಾನಗರಗಳಿಗೆ ಸೀಮಿತವಾಗಿವೆ. ದೇಶಕ್ಕೆ ಸ್ವಾತಂತ್ರ್ಯ ಬಂದು 71 ವರ್ಷವಾದರೂ ಬುಡಕಟ್ಟು ಸಮುದಾಯಗಳ ಅಭಿವೃದ್ಧಿಯಲ್ಲಿ ಸುಧಾರಣೆ ಯಾಗಿಲ್ಲ ಎಂದು ಅವರು ವಿಷಾದ ವ್ಯಕ್ತಪಡಿಸಿದರು.

71 ವರ್ಷದ ಸಾಧನೆಯನ್ನು ಅವಲೋಕಿಸಿದರೆ ಬುಡಕಟ್ಟು ಜನರ ಅಭಿವೃದ್ಧಿ ಮಾತ್ರ ಆಘಾತಕಾರಿ ಯಷ್ಟು ಹಿಂದುಳಿದಿದೆ. ಬುಡಕಟ್ಟು ಜನಾಂಗದ ಬಗ್ಗೆ ಸರಿಯಾದ ಪರಿಕಲ್ಪನೆ ನಮ್ಮಲ್ಲಿಲ್ಲ. ಅದನ್ನು ವ್ಯಾಖ್ಯಾ ನಿಸುವುದಕ್ಕೂ ವಿಫಲವಾಗಿದ್ದೇವೆ. ಇದರಿಂದಲೇ ದೇಶ ದಲ್ಲಿರುವ 700ಕ್ಕೂ ಅಧಿಕ ಬುಡಕಟ್ಟು ಸಮುದಾಯ ಗಳನ್ನು ಅಭಿವೃದ್ಧಿಪಡಿಸುವುದಕ್ಕಾಗಿ ಏಕರೂಪದ ಯೋಜನೆ ಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಇದರಿಂದ ಯೋಜನೆಗಳು ಯಶಸ್ವಿಯಾಗಿ ಗುರಿ ತಲುಪುತ್ತಿಲ್ಲ. ನಮ್ಮ ಲ್ಲಿರುವ ಬುಡಕಟ್ಟು ಸಮುದಾಯಗಳು ಬೇರೆ ಬೇರೆ ಸಂಪ್ರ ದಾಯಗಳು, ಆಚರಣೆ, ಜೀವನ ಶೈಲಿ ವಿಭಿನ್ನವಾಗಿ ರುತ್ತವೆ. ಈ ಹಿನ್ನೆಲೆಯಲ್ಲಿ ಒಂದೇ ಸೂರಿನಡಿ ಬುಡ ಕಟ್ಟು ಸಮುದಾಯಗಳನ್ನು ಅಭಿವೃದ್ಧಿಪಡಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಹಾಗಾಗಿ ಪ್ರತಿ ಬುಡಕಟ್ಟು ಸಮು ದಾಯವನ್ನು ಕೇಂದ್ರೀಕೃತಗೊಳಿಸಿ ಯೋಜನೆಯನ್ನು ರೂಪಿಸಬೇಕೆಂದು ಅವರು ಸಲಹೆ ನೀಡಿದರು.

