ಕೃಷಿ ಬಿಕ್ಕಟ್ಟು ಕುರಿತು ಫೆ.13ರಂದು   ಬೆಂಗಳೂರಿನಲ್ಲಿ ಚರ್ಚಾಗೋಷ್ಠಿ
ಮೈಸೂರು

ಕೃಷಿ ಬಿಕ್ಕಟ್ಟು ಕುರಿತು ಫೆ.13ರಂದು ಬೆಂಗಳೂರಿನಲ್ಲಿ ಚರ್ಚಾಗೋಷ್ಠಿ

January 13, 2019

ಕ್ಯಾತನಹಳ್ಳಿಯಲ್ಲಿ ಫೆ.18ಕ್ಕೆ ಪುಟ್ಟಣ್ಣಯ್ಯ ಕಂಚಿನ ಪ್ರತಿಮೆ ಅನಾವರಣ
ಮೈಸೂರು: ರೈತ ನಾಯಕ ದಿ.ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ 81ನೇ ನೆನಪಿನ ಅಂಗವಾಗಿ ಕೃಷಿ ಬಿಕ್ಕಟ್ಟು ಕುರಿತಂತೆ ಫೆ.13ರಂದು ಬೆಂಗ ಳೂರಿನಲ್ಲಿ ಕಮ್ಮಟ, ಚರ್ಚಾ ಕಾರ್ಯಕ್ರಮ ಹಾಗೂ ದಿ. ಕೆ.ಎಸ್. ಪುಟ್ಟಣ್ಣಯ್ಯ ಅವರ ಕಂಚಿನ ಪ್ರತಿಮೆಯನ್ನು ಮಂಡ್ಯ ಜಿಲ್ಲೆಯ ಕ್ಯಾತನಹಳ್ಳಿಯಲ್ಲಿ ಫೆ.18ರಂದು ಅನಾವರಣ ಸಮಾರಂಭ ಆಯೋ ಜಿಸಲಾಗಿದೆ ಎಂದು ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರೊ. ಎಂ.ಡಿ.ನಂಜುಂಡಸ್ವಾಮಿ ಅವರ 81ನೇ ನೆನಪಿನ ಅಂಗವಾಗಿ ಅವರ ಹೋರಾಟ, ದೂರದೃಷ್ಟಿಗಳನ್ನು ಯುವ ತಲೆಮಾರಿನವರಿಗೆ ತಿಳಿಸುವ ಜೊತೆಗೆ, ಪ್ರಸ್ತುತದ ಕೃಷಿ ಬಿಕ್ಕಟ್ಟು, ಮುಂದಿನ ಸವಾಲುಗಳ ಬಗ್ಗೆ ಚರ್ಚಿಸಲು ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಕಮ್ಮಟ, ಚರ್ಚೆ ಇನ್ನಿತರ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಅದೇ ರೀತಿ ಫೆ.18ರಂದು ಕೆ.ಎಸ್.ಪುಟ್ಟಣ್ಣಯ್ಯ ಹುಟ್ಟೂರಾದ ಕ್ಯಾತನಹಳ್ಳಿಯಲ್ಲಿ ಪುಟ್ಟಣ್ಣಯ್ಯನವರ ಕಂಚಿನ ಪ್ರತಿಮೆ ಅನಾವರಣ ಹಾಗೂ ಅಲ್ಲಿನ ಕ್ರೀಡಾಂಗಣದಲ್ಲಿ ರೈತರ ರಾಜ್ಯ ಮಟ್ಟದ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ರಾಷ್ಟ್ರೀಯ ಮಟ್ಟದ ಹೋರಾಟಗಾರರು, ಚಿಂತಕರು, ಅಂತರರಾಜ್ಯ ಮುಖಂಡರು ಸೇರಿದಂತೆ ಸುಮಾರು 30 ಸಾವಿರ ಮಂದಿ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದು, ಈ ವೇಳೆ ರೈತ ಪರವಾದ ಹಲವು ನಿರ್ಣಯಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕಾರ್ಖಾನೆ ಸರ್ಕಾರದಿಂದಲೇ ನಡೆಯಬೇಕು: ಮುಚ್ಚಲ್ಪಟ್ಟಿರುವ ಪಾಂಡವಪುರ ಸಕ್ಕರೆ ಕಾರ್ಖಾನೆಯನ್ನು ಖಾಸಗಿಯವರಿಗೆ ವಹಿಸಲು ಸರ್ಕಾರ ಸಿದ್ಧತೆ ನಡೆಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇದು ಸರಿಯಲ್ಲ, ಸರ್ಕಾರವೇ ಕಾರ್ಖಾನೆ ನಡೆಸಬೇಕೆಂದು ಕೋರಿದರು. ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿಯವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ.10ರಷ್ಟು ಮೀಸಲಾತಿ ನೀಡಲು ಕೇಂದ್ರ ಸರ್ಕಾರ ಸಂವಿಧಾನಕ್ಕೆ ತಿದ್ದುಪಡಿ ತರಲು ಮುಂದಾ ಗಿರುವುದು ಮುಂಬರುವ ಲೋಕಸಭಾ ಚುನಾವಣೆಯ ಮತಬೇಟೆ ತಂತ್ರ. ಆರ್ಥಿಕತೆ ಆಧಾರದಲ್ಲಿ ಮೀಸಲಾತಿ ನೀಡಿದರೆ ದೇಶದಲ್ಲಿ ಶೇ.63ರಷ್ಟು ರೈತರು ಆರ್ಥಿಕವಾಗಿ ಹಿಂದುಳಿದಿದ್ದು, ಇವರೆಲ್ಲರಿಗೂ ಮೀಸಲಾತಿ ನೀಡಬೇಕಾಗುತ್ತದೆ ಎಂದು ಟೀಕಿಸಿದರು.
ಈಗಾಗಲೇ ಪ್ರಧಾನಿ ಮೋದಿ ಅವರು ನೀಡಿದ್ದ ಭರವಸೆಗಳು ಈಡೇರಿಲ್ಲ. ಉದ್ಯೋಗ ಸೃಷ್ಟಿ ಭರವಸೆಯೂ ಹಾಗೆಯೇ ಉಳಿದಿದ್ದು, ಖಾಸಗೀಕರಣ ಹೆಚ್ಚಾಗುತ್ತಿದೆ. ಉದ್ಯೋಗ ಸೃಷ್ಟಿ ಮಾಡದೆ ಮೀಸಲಾತಿ ಜಾರಿಗೆ ತರಲು ಸಾಧ್ಯವಿಲ್ಲ. ಮೊದಲು ಉದ್ಯೋಗ ಸೃಷ್ಟಿಸಿ ನಂತರÀ ಮೀಸಲಾತಿ ಬಗ್ಗೆ ಮಾತನಾಡಲಿ ಎಂದರು. ರೈತ ಸಂಘದ ಮುಖಂಡರಾದ ಲೋಕೇಶ್ ರಾಜೇ ಅರಸ್, ಪಿ.ಮರಂಕಯ್ಯ, ನೇತ್ರಾವತಿ, ಕೆಂಚಲಗೂಡು ಜೋಗನಾಯಕ ಗೋಷ್ಠಿಯಲ್ಲಿದ್ದರು.

Translate »