ನವದೆಹಲಿ, ಸೆ.4-ನೋಟು ರದ್ಧತಿ ವೇಳೆ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಮಾಜಿ ಸಚಿವರೂ ಆದ ಪ್ರಭಾವಿ ಕಾಂಗ್ರೆಸ್ ಮುಖಂಡ ಡಿ.ಕೆ.ಶಿವ ಕುಮಾರ್ ಅವರನ್ನು ಸೆ.13ರವರೆಗೆ ಜಾರಿ ನಿರ್ದೇಶ ನಾಲಯದ ವಶಕ್ಕೆ ನೀಡಿ ದೆಹಲಿಯ ಸಿಬಿಐನ 9ನೇ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.
ನಿನ್ನೆ ಬಂಧಿಸಲಾಗಿದ್ದ ಡಿ.ಕೆ.ಶಿವಕುಮಾರ್ ಅವ ರನ್ನು ಡಾ. ರಾಮ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳ ಪಡಿಸಿದ ನಂತರ ಇಂದು ಮಧ್ಯಾಹ್ನ 4 ಗಂಟೆಗೆ ರೋಸ್ ಅವೆನ್ಯೂ ನ್ಯಾಯಾಲಯದಲ್ಲಿ ಹಾಜರುಪಡಿಸ ಲಾಯಿತು. ಈ ಸಂದರ್ಭದಲ್ಲಿ ವಾದ-ಪ್ರತಿವಾದ ಆಲಿಸಿದ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಅಜಯ್ ಕುಮಾರ್ ಕುಹರ್ ಅವರು ಕೆಲಕಾಲ ತೀರ್ಪನ್ನು ಕಾಯ್ದಿ ರಿಸಿದ್ದರು. ನಂತರ ರಾತ್ರಿ 7ಗಂಟೆ 05 ನಿಮಿಷಕ್ಕೆ ನ್ಯಾಯ ಪೀಠಕ್ಕೆ ಹಾಜರಾಗಿ, ಸೆ.13ರವರೆಗೂ ಡಿ.ಕೆ.ಶಿವಕುಮಾರ್ ಅವರನ್ನು ಇಡಿ ವಶಕ್ಕೆ ಒಪ್ಪಿಸಿ, ಆದೇಶ ಪ್ರಕಟಿಸಿದರು.
ಈ ಸಂದರ್ಭದಲ್ಲಿ ಪ್ರತೀ ದಿನ ಕುಟುಂಬ ಸದಸ್ಯರು ಹಾಗೂ ವಕೀಲರು ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಆಗಲು ನ್ಯಾಯಾಲಯ ಅವಕಾಶ ಮಾಡಿಕೊಟ್ಟಿದೆ. ಈ ಮಧ್ಯೆ ಡಿ.ಕೆ.ಶಿವಕುಮಾರ್ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆಯನ್ನು ಸದರಿ ನ್ಯಾಯಾಲಯ ಸೆ.13ಕ್ಕೆ ಮುಂದೂ ಡಿದೆ. ನ್ಯಾಯಾಲಯದ ಈ ತೀರ್ಪಿನಿಂದ ಕಾನೂನು ಸಮರ ದಲ್ಲಿ ಡಿ.ಕೆ.ಶಿವಕುಮಾರ್ ಅವರಿಗೆ ತೀವ್ರ ಹಿನ್ನಡೆಯಾಗಿದ್ದು, ಇನ್ನೂ 10 ದಿನಗಳ ಕಾಲ ಅವರು ಇಡಿ ವಶದಲ್ಲೇ ಇರು ವುದು ಅನಿವಾರ್ಯವಾಗಿದೆ.
