ಕೆಆರ್‌ಎಸ್‌ನಲ್ಲಿ ಡಿಸ್ನಿಲ್ಯಾಂಡ್   ಮಾದರಿ ಉದ್ಯಾನ ನಿರ್ಮಾಣ
ಮೈಸೂರು

ಕೆಆರ್‌ಎಸ್‌ನಲ್ಲಿ ಡಿಸ್ನಿಲ್ಯಾಂಡ್ ಮಾದರಿ ಉದ್ಯಾನ ನಿರ್ಮಾಣ

January 1, 2019

ಮೈಸೂರು: ಉದ್ದೇಶಿತ ಕೆಆರ್‌ಎಸ್‌ ಡಿಸ್ನಿಲ್ಯಾಂಡ್ ಮಾದರಿಯ ಉದ್ಯಾನ ನಿರ್ಮಾಣ ಯೋಜನೆಗೆ ಕೇಂದ್ರ ಸರ್ಕಾರದಡಿ ಬರುವ 5 ರಾಷ್ಟ್ರೀಯ ಸಂಸ್ಥೆಗಳಿಂದ ನಿರಾಕ್ಷೇಪಣಾ ಪತ್ರ (ಎನ್‍ಓಸಿ) ಪಡೆಯಲು ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಕಾವೇರಿ ನೀರಾವರಿ ನಿಗಮದ ಎಕ್ಸಿಕ್ಯೂಟಿವ್ ಇಂಜಿನಿಯರ್ ಬಸವರಾಜೇಗೌಡ ತಿಳಿಸಿದ್ದಾರೆ.

ಉದ್ದೇಶಿತ ಕೆಆರ್‌ಎಸ್‌ ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಸೂಕ್ಷ್ಮ ಪರಿಸರ ವಲಯ ಎಂದು ಕೇಂದ್ರ ಪರಿಸರ ಸಚಿವಾಲಯವು ಗೆಜೆಟ್ ನೋಟಿಫಿಕೇಷನ್ ಹೊರಡಿಸಿರುವ ಹಿನ್ನೆಲೆಯಲ್ಲಿ `ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯೆ ನೀಡಿರುವ ಅವರು, ಡಿಸ್ನಿಲ್ಯಾಂಡ್ ಯೋಜನೆಗೆ ಸರ್ಕಾರ ನಿರ್ಧಾರ ಮಾಡಿದಾಗಲೇ ನಾವು ಎನ್‍ಓಸಿ ಕೋರಿ ಪುಣೆಯ ಸಂಟ್ರಲ್ ವಾಟರ್ ಅಂಡ್ ಪವರ್ ರಿಸರ್ವ್ ಸ್ಟೇಷನ್, ನವದೆಹಲಿಯ ಡ್ಯಾಂ ಸೇಫ್ಟಿ ರಿವ್ಯೂ ಪ್ಯಾನಲ್ ಹಾಗೂ ನ್ಯಾಷನಲ್ ಇನ್ಸ್‍ಟಿಟ್ಯೂಟ್ ಆಫ್ ಸಾಯಿಲ್ ಮೆಕಾನಿಕ್ಸ್ ಸಂಸ್ಥೆಗಳಿಗೆ ಪತ್ರ ಬರೆದು ಎನ್‍ಓಸಿ ಕೋರಲಾಗಿದೆ ಎಂದರು.

ಈಗಾಗಲೇ ಎರಡು ಸಂಸ್ಥೆ ಅಧಿಕಾರಿಗಳು ಕೆಆರ್‌ಎಸ್‌ಗೆ ಬಂದು ಪರಿಶೀಲನೆ ನಡೆಸಿದ್ದಾರೆ ಅವರು ಕೇಳಿದ ಮಾಹಿತಿ ಹಾಗೂ ದಾಖಲೆಗಳನ್ನು ಒದಗಿಸಿದ್ದೇವೆ. ಪರಿಸರ ಇಲಾಖೆ ಯಿಂದ ಇದೀಗ ಉದ್ದೇಶಿತ ಕೆಆರ್‌ಎಸ್‌ ಮತ್ತು ಸುತ್ತಲಿನ ಪ್ರದೇಶವನ್ನು ಸೂಕ್ಷ್ಮ ಪರಿಸರ ವಲಯ ಎಂದು ಗೆಜೆಟ್ ನೋಟಿಫಿಕೇಷನ್ ಮಾಡಿರುವುದರಿಂದ ಈ ವಿಷಯ ಸರ್ಕಾ ರದ ಮಟ್ಟದಲ್ಲಿ ಚರ್ಚೆಯಾಗಬೇಕಿದೆ ಎಂದರು.

