ಪತ್ರಿಕೆಗಳ ಓದುಗರು ಕಡಿಮೆಯಾಗಲು ಡಿಜಿಟಲ್ ಮಾಧ್ಯಮ ಕಾರಣವಲ್ಲ
ಮೈಸೂರು

ಪತ್ರಿಕೆಗಳ ಓದುಗರು ಕಡಿಮೆಯಾಗಲು ಡಿಜಿಟಲ್ ಮಾಧ್ಯಮ ಕಾರಣವಲ್ಲ

February 18, 2020

ಮೈಸೂರು, ಫೆ.17(ಪಿಎಂ)- ಪತ್ರಿಕೆಗಳ ಓದುಗರು ಕಡಿಮೆಯಾಗಲು ಡಿಜಿಟಲ್ ಮಾಧ್ಯಮ ಕಾರಣ ಎಂಬ ಮಾತಿದೆ. ಆದರೆ ಇದು ವಾಸ್ತವವಲ್ಲ. ಬದಲಿಗೆ ಜನಪರ ವಿಷಯಗಳಿಗೆ ಆದ್ಯತೆ ನೀಡದೇ ಇರುವುದೇ ಇದಕ್ಕೆ ಕಾರಣ ಎಂದು ಪತ್ರಕರ್ತ ಹೃಷಿ ಕೇಶ್ ಬಹದ್ದೂರ್ ದೇಸಾಯಿ ಹೇಳಿದರು.

ಮೈಸೂರಿನ ಕಲಾಮಂದಿರದ ಕಿರುರಂಗ ಮಂದಿರ ಆವರಣದ ಸಂಪತ್ ರಂಗ ಅಂಗಳ ದಲ್ಲಿ ರಂಗಾಯಣದ ಬಹುರೂಪಿ ನಾಟ ಕೋತ್ಸವದ ಅಂಗವಾಗಿ ನಡೆಯುತ್ತಿರುವ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ `ಗಾಂಧಿ -ಪತ್ರಿಕೋದ್ಯಮ’ ಕುರಿತು ಮಾತನಾಡಿದ ಅವರು, ಜನ ಪತ್ರಿಕೆಗಳಿಂದ ದೂರವಾಗಲು ಕಾರಣ ಮಾಧ್ಯಮದ ರೂಪವಲ್ಲ. ಫೋನಿನ ಕಾರಣಕ್ಕಾಗಿ ಜನ ಕಾಗದದಿಂದ (ಪತ್ರಿಕೆ) ದೂರವಾಗುತ್ತಿಲ್ಲ ಎಂದರು.

ಗಾಂಧಿ ಪತ್ರಿಕೆಗಳ ಮೂಲಕ ಜನತೆಗೆ ಸಂಬಂಧಿಸಿದ ವಿಚಾರ ಗಳ ಮೇಲೆ ಬೆಳಕು ಚೆಲ್ಲಿದರು. ಆದರೆ ಈಗ ಬಹುತೇಕ ಮಾಧ್ಯಮ ಗಳು ಜನಪರ ವಿಷಯಗಳಿಂದ ದೂರವಾಗುತ್ತಿವೆ. ಗಾಂಧಿಯವ ರಿಗೆ ಪತ್ರಿಕಾರಂಗ ವೃತ್ತಿಯಾಗಿರಲಿಲ್ಲ. ಬದಲಿಗೆ ಸಂದೇಶ ಕಳುಹಿಸಲು, ಹೋರಾಟದ ಮನೋಭೂಮಿಕೆ ಸಿದ್ಧಪಡಿಸಲು ಹಾಗೂ ದನಿ ಇಲ್ಲದವರಿಗೆ ದನಿ ನೀಡಲು ವಾಹಕ ವಾಗಿ ಪತ್ರಿಕಾರಂಗ ಬಳಸಿದರು. ಗಾಂಧಿ 78 ವರ್ಷದ ಜೀವಿತಾವಧಿಯಲ್ಲಿ 45 ವರ್ಷ ಪತ್ರಕರ್ತನಾಗಿ ಕೆಲಸ ಮಾಡಿದ್ದರು. ಇಂದಿನ ಪತ್ರಕರ್ತರಿಗಿಂತ ಎರಡು ಪಟ್ಟು ಸಮಯವನ್ನು ಅವರು ಪತ್ರಿಕಾ ರಂಗದಲ್ಲಿ ಕಳೆದರು ಎಂದರು.