4 ದಿನಗಳ ವಿಚಾರಣೆ ನಂತರ ಜಾರಿ ನಿರ್ದೇಶನಾಲಯ(ಇಡಿ) ನಿನ್ನೆ ರಾತ್ರಿ 8.38ರಲ್ಲಿ ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸಿತ್ತು. ಈ ಸಂದರ್ಭದಲ್ಲಿ ಅವರ ಬೆಂಬಲಿಗರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಇಡಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದ್ದರಲ್ಲದೇ, ಕೇಂದ್ರ ಸರ್ಕಾರ ಮತ್ತು ಬಿಜೆಪಿ ನಾಯಕರ ವಿರುದ್ಧ ಘೋಷಣೆಗಳನ್ನು ಕೂಗಿದ್ದರು. ಡಿ.ಕೆ.ಶಿವಕುಮಾರ್ ಅವರನ್ನು ಷಡ್ಯಂತ್ರದ ಮೂಲಕ ಬಂಧಿಸಲಾಗುತ್ತಿದೆ. ಅವರನ್ನು ತಕ್ಷಣ ಬಿಡುಗಡೆ ಮಾಡಬೇಕು. ತಪ್ಪಿದಲ್ಲಿ ಭಾರೀ ಹೋರಾಟ ನಡೆಸುವುದಾಗಿ ಗದ್ದಲ ಸೃಷ್ಟಿಸಿದ್ದರು. ಆದರೆ ಪೊಲೀಸರು ಇವರನ್ನು ಚದುರಿಸುವ ಮೂಲಕ ಡಿ.ಕೆ.ಶಿವಕುಮಾರ್ ಅವರನ್ನು ವೈದ್ಯಕೀಯ ಪರೀಕ್ಷೆಗಾಗಿ ರಾತ್ರಿಯೇ ಡಾ. ರಾಮ ಮನೋಹರ್ ಲೋಹಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಅಲ್ಲಿಯೂ ಸಹ ಡಿಕೆಶಿ ಬೆಂಬಲಿಗರು ಹಾಗೂ ಕಾಂಗ್ರೆಸ್ ಕಾರ್ಯ ಕರ್ತರು ರಾತ್ರಿ ಬಹು ಹೊತ್ತಿನವರೆಗೂ ಪ್ರತಿಭಟನೆ ನಡೆಸಿದ್ದರು. ವೈದ್ಯಕೀಯ ಪರೀಕ್ಷೆ ವೇಳೆ ಡಿ.ಕೆ.ಶಿವಕುಮಾರ್, ರಕ್ತದೊತ್ತಡ ಕುಸಿತ, ಹೈ ಶುಗರ್ ಹಾಗೂ ಥೈರಾಯ್ಡ್ ಸಮಸ್ಯೆ ಮುಂದೊಡ್ಡಿ ತಮಗೆ ಹೆಚ್ಚಿನ ಚಿಕಿತ್ಸೆ ನೀಡಬೇಕೆಂದು ಪಟ್ಟು ಹಿಡಿದರು. ಈ ಹಿನ್ನೆಲೆಯಲ್ಲಿ ಆಸ್ಪತ್ರೆಯ ವೈದ್ಯರು ಇಡೀ ರಾತ್ರಿ ಹಾಗೂ ಇಂದು ಮಧ್ಯಾಹ್ನದವರೆಗೆ ಎಲ್ಲಾ ವೈದ್ಯಕೀಯ ಪರೀಕ್ಷೆಗಳನ್ನು ನಡೆಸುವುದರೊಂದಿಗೆ ಮಧ್ಯಾಹ್ನದ ವೇಳೆಗೆ ಡಿಕೆಶಿ ವೈದ್ಯಕೀಯ ಪ್ರಮಾಣ ಪತ್ರವನ್ನು ಪೊಲೀಸರಿಗೆ ಒಪ್ಪಿಸಿದರು.