ಈಗಾಗಲೇ ಡಿಸ್ನಿಲ್ಯಾಂಡ್ ಮಾದರಿಯ ಉದ್ಯಾನ ನಿರ್ಮಾಣ ಯೋಜನೆಗೆ ಡಿಪಿಆರ್ ತಯಾರಿಸಿ, ಭೂಸ್ವಾಧೀನ ಪ್ರಕ್ರಿಯೆಗೆ ಚಾಲನೆ ದೊರೆತಿರುವುದಲ್ಲದೆ, ಮಂಡ್ಯ ಜಿಲ್ಲಾಡಳಿತ, ಕಾವೇರಿ ನೀರಾವರಿ ನಿಗಮ, ಪ್ರವಾಸೋದ್ಯಮ, ತೋಟಗಾರಿಕೆ, ನೀರಾ ವರಿ, ಜಲಸಂಪನ್ಮೂಲ ಹಾಗೂ ಕಂದಾಯ ಇಲಾಖೆ ಹಿರಿಯ ಅಧಿಕಾರಿಗಳು ಹಲವು ಬಾರಿ ಸಭೆ ನಡೆಸಿ ಚರ್ಚಿಸಿದ್ದಾರೆ. ಈ ಹಂತದಲ್ಲಿ ಮೂಲ ಕೆಲಸಗಳು ಪೂರ್ಣಗೊಂಡಿರುವಾಗ ಈ ಸಮಯದಲ್ಲಿ ಈಗ ವಿಘ್ನವೊಂದು ಎದುರಾದಂತಾಗಿದೆ ಎಂದೂ ಬಸವರಾಜೇಗೌಡ ನುಡಿದರು.

ಕೆಆರ್‌ಎಸ್‌ ಮತ್ತು ಸುತ್ತಮತ್ತಲಿನ 26 ಗ್ರಾಮಗಳ 2,804.6 ಹೆಕ್ಟೇರ್ ಪ್ರದೇಶ ಪರಿಸರ ಸೂಕ್ಷ್ಮ ವಲಯ ಪ್ರದೇಶ ವ್ಯಾಪ್ತಿಗೆ ಬರಲಿದ್ದು, ಅಲ್ಲಿ ಯಾವುದೇ ನಿರ್ಮಾಣ ಮಾಡುವಂತಿಲ್ಲ. ಒಂದು ವೇಳೆ ಕೇಂದ್ರ ಪರಿಸರ ಸಚಿವಾಲಯ ತನ್ನ ನಿಲುವಿಗೆ ಬದ್ಧವಾದರೆ ಮಹತ್ವಾಕಾಂಕ್ಷಿ ಡಿಸ್ನಿಲ್ಯಾಂಡ್ ಯೋಜನೆ ನೆಲಕಚ್ಚುವುದರಲ್ಲಿ ಆಶ್ಚರ್ಯವಿಲ್ಲ.

ಈ ಸಂಬಂಧ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಜನಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಅವರು ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಬೇಕಾಗಿದೆ. ಕೆಲ ಪರಿಸರವಾದಿಗಳು ಹಾಗೂ ರೈತ ಪರ ಸಂಘಟನೆಗಳ ಪ್ರಮುಖರು ಉದ್ದೇಶಿತ ಡಿಸ್ನಿಲ್ಯಾಂಡ್ ಯೋಜ ನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Translate »