ಅಭಿವೃದ್ಧಿ ಯೋಜನೆಗಳೇ ಗೆಲುವಿಗೆ ಶ್ರೀರಕ್ಷೆ
ಕೊಡಗು

ಅಭಿವೃದ್ಧಿ ಯೋಜನೆಗಳೇ ಗೆಲುವಿಗೆ ಶ್ರೀರಕ್ಷೆ

April 2, 2019

ಕುಶಾಲನಗರ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದ ನೂರಾರು ಜನಪರ ಕಲ್ಯಾಣ ಕಾರ್ಯಕ್ರಮಗಳೇ ನನ್ನ ಗೆಲುವಿಗೆ ಶ್ರೀರಕ್ಷೆ ಎಂದು ಬಿಜೆಪಿ ಲೋಕಸಭಾ ಅಭ್ಯರ್ಥಿ ಪ್ರತಾಪ್ ಸಿಂಹ ಹೇಳಿದರು.

ಪಟ್ಟಣ ಕಾಳೇಘಾಟ್ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಬಿಜೆಪಿ ಕಾರ್ಯ ಕರ್ತರ ಸಭೆಯಲ್ಲಿ ಮಾತನಾಡಿದರು.

ಕೊಡಗಿನಲ್ಲಿ ಪ್ರವಾಹ ಸಂಭವಿಸಿದ ಸಂದರ್ಭದಲ್ಲಿ ಕೇಂದ್ರದ ಮೇಲೆ ಒತ್ತಡ ಹಾಕಿ ಪ್ರಕೃತಿ ವಿಕೋಪ ನಿಧಿಯಿಂದ ರೂ. 525 ಕೋಟಿಗಳ ನೆರವು ನೀಡಲಾಗಿದೆ. ಇದೇ ಹಣದಲ್ಲಿ ರಾಜ್ಯ ಸರ್ಕಾರ ಜೆಲ್ಲೆಯಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೊಂಡಿದೆ ಎಂದರು. ಲೋಕಸಭಾ ಸದಸ್ಯನಾಗಿ ಕಳೆದ ಐದು ವರ್ಷಗಳಲ್ಲಿ ಕೊಡಗಿನಲ್ಲಿ ಹೆಚ್ಚು ತೊಡಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಜಿಲ್ಲೆಯಲ್ಲಿ ಶಾಸಕರು, ಸ್ಥಳೀಯ ಸಂಸ್ಥೆಗಳು ಸಂಪೂರ್ಣವಾಗಿ ಬಿಜೆಪಿ ಆಡಳಿತದಲ್ಲಿ ಇದ್ದ ಕಾರಣ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಿದ್ದೇನೆ. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ದಲ್ಲಿ ಬಿಜೆಪಿ ಸುಭದ್ರವಾಗಿದೆ. ಈ ಚುನಾ ವಣೆಯಲ್ಲಿ ಜಿಲ್ಲೆಯಲ್ಲಿ ಅಧಿಕ ಮತಗಳಿಂದ ಜಯಶೀಲನ್ನಾಗಿ ಮಾಡುವಂತೆ ಕಾರ್ಯಕರ್ತ ರಲ್ಲಿ ಪ್ರತಾಪ್ ಸಿಂಹ ಮನವಿ ಮಾಡಿದರು.

ಕಳೆದ ಸಾಲಿನಲ್ಲಿ ಆದ ತಪ್ಪನ್ನು ಈ ಬಾರಿ ಖಂಡಿತ ಮಾಡುವುದಿಲ್ಲ. ಎಲ್ಲ ಬಿಜೆಪಿ ಕಾರ್ಯಕರ್ತರೊಂದಿಗೆ ಸ್ಥಾನೀಯ ಮಟ್ಟ ದಲ್ಲಿ ಬೆರೆತು ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತೇನೆ ಎಂದು ಭರವಸೆ ನೀಡಿದರು.

ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಮಾತನಾಡಿ, ಕೊಡಗಿ ನಲ್ಲಿ ಕಳೆದ ಆಗಸ್ಟ್‍ನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಜನರು ತೀವ್ರ ತೊಂದರೆಗೆ ಒಳಗಾದ ಸಂದರ್ಭ ಸಂತ್ರಸ್ತರಿಗೆ ಪರಿಹಾರ ವಿತರಣೆಯೊಂದಿಗೆ ಅಭಿವೃದ್ಧಿ ವಿಚಾರ ದಲ್ಲಿ ರಾಜ್ಯ ಸಮ್ಮಿಶ್ರ ಸರ್ಕಾರ ಮಲ ತಾಯಿ ಧೋರಣೆಯನ್ನು ಅನುಸರಿಸಿತು ಎಂದು ಆರೋಪಿಸಿದರು.
ಕೇಂದ್ರ ಸರ್ಕಾರದಿಂದ 525 ಕೋಟಿ ರೂ. ಹಾಗೂ ರಾಜ್ಯ ಸರ್ಕಾರಿ ನೌಕರ ರಿಂದ 231 ಕೋಟಿ ರೂ. ಹಾಗೂ ದಾನಿ ಗಳಿಂದ ನೂರಾರು ಕೋಟಿ ಹರಿದು ಬಂದರೂ ಕೂಡ ಜಿಲ್ಲೆಯ ಸಂತ್ರಸ್ತರಿಗೆ ಸೂಕ್ತ ಪರಿಹಾರ ಒದಗಿಸುವಲ್ಲಿ ಸರ್ಕಾರ ಮೀನಾ ಮೇಷ ಎಣಿಸುತ್ತಿದೆ ಎಂದು ದೂರಿದರು.