ಬುಡಕಟ್ಟು ಸಮುದಾಯದಲ್ಲಿ ಧಾರ್ಮಿಕ ಜೀವನ, ಆರ್ಥಿಕ ಚಟುವಟಿಕೆ, ವಿವಾಹ, ಬಂಧುತ್ವ, ರಾಜ ಕೀಯ ಜೀವನ, ಅವರ ಕಲೆ-ಕಸುಬು, ನಂಬಿಕೆಗಳು, ಸಂಪ್ರದಾಯ, ಆಚಾರ ವಿಚಾರ, ಎಲ್ಲವೂ ಒಂದ ಕ್ಕೊಂದು ಅಂತರ ಸಂಬಂಧಿಸಿದಂತೆ ಜೋಡಣೆ ಗೊಂಡು ಸಮಗ್ರ ರೂಪ ಹೊಂದಿರುತ್ತವೆ. ಆದರೆ ಆಧುನಿಕ ಸಮಾಜಗಳಲ್ಲಿ ಇವೆಲ್ಲ ಘಟಕಗಳು ಬಿಡಿ ಬಿಡಿಯಾಗಿ ಜನ ಕಾರ್ಯನಿರ್ವಹಿಸುವುದನ್ನು ಕಾಣುತ್ತೇವೆ. ಇಂತಹ ಸಾಮಾಜಿಕ ರಚನೆಗಳ ಆಧಾರದ ಮೇಲೆ ಆಯಾ ಸಮುದಾಯ ಜನರ ವರ್ತನೆ ಪ್ರಕಟ ವಾಗುತ್ತಿದೆ. ಇಂತಹ ಭಿನ್ನತೆ ಇರುವಾಗ ಬುಡಕಟ್ಟು ಸಮುದಾಯಗಳನ್ನು ಮತ್ತು ಅವರ ಸಮಸ್ಯೆಯನ್ನು ಸಮಗ್ರ ದೃಷ್ಟಿಕೋನದಿಂದ ಅರ್ಥ ಮಾಡಿಕೊಳ್ಳದಿದ್ದರೆ ತಪ್ಪಾಗುತ್ತದೆ ಎಂದು ತಿಳಿಸಿದರು.

ಬುಡಕಟ್ಟು ಸಮುದಾಯಗಳ ಎಲ್ಲಾ ಆಯಾಮ ಗಳನ್ನು ಮತ್ತು ಅವುಗಳಿಗೆ ಸಂಬಂಧಿಸಿದ ಎಲ್ಲಾ ಸಂಪ್ರ ದಾಯ, ನಂಬಿಕೆ, ಆಚಾರ ವಿಚಾರಗಳನ್ನು ಮತ್ತು ಇವೆಲ್ಲದರ ನಡುವೆ ಇರುವ ಅಂತರ ಸಂಬಂಧಗಳನ್ನು ಜನರ ದೃಷ್ಟಿಕೋನದಿಂದ ಸೂಕ್ಷ್ಮವಾಗಿ ಅರ್ಥ ಮಾಡಿಕೊಳ್ಳ ದಿದ್ದರೆ ಸಮಗ್ರ ಅಧ್ಯಯನ ಮಾಡಿದಂತಾಗುವುದಿಲ್ಲ. ಈ ಉದ್ದೇಶ ಸಾಧಿಸಬೇಕಾದರೆ ಸಂಶೋಧನೆಗಳಲ್ಲಿ ಕುಲವರ್ಣನಾ ಶಾಸ್ತ್ರೀಯ ವಿಧಾನ ಅಳವಡಿಸಿಕೊಳ್ಳ ಬೇಕಾಗುತ್ತದೆ ಎಂದು ಸಲಹೆ ನೀಡಿದರು.

