ಎಸ್‍ಟಿಗೆ ಪರಿವಾರ, ತಳವಾರ ಸೇರ್ಪಡೆ ನುಡಿದಂತೆ ನಡೆದ ಮೋದಿ, ಶಾ: ಜಿಲ್ಲಾ ನಾಯಕರ ಕ್ಷೇಮಾಭಿವೃದ್ಧಿ ಸಂಘ ಹರ್ಷ
ಮೈಸೂರು

ಎಸ್‍ಟಿಗೆ ಪರಿವಾರ, ತಳವಾರ ಸೇರ್ಪಡೆ ನುಡಿದಂತೆ ನಡೆದ ಮೋದಿ, ಶಾ: ಜಿಲ್ಲಾ ನಾಯಕರ ಕ್ಷೇಮಾಭಿವೃದ್ಧಿ ಸಂಘ ಹರ್ಷ

February 15, 2020

ಮೈಸೂರು, ಫೆ.14 (ಆರ್‍ಕೆಬಿ)- ಕಳೆದ ವಿಧಾನಸಭಾ ಚುನಾವಣೆ ವೇಳೆ ಮೈಸೂರಿಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ವಾಗ್ದಾನ ನೀಡಿದಂತೆ ಪರಿವಾರ-ತಳವಾರ ಪದಗಳನ್ನು ಪರಿಶಿಷ್ಟ ವರ್ಗದ ಪಟ್ಟಿಯಲ್ಲಿ ಸೇರಿಸಿದ್ದು, ಸಹಕರಿಸಿದ ಎಲ್ಲರಿಗೂ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುವುದಾಗಿ ಮೈಸೂರು-ಚಾಮರಾಜನಗರ ಜಿಲ್ಲಾ ನಾಯಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಚಿಕ್ಕಣ್ಣ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಕರೆದಿದ್ದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ, ಸಿಎಂ ಯಡಿಯೂರಪ್ಪನವರು ಪರಿವಾರ-ತಳವಾರ ಎಂಬ ಕುಲಶಾಸ್ತ್ರೀಯ ಅಧ್ಯಯನಕ್ಕೆ 50 ಲಕ್ಷ ರೂ. ಬಿಡುಗಡೆ ಮಾಡಿದರು. ನಮ್ಮ ಜನಾಂಗಕ್ಕೆ ಕೊಟ್ಟಿದ್ದ ವಾಗ್ದಾನದಂತೆ ಲೋಕಸಭೆಯಲ್ಲಿ ಬುಡಕಟ್ಟು ಮಂತ್ರಿಗಳಾದ ಅರ್ಜುನ್ ಮುಂಡಾ ಅವರು ವಿಧೇಯಕ ಮಂಡಿಸುವಂತೆ ಶ್ರಮಿಸಿ, ಅನುಮೋದನೆಗೊಳ್ಳಲು ಕೂಡ ಸಂಸದ ಪ್ರತಾಪ್ ಸಿಂಹ ಕಾರಣರಾಗಿದ್ದಾರೆ. 35 ವರ್ಷಗಳ ನಮ್ಮ ಜನಾಂಗದ ಸಮಸ್ಯೆಗೆ ಪರಿಹಾರ ದೊರಕಿಸಿಕೊಟ್ಟಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

2014ಕ್ಕೂ ಮೊದಲು ಕುಲಶಾಸ್ತ್ರೀಯ ಅಧ್ಯಯನ ವರದಿ ಸರ್ಕಾರಕ್ಕೆ ಸಲ್ಲಿಕೆಯಾದಾಗ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಾ ವರದಿ ಯನ್ನು ಶಿಫಾರಸು ಸಹಿತ ಕೇಂದ್ರ ಸರ್ಕಾರಕ್ಕೆ ಕಳುಹಿಸಿ ಸಹಕರಿಸಿದ್ದರು. ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಅಂಗೀಕಾರವಾಗಲು ನಮ್ಮ ರಾಜ್ಯದ ಸಂಸದರು ಮತ್ತು ಮಂತ್ರಿಗಳು ಹೆಚ್ಚಿನ ರೀತಿ ಸಹಕರಿಸಿದ್ದಾರೆ. ಮಹರ್ಷಿ ವಾಲ್ಮೀಕಿ ಸಂಸ್ಥಾನ ಮಠದ ಶ್ರೀಪ್ರಸನ್ನಾನಂದಪುರಿ ಸ್ವಾಮೀಜಿ ಸಹಾ ಈ ಹೋರಾಟದಲ್ಲಿ ಸ್ಪಂದಿಸಿದ್ದನ್ನು ಸ್ಮರಿಸಿದರು ಎಂದರು.

ಸಂಘದ ಉಪಾಧ್ಯಕ್ಷರಾದ ಡಿ.ಮಹದೇವಪ್ಪ, ಎಂ.ರಾಮಚಂದ್ರ, ಎನ್.ಮಲ್ಲೇಶ್, ಕಾರ್ಯದರ್ಶಿಗಳಾದ ಕೆ.ಎನ್.ಅನಿಲ್‍ಕುಮಾರ್, ಎಂ. ಪುಟ್ಟಣ್ಣ, ಮುಖಂಡರಾದ ಸುಬ್ಬಣ್ಣ, ಸುಂದರ್, ಅಣ್ಣಯ್ಯ ನಾಯಕ, ಕೆಂಪನಾಯಕ, ಮಹದೇವಸ್ವಾಮಿ ಇನ್ನಿತರರು ಸುದ್ದಿಗೋಷ್ಠಿಯಲ್ಲಿದ್ದರು.