ಶಾಸಕ ಎಂ.ಪಿ.ಸುನೀಲ್ ಸುಬ್ರಹ್ಮಣ್ಯ ಮಾತನಾಡಿ, ದೇಶದಲ್ಲಿ ಉತ್ತಮ ಆಡಳಿತ ನಡೆಸಿದ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಭ್ರಷ್ಟಾಚಾರ ರಹಿತ ಆಡಳಿತ ನಡೆಸುವ ಮೂಲಕ ದೇಶದ ಅಭಿವೃದ್ಧಿಗೆ ಒತ್ತು ನೀಡಿದೆ ಎಂದರು.

ಮಾಜಿ ಶಾಸಕ ಎಸ್.ಜಿ.ಮೇದಪ್ಪ ಮಾತನಾಡಿ, ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಜಾರಿಗೆ ತಂದ ನೂರಾರು ಜನಪರ ಕಲ್ಯಾಣ ಕಾರ್ಯಕ್ರಮಗಳೇ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಶ್ರೀರಕ್ಷೆಯಾಗಿವೆ ಎಂದರು.

ತಾ.ಪಂ.ಉಪಾಧ್ಯಕ್ಷ ಅಭಿಮನ್ಯು ಕುಮಾರ್ ಮಾತನಾಡಿ, ಪ್ರಧಾನಿ ಮೋದಿ ಅವರು ಭಯೋತ್ಪಾದಕರು 48 ಸೈನಿಕರನ್ನು ಹತ್ಯೆ ಮಾಡಿದಾಗ ಶತ್ರು ರಾಷ್ಟ್ರದ ಮೇಲೆ ಸರ್ಜಿಕಲ್ ದಾಳಿ ನಡೆಸುವ ಮೂಲಕ ಜಾಗತಿಕ ಮಟ್ಟದಲ್ಲಿ ದೇಶದ ಸೇನಾ ಸಾಮರ್ಥ್ಯವನ್ನು ಎತ್ತಿ ತೋರಿಸಿದ್ದಾರೆ ಎಂದರು. ಸೈನಿಕರಿಗೆ ಸಂಪೂರ್ಣ ಅಧಿಕಾರ ನೀಡುವ ಮೂಲಕ ಕಾಶ್ಮೀರ ಉಗ್ರರನ್ನು ಮಟ್ಟ ಹಾಕಿದ್ದಾರೆ ಎಂದರು.

ಬಿಜೆಪಿ ನಗರ ಘಟಕದ ಅಧ್ಯಕ್ಷ ಕೆ.ಜಿ. ಮನು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಯಮುನಾ ಚಂಗಪ್ಪ, ಜಿಲ್ಲಾ ಸಮಿತಿ ಉಪಾ ಧ್ಯಕ್ಷ ಗಣಿಪ್ರಸಾದ್, ಪ್ರಧಾನ ಕಾರ್ಯ ದರ್ಶಿ ರಾಬಿನ್ ದೇವಯ್ಯ, ತಾಲೂಕು ಉಪಾಧ್ಯಕ್ಷ ಕೆ.ಕೆ.ಬೋಗಪ್ಪ, ತಾಲೂಕು ಪ್ರಧಾನ ಕಾರ್ಯದರ್ಶಿ ಕೆ.ವರದ, ಜಿ.ಪಂ.ಸದಸ್ಯೆ ಕೆ.ಆರ್. ಮಂಜುಳಾ, ತಾ.ಪಂ.ಸದಸ್ಯ ಡಿ.ಎಸ್. ಗಣೇಶ್, ವಿವಿಧ ಘಟಕಗಳ ಮುಖಂಡ ರಾದ ನಿಸಾರ್ ಅಹಮದ್, ಪ್ರಭಾಕರ್, ಕುಮಾರಸ್ವಾಮಿ, ಎಂ.ಡಿ.ಕೃಷ್ಣಪ್ಪ ಉಪಸ್ಥಿತರಿದ್ದರು. ಇದೇ ಸಂದರ್ಭ ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಮುಖಂಡರು ಪ್ರತಾಪ್ ಸಿಂಹ ನೇತೃತ್ವ ದಲ್ಲಿ ಬಿಜೆಪಿ ಸೇರ್ಪಡೆಗೊಂಡರು.

Translate »