ದೇಶದಲ್ಲಿ 50 ಕೋಟಿ ಟಿವಿ ಗಳಿವೆ. ಇಷ್ಟೂ ಟಿವಿಗಳಿಗೆ ಒಳ ಗೊಂಡಂತೆ ಟಿಆರ್‍ಪಿ ಮಾಪನ ಮಾಡಲು ಮಾದರಿ ಶೇ.10ರಷ್ಟಾ ದರೂ ಇರಬೇಕು. ಆದರೆ ಕೇವಲ 6 ಸಾವಿರ ಟಿಆರ್‍ಪಿ ಯಂತ್ರಗಳಷ್ಟೇ ದೇಶದಲ್ಲಿರುವುದು. ಅದರ ಆಧಾರದ ಮೇಲೆ ಕಾರ್ಯಕ್ರಮಗಳು ಸಿದ್ಧಗೊಳ್ಳುತ್ತಿವೆ. ನಮ್ಮವರೇ ನಮ್ಮ ಪರವಾಗಿ ಮಾತನಾಡದ ಸ್ಥಿತಿ ಇಂದು ನಿರ್ಮಾಣ ವಾಗಿದೆ. ತಮ್ಮ ಪಾಡಿಗೆ ಕರ್ತವ್ಯ ನಿರ್ವಹಿ ಸಿದ ರಾಜ್ಯದ ಮೂವರು ಪತ್ರಕರ್ತರ ವಿರುದ್ಧ ಗಂಭೀರವಾದ ಪ್ರಕರಣ ದಾಖಲಿಸಲಾಗಿದೆ. ಆದರೆ ಇದರ ವಿರುದ್ಧ ಯಾವ ಮಟ್ಟದಲ್ಲಿ ಹೋರಾಟ ಮಾಡಬೇಕಿತ್ತೋ ಅದು ಆಗಿಲ್ಲ ಎಂದು ಹೃಷಿಕೇಶ್ ಹೇಳಿದರು.

ಸರಳ, ನಯವಾದ ಭಾಷೆ ಬಳಕೆಯಿಂದ ಮಾಧ್ಯಮಗಳು ದೂರವಾಗುತ್ತಿವೆ…
ಸರಳ ಮತ್ತು ನಯವಾದ ಭಾಷೆ, ಪರಿಣಾಮಕಾರಿ ಸಂವಹನ ಮುಖ್ಯ. ಆದರೆ ಈಗ ಕ್ಲಿಷ್ಟ ಭಾಷೆ ಮಾಧ್ಯಮಗಳಿಗೆ ಅಂಟಿಕೊಳ್ಳುತ್ತಿದೆ. ಆದರೆ ಹೊಸದಾಗಿ ಓದಲು ಕಲಿತವ ನಿಗೆ ಹಾಗೂ ನಮ್ಮ ಸಮಾಜದ ಮನುಷ್ಯನೇ ಅಲ್ಲದವನಿಗೂ ಅರ್ಥವಾಗುವಷ್ಟು ಸರಳ ಹಾಗೂ ನಯವಾದ ಭಾಷೆ ಬಳಕೆಯಾಗಬೇಕು. ಯಾವುದೇ ವಿಷಯವನ್ನೂ 6 ವರ್ಷದ ಮಗುವಿಗೆ ವ್ಯಕ್ತಿಯೊಬ್ಬ ತಿಳಿಸಲು ಸಾಧ್ಯವಾಗಿಲ್ಲವೆಂದರೆ ಆ ವಿಷಯದಲ್ಲಿ ಸದರಿ ವ್ಯಕ್ತಿಗೂ ಪರಿವಿಲ್ಲ ಎಂದು ವಿಜ್ಞಾನಿಯೊಬ್ಬರು ವಿಶ್ಲೇಷಿಸಿದ್ದಾರೆ. ನಮ್ಮ ಪತ್ರಿಕೋದ್ಯಮದಲ್ಲಿ ಸರಳ ಹಾಗೂ ನಯವಾದ ಭಾಷೆ ಬಳಕೆಯಾಗುತ್ತಿದೆಯೇ ಎಂದು ಅವಲೋಕಿಸಿ ಕೊಳ್ಳಬೇಕಿದೆ. ಇಂಗ್ಲೆಂಡ್‍ನಲ್ಲಿ ಸರಳ ಭಾಷೆ ಪರವಾಗಿ ಚಳುವಳಿಯೇ ನಡೆಯಿತು. ಇದರ ಪರಿಣಾಮ ಈಗ ಸರ್ಕಾರಿ ಆದೇಶಗಳು ಸರಳ ಭಾಷೆಯಲ್ಲಿ ಇರಬೇಕೆಂಬ ಕಾಯ್ದೆ ಇಂಗ್ಲೆಂಡ್‍ನಲ್ಲಿ ಜಾರಿಯಾಗಿದೆ. – ಹೃಷಿಕೇಶ್ ಬಹದ್ದೂರ್ ದೇಸಾಯಿ

Translate »