ತದ ನಂತರ ಮಧ್ಯಾಹ್ನ 4 ಗಂಟೆಗೆ ಡಿ.ಕೆ.ಶಿವಕುಮಾರ್ ಅವರನ್ನು ರೋಸ್ ಅವೆನ್ಯೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಡಿಕೆಶಿ ಪರ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿದರೆ, ಇಡಿ ಪರ ಪುತ್ತೂರು ಮೂಲದ ಭಾರತ ಸರ್ಕಾರದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ.ನಟರಾಜ್ ಹಾಗೂ ಎನ್.ಕೆ.ಮಟ್ಟಾ ವಾದಿಸಿದರು. ಡಿ.ಕೆ. ಶಿವಕುಮಾರ್ ಅಕ್ರಮ ಹಣದ ವಹಿವಾಟಿನ ಬಗ್ಗೆ ಸಮಗ್ರ ವಿಚಾರಣೆ ನಡೆಸಬೇಕಾಗಿದೆ. ಅವರು ವಿಚಾರಣೆಯ ಸಂದರ್ಭದಲ್ಲಿ ಸರಿಯಾದ ಮಾಹಿತಿ ನೀಡಿಲ್ಲ. ಅನೇಕ ವಿಚಾರಗಳನ್ನು ಮುಚ್ಚಿಟ್ಟಿದ್ದಾರೆ. ದಾಖಲೆಗಳಲ್ಲಿ ಇರುವುದೇ ಬೇರೆ, ಅವರು ಹೇಳಿಕೆಯಲ್ಲಿ ನೀಡಿರುವ ಮಾಹಿತಿಯೇ ಬೇರೆ ಇದೆ. ಸಾಕಷ್ಟು ಅಕ್ರಮ ಹಣದ ವಹಿವಾಟು ನಡೆದಿರುವ ಬಗ್ಗೆ ದಾಖಲೆಗಳಿದ್ದು, ಅದರ ಬಗ್ಗೆ ವಿಚಾರಣೆ ನಡೆಸಲು ಅವಕಾಶ ಕಲ್ಪಿಸಬೇಕು. ಅದಕ್ಕಾಗಿ ಡಿ.ಕೆ.ಶಿವಕುಮಾರ್ ಅವರನ್ನು 14 ದಿನಗಳ ಕಾಲ ಇಡಿ ವಶಕ್ಕೆ ನೀಡಬೇಕೆಂದು ನಟರಾಜ್ ಕೋರ್ಟ್‍ನಲ್ಲಿ ಮನವಿ ಮಾಡಿದರು. ಡಿ.ಕೆ.ಶಿವಕುಮಾರ್ ಪರ ವಾದ ಮಂಡಿಸಿದ ಅಭಿಷೇಕ್ ಮನು ಸಿಂಗ್ವಿ, ಶಿವಕುಮಾರ್ ಅವರಿಗೆ ಯಾವುದೇ ಮಾಹಿತಿಯನ್ನು ಮುಚ್ಚಿಡುವ ಅನಿವಾರ್ಯತೆ ಇಲ್ಲ. ಅವರು ನಾಲ್ಕು ದಿನಗಳ ಕಾಲ ಇಡಿ ವಿಚಾರಣೆ ಎದುರಿಸಿದ್ದಾರೆ. ಎಲ್ಲಾ ಮಾಹಿತಿಯನ್ನೂ ನೀಡಿದ್ದಾರೆ. ವಿಚಾರಣೆಗೆ ಸಂಪೂರ್ಣ ಸಹಕಾರ ನೀಡಿದ್ದಾರೆ. ಮುಚ್ಚಿಡುವಂತಹ ವಿಚಾರ ಯಾವುದೂ ಇಲ್ಲ. ಮುಂದೆಯೂ ಅವರು ವಿಚಾರಣೆಗೆ ಸಹಕರಿಸುತ್ತಾರೆ. ಹಾಗಾಗಿ ಅವರಿಗೆ ಜಾಮೀನು ನೀಡಬೇಕು ಎಂದು ಮನವಿ ಮಾಡಿದರು. ಅಂತಿಮವಾಗಿ ನ್ಯಾಯಾಧೀಶರಾದ ಅಜಯಕುಮಾರ್ ಕುಹರ್ ಸೆ.13ರವರೆಗೆ ಡಿ.ಕೆ.ಶಿವಕುಮಾರ್ ಅವರನ್ನು ಇಡಿ ವಶಕ್ಕೆ ನೀಡಿ, ಅವರ ಜಾಮೀನು ಅರ್ಜಿ ವಿಚಾರಣೆಯನ್ನೂ ಅಂದಿಗೇ ನಿಗದಿಪಡಿಸಿದರು.