ಬುಡಕಟ್ಟು ಜನರ ಮತ್ತು ಅವರ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಅಭಿವೃದ್ಧಿ ಯೋಜನೆ ರೂಪಿಸಬೇಕು. ಅದಕ್ಕಾಗಿ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು ಏಳು ದಶಕಗಳ ಹಿಂದೆ ಹೇಳಿದ್ದ ಪಂಚ ಶೀಲ ಸೂತ್ರ ಬುಡಕಟ್ಟು ಜನರ ಅಭಿವೃದ್ಧಿಗೋಸ್ಕರ ತುಂಬಾ ಸಮಂಜಸವಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ಉಪ ನಿರ್ದೇಶಕಿ ಎಸ್. ಪ್ರತಿಭಾ, ಸಂಶೋಧನಾಧಿಕಾರಿ ಹೆಚ್.ಎನ್. ಗಾಯತ್ರಿ, ಹಂಪಿ ಕನ್ನಡ ವಿವಿಯ ಸಹಾಯಕ ಪ್ರಾಧ್ಯಾಪಕ ಡಾ. ತಾರಹಳ್ಳಿ ಹನುಮಂತಪ್ಪ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಶೀಘ್ರದಲ್ಲೇ ಜೇನುಕುರುಬ, ಕೊರಗ ಸಮುದಾಯದ ವರದಿ ಸಲ್ಲಿಕೆ
ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಟಿ.ಟಿ.ಬಸವನಗೌಡ ಮಾತ ನಾಡಿ, ಇದುವರೆಗೂ ಬುಡಕಟ್ಟು ಸಮುದಾಯ ಗಳ ಕುರಿತು ನಿಖರವಾದ ಮಾಹಿತಿ ಎಲ್ಲಿಯೂ ಲಭ್ಯವಾಗುವುದಿಲ್ಲ. ರಾಜ್ಯದಲ್ಲಿರುವ 50ಕ್ಕೂ ಹೆಚ್ಚು ಬುಡಕಟ್ಟು ಸಮುದಾಯಗಳಲ್ಲಿ ಜೇನುಕುರುಬ ಹಾಗೂ ಕೊರವ ಸಮುದಾಯ ತೀರಾ ಹಿಂದುಳಿ ದಿವೆ. ಈ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಿರ್ದೇಶನದ ಮೇರೆಗೆ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಮೂಲ ಆದಿ ವಾಸಿಗಳಾದ ಜೇನುಕುರುಬ, ಕೊರಗ ಬುಡಕಟ್ಟು ಸಮುದಾಯದ ಕ್ಷೇತ್ರ ಸಮೀಕ್ಷೆ ನಡೆಸಿದೆ. ಶೀಘ್ರ ದಲ್ಲೇ ರಾಜ್ಯ, ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸ ಲಾಗುವುದು ಎಂದರು.
ಮೂಲ ಆದಿವಾಸಿಗಳಲ್ಲಿ ಜೇನುಕುರುಬ, ಕೊರಗ ಪ್ರಮುಖವಾಗಿದೆ. ಈ ಸಮುದಾಯದ ಬಗ್ಗೆ ಕ್ಷೇತ್ರ ಕಾರ್ಯ ಮುಗಿದಿದೆ. ಮೈಸೂರು, ಚಾಮರಾಜನಗರ, ಕೊಡಗು ಜಿಲ್ಲೆಯಲ್ಲಿ ಜೇನು ಕುರುಬ, ದಕ್ಷಿಣಕನ್ನಡ, ಉಡುಪಿ ಜಿಲ್ಲೆಯಲ್ಲಿ ಕೊರಗ ಸಮುದಾಯದ ನಿಖರ ಮಾಹಿತಿ, ಆರ್ಥಿಕ ಸ್ಥಿತಿ, ಜೀವನ ಶೈಲಿಯ ಬಗ್ಗೆವರದಿ ಯನ್ನು ಶೀಘ್ರ ಸಲ್ಲಿಸುತ್ತೇವೆ ಎಂದು ಹೇಳಿದರು. ಸ್ವಾತಂತ್ರ್ಯ ನಂತರದಲ್ಲೂ ಈ ಸಮುದಾಯಗಳು ಅತಿ ಕಷ್ಟದ ಸ್ಥಿತಿಯಲ್ಲಿವೆ. ಕೊರಗರು ಅತಂತ್ರ ರಾಗಿದ್ದಾರೆ. ಮೂಲ ಕಸುಬು ಬಿಟ್ಟು ಪೌರ ಕಾರ್ಮಿಕರು ಮಾಡುವ ವೃತ್ತಿಯನ್ನು ಮಾಡು ತ್ತಿದ್ದಾರೆ. ಇದರಿಂದ ಅವರ ಜೀವಿತಾವಧಿ ಕಡಿಮೆ ಯಾಗಿದೆ. ಈ ವೃತ್ತಿಯಲ್ಲಿ ತೊಡಗಿದ್ದ 10-15 ಮಂದಿ ಚಿಕ್ಕ ವಯಸ್ಸಿನಲ್ಲೇ ಮೃತಪಟ್ಟಿರುವುದು ಸಮೀಕ್ಷೆಯ ವೇಳೆ ತಿಳಿದು ಬಂದಿದೆ ಎಂದು ಡಾ.ಟಿ.ಟಿ.ಬಸವನಗೌಡ ವಿಷಾದಿಸಿದರು.

Translate »