ರಾಜ್ಯಾದ್ಯಂತ ಡಿಕೆಶಿ ಬೆಂಬಲಿಗರು, ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ
ಮೈಸೂರು

ರಾಜ್ಯಾದ್ಯಂತ ಡಿಕೆಶಿ ಬೆಂಬಲಿಗರು, ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ

September 5, 2019

ಬೆಂಗಳೂರು, ಸೆ.4(ಕೆಎಂಶಿ)-ಡಿ.ಕೆ. ಶಿವಕುಮಾರ್ ಬಂಧನದಿಂದ ಆಕ್ರೋಶಗೊಂಡ ಅವರ ಅಭಿಮಾನಿ ಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ರಾಜ್ಯಾ ದ್ಯಂತ ಉಗ್ರ ಪ್ರತಿಭಟನೆ ನಡೆಸಿ ಬಸ್‍ಗಳಿಗೆ ಬೆಂಕಿ ಹಚ್ಚಿ, ಕಲ್ಲು ತೂರಾಟ ಮಾಡಿದ್ದರಿಂದ ಪೊಲೀಸ್ ಸೇರಿದಂತೆ ಹಲವು ಮಂದಿಗೆ ಗಾಯಗಳಾಗಿವೆ.

ಕೇಂದ್ರ ಸರ್ಕಾರದ ರಾಜಕೀಯ ಸೇಡಿನ ಕ್ರಮ ಪ್ರತಿಭಟಿಸಿ, ಎಐಸಿಸಿ ಶಿವಕುಮಾರ್ ಬೆಂಬಲಕ್ಕೆ ನಿಂತಿದ್ದು, ಅದರ ಆದೇಶದಂತೆ ಕೆಪಿಸಿಸಿ ಕೂಡ ಬೀದಿಗಿಳಿದಿದೆ. ಕಾಂಗ್ರೆಸ್ ಹೋರಾಟಕ್ಕೆ ಬೆಂಬಲ ನೀಡಿ ಜೆಡಿಎಸ್ ಕಾರ್ಯಕರ್ತರೂ ಬೀದಿಗಿಳಿದಿದ್ದಾರೆ.

ರಾಜ್ಯ ಘಟಕದ ಸೂಚನೆ ಮೇರೆಗೆ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಪ್ರತಿಭಟನಾಕಾರರು ಕೆಂಡಕಾರಿದ್ದಾರೆ.

ಶಿವಕುಮಾರ್ ಬೆಂಬಲಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ನಿಂತ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅವರ ನಿವಾಸಗಳು, ಸಚಿವರು ಮತ್ತು ಕೇಂದ್ರ ತನಿಖಾ ಸಂಸ್ಥೆಗಳ ಕಚೇರಿಗಳಿಗೆ ಭಾರೀ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

ಐಟಿ, ಇ.ಡಿ., ಸಿಬಿಐ ತನಿಖಾ ಸಂಸ್ಥೆಗಳು ಕೇಂದ್ರ ಸರ್ಕಾರದ ಕೈಗೊಂಬೆಗಳಂತೆ ವರ್ತಿಸುತ್ತಿವೆ, ತಕ್ಷಣವೇ ಶಿವಕುಮಾರ್ ಅವರನ್ನು ಬಿಡುಗಡೆ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಕಾಂಗ್ರೆಸ್ ಕಾರ್ಯಕರ್ತರು ಬೀದಿಗಿಳಿದ ಹಿನ್ನೆಲೆಯಲ್ಲಿ ಬೆಂಗ ಳೂರು, ಮೈಸೂರು, ಬೆಳಗಾವಿ ಸೇರಿದಂತೆ ಪ್ರಮುಖ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತು. ಕಲ್ಲು ತೂರಾಟ ಮತ್ತು ಬೆಂಕಿ ಹಚ್ಚಿದ್ದರಿಂದ ರಾಜ್ಯ ರಸ್ತೆ ಸಾರಿಗೆ ಹಾಗೂ ಖಾಸಗಿ ಬಸ್‍ಗಳಿಗೆ ಹಾನಿಯಾಗಿದ್ದು, ಕೆಲವೆಡೆ ಕಾರು ಮತ್ತು ದ್ವಿಚಕ್ರ ವಾಹನಗಳಿಗೂ ಬೆಂಕಿ ಹಚ್ಚಲಾಗಿದೆ. ಕಾರ್ಯಕರ್ತರ ಉಗ್ರ ಹೋರಾಟದಿಂದ ಸಾರ್ವ ಜನಿಕ ಆಸ್ತಿ-ಪಾಸ್ತಿಗೆ ನಷ್ಟ ಉಂಟಾಗಿದೆ. ಶಿವ ಕುಮಾರ್ ಅವರ ತವರು ಜಿಲ್ಲೆ ರಾಮನಗರ ಸಂಪೂರ್ಣ ಸ್ತಬ್ಧಗೊಂಡಿದ್ದು, ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿತ್ತು, ಮುನ್ನೆಚ್ಚರಿಕೆ ಕ್ರಮವಾಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಬಂಧನ ವಿರೋಧಿಸಿ ಕೇರಳ, ತಮಿಳುನಾಡು, ಆಂಧ್ರ ಪ್ರದೇಶದಲ್ಲೂ ಪ್ರತಿಭಟನೆ ನಡೆಸಲಾಗಿದೆ. ಬೆಂಗಳೂರಿನಲ್ಲೂ ಪ್ರತಿಭಟನೆಯ ಕಾವು ಹೆಚ್ಚಾಗಿತ್ತು, ಬೆಳ್ಳಂಬೆಳಿಗ್ಗೆ ಸ್ಯಾಂಕಿಕೆರೆ ಬಳಿ ಖಾಸಗಿ ಬಸ್‍ವೊಂದರ ಮೇಲೆ ಕಲ್ಲುತೂರಾಟ ನಡೆಸಿ ಜಖಂಗೊಳಿಸಲಾ ಗಿದೆ. ಶಿವಕುಮಾರ್ ಬಂಧನ ವಿರೋಧಿಸಿ, ಕಾಂಗ್ರೆಸ್ ಕಾರ್ಯಕರ್ತರು, ಬೆಂಬಲಿಗರು ಪ್ರತಿಭಟನೆ ನಡೆಸಿ ಬಿಜೆಪಿ ಸರ್ಕಾರದ ಹುನ್ನಾರವೆಂದು ಆರೋಪಿಸಿದರು. ಅಲ್ಲದೆ ಸಿದ್ದರಾಮಯ್ಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು. ಇಂದು (ಸೆ.5) ರಾಮನಗರ ಬಂದ್‍ಗೆ ಕರೆ ನೀಡಲಾಗಿದೆ.

Translate »