ಡಿ.ಕೆ.ಶಿವಕುಮಾರ್‍ಗೆ ಉರುಳಾದ ವಿಚಾರಗಳು
ನವದೆಹಲಿ, ಸೆ.4-ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅಕ್ರಮ ಹಣ ವರ್ಗಾ ವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಇಡಿ ವಶದಲ್ಲಿದ್ದಾರೆ. ಅವರ ವ್ಯವಹಾರ ಗಳ ಪಾಲುದಾರರಾಗಿದ್ದ ಸಚಿನ್ ನಾರಾ ಯಣ್, ಸುನೀಲ್ ಕುಮಾರ್ ಶರ್ಮಾ, ದೆಹಲಿಯ ಕರ್ನಾಟಕ ಭವನದ ನೌಕರ ಆಂಜನೇಯ, ಸುಖದೇವ್ ವಿಹಾರಿನಾ, ರಾಜೇಂದ್ರ, ಹಣದ ಮೂಲದ ಬಗ್ಗೆ ವಿಭಿನ್ನ ಹೇಳಿಕೆ ನೀಡಿದ್ದೇ ಡಿಕೆಶಿಗೆ ಉರುಳಾಯಿತು ಎಂಬ ಮಾತುಗಳು ಈಗ ಕೇಳಿಬರುತ್ತಿವೆ.
2018ರ ಸೆಪ್ಟೆಂಬರ್‍ನಲ್ಲಿ ಜಾರಿ ನಿರ್ದೇ ಶನಾಲಯ ಈ ನಾಲ್ವರ ವಿರುದ್ಧ ಪ್ರಕ ರಣ ದಾಖಲಿಸಿತ್ತು. ಆದಾಯ ತೆರಿಗೆ ಅಧಿಕಾರಿಗಳು ದಾಖಲಿಸಿದ್ದ ಎಫ್‍ಐಆರ್ ಆಧಾರದ ಮೇಲೆ ಇಡಿ ಈ ಪ್ರಕರಣ ದಾಖಲಿಸಿತ್ತು. ಶಿವಕುಮಾರ್ ಮತ್ತು ಅವರ ನಾಲ್ವರು ಸಹಚರರ ವಿರುದ್ಧ ದಾಖಲಿಸಿದ್ದ ಪ್ರಕರಣದ ತನಿಖೆ ಮಾಹಿತಿ ಗಳು ಸೋರಿಕೆಯಾದ ಬಗ್ಗೆ ಕಾಂಗ್ರೆಸ್ ಈ ಹಿಂದೆಯೇ ಪ್ರತಿಭಟನೆ ನಡೆಸಿತ್ತು. ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಅವರಿಗೆ ಶಿವಕುಮಾರ್ ಅವರ ವಿರುದ್ಧ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳು ಲಭಿಸಿದ್ದವು ಎಂಬುದು ಕಾಂಗ್ರೆಸ್‍ನ ಆರೋಪವಾಗಿದೆ.
ಈ ಮಧ್ಯೆ ಐಟಿ ದಾಳಿ ನಂತರ ಕೆಲವು ದಾಖಲೆ ಪತ್ರಗಳನ್ನು ಪಾತ್ರಾ ದೆಹಲಿಯ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದರು. ಅದರಲ್ಲಿ ಎಐಸಿಸಿ ಕಚೇರಿಗೆ ಬಹು ದೊಡ್ಡ ಮೊತ್ತದ ಹಣ ವರ್ಗಾವಣೆ ಆಗಿದ್ದರ ಬಗ್ಗೆ ಉಲ್ಲೇಖವಿತ್ತು. ಶಿವಕುಮಾರ್ ಹೇಳಿಕೆ ಮೇರೆಗೆ ಐಟಿ ದೂರು ದಾಖಲಿಸಿಕೊಂಡಿತ್ತು. ಈ ಎಲ್ಲಾ ಮಾಹಿತಿಯು ಪಾತ್ರಾ ಅವರಿಗೆ ದೊರಕಿತ್ತು