ಮೈಸೂರು,ಮಾ.6(ಪಿಎಂ)-ಅಂಗವೈಕಲ್ಯದ ನಡುವೆಯೂ ವಿಶೇಷಚೇತನ ಮಕ್ಕಳು ಮತ್ತು 18 ವರ್ಷ ಮೇಲ್ಪಟ್ಟವರು ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಉತ್ಸಾಹದಿಂದ ಕ್ರೀಡಾಸ್ಫೂರ್ತಿ ಮೆರೆದಿದ್ದಾರೆ. ಶುಕ್ರವಾರ 600ಕ್ಕೂ ಅಧಿಕ ಕ್ರೀಡಾಪಟುಗಳು ಭಾಗಿಯಾಗಿದ್ದರು.
ಕರ್ನಾಟಕ ರಾಜ್ಯ ಅಂಗವಿಕಲರ ಕ್ರೀಡಾ ಸಂಸ್ಥೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವಾಲಯ, ಮೈಸೂರು ಜಿಲ್ಲಾ ಪಂಚಾಯಿತಿ ಹಾಗೂ ಮೈಸೂರು ಮಹಾನಗರ ಪಾಲಿಕೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿರುವ ನಗರ, ಜಿಲ್ಲಾ ಮತ್ತು ರಾಜ್ಯ ಮಟ್ಟದ ವಿಶೇಷಚೇತನರ ಕ್ರೀಡಾ ಕೂಟದಲ್ಲಿ (ಪ್ಯಾರಾಗೇಮ್ಸ್) ಇಂದಿನಿಂದ (ಶುಕ್ರವಾರ) ಮಾ. 8ರವರೆಗೆ ವಿಶೇಷಚೇತನರು ತಮ್ಮ ವಿಶೇಷ ಪ್ರತಿಭೆ ಅನಾ ವರಣಗೊಳಿಸಲಿದ್ದಾರೆ. ಇಂದು ಮೈಸೂರು ನಗರ ಮತ್ತು ಜಿಲ್ಲೆಯಿಂದ ವಿವಿಧ ಅಂಗವೈಕಲ್ಯ ಹೊಂದಿದ 6ರಿಂದ 12 ವರ್ಷದೊಳಗಿನ ಮಕ್ಕಳು ಕ್ರೀಡೆಗಳಲ್ಲಿ ಭಾಗವಹಿಸಿ ದ್ದರು. ಥ್ರೋ ಬಾಲ್, ಮಣಿ ಬಾಕ್ಸ್‍ನಲ್ಲಿ ಹಾಕುವುದು, 50 ಹಾಗೂ 100 ಮೀ. ಓಟ ಸೇರಿದಂತೆ ವಿವಿಧ ಸ್ಪರ್ಧೆ ಗಳಲ್ಲಿ ಪಾಲ್ಗೊಂಡಿದ್ದರು (ಅಂಗವೈಕಲ್ಯದ ರೀತಿ ಆಧರಿಸಿ ಕ್ರೀಡಾಸ್ಪರ್ಧೆ ನಿಗದಿಪಡಿಸಲಾಗಿತ್ತು). ಮಾ.7-8ರಂದು 18 ವರ್ಷಕ್ಕೂ ಮೇಲ್ಪಟ್ಟವರ ವಿಭಾಗದ ಪಂದ್ಯಗಳು ನಡೆಯಲಿವೆ. ಕಬಡ್ಡಿ, ಬ್ಯಾಡ್ಮಿಂಟನ್, ಸಿಟ್ಟಿಂಗ್ ವಾಲಿ ಬಾಲ್, ಓಟ, ಟೇಬಲ್ ಟನ್ನಿಸ್ ನಡೆಯಲಿವೆ.
`ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಅರ್ಜುನ ಪ್ರಶಸ್ತಿ ಪುರಸ್ಕøತ, ಕರ್ನಾಟಕ ರಾಜ್ಯ ಅಂಗವಿಕಲರ ಕ್ರೀಡಾ ಸಂಸ್ಥೆ ಅಧ್ಯಕ್ಷ ಎಂ.ಮಹದೇವ, ಈ ಕ್ರೀಡಾಕೂಟದಲ್ಲಿ ಆಯ್ಕೆ ಯಾಗುವವರಿಗೆ ಇದೇ ಚಾಮುಂಡಿ ವಿಹಾರ ಕ್ರೀಡಾಂ ಗಣದಲ್ಲಿ ಮಾ.25ರಿಂದ 28ರವರೆಗೆ ನಡೆಯುವ ರಾಷ್ಟ್ರ ಮಟ್ಟದ ಪ್ಯಾರಾಗೇಮ್ಸ್‍ನಲ್ಲಿ ಪಾಲ್ಗೊಳ್ಳಲು ಅವಕಾಶ ಸಿಗಲಿದೆ. ರಾಷ್ಟ್ರ ಮಟ್ಟದ ಗೇಮ್ಸ್‍ನಲ್ಲಿ ಉತ್ತಮ ಪ್ರದರ್ಶನ ನೀಡು ವವರನ್ನು ಆಯ್ಕೆ ಮಾಡಿ ಜಪಾನ್‍ನ ಟೋಕಿಯೋ ನಗರದಲ್ಲಿ ಮುಂದಿನ ದಿನಗಳಲ್ಲಿ ನಡೆಯುವ ಅಂತಾ ರಾಷ್ಟ್ರೀಯ ಮಟ್ಟದ `ಪ್ಯಾರಾಲಿಂಪಿಕ್ಸ್’ನಲ್ಲಿ ಪಾಲ್ಗೊಳ್ಳಲು ಅವಕಾಶ ದೊರೆಯಲಿದೆ ಎಂದು ತಿಳಿಸಿದರು.
ಮೂರು ದಿನಗಳ ಕ್ರೀಡಾಕೂಟಕ್ಕೆ ಮೈಸೂರು ಜಿಪಂನಿಂದ 10 ಲಕ್ಷ ರೂ. ಅನುದಾನ ನೀಡಲಾಗಿದೆ. ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಎಲ್ಲರಿಗೂ ನೋಂದಣಿ, ಊಟ-ವಸತಿ, ಕ್ರೀಡಾ ಸಲಕರಣೆ ಉಚಿತವಾಗಿ ನೀಡಲಾಗುವುದು. ಎಲ್ಲಾ ವಿಭಾಗದಲ್ಲೂ ಕ್ರಮವಾಗಿ ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ಬಹುಮಾನ ನೀಡಲಾಗುವುದು ಎಂದು ವಿವರಿಸಿದರು.