ಎಂಬುದು ಕಾಂಗ್ರೆಸ್‍ನ ಆರೋಪ ವಾಗಿದೆ. ಕಲ್ಲು ಗಣಿಗಾರಿಕೆ, ರಿಯಲ್ ಎಸ್ಟೇಟ್ ವ್ಯವಹಾರ, ಸಾರಿಗೆ ವ್ಯವಹಾರದಲ್ಲಿ ಪಾಲು ದಾರಿಕೆ, ನಾನಾ ಕಂಪನಿಗಳಲ್ಲಿ ಷೇರು ಖರೀದಿ, ಕೇಬಲ್ ವ್ಯವಹಾರವನ್ನು ಡಿಕೆಶಿ ನಡೆಸುತ್ತಿದ್ದು, ತಾಯಿ ಹೆಸರಿನಲ್ಲಿ ಕೋಟ್ಯಾಂತರ ರೂ. ಮೌಲ್ಯದ ಆಸ್ತಿ, ಪುತ್ರಿ ಮೂಲಕ ವಿವಿಧ ಕಂಪನಿಗಳಲ್ಲಿ ಕೋಟ್ಯಾಂತರ ರೂ. ಹೂಡಿಕೆ ಮಾಡಿ ದ್ದಾರೆ. 2017ರ ಆಗಸ್ಟ್ 2ರಿಂದ ಆಗಸ್ಟ್ 5ರವರೆಗೆ ರಾಜ್ಯದ ನಾನಾ ಕಡೆ ಅಲ್ಲದೇ ದೆಹಲಿ ಸೇರಿದಂತೆ ಒಟ್ಟು 67 ಕಡೆ ಐಟಿ ದಾಳಿ ನಡೆಸಿದ್ದ ವೇಳೆ ನೂರಾರು ಕೋಟಿ ಅಘೋಷಿತ ಆಸ್ತಿಯನ್ನು ಪತ್ತೆ ಮಾಡಲಾ ಗಿತ್ತು. ಆದರೆ ದೆಹಲಿಯ ಸಫ್ದರ್‍ಜಂಗ್ ಎನ್‍ಕ್ಲೇವ್ ಅಪಾರ್ಟ್‍ಮೆಂಟ್‍ನ ಫ್ಲಾಟ್ ಗಳಲ್ಲಿ ದೊರೆತಿದ್ದ 8.59 ಕೋಟಿ ರೂ. ನಗದು ಅವರನ್ನು ತೀವ್ರ ಸಂಕಷ್ಟಕ್ಕೆ ದೂಡಿದೆ.
ಡಿಕೆಶಿ ವಿರುದ್ಧದ ಇಡಿ ಪ್ರಕರಣ
ಜಾರಿ ನಿರ್ದೇಶನಾಲಯ ಕಾಂಗ್ರೆಸ್ ಮುಖಂಡ ಡಿಕೆಶಿ ವಿರುದ್ಧ ಅಕ್ರಮ ಹಣ ಸಾಗಣೆ ಕಾಯ್ದೆ (ಪಿಎಂಎಲ್‍ಎ)-2002 ಸೆಕ್ಷನ್ 3 ಮತ್ತು 4ರ ಅಡಿ ದಾವೆ ಸಂಖ್ಯೆ ಇಸಿಐಆರ್/ಹೆಚ್‍ಕ್ಯೂ/04/2018 ಪ್ರಕರಣ ದಾಖಲಿಸಿದೆ.
ಡಿ.ಕೆ.ಶಿವಕುಮಾರ್ ಅವರ ನವ ದೆಹಲಿಯ ನಿವಾಸದಲ್ಲಿ ಪತ್ತೆಯಾಗಿದ್ದ 8,59,69,100 ರೂ. ಅಕ್ರಮ ಹಣ ವನ್ನು ಪ್ರಧಾನವಾಗಿಟ್ಟುಕೊಂಡು ನವ ದೆಹಲಿಯಲ್ಲಿನ ಸಿಬಿಐ 9ನೇ ವಿಶೇಷ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದೆ.
ಜೊತೆಗೆ ಬೆಂಗಳೂರಿನ ಆರ್ಥಿಕ ಅಪ ರಾಧಗಳ ವಿಶೇಷ ನ್ಯಾಯಾಲಯದಲ್ಲಿ ಆದಾಯ ತೆರಿಗೆ ಇಲಾಖೆಯು ಐಟಿ ಆ್ಯಕ್ಟ್-1961ರ ಸೆಕ್ಷನ್ 276 ಸಿ(1), 277 ಮತ್ತು ಸೆಕ್ಷನ್ 278ರ ಅಡಿಯಲ್ಲಿ ಹಾಗೂ ಐಪಿಸಿ ಸೆಕ್ಷನ್ 193, 199, 120-ಬಿ ಅಡಿಯಲ್ಲಿ ಹೂಡಿರುವ ದಾವೆಯನ್ನು ಇಡಿ ಉಲ್ಲೇಖಿಸಿದೆ.